Advertisement

ಯುವ ಸಮೂಹದಿಂದ ದೇಶದ ಪುನರುತ್ಥಾನ ಸಾಧ್ಯ

09:26 AM Jan 12, 2019 | Team Udayavani |

ಚಿಕ್ಕಮಗಳೂರು: ಜಾಗೃತ ಯುವಶಕ್ತಿಯಿಂದ ದೇಶದ ಪುನರುತ್ಥಾನ ಸಾಧ್ಯ ಎಂಬುದು ಸ್ವಾಮಿ ವಿವೇಕಾನಂದರ ನಂಬಿಕೆಯಾಗಿತ್ತು ಎಂದು ಸಾಹಿತಿ ಚಟ್ನಳ್ಳಿ ಮಹೇಶ್‌ ಅಭಿಪ್ರಾಯಪಟ್ಟರು.

Advertisement

ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವ ರಾಷ್ಟ್ರೀಯ ಯುವದಿನದ ಅಂಗವಾಗಿ ಆಯೋಜಿಸಿರುವ ವಿವೇಕ ಯುವ ಸಂಭ್ರಮದ ಉದ್ಘಾಟನಾ ಸಮಾರಂಭದಲ್ಲಿ ಸ್ವಾಮಿ ವಿವೇಕಾನಂದ ಮತ್ತು ಯುವಶಕ್ತಿ ಕುರಿತಂತೆ ವಿಶೇಷ ಉಪನ್ಯಾಸ ನೀಡಿದರು.

ಯುವಶಕ್ತಿ ವಿವೇಚನೆ ಬೆಳೆಸಬೇಕು. ಶಿಕ್ಷಣ ಅರಿವು ಮತ್ತು ರಾಷ್ಟ್ರಪ್ರಜ್ಞೆ ಯುವಪೀಳಿಗೆಯಲ್ಲಿ ಮೂಡಿದಾಗ ಸದೃಢ ಸಮಾಜನಿರ್ಮಾಣ ಸಾಧ್ಯ. ಯುವಶಕ್ತಿಗೆ ಗುರು ಇರಬೇಕು. ಆಧ್ಯಾತ್ಮಿಕ ಚಿಂತನೆ ಸಮುದಾಯವನ್ನು ಒಳ್ಳೆಯ ದಿಕ್ಕಿನಲ್ಲಿ ಮುನ್ನಡೆಸುತ್ತದೆಂಬುದು ವಿವೇಕಾನಂದರ ವಿಚಾರಧಾರೆಯಾಗಿತ್ತು ಎಂದರು.

ಪಾಶ್ಚಾತ್ಯರ ಕ್ರಿಯಾಶೀಲತೆಯೊಂದಿಗೆ ಪೌರಾತ್ವದ ಆಧ್ಯಾತ್ಮಶಕ್ತಿ ಸೇರಬೇಕು. ಕ್ಷಾತ್ರತೇಜಸ್ಸು ಮತ್ತು ಉಕ್ಕಿನ ನರಗಳಿರುವ ಹತ್ತು ಯುವಕರನ್ನು ಕೊಟ್ಟರೆ ಭಾರತವನ್ನು ಜಗತ್ತಿನ ಗುರುವಿನ ಪಟ್ಟಕೇರಿಸುವುದಾಗಿ ಆತ್ಮವಿಶ್ವಾಸದಿಂದ ಅವರು ನುಡಿದಿದ್ದರು. ದರಿದ್ರ- ದಲಿತ-ರೋಗಿ-ನಿಶಕ್ತರಿಗೆ ಅನುಕಂಪಕ್ಕಿಂತ ನೆರವು ನೀಡಬೇಕು. ವಾಸ್ತವವಾಗಿ ಈ ಮೂಲಕ ದೇವರನ್ನು ಕಾಣಬಹುದೆಂದು ನಂಬಿದ್ದರು ಎಂದರು.

