ಬೊಟ್ಟು ಬೊಟ್ಟು ಎಂದು ಬೆಟ್ಟು ಮಾಡದಿರಿ, ಎಲ್ಲ ರೀತಿ ಬೊಟ್ಟುಗಳಿಗೂ ಬೇಕೇ ಬೇಕು ಬೆಟ್ಟು. ಏನಿದು ಬೊಟ್ಟು? ಬೊಟ್ಟು ಎಂಬುದಕ್ಕೆ ಹಲವಾರು ಸಮಾನಾರ್ಥಕ ಪದಗಳಿವೆ. ಬಿಂದಿ, ತಿಲಕ, ಚುಕ್ಕಿ ಹೀಗೆ. ಬನ್ನಿ ಒಂದು ರೌಂಡ್ ಹಾಕಿಕೊಂಡು ಬರೋಣ.
ಯಾರಿಟ್ಟರೀ ಚುಕ್ಕಿ? ಯಾಕಿಟ್ಟರೀ ಚುಕ್ಕಿ? ಎಂದಾಗ ಆ ಚುಕ್ಕಿ ಎಲ್ಲಿದೆ ಎಂಬುದರ ಮೇಲೆ ಅವಲಂಬಿತ ಅದು ಬೊಟ್ಟು ಎಂಬ ಚುಕ್ಕಿಯೋ ? ಅಥವಾ ಗುಳಿ ಎಂಬ ಚುಕ್ಕಿಯೋ ? ಅಂತ. ಈ ಚುಕ್ಕಿಯನ್ನು ಎಲ್ಲಿ ಕಾಣಬಹುದು? ಹಣೆಯ ಮೇಲೆ ಬೊಟ್ಟು ಇಡುವ ಜಾಗದಲ್ಲೇ ನಿಮಗೊಂದು ಮಚ್ಚೆ ಇದೆ ಎಂದುಕೊಳ್ಳಿ ಅದೇ ಈ ಚುಕ್ಕಿ. ಬೊಟ್ಟು ಎಂಬುದರ ಕೆಲಸ ಈ ಮಚ್ಚೆಯೇ ಮಾಡಿದೆ ಎಂದುಕೊಂಡರೆ ಈ ಚುಕ್ಕಿ, ಬೊಟ್ಟು ಎಂದೂ ಆಗಬಹುದು. ಕೆನ್ನೆಯ ಗುಳಿಯ ಮೇಲಿನ ಮಚ್ಚೆ ಎಂಬುದೂ ಚುಕ್ಕಿ.
ಗುಳಿಯನ್ನು ಶೋಭಾಯಮಾನವಾಗಿ ಕಾಣಿಸಿಬೇಕು ಎಂದು ಚುಕ್ಕಿ ಇಡಬೇಕಿಲ್ಲ ಎಂದುಕೊಂಡರೆ ಈ ಚುಕ್ಕಿಯೇ ಬೊಟ್ಟು ಸಹ.
ಆಂಗ್ಲ ಸಿನೆಮಾ Incredibles ಕೇಳಿದ್ದೀರಿ ಎಂದುಕೊಳ್ಳುವ. ಆ Incredibles ಸಂಸಾರಕ್ಕೆ ಒಂದು ಸಮವಸ್ತ್ರವಿದೆ. ಅದರ ಮೇಲೆ ಐ ಚಿಹ್ನೆ ಇರುತ್ತದೆ. ಈ ಫಾರ್ Incredibles ಎಂಬಂತೆ. ಏನ ಹೇಳ ಹೊರಟೆ ಎಂದರೆ ಆಂಗ್ಲದ ಅಕ್ಷರ ಬರೆಯುವಾಗ Capital letters ಮತ್ತು Small letters ಎಂಬ ಎರಡೂ ರೀತಿಯಲ್ಲಿ ಬರೆಯಬಹುದು.
