Advertisement

Ticket price hike: ಬಿಜೆಪಿ ಕೋಪ : ಜನರ ಕ್ಷಮೆ ಕೇಳಿ ಪ್ರತಿಭಟನೆ!

12:39 AM Jan 04, 2025 | Team Udayavani |

ಬೆಂಗಳೂರು: ಹೊಸ ವರ್ಷಕ್ಕೆ ಬಸ್‌ ಪ್ರಯಾಣ ದರ ಏರಿಸಿದ ರಾಜ್ಯ ಸರಕಾರದ ಕ್ರಮದ ವಿರುದ್ಧ ಬಿಜೆಪಿಯು ಪ್ರತಿಭಟನೆಯ ಅಖಾಡಕ್ಕೆ ಇಳಿದಿದ್ದು, ಸರಕಾರದ ವಿರುದ್ಧ ಸಿಟ್ಟು ಹೊರಹಾಕಿದೆ. ಬಸ್‌ ಟಿಕೆಟ್‌ ದರ ಏರಿಸಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಪರವಾಗಿ ಮತದಾರರ ಬಳಿ ಬಿಜೆಪಿ ನಾಯಕರು ಕ್ಷಮೆಯನ್ನೂ ಕೇಳಿದ್ದಾರೆ. ಅಲ್ಲದೆ ಈ ವೇಳೆ ಪ್ರತಿಭಟನೆಗೆ ಅಡ್ಡಿಪಡಿಸಿದ ಪೊಲೀಸರನ್ನು ವಿಪಕ್ಷ ನಾಯಕ ಆರ್‌. ಅಶೋಕ್‌ ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆದಿದೆ.

Advertisement

ಶುಕ್ರವಾರ ಬೆಂಗಳೂರಿನ ಕೆಂಪೇ ಗೌಡ ಬಸ್‌ ನಿಲ್ದಾಣದಲ್ಲಿ ಪುರುಷ ಪ್ರಯಾಣಿಕರಿಗೆ ಗುಲಾಬಿ ಹೂ ಕೊಡುವುದರ ಮೂಲಕ ವಿಪಕ್ಷ ನಾಯಕ ಆರ್‌. ಅಶೋಕ್‌ ನೇತೃತ್ವ ದಲ್ಲಿ ಬಿಜೆಪಿ ಮುಖಂಡರು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸರಕಾರದ ಕಾರ್ಯ ವೈಖರಿ ವಿರುದ್ಧ ಆಕ್ರೋಶ ಹೊರಹಾಕಿದರು.

ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮುಖವಾಡ ಧರಿಸಿ ಬೆಲೆ ಏರಿಕೆ ಸಂಬಂಧ ಜನರ ಬಳಿ ಅವರ ಪರವಾಗಿ ಕ್ಷಮೆಯಾಚಿಸಿದರು. ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್‌ ಸದಸ್ಯ ಎನ್‌. ರವಿಕುಮಾರ್‌ ಮತ್ತಿತರ ಬಿಜೆಪಿ ಮುಖಂಡರು, ಕಾರ್ಯಕರ್ತರು ಈ ವೇಳೆ ಸಾಥ್‌ ನೀಡಿದರು.

