Advertisement

Desi Swara: ಶ್ರೀಕೃಷ್ಣನ ಮುಕುಟದಲ್ಲಿ ನವಿಲುಗರಿ ಹೇಗೆ ಬಂತು?

01:26 PM Jul 27, 2024 | Team Udayavani |

ನವಿಲುಗರಿಯನ್ನು ಮುಕುಟದಲ್ಲಿ ಹೊಂದಿರದ ಶ್ರೀಕೃಷ್ಣನ ಮುಖವನ್ನು ಕಲ್ಪಿಸಿಕೊಳ್ಳುವುದೂ ನಮಗೆ ಅಸಾಧ್ಯ. ಯಾವುದೇ ಯಕ್ಷಗಾನವಿರಲಿ, ನಾಟಕವಿರಲಿ ಅಥವಾ ಮಕ್ಕಳ ಛದ್ಮವೇಷ ಸ್ಪರ್ಧೆಯಿರಲಿ, ಕೃಷ್ಣನ ಪಾತ್ರ ಇದೆಯೆಂದರೆ ಅದಕ್ಕೆ ನವಿಲುಗರಿ ಬೇಕೇಬೇಕು. ಈ ನವಿಲು ಗರಿ ಕೃಷ್ಣನ ಮುಕುಟದ ಶೋಭೆಯನ್ನು ಹೆಚ್ಚಿಸಿರುವುದಂತೂ ನಿಜ.

Advertisement

ಆದರೆ ನೀವೆಂದಾದರೂ ಕೃಷ್ಣನ ಮುಕುಟಕ್ಕೆ ಈ ನವಿಲುಗರಿ ಹೇಗೆ ಹತ್ತಿಕೊಂಡಿತು? ಕೃಷ್ಣನು ತನ್ನ ಮುಕುಟದಲ್ಲಿ ನವಿಲುಗರಿಗೆ ಏಕೆ ಅಷ್ಟೊಂದು ಪ್ರಾಮುಖ್ಯ ನೀಡಿದ ಎಂದು ಗೊತ್ತೇ? ಅದನ್ನು ತಿಳಿಯಬೇಕಾದರೆ ನೀವು ರಾಮಾಯಣದ ಸಮಯಕ್ಕೆ ಹೋಗಲೇಬೇಕು. ವಿಷ್ಣುವಿನ ದಶಾವತಾರಗಳಲ್ಲಿ ರಾಮ ಹಾಗೂ ಕೃಷ್ಣ ಬರುತ್ತಾರೆ. ಆದುದರಿಂದ ರಾಮಾಯಣ ಹಾಗೂ ಮಹಾಭಾರತದ ಕೆಲವು ಪ್ರಸಂಗಗಳಿಗೆ ಒಂದಕ್ಕೊಂದು ಸಂಬಂಧ ಇದ್ದೇ ಇದೆ.

ಶ್ರೀರಾಮ, ಸೀತೆ, ಲಕ್ಷ್ಮಣರು ವನವಾಸಕ್ಕೆಂದು ಅಯೋಧ್ಯೆಯಿಂದ ಹೊರಟು, ಗುಹನಿಂದ ಗಂಗೆಯನ್ನು ದಾಟಿ, ಮುಂದೆ ಸಾಗಿ, ದಟ್ಟಡವಿಯನ್ನು ಪ್ರವೇಶಿಸಿದರು. ನಡೆದು ನಡೆದು ದಣಿದ ಸೀತಾಮಾತೆಗೆ ಬಹಳ ಬಾಯಾರಿಕೆಯಾಯಿತು. ದಟ್ಟ ಅಡವಿಯಲ್ಲಿ ಹತ್ತಿರದಲ್ಲೆಲ್ಲಿಯೂ ನೀರು ಕಾಣಿಸಲಿಲ್ಲ. ದೂರ ದೂರದವರೆಗೆ ಬರೀ ಕಾಡೇ ಕಾಣುತ್ತಿತ್ತು.

