Advertisement

Bengaluru; ಎಲೆಕ್ಟ್ರಿಕ್‌ ಬೈಕ್‌ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಹ*ನ

08:34 AM Nov 20, 2024 | Team Udayavani |

ಬೆಂಗಳೂರು: ಎಲೆಕ್ಟ್ರಿಕ್‌ ಬೈಕ್‌ ಶೋ ರೂಮ್‌ನಲ್ಲಿ ಶಾರ್ಟ್‌ ಸರ್ಕಿಟ್‌ನಿಂದ ಉಂಟಾದ ಬೆಂಕಿ ಅವಘಡದಲ್ಲಿ ಮಹಿಳಾ ಸಿಬ್ಬಂದಿಯೊಬ್ಬರು ಸಜೀವ ದಹನವಾಗಿ ರುವ ಹೃದಯ ವಿದ್ರಾವಕ ಘಟನೆ ರಾಜಾಜಿನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಶ್ರೀರಾಮಪುರ ನಿವಾಸಿ ಪ್ರಿಯಾ (27) ಮೃತ ಯುವ ತಿ. ರಾಜಾಜಿನಗರದ ಡಾ.ರಾಜ್‌ಕುಮಾರ್‌ ರಸ್ತೆಯ ಮೈ ಇವಿ ಸ್ಟೋರ್‌ ಹೆಸರಿನ ಎಲೆಕ್ಟ್ರಿಕ್‌ ಬೈಕ್‌ ಶೋ ರೂಮ್‌ನಲ್ಲಿ ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ದುರ್ಘ‌ಟನೆ ನಡೆದಿದೆ. ಅಗ್ನಿ ಅವಘಡದಲ್ಲಿ ಸುಮಾರು 25ಕ್ಕೂ ಅಧಿಕ ಎಲೆಕ್ಟ್ರಿಕ್‌ ಬೈಕ್‌ಗಳು ಹಾಗೂ ಪೀಠೊಪಕರಣಗಳು ಸುಟ್ಟು ಭಸ್ಮವಾಗಿವೆ. ಇದೇ ವೇಳೆಶೋರೂಮ್‌ನಲ್ಲಿ ಕೆಲಸ ಮಾಡುತ್ತಿದ್ದ ದಿಲೀಪ್‌, ವೇದಾವತಿ ಸೇರಿ ಮೂವರಿಗೆ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಟ್ಟಡಕ್ಕೂ ಹಾನಿಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಸುಟ್ಟು ಕರಕಲಾದ ಯುವತಿ: ಶೋರೂಮ್‌ನಲ್ಲಿ ಯುವತಿ ಸೇರಿ 7ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದರು. ಸಂಜೆ 6 ಗಂಟೆ ಸುಮಾರಿಗೆ ಶಾರ್ಟ್‌ ಸರ್ಕಿಟ್‌ನಿಂದ ಶೋ ರೂಮ್‌ನ ಬ್ಯಾಟರಿ ಸೆಕ್ಷನ್‌ನಲ್ಲಿ ಬೆಂಕಿ ಕಾಣಿಸಿಕೊಂಡು, ಮೊದಲಿಗೆ ಬ್ಯಾಟರಿ ಸ್ಫೋಟಗೊಂಡಿದೆ. ಅದರಿಂದ ಗಾಬರಿಗೊಂಡ ಯುವತಿ ಸೇರಿ ಎಲ್ಲಾ ಸಿಬ್ಬಂದಿ ಹೊರಗಡೆ ಹೋಗಲು ಮುಂದಾಗಿದ್ದಾರೆ. ಆದರೆ, ಯುವತಿ, ಬೆಂಕಿಯ ಕಿನ್ನಾಲಿಗೆಯಿಂದ ಪಾರಾಗಲು ಆಡಳಿತ ವಿಭಾಗದ ಕ್ಯಾಬಿನ್‌ಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. ಇತರೆ ಸಿಬ್ಬಂದಿ ಶೋರೂಮ್‌ ನಿಂದಲೇ ಹೊರಗಡೆ ಹೋಗಿದ್ದಾರೆ. ಈ ವೇಳೆ ಕ್ಯಾಬಿನ್‌ಗೆ ಬ್ಯಾಟರಿಗಳ ಸ್ಫೋಟದಿಂದ ಗಾಜುಗಳು ಪುಡಿಯಾಗಿ ಬೆಂಕಿಯ ಕಿನ್ನಾಲಿಗೆ ಪ್ರಿಯಾಗೆ ತಗುಲಿದೆ. ಪರಿಣಾಮ ಆಕೆ ಕೆಲವೇ ಕ್ಷಣಗಳಲ್ಲಿ ಸಜೀವ ದಹನವಾಗಿದ್ದಾರೆ.

ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ: ಇನ್ನು ವಿಷಯ ತಿಳಿದು 2 ಅಗ್ನಿಶಾಮಕ ವಾಹನಗಳ ಜತೆ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಬೆಂಕಿ ನಂದಿಸುತ್ತಿದ್ದರು.

ಮತ್ತೂಂದೆಡೆ ರಾಜಾಜಿನಗರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ರಕ್ಷಣಾ ಘಟನಾ ಸ್ಥಳದ ಸುತ್ತ-ಮುತ್ತ ಜಮಾಯಿಸಿದ್ದ ಜನರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಚದುರಿಸಿದರು. ಆದರೆ, ಬೆಂಕಿಯ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ಮತ್ತೊಂದು ಅಗ್ನಿಶಾಮಕ ವಾಹನವನ್ನು ಸ್ಥಳಕ್ಕೆ ಕರೆಸಿಕೊಂಡು ಸುಮಾರು 3 ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಬಳಿಕ ಸುಟ್ಟು ಕರಕಲಾಗಿದ್ದ ಪ್ರಿಯಾ ಮತದೇಹವನ್ನು ಹೊರಗೆ ತಂದು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ಹೇಳಿದರು. ಈ ಸಂಬಂಧ ರಾಜಾಜಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಿಯಾ ಸಹೋ ದರ ಪ್ರತಾಪ ನೀಡಿದ ದೂರಿನ ಮೇರೆಗೆ ಬೈಕ್‌ ಶೋ ರೂಮ್‌ ಮಾಲಿಕ ಪುನೀತ್‌ ಗೌಡ ಹಾಗೂ ಮ್ಯಾನೇಜರ್‌ ವಿರುದ್ಧ ಪ್ರಕರಣ ದಾಖಲಾಗಿದೆ.

Advertisement

ಘಟನಾಸ್ಥಳಕ್ಕೆ ಉತ್ತರ ವಿಭಾಗದ ಡಿಸಿಪಿ ಸೈದುಲ್ಲಾ ಅಡಾವತ್‌ ಹಾಗೂ ಇತರೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಇಂದು ಹುಟುಹಬ್ಬ ಇತ್ತು : ತಂದೆ ಆಕ್ರಂದನ
ಭೀಕರ ಬೆಂಕಿ ಅವಘಡದಲ್ಲಿ ಸುಟ್ಟು ಕರಕಲಾದ ಪ್ರಿಯಾ ಮೃತಪಟ್ಟ ಸುದ್ದಿ ಕೇಳಿ ಅವರ ತಂದೆ ಆರ್ಮುಗಂ ಶೋ ರೂಮ್‌ ಬಳಿ ಬಂದು ಪುತ್ರಿಗಾಗಿ ಗೋಳಾಡಿದರು. ಅವರ ಆಕ್ರಂದನ ಅಲ್ಲಿಂದ್ದವರ ಕಣ್ಣಾಲಿಗಳಲ್ಲಿ ನೀರು ತರಿಸಿತ್ತು. ಭಾವುಕದಿಂದಲೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಆರ್ಮುಗಂ, ಕಳೆದ 3 ವರ್ಷಗಳಿಂದ ಪುತ್ರಿ ಈ ಎಲೆಕ್ಟ್ರಿಕ್‌ ಶೋ ರೂಮ್‌ನಲ್ಲಿ ಅಕೌಂಟೆಂಟ್‌ ಆಗಿ ಕೆಲಸ ಮಾಡುತ್ತಿದ್ದಳು. ನ.20ರಂದು ಪುತ್ರಿಯ ಹುಟ್ಟುಹಬ್ಬವಿತ್ತು. ಆಕೆಗಾಗಿ ಹೊಸ ಬಟ್ಟೆ ಕೂಡ ಖರೀದಿಸಿ ದ್ದೇವು. ಅದನ್ನು ಧರಿಸಲು ಆಕೆಯೇ ಇಲ್ಲ ಎಂದು ಆರ್ಮುಗಂ ಕಣ್ಣೀರಿಟ್ಟರು