ಬಸ್‌ ದರ ಏರಿಕೆ ಕೊಡುಗೆ
ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಆರ್‌. ಅಶೋಕ್‌, “ಕಾಲಿಗೆ ಬೀಳುತ್ತೇವೆ, ಕೈ ಮುಗಿಯುತ್ತೇವೆ, ಕ್ಷಮಿಸಿ ಬಿಡಿ’ ಎಂಬುದು ಸಿಎಂ ಸಿದ್ದರಾಮಯ್ಯ ಅವರ ಹೊಸ ಸ್ಲೋಗನ್‌ ಆಗಿದೆ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್‌ ಸರಕಾರ ಬೆಲೆ ಏರಿಕೆ ಮಾಡುವುದಿಲ್ಲವೆಂದು ನೀವು ಮತ ನೀಡಿದ್ದೀರಿ. ಆದರೆ ಮಾತಿಗೆ ತಪ್ಪಿದ ಸರಕಾರ ಹೊಸ ವರ್ಷದಂದೇ ಟಿಕೆಟ್‌ ದರ ಏರಿಕೆ ಮಾಡಿದೆ. ಆದ್ದರಿಂದ ಸಿಎಂ ಸಿದ್ದರಾಮಯ್ಯ ಪರವಾಗಿ ಪುರುಷ ಪ್ರಯಾಣಿಕರಲ್ಲಿ ನಾನು ಕ್ಷಮೆ ಕೇಳಿದ್ದೇನೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸ್‌ ದರ ಏರಿಕೆ ಮಾಡುವ ಮೂಲಕ ರಾಜ್ಯದ ಬಡವರಿಗೆ ಬರೆ ಹಾಕಿದ್ದಾರೆ. ಇಂತಹ ಮನೆಹಾಳ ಸಿದ್ದರಾಮಯ್ಯ ಅವರೇ ಇರಲಿ ಎಂದು ಅಭಿನಂದನೆ ಸಲ್ಲಿಸುತ್ತಿದ್ದಾರೆ. 5 ಗ್ಯಾರಂಟಿ ಕೊಡುತ್ತೇವೆ. ಬಡವರನ್ನು ಮೇಲೆತ್ತುವ ಕೆಲಸ ಮಾಡುತ್ತೇವೆ. ಬೆಲೆ ಏರಿಕೆ ಮಾಡದೆ ಉಚಿತವಾಗಿ ನೀಡುತ್ತೇವೆ ಎಂದು ಕಾಂಗ್ರೆಸ್‌ ಹೇಳಿತ್ತು. ಆದರೆ ಈಗ ಪೆಟ್ರೋಲ್‌, ಡಿಸೇಲ್‌ ದರ ಏರಿಸಿದೆ. ಮಕ್ಕಳು ಕುಡಿಯುವ ಹಾಲಿಗೂ ಕಲ್ಲು ಹಾಕಿದ್ದಾರೆ. ಮದ್ಯದ ದರ 50 ರೂ. ಏರಿಕೆ ಮಾಡಿದ್ದಾರೆ. ಸ್ಟಾಂಪ್‌ ಕಾಗದ ದರ, ಮನೆ ತೆರಿಗೆ, ವಿದ್ಯುತ್‌ ದರ ಏರಿಸಿದ್ದಾರೆ. ಮಾಧ್ಯಮದವರು ಕೂಗಾಡಿದರೂ ನಾನು ನೀರಿನ ತೆರಿಗೆ ಜಾಸ್ತಿ ಮಾಡುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ ಎಂಬುದಾಗಿ ದೂರಿದರು.

Advertisement

ತಾಕತ್ತು ಇದ್ದರೆ ಬಂಧಿಸಿ
ಪ್ರತಿಭಟನೆಗೆ ಮುಂದಾದ ಬಿಜೆಪಿ ನಾಯಕರನ್ನು ಪೊಲೀಸರು ತಡೆಯಲು ಮುಂದಾದಾಗ ಆರ್‌. ಅಶೋಕ್‌ ಸಿಟ್ಟಾದ ಪ್ರಸಂಗ ನಡೆದಿದೆ. ಅವರು ಪೊಲೀಸರ ವಿರುದ್ಧ ರೇಗಾಡಿದ್ದಲ್ಲದೆ, ನಮ್ಮ ತಂಟೆಗೆ ಬರಬೇಡಿ ಎಂದೂ ತಾಕೀತು ಮಾಡಿದರು. ಒಂದು ಹಂತದಲ್ಲಿ ಸಹನೆ ಕಳೆದುಕೊಂಡಂತೆ ಕಂಡುಬಂದ ಅಶೋಕ್‌, ತಾಕತ್ತಿದ್ದರೆ ಬಂಧಿಸಿ. ನಾವು ಅ ಧಿಕಾರಕ್ಕೆ ಬಂದರೆ ಸುಮ್ಮನೆ ಬಿಡುವುದಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದರು.
ನೀವು ನಮ್ಮನ್ನು ಮುಟ್ಟಿ ನೋಡಿ. ನಾವು ಇಲ್ಲಿ ಯಾರಿಗೂ ತೊಂದರೆ ಕೊಡುವುದಿಲ್ಲ. ಪ್ರತಿಭಟನೆ ನಡೆಸುವುದು ನಮ್ಮ ಹಕ್ಕು. ಆದರೆ ಇಲ್ಲಿ ನಾವು ಪ್ರತಿಭಟನೆ ಮಾಡುತ್ತಿಲ್ಲ. ಜನರಿಗೆ ಹೂವು ನೀಡುತ್ತಿದ್ದೇವೆ ಎಂದರು.

ಜನರ ಕಷ್ಟ ಸುಖ ಯಾರು ಕೇಳುತ್ತಾರೆ, ಅದರ ಆವಶ್ಯಕತೆ ಇಲ್ಲ ಎಂಬ ಭಾವನೆ ಸರಕಾರಕ್ಕಿದೆ. ರಾಜ್ಯದಲ್ಲಿ ಸರಕಾರ ಇದೆ ಅಂತ ಅನಿಸುತ್ತದೆಯೇ? ಇವು ನನಗೆ ಅಚ್ಚರಿ ತರುವ ಬೆಳವಣಿಗೆಗಳಲ್ಲ. ಸಾರ್ವಜನಿಕರು ಕೂಡ 2-3 ದಿನಗಳಲ್ಲಿ ಎಲ್ಲವನ್ನೂ ಮರೆಯುತ್ತಾರೆ.
– ಎಚ್‌.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ

