Advertisement

Mangaluru: ಮುಂಗಾರು ಹಂಗಾಮಿನಲ್ಲಿ ಈ ಬಾರಿ ಬೇಸಾಯ ತಡವಾದರೂ ಉತ್ತಮ ಬೆಳೆ

01:05 PM Nov 12, 2024 | Team Udayavani |

ಮಹಾನಗರ: ಮುಂಗಾರು ಹಂಗಾಮಿನಲ್ಲಿ ಬೆಳೆಯಲಾದ ನಾಟಿ – ಬಿತ್ತನೆ ಮಾಡಲಾಗಿದ್ದ ಭತ್ತದ ಕಟಾವು ಕಾರ್ಯ ಮಂಗಳೂರು ಸಹಿತ ಮೂಡುಬಿದಿರೆ, ಮೂಲ್ಕಿ ಹಾಗೂ ಉಳ್ಳಾಲ ತಾಲೂಕಿನಲ್ಲಿ ಆರಂಭವಾಗಿದೆ. ಪ್ರಸ್ತುತ ಶೇ. 35-40 ಕಟಾವು ಕಾರ್ಯ ಪೂರ್ಣಗೊಂಡಿದ್ದು, ವಿವಿಧೆಡೆ ಕಟಾವು ಕಾರ್ಯ ಮುಂದುವರಿದಿದೆ.

Advertisement

ಈ ಬಾರಿ ಮುಂಗಾರು ಮಳೆ ಸ್ವಲ್ಪ ತಡವಾಗಿ ಸುರಿದ ಹಿನ್ನೆಲೆಯಲ್ಲಿ ಭತ್ತ ಬೇಸಾಯವೂ ತಡ ವಾಗಿದ್ದು, ಇದರಿಂದ ಕಟಾವು ಕೂಡ ಒಂದು ತಿಂಗಳಷ್ಟು ವಿಳಂಬವಾಗಿತ್ತು. ಈ ಬಾರಿ ಫಸಲು ಬಹುತೇಕ ಉತ್ತಮವಾಗಿ ಬಂದಿದೆ. ವಾರದ ಹಿಂದೆ ಚಂಡ ಮಾರುತದ ಕಾರಣದಿಂದ ಸುರಿದ ಮಳೆಗೆ ಭತ್ತದ ಗದ್ದೆಯಲ್ಲಿ ನೀರು ನಿಂತು ಹಾನಿ ಸಂಭವಿಸಿತ್ತು. ಕಟಾವು ಆರಂಭ ಮಾಡುವ ಸಿದ್ಧತೆಯಲ್ಲಿದ್ದವರು ತುಸು ಕಷ್ಟ ಅನುಭವಿಸಿದರು.

ಯಂತ್ರಗಳ ಮೂಲಕ ಕಟಾವು
ಶೇ.80ರಷ್ಟು ಕಟಾವು ಕಾರ್ಯ ಯಂತ್ರಗಳ ಮೂಲಕವೇ ನಡೆಯುತ್ತಿದೆ. ಯಂತ್ರಗಳು ಹೋಗಲು ಸಾಧ್ಯವಿಲ್ಲದ ಮತ್ತು ಸಣ್ಣ ಗದ್ದೆಗಳನ್ನು ಹೊಂದಿರುವವರು ಮಾತ್ರ ಕಾರ್ಮಿಕರನ್ನು ಬಳಸಿಕೊಂಡು ಕಟಾವು ನಡೆಯುತ್ತದೆ. ಈಗಾಗಲೇ ತಮಿಳುನಾಡು ಮೂಲದ ಕಟಾವು ಯಂತ್ರಗಳು ಜಿಲ್ಲೆಗೆ ಆಗಮಿಸಿದ್ದು, ತಾಸಿಗೆ ಇಂತಿಷ್ಟು ದರ ಎಂದು ನಿಗದಿಪಡಿಸಿ, ಕಟಾವು ನಡೆಸಲಾಗುತ್ತಿದೆ.

ಇಳುವರಿ ಉತ್ತಮ
ಪ್ರತಿ ವರ್ಷ ಎಂಒ4 ಭತ್ತದ ತಳಿಯನ್ನು ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ವಿತರಿಸಲಾಗುತ್ತಿತ್ತು. ಈ ಬಾರಿ ಎಂಒ4 ಬದಲು ಸಹ್ಯಾದ್ರಿ ಕೆಂಪುಮುಖೀ ತಳಿಯನ್ನು ರೈತರಿಗೆ ಕೃಷಿ ಇಲಾಖೆ ಪರಿಚಯಿಸಿದೆ. ಹೆಚ್ಚಿನ ಪ್ರಮಾಣದಲ್ಲಿ ಕೆಂಪು ಮುಖೀಯ ಬಿತ್ತನೆ ಬೀಜವನ್ನು ರೈತರಿಗೆ ವಿತರಿಸಲಾಗಿದೆ. ಈ ಬಾರಿ ಬಹುತೇಕ ಇಳುವರಿ ಉತ್ತಮವಾಗಿ ಬಂದಿದ್ದು, ರೈತರು ಕೂಡಾ ಖುಷಿಯಾಗಿದ್ದಾರೆ. ಕಾಡು ಪ್ರಾಣಿಗಳು, ನವಿಲು ಸೇರಿದಂತೆ ಭತ್ತಕ್ಕೆ ಹಾನಿ ಮಾಡುವ ಪ್ರಾಣಿ ಪಕ್ಷಿಗಳ ಕಾಟವೂ ಅಷ್ಟಾಗಿ ಇರಲಿಲ್ಲ ಎನ್ನುತ್ತಾರೆ ಗ್ರಾಮೀಣ ಭಾಗದ ಕೃಷಿಕರು.

Advertisement

ತಿಂಗಳೊಳಗೆ ಪೂರ್ಣ ಸಾಧ್ಯತೆ
ಬಾಕಿ ಉಳಿದಿರುವ ಪ್ರದೇಶದಲ್ಲಿ ಕಟಾವು ಕಾರ್ಯ ತಿಂಗಳೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಬಳಿಕ ಕೆಲವು ರೈತರು ಎರಡನೇ ಬೆಳೆಯಾಗಿ ಹಿಂಗಾರಿನ ಭತ್ತ ಬೇಸಾಯಕ್ಕೆ ಮುಂದಾಗುತ್ತಾರೆ. ಕೆಲವು ರೈತರು ಹಿಂಗಾರಿನಲ್ಲೇ ಮೊದಲ ಬೆಳೆ ತೆಗೆಯುತ್ತಾರೆ. ಈಗಾಗಲೇ ಹಿಂಗಾರಿನ ಭತ್ತ ಕೃಷಿಗೆ ಬಿತ್ತನೆ ಬೀಜಗಳ ಬೇಡಿಕೆ ಆರಂಭವಾಗಿದೆ.

ಶೇ.40ರಷ್ಟು ಕಟಾವು ಪೂರ್ಣ
ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಭತ್ತದ ಬೆಳೆ ಉತ್ತಮವಾಗಿ ಬಂದಿದೆ. ಕಟಾವು ಕಾರ್ಯ ಈಗಾಗಲೇ ಆರಂಭವಾಗಿದೆ. ತಾಲೂಕು ವ್ಯಾಪ್ತಿಯಲ್ಲಿ ಈಗಾಗಲೇ ಶೇ.40ರಷ್ಟು ಕಟಾವು ಪೂರ್ಣಗೊಂಡಿದೆ.
-ಡಾ| ವೀಣಾ ರೈ, ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ ಮಂಗಳೂರು

-ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next