Advertisement
ಋಣತ್ರಯಗಳಲ್ಲಿ ಪಿತೃಋಣವೆಂಬುದು ಬಹಳ ಮುಖ್ಯ ವಾಗುತ್ತದೆ. ಯಾಕೆಂದರೆ ಒಬ್ಬರ ಹುಟ್ಟಿಗೆ ದೈವಸಂಕಲ್ಪವಿದ್ದರೂ ಭೌತಿಕವಾಗಿ ತಂದೆ-ತಾಯಿಗಳು ಬೇಕಾಗುತ್ತದೆ. ಅವರಿಂದ ಜನ್ಮಪಡೆದ ಮೇಲೆ ಅವರ ಋಣದಲ್ಲಿ ಬೀಳುವುದು ಸಹಜ. ಇದನ್ನು ತೀರಿಸಲು ತಂದೆತಾಯಿಗಳ ಮನನೋಯಿಸದೆ ಅವರು ಇದ್ದಷ್ಟು ಕಾಲ ಚೆನ್ನಾಗಿ ನೋಡಿಕೊಂಡು ಅವರು ಗತಿಸಿದ ಅನಂತರ ಅವರ ದಿನವನ್ನು ಆಚರಿಸಿ ಕೃತಜ್ಞತೆ ಸಲ್ಲಿಸುವುದು ನಮ್ಮ ಆದ್ಯ ಕರ್ತವ್ಯ. ಇದನ್ನು ಶ್ರಾದ್ಧ ಎನ್ನುತ್ತಾರೆ. ಹಾಗೆಯೇ ನಮ್ಮ ಜೀವನಕ್ಕೆ ಕೊಡುಗೆ ನೀಡಿ ಗತಿಸಿದವರನ್ನೆಲ್ಲ ನೆನೆದು ಮಾಡುವ ಪಿತೃಕಾರ್ಯವನ್ನು ಮಹಾಲಯ ಎನ್ನುತ್ತಾರೆ. ನಮ್ಮ ಎಲ್ಲ ಪೂರ್ವಜರಿಗೆ ಕೃತಜ್ಞತೆಯನ್ನು ಅರ್ಪಣೆ ಮಾಡಲು ಮಹಾಲಯ ಪಕ್ಷವು ಮೀಸಲಾಗಿವೆ.
Related Articles
Advertisement
ಮಹಾಭಾರತ ಯುದ್ಧದಲ್ಲಿ ದಾನಿ ಕರ್ಣನು ಮರಣ ಹೊಂದಿ ಅವನ ಆತ್ಮವು ಸ್ವರ್ಗಕ್ಕೆ ಹೋದಾಗ, ಅವನು ತೀವ್ರ ಹಸಿವಿನಿಂದ ಬಳಲುತ್ತಿದ್ದನು, ಆದರೆ ಅವನು ಮುಟ್ಟಿದ ಆಹಾರ ಗಳೆಲ್ಲವೂ ತತ್‌ಕ್ಷಣವೇ ಚಿನ್ನವಾದವು. ಇದರಿಂದ ಧೃತಿಗೆಟ್ಟ ಕರ್ಣ ಸೂರ್ಯನೊಡನೆ ಇಂದ್ರನ ಬಳಿಗೆ ಹೋಗಿ ಈ ಪರಿಸ್ಥಿತಿಗೆ ಕಾರಣವನ್ನು ಕೇಳಿದನು. ಆಗ ಇಂದ್ರನು “ಕರ್ಣಾ, ನಿನ್ನ ಜೀವನ ದುದ್ದಕ್ಕೂ ಚಿನ್ನವನ್ನು ದಾನ ಮಾಡಿದ್ದಿ. ಆದರೆ ನಿನ್ನ ಪೂರ್ವಜರಿಗೆ ಶ್ರಾದ್ಧ ಮಾಡಿ ಆಹಾರವನ್ನು ನೀಡಲಿಲ್ಲ.