Advertisement

ಮುಂದಿನ ತಿಂಗಳು ಪರಿಷತ್‌ನ 11 ಸ್ಥಾನಗಳು ಖಾಲಿ

12:13 AM May 09, 2024 | Team Udayavani |

ಬೆಂಗಳೂರು: ಸಣ್ಣ ನೀರಾವರಿ ಸಚಿವ ಎನ್‌.ಎಸ್‌.ಬೋಸರಾಜ್‌ ಅವರದ್ದು ಸಹಿತ ವಿಧಾನ ಪರಿಷತ್ತಿನ 11 ಸ್ಥಾನಗಳು ಜೂನ್‌ ತಿಂಗಳಲ್ಲಿ ಖಾಲಿಯಾಗಲಿದ್ದು, ಮೇಲ್ಮನೆ ಪ್ರವೇಶಕ್ಕೆ ಈಗ ಮೂರು ಪಕ್ಷಗಳಲ್ಲೂ ತೆರೆಮರೆಯಲ್ಲಿ ಲಾಬಿ ಪ್ರಾರಂಭಗೊಂಡಿದೆ. ಕೋಟ ಶ್ರೀನಿವಾಸ ಪೂಜಾರಿ ಸಂಸತ್‌ ಪ್ರವೇಶಿಸಿದರೆ ಪರಿಷತ್‌ ವಿಪಕ್ಷ ಸ್ಥಾನಕ್ಕೆ ಸೂಕ್ತ ವ್ಯಕ್ತಿಯನ್ನು ಹುಡುಕುವ ಅನಿವಾರ್ಯತೆ ಬಿಜೆಪಿಗಿದೆ.

Advertisement

ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಚುನಾಯಿತರಾದ ಸದಸ್ಯರ ಅವಧಿ ಮುಕ್ತಾಯವಾಗಲಿದ್ದು, ಆಡಳಿತಾರೂಢ ಕಾಂಗ್ರೆಸ್‌ಗೆ ಸಂಖ್ಯಾಬಲದ ಆಧಾರದಲ್ಲಿ ಈ ಬಾರಿ ಸಿಂಹಪಾಲು ಪರಿಷತ್‌ ಸ್ಥಾನ ಒದಗಿ ಬರಲಿದೆ. ಬಿಜೆಪಿಗೆ ಮೂರು ಸ್ಥಾನ ಖಚಿತ ಆಗಿದೆ. ಕಾಂಗ್ರೆಸ್‌ ಹೆಚ್ಚುವರಿ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಇದ್ದ ಸಂದರ್ಭದಲ್ಲಿ ಮೈತ್ರಿ ಬಲದಿಂದ ಜೆಡಿಎಸ್‌ನಿಂದ ಒಬ್ಬರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.

ಕಾಂಗ್ರೆಸ್‌ನ ಅರವಿಂದಕುಮಾರ್‌ ಅರಳಿ, ಸಚಿವ ಎನ್‌.ಎಸ್‌. ಬೋಸರಾಜ್‌, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು, ಕೆ.ಹರೀಶ್‌ ಕುಮಾರ್‌, ಬಿಜೆಪಿಯಲ್ಲಿದ್ದು ಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ ಸೇರಿರುವ ಡಾ| ತೇಜಸ್ವಿನಿ ಗೌಡ, ಕೆ.ಪಿ.ನಂಜುಂಡಿ, ಬಿಜೆಪಿಯ ರಘುನಾಥ್‌ ರಾವ್‌ ಮಲ್ಕಾಪೂರೆ, ಎನ್‌.ರವಿಕುಮಾರ್‌, ಎಸ್‌.ರುದ್ರೇಗೌಡ, ಪಿ.ಎ.ಮುನಿರಾಜುಗೌಡ ಹಾಗೂ ಜೆಡಿಎಸ್‌ನ ಬಿ.ಎಂ.ಫಾರೂಕ್‌ ಅವರ ಅವಧಿ ಜೂನ್‌ 6ಕ್ಕೆ ಅಂತ್ಯಗೊಳ್ಳಲಿದೆ. ಜತೆಗೆ ಜಗದೀಶ್‌ ಶೆಟ್ಟರ್‌ ರಾಜೀ ನಾಮೆ ನೀಡಿರುವುದರಿಂದ ಒಟ್ಟು 12 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ರಮೇಶ್‌ ಕುಮಾರ್‌ ಮೇಲ್ಮನೆಗೆ?
ಕಾಂಗ್ರೆಸ್‌ ಮೂಲಗಳ ಪ್ರಕಾರ ಕನಿಷ್ಠ 7 ಸ್ಥಾನಗಳು ಲಭಿಸಲಿದ್ದು, ಮಾಜಿ ಸಚಿವ ಕೆ.ರಮೇಶ್‌ ಕುಮಾರ್‌ ಅವರನ್ನು ಮೇಲ್ಮನೆಗೆ ಕಳುಹಿಸುವ ಬಗ್ಗೆ ಸಿದ್ದರಾಮಯ್ಯ ಪಾಳಯದಲ್ಲಿ ಲೆಕ್ಕಾಚಾರಗಳು ನಡೆಯುತ್ತಿವೆ. ಇದರೊಂದಿಗೆ ಪರಿಷತ್‌ ಸಂಖ್ಯಾಬಲ ಹೆಚ್ಚಳಕ್ಕೂ ಕಾಂಗ್ರೆಸ್‌ ತಂತ್ರಗಾರಿಕೆ ಹೆಣೆಯುತ್ತಿದ್ದು ಸಭಾಪತಿ ಪೀಠದ ಮೇಲೂ ಕಣ್ಣಿಟ್ಟಿದೆ. ಬೋಸರಾಜ್‌ ಹಾಗೂ ಗೋವಿಂದರಾಜ್‌ ಅವರು ಮತ್ತೂಂದು ಆವರ್ತಿಗೆ ಆಯ್ಕೆಗೊಳ್ಳುವುದು ನಿಶ್ಚಿತ ಎಂದು ಹೇಳಲಾಗುತ್ತಿದ್ದು ಲೋಕಸಭಾ ಫ‌ಲಿತಾಂಶದ ಬಳಿಕ ಸೃಷ್ಟಿಯಾಗುವ ರಾಜಕೀಯ ಅನಿವಾರ್ಯತೆ ಆಧರಿಸಿ ಜಾತಿವಾರು ಪ್ರಾತಿನಿಧ್ಯ ನೀಡಲು ಕಾಂಗ್ರೆಸ್‌ ಚಿಂತನೆ ನಡೆಸಿದೆ.

