Advertisement

ಟಿಕೆಟ್‌ ನೀಡದೆ ಅವಮಾನ ಮಾಡಿದ್ದೀರಿ!

11:49 AM Mar 29, 2019 | Team Udayavani |

ಬೆಂಗಳೂರು: “ತಮಗೆ ಮುಂಚಿತವಾಗಿ ಮಾಹಿತಿ ನೀಡದೆ ಕೊನೆಯ ಕ್ಷಣದವರೆಗೆ ಅಭ್ಯರ್ಥಿ ಯಾರೆಂದು ಗೌಪ್ಯವಾಗಿಟ್ಟು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡದಿರುವುದು ಸರಿಯಲ್ಲ’ ಎಂದು ತೇಜಸ್ವಿನಿ ಅನಂತ ಕುಮಾರ್‌ ರಾಜ್ಯ ಬಿಜೆಪಿ ಚುನಾವಣಾ ಪ್ರಭಾರಿ ಮುರಳೀಧರರಾವ್‌ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಗುರುವಾರ ತಮ್ಮ ನಿವಾಸಕ್ಕೆ ಭೇಟಿ ನೀಡಿದ ಮುರಳೀಧರರಾವ್‌ ಬಳಿ ತೇಜಸ್ವಿನಿ ಅನಂತ ಕುಮಾರ್‌ ಅವರು ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಟಿಕೆಟ್‌ ಘೋಷಣೆ ಬಳಿಕ ಮೊದಲ ಬಾರಿಗೆ ಗುರುವಾರ ಬೆಂಗಳೂರಿಗೆ ಆಗಮಿಸಿದ್ದ ಮುರಳೀಧರರಾವ್‌ ಅವರು,

ತೇಜಸ್ವಿನಿ ಅನಂತ ಕುಮಾರ್‌ ಅವರ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬೆಂಬಲಿಗರು ಅವರಿಗೆ ಘೇರಾವ್‌ ಹಾಕಿ ಪ್ರತಿರೋಧ ತೋರಿದರು. ದಾರಿಗೆ ಅಡ್ಡವಾಗಿ ಕುಳಿತವರನ್ನು ದಾಟಿಕೊಂಡೇ ಮನೆಯೊಳಗೆ ಪ್ರವೇಶಿಸಿದ ಮುರಳೀಧರರಾವ್‌, ಬಳಿಕ ಅರ್ಧ ಗಂಟೆಗೂ ಹೆಚ್ಚು ಕಾಲ ತೇಜಸ್ವಿನಿ ಅವರೊಂದಿಗೆ ಮಾತುಕತೆ ನಡೆಸಿದರು.

ಈ ವೇಳೆ ಒಂದೂವರೆ ತಿಂಗಳಿಂದಲೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಅವಕಾಶ ನೀಡುವುದಾಗಿ ಹೇಳುತ್ತಲೇ ಬಂದು, ಕೊನೆಯ ಕ್ಷಣದಲ್ಲಿ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್‌ ನೀಡುವ ಮೂಲಕ ಅವಮಾನ ಮಾಡಲಾಗಿದೆ ಎಂದು ತೇಜಸ್ವಿನಿ ಅನಂತಕುಮಾರ್‌ ಬೇಸರ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.

ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಒಂದೂವರೆ ತಿಂಗಳ ಹಿಂದೆ ಹೇಳಿದ್ದ ಹಿನ್ನೆಲೆಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ನಾಲ್ಕು ದಿನ ಹಿಂದೆ ಶಾಸಕ ಎಸ್‌.ಸುರೇಶ್‌ ಕುಮಾರ್‌ ಅವರಿಗೆ ಕರೆ ಮಾಡಿ ಕ್ಷೇತ್ರದ ಬಗ್ಗೆ ಕೇಳಿದ್ದೀರಿ. ಎರಡು ದಿನ ಹಿಂದೆ ಶಾಸಕ ರವಿಸುಬ್ರಹ್ಮಣ್ಯ ಅವರೊಂದಿಗೆ ಮಾತನಾಡಿದ್ದೀರಿ.

Advertisement

ಸಿದ್ಧತೆ ಮಾಡಿಕೊಳ್ಳಲು ತಿಳಿಸಿದವರು ಕನಿಷ್ಠ ಸೌಜನ್ಯಕ್ಕಾದರೂ ಅವಕಾಶ ನೀಡದಿರುವ ಬಗ್ಗೆ ಮಾಹಿತಿ ನೀಡಬಹುದಿತ್ತಲ್ಲವೇ? ಎಂದು ಪ್ರಶ್ನಿಸಿದರು ಎಂದು ಹೇಳಿವೆ. ಇದರಿಂದ ಗಲಿಬಿಲಿಗೊಂಡ ಮುರಳೀಧರರಾವ್‌, ತಮ್ಮ ನೋವಿಗೆ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದರು.