ಆದ್ದರಿಂದ, ಅಸ್ಥಿರವಾದ ಕುರು ಪೂರ್ವಜರು ನಿನ್ನನ್ನು ಶಪಿಸಿದ್ದಾರೆ. ನೀನು ನಿನ್ನ ಪೂರ್ವಜರ ಬಗ್ಗೆ ತಿಳಿದಿಲ್ಲದ ಕಾರಣ, ಅವರ ನೆನಪಿಗಾಗಿ ಎಂದಿಗೂ ಏನನ್ನೂ ದಾನ ಮಾಡಲಿಲ್ಲ. ಇದಕ್ಕೆ ಪರಿಹಾರವಾಗಿ, ನಿನ್ನ ತಪ್ಪನ್ನು ತಿದ್ದುಪಡಿ ಮಾಡಲು, 15 ದಿನಗಳ ಅವಧಿಗೆ ಭೂಮಿಗೆ ಮರಳಲು ಅನುಮತಿಸುತ್ತೇನೆ. ನೀನು ಭೂಲೋಕ ದಲ್ಲಿ ಪಿತೃಗಳಿಗೆ ಶ್ರಾದ್ಧವನ್ನು ಮಾಡಿ ಅವರ ನೆನಪಿಗಾಗಿ ಆಹಾರ ಮತ್ತು ನೀರನ್ನು ದಾನ ಮಾಡು. ನಿನಗೆ ಒಳ್ಳೆಯದಾಗುತ್ತದೆ ಎಂದನು. ಅದರಂತೆ ಕರ್ಣನು ನಡೆದುಕೊಳ್ಳುತ್ತಾನೆ. ಈ ಅವಧಿ ಯನ್ನು ಈಗ ಪಿತೃ ಪಕ್ಷ ಎಂದು ಕರೆಯಲಾಗುತ್ತದೆ. ಪೂರ್ವಜರು ಶ್ರಾದ್ಧಾದಿಗಳಿಂದ ತೃಪ್ತರಾಗಿದ್ದರೆ, ಅವರು ತಮ್ಮ ಸಂತತಿಯವರಿಗೆ ಆರೋಗ್ಯ, ಸಂಪತ್ತು, ಜ್ಞಾನ ಮತ್ತು ದೀರ್ಘಾ ಯುಷ್ಯವನ್ನು ಹಾಗೂ ಅಂತಿಮವಾಗಿ ಸ್ವರ್ಗ ಮತ್ತು ಮೋಕ್ಷವನ್ನು ದಯಪಾಲಿಸುತ್ತಾರೆ ಎಂದು ಧರ್ಮಗ್ರಂಥ ಮಾರ್ಕಂಡೇಯ ಪುರಾಣ ಹೇಳುತ್ತದೆ. ಅದೇ ರೀತಿ ಗೃಹಸ್ಥನಾದವನು ಪಿತೃಗಳನ್ನು, ದೈವದೇವರುಗಳನ್ನು, ಪಂಚಭೂತಗಳನ್ನು ಮತ್ತು ಅತಿಥಿಗಳನ್ನು ಪೂಜಿಸುತ್ತಿರಬೇಕು ಎಂದಿದೆ. ಸರ್ವಪಿತೃ ಅಮಾವಾಸ್ಯೆಯಂದು ಮಾಡುವ ಮಹಾಲಯ ಶ್ರಾದ್ಧವು ನಾವು ಮರೆತುಹೋದ ಅಥವಾ ನಿರ್ಲಕ್ಷಿಸಲ್ಪಟ್ಟ ವ್ಯಕ್ತಿಗೂ ಮೋಕ್ಷ ಕರುಣಿಸುತ್ತದೆ. ಮಾಮೂಲಿ ಶ್ರಾದ್ಧದಲ್ಲಿ ಮೂರು ತಲೆಮಾರುಗಳಿಗೆ ಅಂದರೆ ತಂದೆ-ಅಜ್ಜ-ಮುತ್ತಜ್ಜ ಹಾಗೆಯೇ ತಾಯಿ-ಅಜ್ಜಿ-ಮುತ್ತಜ್ಜಿ ಇವರಿಗೆ ಪಿಂಡಪ್ರದಾನವಾಗುತ್ತದೆ. ಆದರೆ ಮಹಾಲಯದಲ್ಲಿ ತಂದೆ ಮತ್ತು ತಾಯಿಯ ಅಣ್ಣತಮ್ಮಂದಿರು-ಅವರ ಹೆಂಡತಿ ಮಕ್ಕಳು, ಅಕ್ಕತಂಗಿಯರು -ಅವರ ಗಂಡಂದಿರು, ಮಕ್ಕಳು, ಅತ್ತೆ-ಮಾವ, ವಿದ್ಯೆ ಕೊಟ್ಟ ಗುರು-ಗುರುಪತ್ನಿ, ಧರ್ಮ ಬೋಧನೆ ಮಾಡಿದ ಆಚಾರ್ಯರು-ಪತ್ನಿ, ಯಜಮಾನ-ಪತ್ನಿ, ಗೆಳೆಯರು ಮುಂತಾದವರಿಗೆ ಪಿಂಡಪ್ರದಾನ ನಡೆಸುತ್ತಾರೆ ಮತ್ತು ಜ್ಞಾತ- ಅಜ್ಞಾತರಿಗೆ ಧರ್ಮಪಿಂಡ ಇಡುತ್ತಾರೆ. ಹಾಗಾಗಿ ಮಹಾಲಯ ದಲ್ಲಿ ವಸುದೈವ ಕುಟುಂಬದ ಕಲ್ಪನೆ ಬರುತ್ತದೆ. ಮಹಾಲಯ ಶ್ರಾದ್ಧವನ್ನು ಸಾಮಾನ್ಯವಾಗಿ ನದಿ ಸರೋವರದ ದಡದಲ್ಲಿ ಅಥವಾ ಸ್ವಂತ ಮನೆಯಲ್ಲಿ ಮಧ್ಯಾಹ್ನದ ಸಮಯದಲ್ಲಿ ಮಾಡಲಾಗುತ್ತದೆ. ಕೆಲವರು ಶ್ರಾದ್ಧವನ್ನು ಮಾಡಲು ವಾರಾಣಸಿ, ಗಯಾದ ಫಲ್ಗುಣಿ ನದಿತೀರ, ನೇಪಾಲದ ಪಶುಪತಿನಾಥ ದೇವಸ್ಥಾನದ ಬಳಿ ಬಾಗ¾ತಿ ನದಿತೀರ ಮುಂತಾದ ಸ್ಥಳಗಳಿಗೆ ತೀರ್ಥಯಾತ್ರೆಯನ್ನು ಮಾಡುತ್ತಾರೆ. ಗಯಾದಲ್ಲಿ ವಾರ್ಷಿಕ ಪಿತೃ ಪಕ್ಷ ಮೇಳ ನಡೆಯುತ್ತದೆ. ದೇಶದ ಮೂಲೆ ಮೂಲೆಗಳಿಂದ ಸಹಸ್ರಾರು ಯಾತ್ರಿಕರು ತಮ್ಮ ಪೂರ್ವಜರಿಗೆ ಪಿಂಡವನ್ನು ಅರ್ಪಿಸಲು ಗಯಾಕ್ಕೆ ಭೇಟಿ ನೀಡುತ್ತಾರೆ. ಮನೆಯಲ್ಲಿ ಮಾಡಿದ ಶ್ರಾದ್ಧವು ಗಯಾಶ್ರಾದ್ಧಕ್ಕೆ ಸಮಾನ ಎನ್ನುತ್ತಾರೆ. ಮಹಾಲಯದ ದಿನ ಪಿತೃಗಳಿಗೆ ಮಾಡುವ ಆಹಾರ ಹವಿಸ್ಸು ಗಳನ್ನು ಸಾಮಾನ್ಯವಾಗಿ ಬೆಳ್ಳಿ, ತಾಮ್ರ ಅಥವಾ ಮಣ್ಣಿನ ಪಾತ್ರೆಗಳಲ್ಲಿ ಬೇಯಿಸಲಾಗುತ್ತದೆ ಮತ್ತು ಬಾಳೆ ಎಲೆ ಅಥವಾ ಒಣಗಿದ ಎಲೆಗಳಿಂದ ಮಾಡಿದ ದೊನ್ನೆತಟ್ಟೆಗಳ ಮೇಲೆ ಇಡ ಲಾಗುತ್ತದೆ. ಹವಿಸ್ಸನ್ನು ಅಕ್ಕಿ ಅಥವಾ ಗೋಧಿಹಿಟ್ಟಿನಿಂದ ತಯಾರಿ ಸುತ್ತಾರೆ. ಪಿಂಡ(ಉಂಡೆ)ಗಳನ್ನು ತುಪ್ಪ ಮತ್ತು ಕಪ್ಪು ಎಳ್ಳನ್ನು ಬೆರೆಸಿ ತಯಾರಿಸುತ್ತಾರೆ. ಕೆಲವೆಡೆ ಸಿಹಿ ಪದಾರ್ಥಗಳನ್ನೂ ತಯಾರಿಸಿ ಬಡಿಸುತ್ತಾರೆ. ತಿಲತರ್ಪಣ ನೀಡುತ್ತಾರೆ. ಉಳಿದ ಹವಿಸ್ಸಿನಿಂದ ಕಾಗೆಗಳಿಗೂ ಆಹಾರ ನೀಡುತ್ತಾರೆ. ಶ್ರಾದ್ಧವಿಧಿಗಳ ಅನಂತರ ಅನ್ನದಾನ ಮಾಡುತ್ತಾರೆ. ಪಿಂಡಪ್ರದಾನ ಮಾಡುವ ಕ್ರಮವಿಲ್ಲದವರು ಪಿತೃಪಕ್ಷದ ದಿನ ಗಳಲ್ಲಿ ಶುದ್ಧಾಚಾರದಲ್ಲಿದ್ದು ಗತಿಸಿದ ಹಿರಿಯರನ್ನು ನೆನೆದು ಸಮುದ್ರಸ್ನಾನ ಮಾಡಬೇಕು. ತೀರ್ಥಕ್ಷೇತ್ರಗಳನ್ನು ಸಂದರ್ಶಿಸ ಬೇಕು. ಪಿತೃಗಳ ಹೆಸರಲ್ಲಿ ಬಡಬಗ್ಗರಿಗೆ ದಾನಧರ್ಮ ಮಾಡ ಬೇಕು. ಅನ್ನದಾನ-ಪಾನೀಯಗಳನ್ನು ನೀಡಬೇಕು. ಮನೆಯಲ್ಲಿ ವಿಶೇಷ ಊಟಗಳನ್ನು ತಯಾರಿಸಿ ಎಲೆಯಲ್ಲಿ ಬಡಿಸಿ ತೀರಿ ಹೋದವರನ್ನು ಆಹ್ವಾನಿಸಿ ಅವರಿಗೆ ಉಣ್ಣಲು ಸಮಯ ನೀಡ ಬೇಕು. ಅನಂತರ ಆ ಪಿತೃಪ್ರಸಾದವನ್ನು ಸ್ವೀಕರಿಸಬೇಕು. ನಮಗೆ ವಂಶವಾಹಿನಿಯನ್ನು ನೀಡಿದ ಪಿತೃಗಳಿಗಾಗಿ ಪಿತೃ ಪಕ್ಷದ ದಿನಗಳಲ್ಲಿ ನಾವು ಕೆಲವನ್ನು ತ್ಯಾಗ ಮಾಡಬೇಕಾಗುತ್ತದೆ. ಅವರ ಸ್ಮರಣೆಯಲ್ಲಿ ದೇವರಸೇವೆ, ಗೋಸೇವೆ, ದಾನ ಧರ್ಮಾದಿ ಗಳನ್ನು ಮಾಡಬೇಕು. ಸೌಮ್ಯ ಆಹಾರಗಳನ್ನು ಸೇವಿಸಬೇಕು. ವೈಯಕ್ತಿಕ ಶೃಂಗಾರಗಳನ್ನು (ಕೂದಲು, ಗಡ್ಡಮೀಸೆ, ಉಗುರು ತೆಗೆಯುವುದು ಇತ್ಯಾದಿ) ಮಾಡಬಾರದು. ಭೋಗಜೀವನ, ಮನೋರಂಜನೆಗಳಿಂದ ದೂರವಿರಬೇಕು. ಹೊಸಬಟ್ಟೆ, ಹೊಸ ವಸ್ತು, ಚಿನ್ನಾಭರಣ, ವಾಹನ ಖರೀದಿ ವಜ್ಯì. ಹೊಸ ಯೋಜನೆ ಗಳು ಮತ್ತು ಉದ್ಯಮಗಳನ್ನು ಆರಂಭಿಸಬಾರದು. ವಿದೇಶ ಪ್ರಯಾಣ ಮತ್ತು ದೂರ ಪ್ರಯಾಣವನ್ನು ಮುಂದೂಡಬೇಕು. ತೀರ್ಥಯಾತ್ರೆಗಳನ್ನು ಕೈಗೊಳ್ಳಬಹುದು ಎಂದು ಧರ್ಮಶಾಸ್ತ್ರ ಗಳು ತಿಳಿಸುತ್ತವೆ. ಒಟ್ಟಿನಲ್ಲಿ ಮಹಾಲಯದ ದಿನಗಳಲ್ಲಿ ಪಿತೃಗಳು ನಮ್ಮನ್ನು ಹರಸಲಿ. – ಡಾ|ಉಪಾಧ್ಯಾಯ ಮೂಡುಬೆಳ್ಳೆ