Advertisement

Yakshagana; ಇಲ್ಲಿ ಎಲ್ಲವೂ ಇದೆ, ಹೊಸತನದ ಆವಿಷ್ಕಾರ ಅಗತ್ಯ ಇಲ್ಲ: ಕೊಕ್ಕಡ ಈಶ್ವರ ಭಟ್‌

11:07 AM Dec 15, 2024 | Team Udayavani |

ಉಭಯತಿಟ್ಟುಗಳ ಸ್ತ್ರೀ ಪಾತ್ರಧಾರಿ 83 ವರ್ಷದ ಕೊಕ್ಕಡ ಈಶ್ವರ ಭಟ್ಟರು ಬೆಳ್ತಂಗಡಿ ತಾಲೂಕಿನ ಕೊಕ್ಕಡದ ಪಟ್ರಮೆ ಸಮೀಪದ ಹೆನ್ನಳ ನಿವಾಸಿ. ತಂದೆ ಮಹಾಲಿಂಗ ಭಟ್‌, ತಾಯಿ ಪರಮೇಶ್ವರಿ. ಅಳಿಕೆ ಸನಿಹದ ಮುಳಿಯದಲ್ಲಿ 1941ರಲ್ಲಿ ಜನನ. ಕಡೆಂಗೋಡ್ಲಿನಲ್ಲಿ ಬದುಕು. ಕಡೆಂಗೋಡ್ಲು ಅವರಿಗೆ ಬಾಲ್ಯವನ್ನು ಕೊಟ್ಟದ್ದರಿಂದ ಹೆಸರಿನೊಂದಿಗೆ ಹೊಸೆಯಬೇಕಿದ್ದರೂ ಕೊಕ್ಕಡ ಸಮೀಪವಿರುವುದರಿಂದ ಹೆಸರಿನ ಜತೆ ಅದೇ ನಂಟಾಯಿತು.

Advertisement

ಓದಿದ್ದು 6ನೇ ತರಗತಿ. ತೆಂಕಿನಲ್ಲಿ ಕುಡಾಣ ಗೋಪಾಲಕೃಷ್ಣ ಭಟ್ಟ, ಬಡಗಿನಲ್ಲಿ ದಯಾನಂದ ನಾಗೂರು, ಮೊಳಹಳ್ಳಿ ಕೃಷ್ಣ ಅವರಿಂದ ನಾಟ್ಯಾಭ್ಯಾಸ. ಪುತ್ತೂರಿನ ಪೆರುವಡಿ ಹಾಸ್ಯಗಾರರ ನೂಜಿ ಮನೆಯಲ್ಲಿ ಮುಂದುವರಿಕಾ ಕಲಿಕೆ. ಜತೆಗೆ ಭರತನಾಟ್ಯದ ಕಲಿಕೆ. ಉದ್ಧಾಮ ಕಲಾವಿದರ ಒಡನಾಟ ಅವರನ್ನು ಸುಪುಷ್ಟ ಕಲಾವಿದನನ್ನಾಗಿ ಮಾಡಿತು. ಪರಂಪರೆಗೆ ಹೆಸರಾದ ಕೆರೆಮನೆ ಮೇಳದಲ್ಲಿ ಒಂದು ತಿರುಗಾಟ. ಪೆರುವಡಿ ಕೃಷ್ಣ ಭಟ್ಟರ ಸಾರಥ್ಯದ ಮೂಲ್ಕಿ ಮೇಳದಲ್ಲಿ “ಬಾಲಕೃಷ್ಣ’ ಪಾತ್ರ ಮೂಲಕ ರಂಗಪ್ರವೇಶ. ಕೂಡ್ಲು, ಸುರತ್ಕಲ್‌, ಕದ್ರಿ, ಕುಂಬಳೆ, ಸಾಲಿಗ್ರಾಮ, ಶಿರಸಿ, ಇಡಗುಂಜಿ, ಬಪ್ಪನಾಡು, ಎಡನೀರು ಮೇಳಗಳಲ್ಲಿ ತಿರುಗಾಟ. ಸರಿಸುಮಾರು 50 ವರ್ಷಗಳ ಕಾಲ ಯಕ್ಷರಂಗದಲ್ಲಿ ತರುಣಿಯಾಗಿದ್ದವರು.