ಆಂಗ್ಲ ವ್ಯಾಕರಣ ಬದಿಗಿರಿಸಿದರೆ, Incredibles ನ ಮೊದಲ ಐ ಎಂಬುದು ಚಿಕ್ಕ ಅಕ್ಷರ. ಅದರ ತಲೆಯ ಮೇಲೆ ಅಲಂಕರಿಸಿರುವುದೇ ಬೊಟ್ಟು. ಆಂಗ್ಲ ವಾಕ್ಯರಚನೆಯಲ್ಲಿ ಐ ಬರೆಯುವಾಗ ತಲೆಯ ಮೇಲೆ ಬೊಟ್ಟು ಇರಿಸದಿದ್ದರೆ ನಮ್ಮ ತಂದೆಯವರಿಗೆ ಬಲು ಸಿಟ್ಟು ಬರುತ್ತಿತ್ತು. ಅದೆಂಥಾ ಸೋಂಬೇರಿತನ ಎಂದೇ ಬೈಯುತ್ತಿದ್ದರು.ಮಾಧ್ವರಲ್ಲಿ ಹಣೆಗೆ ಅಂಗಾರ – ಅಕ್ಷತೆ ಹಚ್ಚಿಕೊಳ್ಳುವುದು ಸಂಪ್ರದಾಯ. ಅಂಗಾರವು ತಿಲಕದಂತೆ ಉದ್ದನೆಯ ಗೆರೆಯಾದರೆ ಭ್ರೂ ಮಧ್ಯೆ ಬೊಟ್ಟಿನಂತೆ ಇಟ್ಟುಕೊಳ್ಳುವುದು ಅಕ್ಷತೆ. ಅಚ್ಚರಿಯ ಚಿಹ್ನೆಯಂತೆ ತೋರುವ ಇದು ಚಿಕ್ಕ ಐ ಎಂಬುದನ್ನು ಉಲ್ಟಾ ಬರೆದಂತೆ. ಐಯ್ಯಂಗಾರ್ ಸಂಪ್ರದಾಯದಲ್ಲಿ ಹಣೆಯ ಮಧ್ಯೆ ಇಡುವ ಕೆಂಪು ನಾಮವು ತಿಲಕ. ಬೊಟ್ಟು ಎಂಬುದಕ್ಕೆ ತಿಲಕ ಎಂದೂ ಹೆಸರಿದೆ.
ಹಣೆಯ ಕುಂಕುಮವನ್ನು ಗಂಡಸರು, ಹೆಂಗಸರು, ಮಕ್ಕಳು ಎಲ್ಲರೂ ಧರಿಸುತ್ತಾರೆ. ಪೂಜೆ ಪುನಸ್ಕಾರಗಳಿಗೆ ಬಳಸುವಾಗಲೂ ದೈವದ ಹಣೆಗೆ ಕುಂಕುಮ ಇಡುತ್ತಾರೆ. ಹೀಗೆ ಒಮ್ಮೆ ಒಂದು ರಸಪ್ರಶ್ನೆ ಬರೆದಿದ್ದೆ. ನಾನಾ ಹಣೆಗಳ ಕುಂಕುಮವನ್ನು ತೋರಿಸಿ, ಇವರು ಯಾರೆಂದು ಗುರುತಿಸಿ ಎಂದು. ಆ ರಸಪ್ರಶ್ನೆಯ ಕೆಲವೊಂದು ಉದಾಹರಣೆಗಳು ಎಂದರೆ ಕದ್ರಿ ಗೋಪಾಲನಾಥ್, ಕುನ್ನಕ್ಕುಡಿ ವೈದ್ಯನಾಥ, ಪುಟ್ಟಣ್ಣ ಕಣಗಾಲ್, ಎಸ್. ನಾರಾಯಣ್ ಹೀಗೇ ಹಲವಾರು ಗಂಡು ಹಣೆಗಳನ್ನು ತೋರಿಸಿ ಯಾರು ಎಂದು ಕೇಳಿದ್ದು ಸೊಗಸಾದ ಒಂದು ಪ್ರಯೋಗವಾಗಿತ್ತು. ಕೆಲವರ ಚರ್ಮ ಹೇಗೆ ಎಂದರೆ ಹಣೆಗೆ ಕುಂಕುಮವಿಟ್ಟಾಗ ಆ ಜಾಗ ಕೆಂಪಾಗುತ್ತದೆ. ಅವರ ಚರ್ಮಕ್ಕೆ ಆ ರಾಸಾಯನಿಕ ಯಾವ ರೀತಿ ಪೀಡಿಸುತ್ತದೋ ಯಾರಿಗೆ ಗೊತ್ತು. ಅಂಥವರಿಗೆ ವರದಾನವಾಗಿ ಬಂದದ್ದೇ ಬೊಟ್ಟು ಆಲಿಯಾಸ್ ಬಿಂದಿ.
