ಮಂಗಳೂರು: ಯಕ್ಷಗಾನದ ಭೀಷ್ಮ, ಹರಿದಾಸ ಡಾ| ಶೇಣಿ ಗೋಪಾಲಕೃಷ್ಣ ಭಟ್ ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ನೀಡಲಾಗುವ ಪ್ರಶಸ್ತಿಗೆ ಹಿರಿಯ ಯಕ್ಷಗಾನ ಕಲಾವಿದ, ಸ್ತ್ರೀ ವೇಷಧಾರಿ ಪಾತಾಳ ವೆಂಕಟರಮಣ ಭಟ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಎಂ.ಆರ್. ವಾಸುದೇವ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆ. 15ರಂದು ಸಂಜೆ 4.20ಕ್ಕೆ ಉರ್ವಸ್ಟೋರ್‌ನ ಮಹಾಗಣಪತಿ ದೇವಸ್ಥಾನದ ಆವರಣ ದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.ಪ್ರಶಸ್ತಿಯು 30 ಸಾವಿರ ರೂ. ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ ಎಂದರು.
ಕಸಪಾ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಉದ್ಘಾಟನೆ ನೆರವೇರಿಸಲಿದ್ದು, ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸುರೇಂದ್ರ ರಾವ್ ದೀಪ ಬೆಳಗಲಿದ್ದಾರೆ.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಲೂರ, ಉದ್ಯಮಿ ಜಯಪ್ರಕಾಶ್ ರಾವ್, ಟ್ರಸ್ಟ್‌ನ ಗೌರವ ಸಲಹೆಗಾರ ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್, ಕೊಲ್ಯ ಶ್ರೀ ಮೂಕಾಂಬಿಕಾ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಮಧುಸೂದನ ಆಯರ್, ಉರ್ವ ಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನ ಆಡಳಿತ ಸಮಿತಿ ಕಾರ್ಯದರ್ಶಿ ಶ್ರೀಧರ ಮಣಿಯಾಣಿ ಅತಿಥಿಗಳಾಗಿರುವರು. ಹಿರಿಯ ಅರ್ಥಧಾರಿ ಜಿ.ಕೆ.ಭಟ್ ಸೇರಾಜೆ ಅವರು ಶೇಣಿ ಸಂಸ್ಮರಣೆ ಮತ್ತು ಪಾತಾಳ ಅಭಿನಂದನೆ ಮಾಡುವರು.
ಅಪರಾಹ್ನ 2.30ರಿಂದ ಯಕ್ಷಗಾನ ತಾಳಮದ್ದಳೆ ಜರಗಲಿದೆ. ಹಿಮ್ಮೇಳದಲ್ಲಿ ದಯಾನಂದ ಕೋಡಿಕಲ್, ವಿಘ್ನೇಶ್ ಶೆಟ್ಟಿ ಬೋಳೂರು, ಶಿವಪ್ರಸಾದ್ ಪ್ರಭು ಮತ್ತು ಅರ್ಥಧಾರಿಗಳಾಗಿ ಕೆ. ಮಹಾಬಲ ಶೆಟ್ಟಿ, ಜಿ.ಕೆ.ಭಟ್ ಸೇರಾಜೆ, ಸರ್ಪಂಗಳ ಈಶ್ವರ ಭಟ್, ಗಣರಾಜ ಕುಂಬ್ಳೆ ಭಾಗವಹಿಸುವರು ಎಂದರು.
ಕಸಪಾ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಟ್ರಸ್ಟ್‌ನ ಉಪಾಧ್ಯಕ್ಷ ಕೆ. ಮಹಾಬಲ ಶೆಟ್ಟಿ, ಕೋಶಾಧಿಕಾರಿ ಜಿ.ಕೆ. ಭಟ್ ಸೇರಾಜೆ, ಪ್ರಮುಖರಾದ ಶೇಣಿ ಮುರಳಿ ಉಪಸ್ಥಿತರಿದ್ದರು.