‘ಮೋಹಿನಿ’ಯಿಂದ “ಚಂದ್ರಮತಿ’ ವರೆಗೆ ಸ್ತ್ರೀಪಾತ್ರದ ದಿಕ್ಕಿನಲ್ಲಿ ಹೆಜ್ಜೆ ಹಾಕಿದವರು. ಅವರ ದಾಕ್ಷಾಯಿಣಿ, ಮಾಯಾ ಶೂರ್ಪನಖಿ , ಚಂದ್ರಮತಿ, ಶಾರದೆ, ಚಿತ್ರಾಂಗದೆ, ದ್ರೌಪದಿ, ಸುಭದ್ರೆ, ಪ್ರಭಾವತಿ, ಮಾಯಾ ಶೂರ್ಪನಖೀ, ಮಾಯಾಹಿಡಿಂಬಿ, ಮೋಹಿನಿ, ಶನಿ ಮಹಾತ್ಮೆಯ ಅಲೋಲಿಕೆ.. ಹೀಗೆ ಒಂದಕ್ಕಿಂತ ಒಂದು ಭಿನ್ನ ಎನ್ನುವ ಪಾತ್ರಗಳ ಮೂಲಕ ಜನಮಾನಸದಲ್ಲಿ ನೆಲೆಯಾದರು. ಕೂಡ್ಲು ಮೇಳದಲ್ಲಿ ಪ್ರದರ್ಶನವಾಗುತ್ತಿದ್ದ ಶ್ರೀದೇವಿ ಲಲಿತೋಪಾಖ್ಯಾನದ “ಶ್ರೀಲಲಿತೆ’ ಪಾತ್ರವು ಈಶ್ವರ ಭಟ್ಟರಿಗೆ ತಾರಾಮೌಲ್ಯ ತಂದಿತ್ತು.

ಪಾಪಣ್ಣ ಗುಣಸುಂದರಿ, ಸತಿ ಶೀಲವತಿ, ಕಡುಗಲಿ ಕುಮಾರರಾಮ, ಅಮರಶಿಲ್ಪಿ ವೀರಕಲ್ಕುಡ, ರಾಣಿ ರತ್ನಾವಳಿ ಮೊದಲಾದ ಪ್ರಸಂಗಗಳು ಭಟ್ಟರಿಂದಾಗಿ ಜನಾಕರ್ಷಣೆಗೆ ಒಳಗಾಗಿತ್ತು. ಪ್ರಮೀಳೆ, ಶಶಿಪ್ರಭೆ ಮೊದಲಾದ ಪಾತ್ರಗಳನ್ನೂ ಅಷ್ಟೇ ಸಮರ್ಥವಾಗಿ ನಿರ್ವಹಿಸಿದ ಹೆಗ್ಗಳಿಕೆ. ಚಂದ್ರಮತಿಯ ವೇದನೆ, ಶಾರದೆಯ ಮೋಹ, ಚಿತ್ರಾಂಗದೆಯ ಖುಷಿ, ದ್ರೌಪದಿಯ ಅಸಹಾಯಕತೆ, ಸುಭದ್ರೆಯ ಆತಂಕ, ಪ್ರಭಾವತಿಯ ದೂರದೃಷ್ಟಿ, ಮಾಯಾ ಶೂರ್ಪನಖೀಯ ಕಪಟತನ, ಮೋಹಿನಿಯ ಮಾದಕಪಾಶ, ದೇವಿಯ ಗಾಂಭೀರ್ಯ ಅವರ ಹೆಚ್ಚುಗಾರಿಕೆ. ಬಡಗುತಿಟ್ಟಿನಲ್ಲಿ ಕೆರೆಮನೆ ಶಂಭು ಹೆಗಡೆಯವರ ಜತೆಗೆ ಬ್ರಹ್ಮಕಪಾಲದ ಶಾರದೆ, ಬಡಗಿನ ದಮಯಂತಿ ಖ್ಯಾತಿ ತಂದುಕೊಟ್ಟಿತ್ತು. ಡಾ| ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಮಾನ, ಕೆರೆಮನೆ ಶಂಭು ಹೆಗಡೆ ಜಯಂತಿ ಸಂಮಾನ, ಮಂಗಳೂರು ಹವ್ಯಕ ಸಭಾ, ಎಡನೀರು ಮಠ, ಕಲಾರಂಗ ಉಡುಪಿ, ಪಾತಾಳ ಪ್ರಶಸ್ತಿ, ಕೋಟ ವೈಕುಂಠ ಪ್ರಶಸ್ತಿ ಹೀಗೆ ಹಲವು ಪುರಸ್ಕಾರಗಳು ಸಂದಿವೆ.

