Advertisement

Bus ticket ದರ ಶೇ. 15 ದುಬಾರಿ; ಸರಕಾರ ಸಮಜಾಯಿಷಿ

12:44 AM Jan 03, 2025 | Team Udayavani |

ಬೆಂಗಳೂರು: ಹೊಸ ವರ್ಷದ ಆರಂಭದಲ್ಲಿಯೇ ರಾಜ್ಯದ ಜನತೆಗೆ ಸರಕಾರವು ಸರಕಾರಿ ಬಸ್‌ ಪ್ರಯಾಣ ದರ ಏರಿಕೆಯ ಮೂಲಕ ಮೊದಲ ಆಘಾತ ನೀಡಿದೆ.

Advertisement

ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ “ಶಕ್ತಿ’ಯಿಂದ ರಾಜ್ಯದ 4 ಸಾರಿಗೆ ನಿಗಮಗಳಿಗೆ ಹೆಚ್ಚು ಆದಾಯ ಬರುತ್ತಿದೆ ಎಂದು ಘೋಷಿಸಿಕೊಂಡಿದ್ದ ಸರಕಾರವು ಈಗ ಅದೇ ಸಾರಿಗೆ ನಿಗಮಗಳಿಗೆ ಆರ್ಥಿಕ ವಾಗಿ ಶಕ್ತಿ ತುಂಬುವ ಸಲುವಾಗಿ ಟಿಕೆಟ್‌ ದರ ಏರಿಕೆಗೆ ಮುಂದಾಗಿದೆ. ಎಲ್ಲ ಪ್ರಕಾರಗಳ ಸರಕಾರಿ ಬಸ್‌ ಪ್ರಯಾಣ ದರವನ್ನು ಸರಾಸರಿ ಶೇ. 15ರಷ್ಟು ಹೆಚ್ಚಳ ಮಾಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ.
ಸಾರಿಗೆ ನಿಗಮಗಳು ಸರಾಸರಿ ಶೇ. 15ರಷ್ಟು ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು.

ಸಾಧಕ-ಬಾಧಕಗಳ ಲೆಕ್ಕಾಚಾರ ಹಾಕಿ ಎಲ್ಲ ಬಸ್‌ಗಳ ಪ್ರಯಾಣ ದರವನ್ನು ಶೇ. 15ರಷ್ಟು ಏರಿಸಲು ಸಚಿವ ಸಂಪುಟ ಅಸ್ತು ಎಂದಿದೆ. ಪರಿಷ್ಕೃತ ದರ ಜ. 5ರಿಂದಲೇ ಅನ್ವಯ ಆಗಲಿದೆ. ಈ ಹಿಂದೆ 2020ರಲ್ಲಿ ಬಿಎಂಟಿಸಿ ಹೊರತುಪಡಿಸಿ ಉಳಿದ 3 ನಿಗಮಗಳಲ್ಲಿ ಸರಾಸರಿ ಶೇ. 12ರಷ್ಟು ಏರಿಕೆ ಮಾಡಲಾಗಿತ್ತು. ಬಿಎಂಟಿಸಿ ವ್ಯಾಪ್ತಿಯಲ್ಲಿ 2014ರಲ್ಲಿ ಶೇ. 16.5ರಷ್ಟು ಪರಿಷ್ಕರಿಸಲಾಗಿತ್ತು. ಈಗ ಎಲ್ಲರಿಗೂ ಅನ್ವಯ ಆಗುವಂತೆ ಗರಿಷ್ಠ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದೆ.

