ಪಣಜಿ: ಇಂದಿನ ಸಂದರ್ಭದಲ್ಲಿ ಭಾಷೆ ಒಂದು ಸಮಸ್ಯೆಯಲ್ಲ. ಹಾಗಾಗಿ ಕನ್ನಡದಲ್ಲೇ ಸಿನಿಮಾಗಳನ್ನು ರೂಪಿಸಿ ಜಾಗತಿಕ ಮಟ್ಟಕ್ಕೆ ತಲುಪಿಸುವ ಪ್ರಯತ್ನ ಮಾಡುತ್ತೇನೆ ಎನ್ನುತ್ತಾರೆ ಕಾನ್ ಚಿತ್ರೋತ್ಸವ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕ ಚಿದಾನಂದ ಎಸ್. ನಾಯಕ್.
ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತಮ್ಮ “ಸನ್ ಫ್ಲವರ್ ವರ್ ದಿ ಒನ್ ಫರ್ಸ್ಟ್ ಟು ನೋʼ ಕಿರುಚಿತ್ರದ ಪ್ರದರ್ಶನದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ (ನ.22) ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದರು.
ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಆಸೆ ಸದಾ ಇದೆ. ಅದರಲ್ಲೇ ಪ್ರಯತ್ನಿಸುವೆ. ಇಂದು ಭಾಷೆ ಸಂವಹನಕ್ಕೆ ಸಮಸ್ಯೆಯಾಗುವ ಸಂದರ್ಭವಿಲ್ಲ. ಸಬ್ ಟೈಟಲ್ಸ್ ನಿಂದ ಹಿಡಿದು ಬಹುಭಾಷೆಗಳ ನಿರ್ಮಾಣ, ಡಬ್ಬಿಂಗ್ ಎಲ್ಲವೂ ಸಾಧ್ಯವಿದೆ. ಅದೇ ಕಾರಣಕ್ಕೆ ಕನ್ನಡದಲ್ಲೇ ಸಿನಿಮಾ ಮಾಡುವೆ ಎಂದರು ಚಿದಾನಂದ್.
ಈ ಚಿತ್ರ ಕನ್ನಡದ ಒಂದು ಜನಪದ ಕಥೆಯನ್ನು ಆಧರಿಸಿದ್ದು. ನಾವು ಸಣ್ಣವರಿದ್ದಾಗ ಕೇಳಿದಂಥ ಕಥೆಗೇ ದೃಶ್ಯ ರೂಪ ನೀಡುವ ಪ್ರಯತ್ನ ಮಾಡಿದ್ದೇವೆ (ಇಡೀ ತಂಡವಾಗಿ) ಎಂದು ವಿವರಿಸಿದರು ಚಿದಾನಂದ್.
ವೈದ್ಯರಿದ್ದವರು ಏಕೆ ಸಿನಿಮಾ ಮಾಡಲು ಬಂದಿರಿ ಎಂಬ ಪ್ರಶ್ನೆಗೆ, ನಿಜ. ನಾನು ಓದಿದ್ದು ವೈದ್ಯಕೀಯ ವಿಷಯ. ನನಗೆ ಸಿನಿಮಾ ನೋಡುವ ಅಭ್ಯಾಸವಿತ್ತು. ವೈದ್ಯಕೀಯ ವಿಷಯ ಅಧ್ಯಯನ ಮಾಡುವಾಗಲೂ ಭಾವನಾತ್ಮಕ ಸಂಗತಿಗಳನ್ನು ತಲುಪಿಸುವ ಪ್ರಭಾವಿ ಮಾಧ್ಯಮವಾಗಿ ಸಿನಿಮಾ ಎನಿಸಿತ್ತು. ಅದೇ ಕಾರಣಕ್ಕೆ ನಾನು ಸಿನಿಮಾವನ್ನು ನನ್ನ ಮಾಧ್ಯಮವನ್ನಾಗಿ ಆಯ್ಕೆ ಮಾಡಿಕೊಂಡೆ ಎಂದರು ಚಿದಾನಂದ.
ಕಾನ್ ಚಿತ್ರೋತ್ಗವದ ಅನುಭವದ ಬಗ್ಗೆ ವಿವರಿಸುತ್ತಾ, ನನ್ನ ಚಿತ್ರ ಆಯ್ಕೆಯಾಗಿ ಪ್ರದರ್ಶನಗೊಂಡು ಪ್ರಶಸ್ತಿ ಪಡೆಯುವವರೆಗೆ ಕಾನ್ ಚಿತ್ರೋತ್ಸವವನ್ನು ಟಿವಿಯಲ್ಲಿ ಕಂಡು, ಮಾಧ್ಯಮಗಳಲ್ಲಿ ಓದಿ ತಿಳಿದಿದ್ದೆ. ಈ ಬಾರಿ ಕಣ್ಣಾರೆ ಕಂಡೆ. ಒಳ್ಳೆ ಅನುಭವ. ನನ್ನ ಚಿತ್ರವನ್ನು ಕಂಡ ಹಲವರ ಅಭಿಪ್ರಾಯವನ್ನೂ ಕೇಳಿದೆ. ಒಟ್ಟಾರೆ ಖುಷಿ ನೀಡಿತುʼ ಎಂಬುದು ಅವರ ಅಭಿಪ್ರಾಯವಾಗಿತ್ತು.