ಮರೆಯಲಾರದ ಪಾತ್ರಗಳು?
ಕಡುಗಲಿ ಕುಮಾರರಾಮ, ಅಮರಶಿಲ್ಪಿ ವೀರಕಲ್ಕುಡ, ಸತಿಶೀಲವತಿ, ಲಲಿತೋಪಾಖ್ಯಾನ, ದಮಯಂತಿ, ಬ್ರಹ್ಮಕಪಾಲ ಪ್ರಸಂಗದ ಪಾತ್ರಗಳು ಇಂದಿಗೂ ನನ್ನ ಸ್ಮೃತಿಪಟಲದಲ್ಲಿ ಚಿರಸ್ಥಾಯಿ.

Advertisement

ಪ್ರತೀ ವರ್ಷ ಹೊಸ ಪ್ರಸಂಗದ ಸಂದರ್ಭ ಪಾತ್ರ ಸಿದ್ಧತೆ ಹೇಗಿತ್ತು?
ರಂಗಕ್ಕೆ ಹೋಗುವ ಮುನ್ನ ಪಾತ್ರದ ಕುರಿತು ಅಧ್ಯಯನ ಮಾಡುತ್ತಿದ್ದೆವು. ಹಿರಿಯ ಕಲಾವಿದರಲ್ಲಿ ಕೇಳುತ್ತಿದ್ದೆವು. ಭಾಗವತರಲ್ಲಿ ಹಾಡುಗಳ ಕುರಿತು, ಎಲ್ಲೆಲ್ಲಿ ಅವಕಾಶಗಳಿವೆ, ಯಾವ ಹಾಡಿಗೆ ಕೆಲಸ ಮಾಡಬಹುದು ಎಂಬ ಕುರಿತು ಕೇಳುತ್ತಿದ್ದೆವು. ಇದರಿಂದಾಗಿ ಒಟ್ಟಂದದ ಪ್ರದರ್ಶನ ಚೆನ್ನಾಗಿ ಆಗುತ್ತಿತ್ತು.

ಸ್ತ್ರೀ ಪಾತ್ರ ಎಂದರೆ ನಿಮಿಷಾನುಗಟ್ಟಲೆ ಕುಣಿತ, ಅರೆನಿಮಿಷದ ಮಾತು ಎಂದೇ?
ಇಂದು ಅಲ್ಲಿಗೆ ಬಂದು ಮುಟ್ಟಿದ್ದು ವಿಪರ್ಯಾಸ. ಹಿತ-ಮಿತವಾಗಿ ಇರಬೇಕು. ಯಾವುದು ಹೆಚ್ಚಾದರೂ ಜನ “ತಮ್ಮ ಕೆಲಸ ಕಾರ್ಯಗಳಿಗೆ’ ಎದ್ದು ಹೋಗಿ ಪೂರೈಸಿ ಬರುತ್ತಾರೆ.