ಚಿಕಾಗೋದಲ್ಲಿ ವಿವೇಕಾನಂದರು ಸರ್ವಧರ್ಮ ಸಮ್ಮೇಳವನ್ನು ಉದ್ದೇಶಿಸಿ ಮಾತನಾಡಿದ್ದು ಅತ್ಯಂತ ಮಹತ್ವದ ಘಟ್ಟ. ಹಲವು ಬಾರಿ ಮುಂದೂಡಿ ಕೊನೆಗೆ 3ನಿಮಿಷದ 348 ಶಬ್ದಗಳನ್ನು ಬಳಕೆಮಾಡಿಕೊಂಡು ಅವರು ಮಾಡಿದ ಭಾಷಣ 6ಸಾವಿರ ಪ್ರತಿನಿಧಿಗಳನ್ನು ರೋಮಾಂಚನಗೊಳಿಸಿತು. ಭಾರತದ ಶಕ್ತಿ ಮತ್ತು ಸತ್ವವನ್ನು ಜಗತ್ತಿಗೆ ಪರಿಚಯಿಸಿತ್ತು ಎಂದು ಹೇಳಿದರು.

Advertisement

ಯುವಶಕ್ತಿಗೆ ಪ್ರಚಂಡವಾದ ಶಕ್ತಿ ಇದೆ. ಯೌವ್ವನದಲ್ಲೆ ಹಲವರು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಯುವಶಕ್ತಿ ದೇಶದ ನಿಜವಾದ ಸಾರ. ಅಂತಃಶಕ್ತಿಯ ಉದ್ದೀಪನಗೊಳ್ಳಬೇಕು. ಯುವಕರಲ್ಲಿ ಕುತೂಹಲ, ಕಾಡುವಿಕೆ, ಆಧ್ಯಾತ್ಮಿಕ ಚಿಂತನೆ ಜೊತೆಗೆ ಸಾಮಾಜಿಕ ತುಡಿತವಿರಬೇಕೆಂಬುದು ವಿವೇಕಾನಂದರ ಆಶಯವಾಗಿತ್ತು, ಕೇವಲ 39ವರ್ಷದ ಬದುಕಿನಲ್ಲಿ ಭಾರತದ ಆಧ್ಯಾತ್ಮಕ ಶಕ್ತಿಯನ್ನು ಅರ್ಥ ಮಾಡಿಕೊಂಡು ಜಗತ್ತಿನ ಮುಂದೆ ತೆರೆದಿಟ್ಟಿದ್ದು ಅಭೂತಪೂರ್ವ ಎಂದರು.

ವಿವೇಕ ಯುವಸಂಭ್ರಮ ಉದ್ಘಾಟಿಸಿದ ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷೆ ಗೌರಮ್ಮಬಸವೇಗೌಡ ಮಾತನಾಡಿ, ಸ್ವಾಮಿವಿವೇಕಾನಂದ ಯುವಶಕ್ತಿಯ ಪ್ರತೀಕ. ಅತಿ ಕಡಿಮೆ ಅವಧಿಯಲ್ಲಿ ಅವರ ಸಾಧನೆಗೆ ಜಗತ್ತೆ ತಲೆದೂಗಿದೆ. ಅವರ ಚಿಂತನಾಧಾರೆ ಕರ್ತವ್ಯಶೀಲತೆ ಯುವಶಕ್ತಿಗೆ ಸದಾ ಪ್ರೇರಣಾತ್ಮ ಎಂದರು. ಜ್ಞಾನರಶ್ಮಿ ಶಿಕ್ಷಣಟ್ರಸ್ಟ್‌ ಕಾರ್ಯದರ್ಶಿ ನಂದಕುಮಾರ್‌ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆವಹಿಸಿದ್ದರು.

ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ ಕಾರ್ಯಾಧ್ಯಕ್ಷ ಪ್ರಭುಲಿಂಗಶಾಸ್ತ್ರಿ ದಿಕ್ಸೂಚಿ ಭಾಷಣ ಮಾಡಿದರು. ಶಿಕ್ಷಕಿ ಶೈಲಜಾ ಸ್ವಾಗತಿಸಿ, ಮುಖ್ಯಶಿಕ್ಷಕಿ ಪಾಲಾಕ್ಷನಂದಕುಮಾರ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next