ಮೈಸೂರು: ಸದಾ ವಾಹನಗಳ ಸದ್ದು, ಜನದಟ್ಟಣೆಯಿಂದ ಕೂಡಿರುತ್ತಿದ್ದ ಆ ರಸ್ತೆಯಲ್ಲಿ ಬುಧವಾರ ವಾಹನಗಳೇ ಇಲ್ಲದೆ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ತುಂತುರು ಮಳೆಯನ್ನೂ ಲೆಕ್ಕಿಸದೆ ಕಣ್ಣುಹಾಯಿಸಿದ ಕಡೆಯಲ್ಲೆಲ್ಲಾ ಗೋಚರಿಸುತ್ತಿದ್ದ ಯುವಜನತೆ ಸಿನಿಮಾ ಸಂಗೀತದ ಜತೆಗೆ ಆಗೊಮ್ಮೆ-ಈಗೊಮ್ಮೆ ಕೇಳಿಸುತ್ತಿದ್ದ ವಾದ್ಯಗಳ ಸಂಗೀತಕ್ಕೆ ಹೆಜ್ಜೆಹಾಕುತ್ತಾ ಸಂಭ್ರಮಿಸುತ್ತಿದ್ದ ಸಂಗತಿಗಳೇ ಗೋಚರಿಸುತ್ತಿತ್ತು.
ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ನಗರದ ಪ್ರತಿಷ್ಠಿತ ಡಿ.ದೇವರಾಜ ಅರಸು ರಸ್ತೆಯಲ್ಲಿ. ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ನಾಡಹಬ್ಬ ದಸರಾ ಪ್ರಯುಕ್ತ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ಓಪನ್ ಸ್ಟ್ರೀಟ್ ಪೆಸ್ಟಿವಲ್ ಯುವಜನರ ಪಾಲಿಗೆ ಅಕ್ಷರಶಃ ಹಬ್ಬವಾಗಿಯೇ ಪರಿಣಮಿಸಿತು. ಇಡೀ ದಿನ ನಡೆದ ಮನರಂಜನಾತ್ಮಕ ಕಾರ್ಯಕ್ರಮಗಳು ನಡೆದವು.
ಎಲ್ಲವೂ ಆಕರ್ಷಣೀಯ: ದಸರೆಯ ಸಂಭ್ರಮವನ್ನು ಹೆಚ್ಚಿಸುವ ಸಲುವಾಗಿ ಆಯೋಜಿಸಿದ್ದ ಸ್ಟ್ರೀಟ್ ಪೆಸ್ಟಿವಲ್‌ನಲ್ಲಿ ನೋಡಿದ್ದೆಲ್ಲವೂ ಆಕರ್ಷಣೀಯವಾಗಿತ್ತು. ಜತೆಗೆ ಕಾವಾ ವಿದ್ಯಾರ್ಥಿಗಳು ಸ್ಟ್ರೀಟ್ ಪೇಂಟಿಂಗ್‌ನಲ್ಲಿ ರಚಿಸಿದ್ದ ಅರಣ್ಯ ಸಂರಕ್ಷಣೆ, ಬಾಲ್ಯವಿವಾಹ, ಭ್ರೂಣಹತ್ಯೆ ನಿಷೇಧ ಕುರಿತು ಚಿತ್ರಗಳು ಜನರಲ್ಲಿ ಜಾಗೃತಿ ಮೂಡಿಸಿದರೆ, ರಂಗೋಲಿಯಲ್ಲಿ ಚಿತ್ರಿಸಿದ ಜಂಬೂಸವಾರಿ, ಮಹಿಷಾಸುರ, ಆನೆ ಸೇರಿದಂತೆ ಇನ್ನಿತರ ಚಿತ್ರಗಳು ಎಲ್ಲರ ಕಣ್ಮನ ಸೆಳೆದವು. ಇವುಗಳ ಜತೆಗೆ ಮರಗಾಲು ಕಲಾವಿದರು, ಮಿಕ್ಕಿಮೌಸ್, ಛೋಟಾಭೀಮ್, ಡೋನಾಲ್ಡ್ ಇನ್ನಿತರ ಕಾಟೂìನ್‌ಗಳ ವೇಷಧಾರಿಗಳು ಮಕ್ಕಳು ಜತೆಗೆ ದೊಡ್ಡವರನ್ನು ತಮ್ಮತ್ತ ಸೆಳೆದವು. ಈ ಕಾಟೂìನ್‌ಗಳಿಗೆ ಮನಸೋತು ಸೆಲ್ಫಿ ತೆಗೆಸಿಕೊಂಡು ಖುಷಿಪಟ್ಟರು.
