Advertisement

ಹಿಂದೂ ಅತ್ಯಂತ ಪುರಾತನವಾದ ಧರ್ಮ: ಡಾ.ನಿರ್ಮಲಾ ನಂದನಾಥ ಸ್ವಾಮೀಜಿ

05:35 PM Nov 07, 2024 | Nagendra Trasi |

■ ಉದಯವಾಣಿ ಸಮಾಚಾರ
ಶಿವಮೊಗ್ಗ: ಸನಾತನ ಹಿಂದೂ ಧರ್ಮ, ಜಗತ್ತಿನ ಧರ್ಮಗಳಲ್ಲಿಯೇ ಪುರಾತನವಾದದ್ದು. ಸುಮಾರು 5 ಸಾವಿರ ವರ್ಷಗಳ ಪ್ರಾಚೀನತೆಯನ್ನು ಹೊಂದಿದೆ. ನಂತರ ಯಹೂದಿ ಧರ್ಮ, ಜೈನ ಧರ್ಮ, ಬೌದ್ಧ ಧರ್ಮ, ಕ್ರೈಸ್ತ ಧರ್ಮ, ಇಸ್ಲಾಂ ಧರ್ಮ, ಹೀಗೆ
ಧರ್ಮಗಳು ಅಸ್ತಿತ್ವಕ್ಕೆ ಬಂದವು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ| ನಿರ್ಮಲಾ
ನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

Advertisement

ಅವರು ಶರಾವತಿ ನಗರದ ಆದಿಚುಂಚನಗಿರಿ ಶಾಖಾ ಮಠದಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ವ್ಯಾಪ್ತಿಯ ವಿವಿಧ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರ ಒಂದು ದಿನದ ಸಮಾಜ ವಿಜ್ಞಾನ ಮತ್ತು ಕನ್ನಡ ವಿಷಯಗಳ ಕುರಿತ ರಾಜ್ಯಮಟ್ಟದ ಕಾರ್ಯಾಗಾರದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಧರ್ಮ ಧರ್ಮಗಳ ನಡುವೆ ಸಾಮರಸ್ಯದ ಬದುಕಿನಿಂದ ಶಾಂತಿ ನೆಲೆಸಲು ಸಾಧ್ಯ. ಆ ನಿಟ್ಟಿನಲ್ಲಿ ನಾವೆಲ್ಲರೂ ಚಿಂತನೆ ಮಾಡಬೇಕಾಗಿದೆ. ಧರ್ಮ ನಮ್ಮ ಭೌತಿಕ ಬದುಕನ್ನು ಸಮೃದ್ಧಗೊಳಿಸುವುದಲ್ಲದೇ, ಭೂಮಿಯ ಮೇಲೆ ಆನಂದ ಸಂತೋಷದಿಂದ ಬದುಕುವುದನ್ನ ತಿಳಿಸುವುದೇ ಧರ್ಮದ ಕೆಲಸವಾಗಿದೆ ಎಂದರು.

ಪ್ರತಿಯೊಬ್ಬ ಶಿಕ್ಷಕರು ಮಕ್ಕಳ ಜೊತೆ ಉತ್ತಮ ಒಡನಾಟದಿಂದ ಇರಬೇಕು. ಅವರಿಗೆ ಬೇಕು-ಬೇಡಗಳ ಬಗ್ಗೆ ತಿಳಿದು ತರಬೇತಿ ಕೊಟ್ಟಾಗ ಮಾತ್ರ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ. ಒಂದು ಶಾಲೆಯಲ್ಲಿ ಮಕ್ಕಳಲ್ಲಿ ಶಿಸ್ತು, ಸಂಯಮ ಇದೆ ಅಂದರೆ ಅದಕ್ಕೆ ಶಿಕ್ಷಕರ ಪಾತ್ರ ದೊಡ್ಡದು. ಪೋಷಕರ ಜೊತೆಗೆ ಆತ್ಮೀಯತೆಯಿಂದ ಇರಬೇಕು ಎಂದರು.

ಉತ್ತಮ ಸಾಧನೆ ಮಾಡಿಸಿ: ಈಗಾಗಲೇ ರಾಜ್ಯದ ನುರಿತ ವಿವಿಧ ಶಿಕ್ಷಣ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಂಪನ್ಮೂಲ ವ್ಯಕ್ತಿಗಳಿಂದ ತಮಗೆ ಕಾರ್ಯಾಗಾರ ನಡೆಸುತ್ತಿದ್ದು, ಇದರ ಸದುಪಯೋಗ ಪಡೆದುಕೊಂಡು, ತಮ್ಮ ವಿದ್ಯಾರ್ಥಿಗಳಿಗೆ ತರಬೇತಿಯನ್ನು ಕೊಟ್ಟು ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಂದ ತಾವು ಉತ್ತಮ ಸಾಧನೆ ಮಾಡಿಸಬೇಕಾಗಿದೆ ಎಂದು
ಶಿಕ್ಷಕರಿಗೆ ಸಲಹೆ ನೀಡಿದರು.

ಮಕ್ಕಳಿಗೆ ತರಬೇತಿ, ನಿರಂತರ ಅಭ್ಯಾಸ ಮಾಡುವುದರ ಮೂಲಕ ಅವರ ಸಾಧನೆಗೆ ಶಕ್ತಿ ತುಂಬುವುದು, ಮಕ್ಕಳಲ್ಲಿ ಅನೇಕ ನೂನ್ಯತೆ ಗಳಿರುತ್ತವೆ, ಅವುಗಳನ್ನು ತಿದ್ದಿ-ತೀಡಿ ಉತ್ತಮ ರೀತಿಯಲ್ಲಿ ಒಬ್ಬ ಪ್ರಜ್ಞಾವಂತರನ್ನಾಗಿ ಸಜ್ಜುಗೊಳಿಸುವುದರಲ್ಲಿ ತಮ್ಮಗಳ ಪಾತ್ರ ದೊಡ್ಡದು ಎಂದರು.

Advertisement

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಉಪಸ್ಥಿತಿ ವಹಿಸಿದ್ದರು. ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ| ಕೆ.ಪ್ರಭಾಕರ ರಾವ್‌, ವಕೀಲರು ಮತ್ತು ಸಂಪಾದಕರಾದ ಸುಧೀರ ಕುಮಾರ ಮುರೊಳ್ಳಿ, ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶಗೌಡ ಅವರು, ಆಡಳಿತಾಧಿಕಾರಿಗಳು, ಪ್ರಾಂಶುಪಾಲರು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ವದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next