Advertisement

Space Wonder: 2025ರಲ್ಲಿ ಜರುಗಲಿದೆ ಖಗೋಳ ವಿಶೇಷ ವಿಸ್ಮಯಗಳು!

07:05 PM Jan 01, 2025 | Team Udayavani |

ಹೊಸ ವರ್ಷದಲ್ಲಿ ಹಲವಾರು ಖಗೋಳ ವಿಶೇಷತೆಗಳು ಸಂಭವಿಸಲಿದ್ದು, ಜನರು ಈ ಎಲ್ಲ ಖಗೋಳ ವಿಸ್ಮಯಗಳನ್ನು ವೀಕ್ಷಿಸಬಹುದಾಗಿದೆ. ಇನ್ನು ಖಗೋಳಾಸಕ್ತರಿಗೆ ಈ ಎಲ್ಲ ಖಗೋಳ ವಿಸ್ಮಯಗಳು ಅಧ್ಯಯನಕ್ಕೆ ಸಹಕಾರಿಯಾಗಲಿದೆ. 2025ರಲ್ಲಿ ಅತೀ ಹೆಚ್ಚು ಸೌರ ಜ್ವಾಲೆಗಳು ಕಂಡುಬಂದರೆ, ನಾಲ್ಕು ಗ್ರಹಣ, ಮೂರು ಸೂಪರ್‌ ಮೂನ್‌, ಶನಿಗ್ರಹದ ಬಳೆ ಮಾಯ ಕಾಣಸಿಗುತ್ತದೆ ಎಂದು ಉಡುಪಿಯ ಖಗೋಳ ಶಾಸ್ತ್ರಜ್ಞ ಡಾ| ಎ.ಪಿ. ಭಟ್‌ ತಿಳಿಸಿದ್ದಾರೆ.

Advertisement

ಸೂರ್ಯನ ಜ್ವಾಲೆಗಳ ನರ್ತನ
ಹನ್ನೊಂದು ವರ್ಷಗಳಿಗೊಮ್ಮೆ ನಡೆಯುವ ಅತೀ ಹೆಚ್ಚು ಸೌರಜ್ವಾಲೆಗಳನ್ನು ಸೂರ್ಯ ಹೊರ ಸೂಸುವ ಪ್ರಕ್ರಿಯೆ ಕಳೆದ ವರ್ಷ ಪ್ರಾರಂಭವಾಗಿದ್ದು, ಈ ವರ್ಷದ ಪ್ರಾರಂಭದ ಕೆಲವು ತಿಂಗಳುಗಳ ಅವಧಿಯಲ್ಲಿ ಸೌರ ಜ್ವಾಲೆಗಳ ನರ್ತನ ಬಹಳಷ್ಟು ಅಧಿಕವಾಗಿರಲಿದೆ. ಕುದಿಯುವ ಸೂರ್ಯ ದಶದಿಶೆಗೆ ವಿಶೇಷ ಶಕ್ತಿ ಕಣಗಳೊಂದಿಗೆ ಬೆಳಕನ್ನು ಚಿಮ್ಮಿ, ಅತೀ ಹೆಚ್ಚು ಸೌರ ಕಲೆಗಳುಂಟಾಗಲಿವೆ.

ಗ್ರಹಣಗಳು
ಈ ವರ್ಷ ನಾಲ್ಕು ಗ್ರಹಣಗಳು ಸಂಭವಿಸುವುವಾದರೂ ಭಾರತದಲ್ಲಿ ಗೋಚರಿಸುವುದು ಒಂದು ಮಾತ್ರ. ಮಾರ್ಚ್‌ 13 ಅಥವಾ 14ರಂದು ಚಂದ್ರ ಗ್ರಹಣ, ಮಾರ್ಚ್‌ 29ರಂದು ಪಾರ್ಶ್ವ ಸೂರ್ಯ ಗ್ರಹಣ, ಸೆಪ್ಟಂಬರ್‌ 7 ಅಥವಾ 8 ರಂದು ಚಂದ್ರ ಗ್ರಹಣ ಹಾಗೂ ಸೆ. 21 ಪಾರ್ಶ್ವ ಸೂರ್ಯ ಗ್ರಹಣ ಇರಲಿದೆ. ಇವುಗಳಲ್ಲಿ ಸೆ. 7ರ ಚಂದ್ರಗ್ರಹಣ ಮಾತ್ರವೇ ಭಾರತದಲ್ಲಿ ಗೋಚರಿಸಲಿದೆ.

ಶನಿಗ್ರಹದ ಬಳೆ ಮಾಯ!
29 ವರ್ಷಕ್ಕೆ ಎರಡು ಬಾರಿ ಭೂಮಿಯಲ್ಲಿ ಇರುವವರಿಗೆ ಶನಿಗ್ರಹದ ಸುಂದರ ಬಳೆಗಳು ಕಾಣುವುದೇ ಇಲ್ಲ. ಈ ವರ್ಷದ ಮಾರ್ಚ್‌ನಿಂದ ನವೆಂಬರ್‌ವರೆಗೆ ದೂರದರ್ಶಕದಲ್ಲಿ ಶನಿಯ ಬಳೆಗಳೇ ಕಾಣುವುದಿಲ್ಲ. ಶನಿಗ್ರಹದ ಬಳೆಗಳ ಸಮತಲ ಹಾಗೂ ಭೂಮಿಯ ಸಮತಲ ಒಂದೇ ಆಗುವುದೇ ಇದಕ್ಕೆ ಕಾರಣ.

Advertisement

ಈ ವರ್ಷ ಜನವರಿಯಲ್ಲಿ ಮಂಗಳ, ಸೆಪ್ಟಂಬರ್‌ನಲ್ಲಿ ಶನಿ, ಡಿಸೆಂಬರ್‌ನಲ್ಲಿ ಗುರುಗ್ರಹ ಭವ್ಯವಾಗಿ ಕಾಣಲಿವೆ. ವಿಶೇಷವೆಂದರೆ ಸಂಜೆ ಆಕಾಶದಲ್ಲಿ ಜನವರಿ ಅಂತ್ಯದಲ್ಲಿ ಕಣ್ಣಿಗೆ ಕಾಣುವ ನಾಲ್ಕು ಗ್ರಹಗಳು ಹಾಗೆಯೇ ಫೆಬ್ರವರಿ ಅಂತ್ಯದಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ಬುಧ, ಶುಕ್ರ, ಶನಿ, ಗುರು ಹಾಗೂ ಮಂಗಳ ಈ ಐದು ಗ್ರಹಗಳೂ ಸುಂದರವಾಗಿ ಕಾಣಲಿವೆ ಎಂದು ಡಾ| ಎ.ಪಿ. ಭಟ್‌ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next