ಆಗ ಶ್ರೀ ರಾಮನು ವನದೇವಿಯನ್ನು ಪ್ರಾರ್ಥಿಸಿ, “ಹೇ, ವನದೇವತೆಯೇ, ಕೃಪೆ ಮಾಡಿ ಎಲ್ಲಾದರೂ ಹತ್ತಿರದಲ್ಲಿ ನೀರಿದ್ದರೆ, ಅಲ್ಲಿಗೆ ಹೋಗುವ ಮಾರ್ಗವನ್ನು ತೋರಿಸು’ ಎಂದು ಬೇಡಿಕೊಳ್ಳುತ್ತಾನೆ. ಆಗ ಅಲ್ಲೊಂದು ನವಿಲು ಬಂದು ಶ್ರೀ ರಾಮನಿಗೆ ಹೇಳಿತು. “ಇಲ್ಲೇ ಸ್ವಲ್ಪ ದೂರದಲ್ಲಿ ಒಂದು ಜಲಾಶಯವಿದೆ. ನಡೆಯಿರಿ ನಾನು ಮಾರ್ಗವನ್ನು ತೋರಿಸುವೆನು. ಆದರೆ ಮಾರ್ಗದಲ್ಲಿ ನೀವು ದಾರಿ ತಪ್ಪುವ ಸಾಧ್ಯತೆ ಇದೆ’ ಎಂದಿತು.

Advertisement

ಶ್ರೀರಾಮನು ಹಾಗೇಕೆ? ಎಂದು ಕೇಳಿದ್ದಕ್ಕೆ, ನವಿಲು “ನಾನು ಹಾರುತ್ತಾ ಹೋಗುತ್ತೇನೆ. ನೀವು ನಡೆಯುತ್ತಾ ಬರುವಿರಿ. ಹಾರುತ್ತಿರುವ ನನ್ನನ್ನು ನೀವು ಹಿಂಬಾಲಿಸಲಾಗದೆ ದಾರಿ ತಪ್ಪಬಹುದು. ನಿಮಗೆ ದಾರಿ ತಿಳಿಯಲು, ನಾನು ಹಾರುತ್ತ ಹೋಗುವಾಗ ನನ್ನ ಒಂದೊಂದೇ ಗರಿಯನ್ನು ಕಿತ್ತು ಕೆಳಗೆ ಹಾಕುತ್ತಾ ಹೋಗುವೆನು. ನೀವು ಬಿದ್ದ ಗರಿಯನ್ನು ಅನುಸರಿಸಿ ಬಂದರೆ ಜಲಾಶಯವನ್ನು ಸುಲಭವಾಗಿ ತಲುಪುವಿರಿ’ ಎಂದು ಹೇಳಿತು.

ನವಿಲು ಗರಿಗಳು ವಿಶೇಷ ಸಮಯ ಹಾಗೂ ವಸಂತ ಋತುವಿನಲ್ಲಿ ಮಾತ್ರ ತಾವಾಗಿಯೇ ಉದುರುತ್ತವೆ. ಬಲವಂತವಾಗಿ ತೆಗೆದರೆ ನವಿಲಿನ ಸಾವು ನಿಶ್ಚಿತ. ಇಲ್ಲಾಗಿದ್ದೂ ಅದೇ!! ಆ ನವಿಲು ಶ್ರೀರಾಮನಿಗಾಗಿ ತನ್ನ ಕೊನೆಯ ಗರಿಯನ್ನು ಕಿತ್ತು ಉದುರಿಸಿ, ಕೊನೆಯ ಉಸಿರು ತೆಗೆದುಕೊಳ್ಳುವ ಮುನ್ನ ಅದರ ಮನಸ್ಸಿನಲ್ಲೊಂದು ಭಾವನೆ ಬಂದಿತು.

“ಯಾರು ಜಗತ್ತಿನ ಬಾಯಾರಿಕೆಯನ್ನು ತೀರಿಸುವರೋ, ಅಂತಹ ಪ್ರಭುವಿನ ಬಾಯಾರಿಕೆ ತೀರಿಸುವ ಸೌಭಾಗ್ಯ ಇಂದು ನನ್ನ ಪಾಲಿಗೆ ಬಂದಿದೆ. ನನ್ನ ಜೀವನ ಪಾವನವಾಯಿತು. ಇನ್ನು ನನ್ನ ಜೀವನದಲ್ಲಿ ಯಾವ ಆಸೆಯೂ ಉಳಿದಿಲ್ಲ’ ಎಂದುಕೊಂಡಿತು.

ಅಷ್ಟರಲ್ಲಿ ಅಲ್ಲಿಗೆ ಬಂದ ಪ್ರಭು ಶ್ರೀರಾಮನು ನವಿಲಿಗೆ ಹೇಳಿದನು. “ನನಗಾಗಿ ನೀನು ನಿನ್ನ ಗರಿಗಳನ್ನ ಕಿತ್ತು ಜೀವನವನ್ನೇ ತ್ಯಾಗ ಮಾಡುತ್ತಿರುವೆ. ನನ್ನ ಮೇಲೆ ನಿನ್ನ ಋಣವಿದೆ. ಈ ಋಣವನ್ನು ನನ್ನ ಮುಂದಿನ ಅವತಾರದಲ್ಲಿ ಖಂಡಿತವಾಗಿಯೂ ತೀರಿಸುವೆನು. ನನಗಾಗಿ ನೀನು ತ್ಯಾಗ ಮಾಡಿದ ನಿನ್ನ ಗರಿಯನ್ನು ಸದಾ ನನ್ನ ತಲೆಯಲ್ಲಿ ಧರಿಸುವೆನು’ ಎಂದನು. ನವಿಲಿನ ಪ್ರಾಣಪಕ್ಷಿಯು ಹಾರಿ ಹೋಯಿತು. ಪ್ರಭುವು ಅದಕ್ಕೆ ಮೋಕ್ಷವನ್ನು ಕರುಣಿಸಿದನು.

ಅನಂತರ ಶ್ರೀರಾಮನು ಮುಂದಿನ ಶ್ರೀಕೃಷ್ಣಾವತಾರದಲ್ಲಿ ಶ್ರೀಕೃಷ್ಣನಾಗಿ ಜನ್ಮತಾಳಿ ಸದಾ ತನ್ನ ಮುಕುಟದ ಮೇಲೆ ನವಿಲುಗರಿ ಧರಿಸುವುದರ ಮೂಲಕ ನವಿಲಿಗೆ ಕೊಟ್ಟ ವಚನವನ್ನು ಈಡೇರಿಸಿದನು.

ಇದರಲ್ಲಿರುವ ತತ್ತ್ವ ಏನೆಂದರೆ ಒಂದು ಪಕ್ಷಿಯ ಋಣ ತೀರಿಸಲು, ಭಗವಂತನಿಗೆ ಪುನಃ ಜನ್ಮಧರಿಸ ಬೇಕಾಗುವುದೆಂದ ಮೇಲೆ, ನಾವಂತೂ ಹುಲು ಮಾನವರು. ನಾವು ಎಷ್ಟೊಂದು ಋಣದಲ್ಲಿ ಇದ್ದೇವೆ. ಅಳೆಯಲು ಸಾಧ್ಯವೇ ? ಆ ಋಣ ಕಳೆಯಲು ಎಷ್ಟು ಜನ್ಮವೆತ್ತಿ ಬರಬೇಕಾಗುವುದೋ ಏನೋ? ಆದ್ದರಿಂದ ಬದುಕಿದ್ದಾಗಲೇ ಸಾಧ್ಯವಾದಷ್ಟು ಎಲ್ಲರಿಗೂ ಒಳ್ಳೆಯದನ್ನು ಮಾಡೋಣ. ಪರೋಪಕಾರಿಯಾಗಿ ಬಾಳುವುದು ನಮ್ಮ ಬದುಕಿನ ಅವಿಭಾಜ್ಯ ಅಂಗ ಅದನ್ನ ಕಾರ್ಯಗತ ಮಾಡುವುದು, ಹಾಗೇ ನಡೆದುಕೊಳ್ಳುವ, ಮನಸ್ಥಿತಿಯನ್ನು ಹೊಂದಬೇಕು.

*ಮಹಾಲಕ್ಷ್ಮೀ ಸುಬ್ರಹ್ಮಣ್ಯ, ಶಾರ್ಜಾ

Advertisement

Udayavani is now on Telegram. Click here to join our channel and stay updated with the latest news.

Next