ದರ ಹೆಚ್ಚಳದ ಅನಂತರವೂ ನೆರೆಯ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರಕ್ಕೆ ಹೋಲಿಸಿದರೆ ನಮ್ಮಲ್ಲಿ ಪ್ರಯಾಣ ದರ ಕಡಿಮೆಯೇ ಇದೆ. ಈ ನಿರ್ಧಾರದಿಂದ ನಿಗಮಗಳ ಮೇಲಿನ ಹೊರೆ ಕೊಂಚ ತಗ್ಗಲಿದೆ. ಇದಲ್ಲದೆ ನಿಗಮಗಳು 2 ಸಾವಿರ ಕೋಟಿ ರೂ. ಸಾಲ ಪಡೆಯುವುದಕ್ಕೂ ಸರಕಾರ ಖಾತ್ರಿ ನೀಡಲಿದೆ. ಒಂದು ವೇಳೆ ಈ ಕ್ರಮಗಳ ಹೊರತಾಗಿಯೂ ಆರ್ಥಿಕ ಸ್ಥಿತಿ ಸುಧಾರಣೆ ಆಗದಿದ್ದರೆ ಬಜೆಟ್‌ನಲ್ಲಿ ಸಿಎಂ ಹಲವು ಪೂರಕ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಲಾಗಿದೆ ಎಂದು ಸಚಿವ ಪಾಟೀಲ್‌ ಸಚಿವ ಸಂಪುಟ ಸಭೆಯ ಅನಂತರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪ್ರಯಾಣ ದರ ಪರಿಷ್ಕರಣೆಯಿಂದ ವಾರ್ಷಿಕ ಅಂದಾಜು 900 ಕೋಟಿ ರೂ. ಹೆಚ್ಚುವರಿ ಆದಾಯ ನಿರೀಕ್ಷಿಸಲಾಗಿದೆ. ಆದರೆ ಈ ಪೈಕಿ ಹೆಚ್ಚು ಕಡಿಮೆ ಶೇಕಡಾ ಅರ್ಧದಷ್ಟು ಅಂದರೆ 350-400 ಕೋಟಿ ರೂ. ಮೊತ್ತವನ್ನು ಸರಕಾರವೇ ಭರಿಸಬೇಕಾಗುತ್ತದೆ!

Advertisement

ಹೌದು, “ಶಕ್ತಿ’ ಯೋಜನೆಯಡಿ ಸಾಮಾನ್ಯ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಲಾಗಿದೆ. ಸಾರಿಗೆ ನಿಗಮಗಳು ನೀಡಿದ ಅಂಕಿಅಂಶಗಳ ಪ್ರಕಾರ ಸಾಮಾನ್ಯ ಬಸ್‌ಗಳಲ್ಲಿ ಶೇ. 60ರಷ್ಟು ಮಹಿಳಾ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಅವರೆಲ್ಲರ ಪ್ರಯಾಣ ವೆಚ್ಚವನ್ನು ಸರಕಾರವೇ ಭರಿಸುತ್ತಿದೆ. ದರ ಪರಿಷ್ಕರಣೆಯಿಂದ ಅದನ್ನೂ ಸರಕಾರವೇ ಪಾವತಿಸಬೇಕಾಗುತ್ತದೆ. ಅದನ್ನು ಪರೋಕ್ಷವಾಗಿ ತೆರಿಗೆ ಮತ್ತಿತರ ಮೂಲಗಳಿಂದ ಜನಸಾಮಾನ್ಯ ರಿಂದಲೇ ಸರಕಾರ ಸಂಗ್ರಹಿಸಲಿದೆ.

ವೇತನ ಪರಿಷ್ಕರಣೆ ಒತ್ತಡ?
ದರ ಪರಿಷ್ಕರಣೆಯ ಬೆನ್ನಲ್ಲೇ ಈಗ ಸಾರಿಗೆ ನೌಕರರ ವೇತನ ಪರಿಷ್ಕರಣೆಗೆ ಒತ್ತಡ ಹೆಚ್ಚಲಿದೆ. ಸಂಕ್ರಾಂತಿಯ ಅನಂತರ ಈ ಬಗ್ಗೆ ಸಾರಿಗೆ ನೌಕರರ ಸಂಘ ಟನೆಗಳ ಮುಖಂಡರೊಂದಿಗೆ ಮಾತುಕತೆ ನಡೆಸುವುದಾಗಿ ಸಿಎಂ ಹೇಳಿದ್ದಾರೆ.

ಈಗ ನಿಗಮಗಳ ನೆರವಿಗೆ ಧಾವಿಸಿರುವ ಸರಕಾರವು ಮುಂದೆ ನಿಗಮಗಳ ನೌಕರರ ನೆರವಿಗೂ ಧಾವಿಸಬೇಕಾ ಗುತ್ತದೆ ಎಂದು ಹೇಳಲಾಗುತ್ತಿದೆ.