ಯಕ್ಷಗಾನದ ಈ ಕಾಲದ ಬದಲಾವಣೆ ಕುರಿತು?
ಜನರಿಗೆ ಬೇಕಾಗಿಯೋ, ಕಲಾವಿದರಿಗೆ ಬೇಕಾಗಿಯೋ ಬದಲಾವಣೆ ಬಂದಿದೆ. ಜನರ ಹೆಸರಿನಲ್ಲಿ ಕಲಾವಿದರೇ ಅಂತಹ ಪ್ರಯೋಗಕ್ಕೆ ಮುಂದಾಗುತ್ತಾರೆ. ದಾಕ್ಷಾಯಿಣಿಯಂತಹ ಪಾತ್ರಗಳು ಹೊಸತನದ ನೃತ್ಯವಿಕಾರಗಳಿಲ್ಲದೇ ವಿಜೃಂಭಿಸಬೇಕು.

ರಾಣಿ, ಸಖಿ, ದೇವಿ, ಗಯ್ಯಾಳಿ ಮೊದಲಾದ ಪಾತ್ರಗಳ ವ್ಯತ್ಯಾಸ ಮರೆತು ಕುಣಿಯುವ ಬಗ್ಗೆ?
ವೇಷಗಾರಿಕೆ ಹಾಗೂ ಕುಣಿತದಲ್ಲಿಯೇ ಪಾತ್ರದ ಗತ್ತುಗಾರಿಕೆ ಗೊತ್ತುಮಾಡಬೇಕು. ಮುಖ್ಯಪಾತ್ರ ಜತೆಗಿರುವಾಗ ಯಾವುದೇ ಕಾರಣಕ್ಕೂ ಜತೆಪಾತ್ರ ಅದನ್ನು ಮೀರಿ ಕುಣಿಯಬಾರದು. ಸಖೀ ಕುಣಿದಂತೆ ಚಿತ್ರಾಂಗದೆ ಕುಣಿಯಬಾರದು, ಚಿತ್ರಾಂಗದೆಗಿಂತ ಹೆಚ್ಚು ಸಖೀ ಕುಣಿಯಬಾರದು. ಆದರೆ ಪಾರಿಜಾತ ಪ್ರಸಂಗದ ಸತ್ಯಭಾಮೆ ಹಾಗೂ ಸಖಿಯ ರೀತಿ, ಹಾಸ್ಯದ ಲೇಪನದ ರಂಜನೀಯ ಮಾತುಗಾರಿಕೆ ಮೂಲಕ ಸಖೀ ಪಾತ್ರ ಜನರ ವಶೀಕರಣ ಮಾಡಬೇಕು. ಇಲ್ಲದಿದ್ದರೆ ರಂಗ ಸಪ್ಪೆಯಾಗುತ್ತದೆ. ಮಿತಿ ಮೀತಿದಾಗ ಸ್ತ್ರೀ ಪಾತ್ರಗಳು ಗೌರವದ ಸ್ಥಾನದಿಂದ ಹಳಿ ತಪ್ಪುತ್ತವೆ.