ಎಲೆಕ್ಟ್ರಿಕ್‌ ಬೈಕ್‌ ಶೋ ರೂಮ್‌ನಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳ ದಿರುವುದು ಅವಘಡಕ್ಕೆ ಕಾರಣವಾಗಿದೆ. ಘಟನೆಯಲ್ಲಿ ಯುವತಿಯೊಬ್ಬಳು ಮೃತಪಟ್ಟಿದ್ದಾಳೆ. 25ಕ್ಕೂ ಅಧಿಕ ಬೈಕ್‌ ಗಳು ಸುಟ್ಟು ಕರಕಲಾಗಿವೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ.
●ಯೂನಿಸ್‌, ಅಗ್ನಿಶಾಮಕ ದಳ ಉಪನಿರ್ದೇಶಕ.

ಎಲೆಕ್ಟ್ರಿಕ್‌ ಬೈಕ್‌ ಶೋ ರೂಮ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡಲ್ಲಿ ಯುವತಿಯೊಬ್ಬಳು ಮೃತಪಟ್ಟಿದ್ದಾಳೆ. ಈ ಘಟನೆ ಸಂಬಂಧ ಶೋ ರೂಮ್‌ ಮಾಲಿಕರ ವಿರುದ್ಧ ರಾಜಾಜಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

●ಸೈದುಲ್ಲಾ ಅಡಾವತ್‌, ಉತ್ತರವಿಭಾಗದ ಡಿಸಿಪಿ

ಬ್ಯಾಟರಿಗಳು ಸ್ಫೋಟ
ಶೋ ರೂಮ್‌ನಲ್ಲಿ ಸುಮಾರು 25ಕ್ಕೂ ಅಧಿಕ ಎಲೆಕ್ಟ್ರಿಕ್‌ ಬೈಕ್‌ಗಳು ಇದ್ದವು. ಬೆಂಕಿ ಅವಘಡದಲ್ಲಿ ಎಲ್ಲಾ ಬೈಕ್‌ಗಳು ಸುಟ್ಟು ಕರಕಲಾಗಿದ್ದು, ಅವುಗಳ ಬ್ಯಾಟರಿಗಳು ಸ್ಫೋಟಗೊಂಡ ಪರಿಣಾಮ ಶೋ ರೂಮ್‌ನಲ್ಲಿ ಬೆಂಕಿಯ ಪ್ರಮಾಣ ಹೆಚ್ಚಾಯಿತು. ಅದರಿಂದ ಅಗ್ನಿಶಾಮಕ ಸಿಬ್ಬಂದಿ ಸ್ವಲ್ಪ ಎಚ್ಚರಿಕೆಯಿಂದಲೇ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸಿದರು.

ರಸ್ತೆಯಲ್ಲಿ ಸಂಚಾರ ದಟ್ಟಣೆ
ಎಲೆಕ್ಟ್ರಿಕ್‌ ಬೈಕ್‌ ಶೋ ರೂಮ್‌ನಲ್ಲಿಬೆಂಕಿ ಹೊತ್ತಿಕೊಂಡ ಬೆನ್ನಲ್ಲೇ ಡಾ.ರಾಜಕು ಮಾ ರ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಯಿತು. ಧಗಧಗನೆ ಬೆಂಕಿ ಹೊತ್ತಿ ಉರಿಯುತ್ತಿದ್ದ ಹಿನ್ನೆಲೆಯಲ್ಲಿ ವಾಹನ ಸವಾರರು ರಸ್ತೆಯಲ್ಲೇ ವಾಹನ ನಿಲ್ಲಿಸಿಕೊಂಡು ಬೆಂಕಿ ನೋಡುತ್ತಾ ನಿಂತಿದ್ದರು. ಹೀಗಾಗಿ ಡಾ.ರಾಜ್‌ ಕುಮಾರ್‌ ರಸ್ತೆ, ವಾಟಾಳ್‌ ನಾಗರಾಜ್‌ ರಸ್ತೆ, ರಾಜಾಜಿನಗರ ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ಅಧಿಕವಾಗಿತ್ತು. ಆಗ ಸ್ಥಳಕ್ಕೆ ದೌಡಾಯಿಸಿದ ಸಂಚಾರ ಪೊಲೀಸರು ವಾಹನ ಸವಾರರನ್ನು ಮುಂದಕ್ಕೆ ಕಳುಹಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next