ಇರುವೆಯ ಕಣ್ಣಿನ ಗಾತ್ರದ ಬೊಟ್ಟಿನಿಂದ ಹಿಡಿದು ನಾನಾ ಸೈಜುಗಳ, ಶೈಲಿಗಳ ಬೊಟ್ಟುಗಳು ಬ್ಯಾಂಗಲ್ ಸ್ಟೋರ್‌ಗಳಲ್ಲಿ ಲಭ್ಯ. ಒಂದೇ ಬಣ್ಣದ ಬೊಟ್ಟುಗಳ ಹಾಳೆಗಳಿಗಿಂತ, ನಾನಾ ಬಣ್ಣಗಳ ಬೊಟ್ಟುಗಳ ಹಾಳೆಗಳು ಬಲು ಜನಪ್ರಿಯ. ಚಪ್ಪಲಿಗೆ ಮ್ಯಾಚಿಂಗ್, ಸೀರೆಗೆ-ಕುಪ್ಪುಸಕ್ಕೆ ಮ್ಯಾಚಿಂಗ್ ಎಂದೆಲ್ಲ ಬಗೆಯ ಮಲ್ಟಿ-ಕಲರ್ ಬೊಟ್ಟುಗಳ ಹಾಳೆಯೂ ಮಾರುಕಟ್ಟೆಗೆ ಬಂತು. ಅದರ ಅನಂತರ ಇನ್ನೊಂದು ಬಗ್ಗೆಯೂ ಬಂತು. ಮುಖ್ಯ ಭೂಮಿಕೆಯಲ್ಲಿ ಒಂದು ಬಣ್ಣವಾದರೆ, ಅದರ ಸುತ್ತಲೂ ವಿವಿಧ ಬಣ್ಣದ ಸಣ್ಣ ಗುಂಡು ಬೊಟ್ಟುಗಳು. ಒಂದು ಬೊಟ್ಟು ಇಟ್ಟುಕೊಂಡರೆ ಸಾಕು ಅವು ಚಪ್ಪಲಿ, ಸೀರೆ, ಕುಪ್ಪುಸ, ಗಂಡನ ಶರ್ಟ್-ಪ್ಯಾಂಟ್ ಎಂಬೆಲ್ಲದಕ್ಕೂ ಮ್ಯಾಚಿಂಗ್.
ತಿಲಕರೂಪಿ ಬೊಟ್ಟುಗಳೂ ಬಲು ಜನಪ್ರಿಯ ಆದರೆ ನಾ ಕಾಣದ ಬೊಟ್ಟು ಎಂದರೆ ಆಯತಾಕಾರದ ಅಥವಾ ಚೌಕಾಕಾರದ ಬೊಟ್ಟುಗಳು. ಇಂಥಾ ಡಿಸೈನ್ ಬೊಟ್ಟುಗಳು ಏಕೆ ಬಂದಿಲ್ಲ ಅಂತ ನಿಮಗೇನಾದರೂ ಗೊತ್ತೇ? ಇಂದಿನ ದಿನಗಳಲ್ಲಿ pre&packed ಪದಾರ್ಥಗಳು ಸರ್ವೇಸಾಮಾನ್ಯ. ಅವು ಅಕ್ಕಿಬೇಳೆ ಆಗಿರಬಹುದು, ಹಣ್ಣು-ತರಕಾರಿಯೂ ಆಗಿರಬಹುದು ಅಥವಾ ಎಲೆ-ಬಳ್ಳಿ ಹೂವುಗಳೂ ಆಗಿರಬಹುದು. ಎಲ್ಲವನ್ನೂ ಪ್ಯಾಕ್ ಮಾಡಿ ಇಟ್ಟಿರುತ್ತಾರೆ ಹಾಗಾಗಿ ತೂಗಿ ಅಳೆಯುವ ಕೆಲಸವಿಲ್ಲ. ಒಂದಾನೊಂದು ಕಾಲದಲ್ಲಿ ಅದರಲ್ಲೂ ನ್ಯಾಯಬೆಲೆ ಅಂಗಡಿಗಳಲ್ಲಿ ಅಥವಾ ದಿನಸಿ ಅಂಗಡಿಗಳಲ್ಲಿ ಬೊಟ್ಟುಗಳನ್ನು