ನಾನು ಚಿತ್ರಗಳನ್ನು ಮಾಡುವುದು ಪ್ರೇಕ್ಷಕರನ್ನು ಒಳಗೊಳ್ಳುವುದಕ್ಕಾಗಿಯೇ. ಅದನ್ನು ವಾಣಿಜ್ಯ ಅಥವಾ ಕಲಾತ್ಮಕ ಎಂದೆಲ್ಲ ಪ್ರತ್ಯೇಕಿಸಲಾರೆ. ಪ್ರೇಕ್ಷಕರಿಗೆ ಖುಷಿ ನೀಡಲೆಂದೆ ಸಿನಿಮಾ ಮಾಡುತ್ತೇನೆ ಎಂದರಲ್ಲದೇ, ದೊಡ್ಡ ದೊಡ್ಡ ನಟರೊಂದಿಗೂ ಸಿನಿಮಾ ಮಾಡಬೇಕೆಂದಿದೆ. ನೋಡುವ ಅವಕಾಶ ಸಿಗಬಹುದು ಎಂದರು.
ಹೊಸ ಸಿನಿಮಾ ನಿರ್ದೇಶಕರಿಗೆ ನೀಡುವ ಸಲಹೆ ಎಂದು ಕೇಳಿದ್ದಕ್ಕೆ, ಕಿರುಚಿತ್ರ ಕ್ಷೇತ್ರಕ್ಕೆ ಬರಲು ಒಳ್ಳೆಯ ವೇದಿಕೆ. ಅದನ್ನು ಹೊರತುಪಡಿಸಿದಂತೆ ಕಿರುಚಿತ್ರ, ದೊಡ್ಡ ಚಿತ್ರ ಎಲ್ಲವೂ ವೀಕ್ಷಣೆಯ, ಸಾಂಸ್ಥಿಕ ನೆಲೆಯ ಅನುಕೂಲಕ್ಕೆ ಮಾಡಿಕೊಂಡದ್ದು. ಕಥೆಯನ್ನು ಪರಿಣಾಮಕಾರಿಯಾಗಿ ಹೇಳಲು ಎರಡೂ ಮಾಧ್ಯಮವೇ ಎಂದು ಸ್ಪಷ್ಟಪಡಿಸಿದರು.
ಮಂಡ್ಯದಲ್ಲಿ ನಡೆದಿದ್ದ ಒಂದು ಚಲನಚಿತ್ರ ರಸಗ್ರಹಣ ಶಿಬಿರದಲ್ಲಿ ಭಾಗವಹಿಸಿದ್ದ ಚಿದಾನಂದರು ಅಲ್ಲಿಂದ ಪ್ರೇರಣೆಗೊಂಡು ಸಿನಿಮಾ ಕ್ಷೇತ್ರಕ್ಕೆ ಬಂದರು. ಎಂಬಿಬಿಎಸ್ ಮುಗಿಸಿ ಒಂದು ವರ್ಷದ ಕೋರ್ಸ್ ನ್ನು ಎಫ್ ಟಿ ಐಐ ನಲ್ಲಿ ಮುಗಿಸಿದರು. ಸಿನಿಮಾಗಳ ಬಗ್ಗೆ ಓದು, ವೀಕ್ಷಣೆ ಹಾಗೂ ಅಧ್ಯಯನ ಕೈಗೊಂಡಿದ್ದರು.
ʼನಾನು ಈಗಲೇ ಎಂಥಾ ಸಿನಿಮಾಗಳನ್ನು ಮಾಡುತ್ತೇನೆ ಎಂದು ಹೇಳಲಾರೆ. ಕಮರ್ಷಿಯಲ್ಲೋ ಅಥವಾ ಆರ್ಟೋ ಎಂದು ವಿಂಗಡಿಸಿ ಹೇಳುವುದಕ್ಕಿಂತ ಮುಂದಿನ ದಿನಗಳಲ್ಲಿ ನಾನು ಮಾಡುವ ಸಿನಿಮಾಗಳೇ ನನ್ನ ಹಾದಿಯನ್ನು ಹೇಳಬಹುದು ಎಂದು ವಿವರಿಸಿದರು. ಚಿತ್ರದ ಪ್ರೊಡಕ್ಷನ್ ಡಿಸೈನರ್ ಪ್ರಣವ್ ಜಿ. ಖೋಟ್ ಸಹ ಜತೆಗಿದ್ದರು. ಈ ಚಿತ್ರವು ಮುಂದಿನ ಆಸ್ಕರ್ ಗೂ ಸಲ್ಲಿಸಲಾಗಿದೆ.