ವಿಪಕ್ಷ ನಾಯಕನೂ ಬದಲು?
ಲೋಕಸಭಾ ಚುನಾವಣೆಯಲ್ಲಿ ಒಂದೊಮ್ಮೆ ಕೋಟ ಶ್ರೀನಿವಾಸ್‌ ಪೂಜಾರಿ ಗೆದ್ದು ಸಂಸತ್‌ ಪ್ರವೇಶಿಸಿದರೆ ಪರಿಷತ್ತಿನಲ್ಲಿ ವಿಪಕ್ಷ ನಾಯಕ ಸ್ಥಾನವೂ ಬದಲಾಗಲಿದೆ. ಹೀಗಾಗಿ ಮೇಲ್ಮನೆಯಲ್ಲಿ ಸರಕಾರವನ್ನು ಕಟ್ಟಿ ಹಾಕಬಲ್ಲ ಸಮರ್ಥರನ್ನು ವಿಪಕ್ಷ ನಾಯಕನ ಸ್ಥಾನಕ್ಕೆ ನೇಮಕ ಮಾಡುವ ಅನಿವಾರ್ಯತೆಯಲ್ಲಿ ಬಿಜೆಪಿ ಇದೆ. ಮಾಜಿ ಸಚಿವ ಸಿ.ಟಿ.ರವಿ ಸಹಿತ ಹಲವರ ಹೆಸರು ಕೇಳಿ ಬರುತ್ತಿದ್ದು, ಮಲ್ಕಾಪೂರೆ ಹಾಗೂ ರವಿಕುಮಾರ್‌ ಪುನರಾಯ್ಕೆ ಸಾಧ್ಯತೆ ಇದೆ. ಒಂದೊಮ್ಮೆ ಈ ಮೂರು ಹೆಸರುಗಳಿಗೆ ವರಿಷ್ಠರು ಒಪ್ಪಿಗೆ ಸೂಚಿಸದೇ ಇದ್ದರೆ ವಿಪಕ್ಷ ನಾಯಕ ಸ್ಥಾನಕ್ಕೆ ಛಲವಾದಿ ನಾರಾಯಣಸ್ವಾಮಿ ಹೆಸರು ಮುನ್ನೆಲೆಗೆ ಬರುವ ಸಾಧ್ಯತೆ ಇದೆ.

Advertisement

ಖಾಲಿಯಾಗುವ ಸ್ಥಾನ
– ಅರವಿಂದ ಕುಮಾರ್‌ ಅರಳಿ, ಸಚಿವ ಎನ್‌.ಎಸ್‌.ಬೋಸರಾಜ್‌, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು, ಕೆ.ಹರೀಶ್‌ ಕುಮಾರ್‌- ಕಾಂಗ್ರೆಸ್‌
-ಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ ಸೇರಿರುವ ಡಾ| ತೇಜಸ್ವಿನಿ ಗೌಡ, ಕೆ.ಪಿ.ನಂಜುಂಡಿ.
-ರಘುನಾಥ್‌ ರಾವ್‌ ಮಲ್ಕಾಪೂರೆ, ಎನ್‌.ರವಿಕುಮಾರ್‌, ಎಸ್‌.ರುದ್ರೇಗೌಡ, ಪಿ.ಎ.ಮುನಿರಾಜುಗೌಡ- ಬಿಜೆಪಿ
– ಬಿ.ಎಂ.ಫಾರೂಕ್‌-ಜೆಡಿಎಸ್‌

Advertisement

Udayavani is now on Telegram. Click here to join our channel and stay updated with the latest news.

Next