ಡೀಸೆಲ್‌ ದರ ಹೆಚ್ಚಳ: ಸಮಜಾಯಿಷಿ
ಈ ಹೆಚ್ಚಳದಿಂದ ನಿಗಮಗಳಿಗೆ ಮಾಸಿಕ 74.85 ಕೋಟಿ ರೂ. ಹೆಚ್ಚುವರಿ ಆದಾಯ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಏರಿಕೆಗೆ ಸರಕಾರ ಪ್ರಮುಖವಾಗಿ ಡೀಸೆಲ್‌ ದರ ಮತ್ತು ಸಿಬಂದಿ ವೇತನ ಹೆಚ್ಚಳದ ಕಾರಣ ನೀಡಿದೆ. 2015ರಲ್ಲಿ ಡೀಸೆಲ್‌ ಬೆಲೆ ಪ್ರತಿ ಲೀ.ಗೆ 60.98 ರೂ. ಇತ್ತು. ಇದರಿಂದ ದಿನಕ್ಕೆ 9.16 ಕೋಟಿ ರೂ. ಖರ್ಚು ಆಗುತ್ತಿತ್ತು. ಆದರೆ ಈಗ ಡೀಸೆಲ್‌ ಖರ್ಚು 13.21 ಕೋಟಿ ರೂ.ಗೆ ತಲುಪಿದೆ. ಸಿಬಂದಿ ವೆಚ್ಚ 12.85 ಕೋಟಿ ರೂ. ಇದ್ದದ್ದು, 18.36 ಕೋಟಿ ರೂ. ಆಗಿದೆ. ಇದೆಲ್ಲದರಿಂದ ನಿತ್ಯ ನಾಲ್ಕು ನಿಗಮಗಳ ಮೇಲೆ 9.56 ಕೋಟಿ ರೂ. ಹೊರೆ ಆಗುತ್ತಿದೆ ಎಂದು ಸಭೆಯ ಬಳಿಕ ಸಚಿವ ಎಚ್‌.ಕೆ. ಪಾಟೀಲ್‌ ತಿಳಿಸಿದರು.

ಹಿಂದಿನ ಬಿಜೆಪಿ ಸರಕಾರವು 5,900
ಕೋಟಿ ರೂ. ಸಾಲವನ್ನು ಬಿಟ್ಟುಹೋಗಿತ್ತು. ಅಷ್ಟು ಸಾಲ ನಮಗೆ ಹೊರೆಯಾಗಿದೆ. ಈ ಮಧ್ಯೆ ಡೀಸೆಲ್‌ ದರ ಸಾಕಷ್ಟು ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ನಿಗಮಗಳ ಉಳಿವಿಗೆ ದರ ಹೆಚ್ಚಿಸುವುದು ಅನಿವಾರ್ಯವಾಗಿತ್ತು. ಬಿಜೆಪಿಯವರು ಯಾಕೆ ಸಾಲ ಉಳಿಸಿದರು ಎಂದು ಅವರೇ ಹೇಳಬೇಕು.
-ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ

ಮುಖ್ಯಮಂತ್ರಿಗಳೇ, ಮಹಿಳೆಯರಿಗೆ ಉಚಿತ, ಪುರುಷರಿಗೆ ಹೊರೆ ಖಚಿತ ಎಂಬುದನ್ನು ಈಗ ಬಸ್‌ ಪ್ರಯಾಣ ದರ ಏರಿಕೆಯ ಮೂಲಕ ಹೇಳಿದ್ದೀರಿ. ಸಾರಿಗೆ ವ್ಯವಸ್ಥೆ ಆಶ್ರಯಿಸಿ ರುವ ಜನರಿಗೆ ಬರೆ ಎಳೆದಿದ್ದೀರಿ. ಮಳಿಗೆಗಳಲ್ಲಿ ಒಂದಕ್ಕೆ ಒಂದು ಉಚಿತ ಎಂಬ ಫ‌ಲಕ ಪ್ರದರ್ಶಿಸಿದಂತೆ ಜನರಿಗೆ ಟೋಪಿ ಹಾಕಲು ಹೊರಟಿದ್ದೀರಿ.
– ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

ಸಾಮಾನ್ಯ ವೇಗದೂತ ಬಸ್‌ ದರ
ಬೆಂಗಳೂರಿಂದ ಎಲ್ಲಿಗೆ? ಪ್ರಸ್ತುತ ದರ(ರೂ.) ಪರಿಷ್ಕೃತ ದರ (ರೂ.)
ಮಂಗಳೂರು 424 488
ಹುಬ್ಬಳ್ಳಿ 501 576
ಬೆಳಗಾವಿ 631 725
ಕಲಬುರಗಿ 706 812
ಮೈಸೂರು 185 213
ದಾವಣಗೆರೆ 320 368

Advertisement

Udayavani is now on Telegram. Click here to join our channel and stay updated with the latest news.

Next