ಬಳಸುತ್ತಿದ್ದರು. ಇವು ಹಣೆಗೆ ಇಡುವ ಬೊಟ್ಟುಗಳಲ್ಲ ಬದಲಿಗೆ ತೂಕದ ಬೊಟ್ಟುಗಳು. ತಕ್ಕಡಿಯ ಒಂದು ಬದಿಯಲ್ಲಿ ಬೊಟ್ಟುಗಳು, ಮಗದೊಂದು ಬದಿಯಲ್ಲಿ ಪದಾರ್ಥಗಳನ್ನು ತೂಗಿ ಅಳೆದು ನಮ್ಮ ಬ್ಯಾಗಿಗೆ ತುಂಬುತ್ತಿದ್ದರು. ಜೇಬು ತುಂಬಾ ದುಡ್ಡು ಇಟ್ಟುಕೊಂಡು ಬ್ಯಾಗು ತುಂಬಾ ಸಾಮಾನು ತರುತ್ತಿದ್ದ ಕಾಲ. ಇಂದು ಬ್ಯಾಗಿನ ತುಂಬಾ ದುಡ್ಡು, ಜೇಬಿನ ತುಂಬಾ ಸಾಮಾನು.
ಮೈಸೂರು ಸಂಸ್ಥಾನದ ರಾಜ್ಯ ಗೀತೆಯಾಗಿ ಬಸಪ್ಪ ಶಾಸ್ತ್ರಿಗಳ “ಕಾಯೋ ಶ್ರೀಗೌರಿ’ಯನ್ನು ಹಾಡಲಾಗುತಿತ್ತು. ಹಾಡಿನ ಕೊನೆಯ ಸಾಲುಗಳಲ್ಲಿ “ಶ್ರೀ ಜಯಚಾಮುಂಡಿಯೇ ಶ್ರೀ ಜಯಚಾಮೇಂದ್ರ, ನಾಮಾಂಕಿತ ಭೂಮೀಂದ್ರ ಲಲಾಮನ ಮುದದೆ’ ಎಂದಿದೆ. ನಾ ಅರ್ಥೈಸಿಕೊಂಡಂತೆ “ಚಾಮುಂಡೇಶ್ವರಿಯೇ, ಜಯಚಾಮರಾಜೇಂದ್ರ ಎಂಬ ಹೆಸರುಳ್ಳ ರಾಜನಾದ ಎನ್ನ ತಿಲಕವನ್ನು ಮುದದಿಂದ ಕಾಯೇ ತಾಯಿ’ ಎಂದು. ಹೆಚ್ಚಿನ ವೇಳೆ ಸಾಹಿತ್ಯದಲ್ಲಿ “ಶ್ರೀ ಜಯಚಾಮುಂಡಿಗೆ’ ಎಂದೂ ಹೇಳಲಾಗಿದೆ. ಈ ಸಾಹಿತ್ಯ ಗೊಂದಲ ಇಂದು ನೆನ್ನೆಯದಲ್ಲ. ಇರಲಿ, ಇಲ್ಲಿ ನಾ ಹೇಳಹೊರಟಿರುವುದು “ಲಲಾಮ’ ಎಂದರೆ ತಿಲಕ ಎಂದು.
ಹಣೆಗೆ ಹಚ್ಚುವ ಬೊಟ್ಟು ಸದಾ ಶೋಭಾಯಮಾನವಾಗಿರಲಿ. ಬೊಟ್ಟಿನಿಂದ ಹಣೆಯು ಹೆಸರಾಗಲಿ. ಅದರಂತೆಯೇ ಆ ಬೊಟ್ಟಿನ ಹಣೆಯನ್ನು ಮಂದಿ ಬೆಟ್ಟು ಮಾಡಿ ತೋರದೇ ಇರುವಂತೆ ವ್ಯಕ್ತಿತ್ವವನ್ನು ಕಾಪಾಡಿಕೊಳ್ಳುವಂತೆ ಕಾಯೋ ಶ್ರೀಗೌರಿ ಎನ್ನೋಣ.
*ಶ್ರೀನಾಥ್ ಭಲ್ಲೇ, ರಿಚ್ಮಂಡ್