ಇದಕ್ಕೆ ಇನ್ನಷ್ಟು ಅಸಮಾಧಾನಗೊಂಡ ತೇಜಸ್ವಿನಿ ಅನಂತ ಕುಮಾರ್‌, ಅಧಿಕಾರಕ್ಕಾಗಿ ಅಂಟಿಕೊಂಡು ಕೂರುವ ಪರಿಸ್ಥಿತಿ ತಮಗೆ ಬಂದಿಲ್ಲ. 22 ವರ್ಷ ನಮ್ಮ ಮನೆಯಲ್ಲೇ ರಾಜಕೀಯ ಅಧಿಕಾರವಿತ್ತು. ಯಾವ ಪರಿಹಾರವೂ ಬೇಕಿಲ್ಲ. ಸಂಘಟನೆಯಲ್ಲಿ ಯಾವ ರೀತಿ ತೊಡಗಬೇಕು ಎಂಬುದು ಗೊತ್ತಿದೆ ಎಂದು ಹೇಳಿದರು ಎಂದು ಮೂಲಗಳು ತಿಳಿಸಿವೆ.

ಮಾತುಕತೆ ಮುಗಿದ ನಂತರ ಮನೆಯಿಂದ ಹೊರಬಂದಾಗಲೂ ಮುರಳೀಧರ್‌ರಾವ್‌ ಅವರಿಗೆ ಬೆಂಬಲಿಗರು, ಕಾರ್ಯಕರ್ತರಿಂದ ಪ್ರತಿರೋಧ ವ್ಯಕ್ತವಾಯಿತು. ಸಾಕಷ್ಟು ಸಂಖ್ಯೆಯಲ್ಲಿದ್ದ ಮಹಿಳೆಯರು ಕಾರಿಗೆ ಅಡ್ಡಲಾಗಿ ಕುಳಿತರು. ತೇಜಸ್ವಿನಿ ಅವರಿಗೆ ಟಿಕೆಟ್‌ ನೀಡದಿರಲು ಕಾರಣ ಏನು ಎಂಬುದನ್ನು ತಿಳಿಸಿ ಹೋಗಬೇಕೆಂದು ಪಟ್ಟು ಹಿಡಿದರು.

ಇದರಿಂದ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಅನಂತಕುಮಾರ್‌ ಸಹೋದರ ನಂದಕುಮಾರ್‌ ಹಾಗೂ ಇತರೆ ಪ್ರಮುಖರು ಮಹಿಳೆಯರು ಹಾಗೂ ಬೆಂಬಲಿಗರನ್ನು ಸಮಾಧಾನ ಪಡಿಸಿ ಅಲ್ಲಿಂದ ಕಾರು ತೆರಳಲು ಅವಕಾಶ ಮಾಡಿಕೊಟ್ಟರು.

ಕಾರಣಗಳ ಬಗ್ಗೆ ಕುತೂಹಲ: ಬುಧವಾರವಷ್ಟೇ ಮಾಜಿ ಸಚಿವ ವಿ.ಸೋಮಣ್ಣ, ತೇಜಸ್ವಿನಿ ಅವರಿಗೆ ಟಿಕೆಟ್‌ ನೀಡದಿರಲು ಕಾರಣವೇನು ತಿಳಿಸಬೇಕು. ಇಲ್ಲದಿದ್ದರೆ ಪ್ರಚಾರದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದರು. ಗುರುವಾರವೂ ಕಾರ್ಯಕರ್ತರು ಮುರಳೀಧರ ರಾವ್‌ ಅವರ ಬಳಿ ಕಾರಣ ಹೇಳುವಂತೆ ಪಟ್ಟು ಹಿಡಿದಿದ್ದರು. ಇಷ್ಟಾದರೂ ವರಿಷ್ಠರಾಗಲಿ, ರಾಜ್ಯ ನಾಯಕರಾಗಲಿ ಕಾರಣ ತಿಳಿಸದಿರುವುದು ಕುತೂಹಲದ ಜತೆಗೆ ಗೊಂದಲ ಮೂಡಿಸಿದೆ.

ಗಣ್ಯರ ಭೇಟಿ: ಬೆಂಗಳೂರು ದಕ್ಷಿಣ ಕ್ಷೇತ್ರ ಅಭ್ಯರ್ಥಿ ತೇಜಸ್ವಿ ಸೂರ್ಯ ಗುರುವಾರ ಕ್ಷೇತ್ರದ ರಾಜಕೀಯ ಹಾಗೂ ಇತರೆ ಕ್ಷೇತ್ರಗಳ ಪ್ರಮುಖರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಪ್ರಚಾರ ಸೇರಿದಂತೆ ಇತರೆ ಸಿದ್ದತೆಗಳ ಬಗ್ಗೆ ಸಭೆ ನಡೆಸಿ ಕಾರ್ಯಪ್ರವೃತ್ತರಾಗಲು ಸಿದ್ಧತೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next