ವಸ್ತುಪ್ರದರ್ಶನವೂ ಇತ್ತು: ರಸ್ತೆಯಲ್ಲಿ ಹಾಡು, ನೃತ್ಯದ ಸಂಭ್ರಮ ಕಂಡುಬಂದರೆ, ರಸ್ತೆ ಬದಿಯಲ್ಲಿದ್ದ ಹಲವು ಮಳಿಗೆಗಳು ಜನರನ್ನು ಸೆಳೆದವು. ಪ್ರಮುಖವಾಗಿ ಕೇರಳದ ಅಲಂಕಾರಿಕ ಒಣ ಹೂವು, ತಂಜಾವೂರು, ಮೈಸೂರು ಶೈಲಿಯ ಪೆÂಂಟಿಂಗ್‌ಗಳು, ಕಾಟನ್ ಸೀರೆ ಹಾಗೂ ಉಡುಪು, ಸಿದ್ಧ ಉಡುಪುಗಳು, ಟೆರಾಕೋಟಾ ಆಭರಣಗಳು, ರೆಡಿ ಟ್ಯಾಟ್ಯೂಗಳು, ರುಚಿಯಾದ ತಿನಿಸುಗಳು ಯುವಸಮೂಹ ಹಾಗೂ ಹಿರಿಯರನ್ನು ಸೆಳೆದವು.
ಕಮಾನ್ ಲೆಟ್ಸ್ ಡ್ಯಾನ್ಸ್: ಡೊಳ್ಳು, ಕಂಸಾಳೆ ಸದ್ದಿನ ಜತೆಗೆ ಬೃಹತ್ ವೇದಿಕೆ ಇಕ್ಕೆಲಗಳಲ್ಲಿ ಅಳವಡಿಸಿದ್ದ ಭಾರೀ ಧ್ವನಿ ವರ್ಧಕದಿಂದ ಹೊರಹೊಮ್ಮುತ್ತಿದ್ದ ಕನ್ನಡ, ಇಂಗ್ಲಿಷ್, ಹಿಂದೆ ಸೇರಿದಂತೆ ಹಲವು ಭಾಷೆಗಳ ಸಂಗೀತಕ್ಕೆ ಹೆಜ್ಜೆ ಹಾಕಿದರು. ಜತೆಗೆ ಯೋಗಗುರು ಗಣೇಶ್‌ರ ನೇತೃತ್ವದಲ್ಲಿ ಚೀನಿ ಯುವತಿಯರ ಯೋಗ ನೃತ್ಯರೂಪಕಕ್ಕೆ ಜನರು ಫಿದಾ ಆದರು. ಇದರೊಂದಿಗೆ ವಿವಿಧ ಬಗೆಯ ವಿನೋದ ಕ್ರೀಡೆಗಳು, ಸ್ಪರ್ಧೆಗಳು ಇನ್ನಿತರ ಚಟುವಟಿಕೆಗಳು ಸ್ಟ್ರೀಟ್ ಪೆಸ್ಟಿವಲ್‌ನ ಸಂಭ್ರಮ ಉಲ್ಬಣಗೊಳಿಸಿತು. ಬೆಳಗ್ಗಿನಿಂದಲೇ ಆರಂಭವಾದ ಪೆಸ್ಟಿವಲ್‌ನ ನಡುವೆ ಆಗ್ಗಾಗ್ಗೆ ಸುರಿಯುತ್ತಿದ್ದ ತುಂತುರು ಮಳೆ ನಡುವೆಯೂ ಪ್ರತಿಯೊಬ್ಬರೂ ಪೆಸ್ಟಿವಲ್ ಅನ್ನು ಸಂಪೂರ್ಣವಾಗಿ ಎಂಜಾಯ್ ಮಾಡಿದರು.
ಸ್ಟ್ರೀಟ್ ಪೆಸ್ಟಿವಲ್‌ಗೆ ಚಾಲನೆ: ಡಿ.ದೇವರಾಜ ಅರಸು ರಸ್ತೆಯಲ್ಲಿ ಆಯೋಜಿಸಿದ್ದ ಓಪನ್ ಸ್ಟ್ರೀಟ್ ಪೆಸ್ಟಿವಲ್‌ಗೆ ಜಿಲ್ಲಾಧಿಕಾರಿ ಡಿ.ರಂದೀಪ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಸ್ಟ್ರೀಟ್ ಪೆಸ್ಟಿವಲ್ ಯಶಸ್ವಿಯಾದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಮೊದಲ ಪ್ರಯತ್ನವಾಗಿ ಸ್ಟ್ರೀಟ್ ಪೆಸ್ಟಿವಲ್ ನಡೆಸಲಾಗುತ್ತಿದೆ. ಅತ್ಯಂತ ತರಾತುರಿಯಲ್ಲಿ ನಡೆದ ಈ ಪೆಸ್ಟಿವಲ್‌ಗೆ ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಈ ವೇಳೆ ಮೇಯರ್ ಎಂ.ಜೆ.ರವಿಕುಮಾರ್, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಜನಾದìನ್ ಮತ್ತಿತರರಿದ್ದರು.