5,900 ಕೋ.ರೂ. ಸಾಲ ಬಿಟ್ಟು ಹೋಗಿದ್ದ ಬಿಜೆಪಿ: ಆರೋಪ
ಬೆಂಗಳೂರು: ಬಿಜೆಪಿಗರು ಮಹಿಳಾ ವಿರೋಧಿಗಳು. ಅವರಿಗೆ ಶಕ್ತಿ ಯೋಜನೆಯನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ನಾನು ಸಾರಿಗೆ ಇಲಾಖೆ ಜವಾಬ್ದಾರಿ ತೆಗೆದುಕೊಂಡಾಗ ಹಿಂದಿನ ಸರಕಾರದವರು 5,900 ಕೋ.ರೂ. ಸಾಲವನ್ನು ಬಿಟ್ಟು ಹೋಗಿದ್ದರು. ಜತೆಗೆ ನಿತ್ಯದ ವೇತನ ಹಾಗೂ ಇಂಧನ ವೆಚ್ಚ ಗಣನೀಯವಾಗಿ ಹೆಚ್ಚಿರುವುದರಿಂದ ದರ ಹೆಚ್ಚಳ ಮಾಡಲಾಗಿದೆ. ಪ್ರಯಾಣ ದರ ಏರಿಕೆಗೆ ಹಿಂದಿನ ಬಿಜೆಪಿ ಸರಕಾರದ ನೀತಿಗಳೇ ಕಾರಣ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಮರ್ಥಿಸಿಕೊಂಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸ್‌ ಪ್ರಯಾಣ ದರ ಏರಿಕೆ ಯಿಂದ ಪುರುಷರಿಗೆ ಅಸಮಾಧಾನ ಸಹಜ. ಒಂದಷ್ಟು ದಿನ ಬೇಸರ ಮಾಡಿಕೊಳ್ಳಬಹುದು. ಆಮೇಲೆ ಎಲ್ಲವೂ ಸರಿ ಹೋಗುತ್ತದೆ ಎಂದರು.

2014ರಲ್ಲಿ ಟಿಕೆಟ್‌ ದರ ಏರಿಕೆ ಮಾಡಿದ್ದೆವು, ಡೀಸೆಲ್‌ ಬೆಲೆ ಕಡಿಮೆ ಆದಾಗ ಟಿಕೆಟ್‌ ದರ ಇಳಿಕೆ ಮಾಡಿದ್ದೆವು. 10 ವರ್ಷಗಳಿಂದ ದರ ಪರಿಷ್ಕರಣೆ ಮಾಡಿರಲಿಲ್ಲ. 2020ರಲ್ಲಿ ವಾಯವ್ಯ, ಕಲ್ಯಾಣ ಕರ್ನಾಟಕ ಹಾಗೂ ಕೆಎಸ್ಸಾರ್ಟಿಸಿಯವರು ಶೇ. 15ರಷ್ಟು
ಏರಿಕೆ ಮಾಡಿದ್ದರು. ಅಂದು ಯಡಿಯೂರಪ್ಪ ಸಿಎಂ ಆಗಿದ್ದರು. ಇಂದು ಮೆಜೆಸ್ಟಿಕ್‌ನಲ್ಲಿ ಪ್ರತಿಭಟನೆ ಮಾಡಿದವರೇ ಆಗ ಸಾರಿಗೆ ಸಚಿವರಾಗಿದ್ದರು ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ ವಿರುದ್ಧ ಸಚಿವ ರಾಮಲಿಂಗಾ ರೆಡ್ಡಿ ಹರಿಹಾಯ್ದರು.

ಶಕ್ತಿ ಯೋಜನೆ ನಿಲ್ಲದು
ಶಕ್ತಿ ಯೋಜನೆ ನಿಲ್ಲುವುದಿಲ್ಲ. ಪರಿಷ್ಕರಣೆಯನ್ನೂ ಮಾಡುವುದಿಲ್ಲ. 2028ರಲ್ಲಿ ಬಿಜೆಪಿಗೆ ಮಹಿಳೆಯರು ಮತ ಹಾಕುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಶಕ್ತಿ ಯೋಜನೆ ಫಲಾನುಭವಿಗಳು ಈಗ ಆಧಾರ್‌ ಕಾರ್ಡ್‌ ಬಳಸಿ ಪ್ರಯಾಣಿಸುತ್ತಿದ್ದಾರೆ. ಮುಂದಿನ ಆರ್ಥಿಕ ವರ್ಷದಲ್ಲಿ ಸ್ಮಾರ್ಟ್‌ ಕಾರ್ಡ್‌ ನೀಡಲಾಗುತ್ತದೆ. ಅದನ್ನು ಬಳಸಬೇಕಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next