ಅಂದಿಗೂ ಇಂದಿಗೂ ಸ್ತ್ರೀ ಪಾತ್ರದ ವೇಷಭೂಷಣದಲ್ಲಿ ಆದ ಬದಲಾವಣೆ ಬಗ್ಗೆ?
ತುಂಬಾ ಬದಲಾಗಿದೆ. ಸ್ತ್ರೀ ಪಾತ್ರದ ಖರ್ಚು ಭರಿಸುವ ತಾಕತ್ತು ಅಂದಿನ ಕಲಾವಿದರಿಗೆ ಇರಲಿಲ್ಲ. ಈಗ ನಾಟಕೀಯವಾಗಿ, ಸಿನಿಮೀಯವಾಗಿ, ಸ್ಪರ್ಧಾತ್ಮಕವಾಗಿ ವೇಷಭೂಷಣ ಇರುತ್ತದೆ. ರಾಣಿಯ ವೈಭೋಗದ ಕಲ್ಪನೆಗೆ ಬೇಕಾದಂತೆ ವೇಷಭೂಷಣ ಇರುತ್ತದೆ. ಆಕ್ಷೇಪ ಅಲ್ಲ. ಆಗ ಕಲಾವಿದನ ಬಡತನದಿಂದ ಕಷ್ಟವಿತ್ತು. ಆಗ ಮೇಳ ಹೊರಡುವಾಗ ಯಜಮಾನರು ಸೀರೆ, ಸೊಂಟದಪಟ್ಟಿ, 4 ಕಬ್ಬಿಣದ ಬಳೆ ಕೊಡುತ್ತಿದ್ದುದು ಬಿಟ್ಟರೆ ಬೇರೇನಿಲ್ಲ. ಬೆಳಗಿನ ಕಾಫಿಗೇ ಕಲಾವಿದನ ಬಳಿ ಹಣ ಇರುತ್ತಿರಲಿಲ್ಲ. ಆಗ ಕಲಾವಿದ ಸೋತರೂ ಮೇಳ ಗೆಲ್ಲುತ್ತಿತ್ತು. ಈಗ ಮೇಳ ಸೋತರೂ ಕಲಾವಿದ ಗೆಲ್ಲುತ್ತಾನೆ. ಅಂದು ಪ್ರಧಾನ ಸ್ತ್ರೀ ವೇಷಧಾರಿಯೇ ಪೀಠಿಕೆ ಸ್ತ್ರೀ ವೇಷ ಮಾಡಬೇಕಿತ್ತು. ಪೂರ್ವರಂಗ ಇಲ್ಲದ ಕಾಲದಲ್ಲೂ ಇದು ಮುಂದುವರಿದಿತ್ತು. ಅನಂತರ ಅದಕ್ಕಾಗಿ ಬೇರೆ ಜನ ಮಾಡುವ ಪರಂಪರೆ ಬಂತು. ಈಗ ಯಾವುದೂ ಇಲ್ಲ.

ಸ್ತ್ರೀ ವೇಷದ ನೃತ್ಯದಲ್ಲಿ ಕೂಡ ಸಾಕಷ್ಟು ಬದಲಾವಣೆಯಾಗಿದೆಯಲ್ಲ?
ಅಂದು ಲಾಲಿತ್ಯಪೂರ್ಣವಾಗಿ ತೆಂಕಿನ ಕುಣಿತ ಕಡಿಮೆ ಇತ್ತು. ಬಡಗಿನಲ್ಲಿ ನಾಜೂಕಿನ ಕುಣಿತ ಇತ್ತು. ಈಗಲೂ ಬಡಗಿನವರು ತೆಂಕಿನ ಕುಣಿತ ಸೀÌಕರಿಸದಿದ್ದರೂ ತೆಂಕಿನಲ್ಲಿ ಬಡಗಿನ ಚಾಲೂ ಕುಣಿತ ಕ್ರಮ ಸ್ವೀಕೃತವಾಗಿದೆ. ಕೆಲವು ಪಾತ್ರಗಳಿಗೆ ಎಷ್ಟು ಮಿತವಾಗಿದ್ದರೆ ಹಿತವೋ ಅಷ್ಟೇ ಬೇಕು. ಬಡಗಿನಲ್ಲಿ ಕುಣಿಯುತ್ತಾರೆ ಎಂದು ತೆಂಕಿನಲ್ಲಿ ತಂದು ತುರುಕಿಸಬಾರದು. ಸ್ತ್ರೀ ವೇಷ ಕುಣಿಯಲೆಂದೇ ತ್ರಿವುಡೆ ತಾಳಕ್ಕೆ ಪದವನ್ನು ಎಳೆದು ತಂದು ಕೂರಿಸಿ ಹಾಡಬಾರದು.

ಯಕ್ಷಗಾನಕ್ಕೆ ಅನ್ಯಕಲೆಗಳ ಸರಕುಗಳನ್ನು ತಂದು ಸುರಿಯುವುದು ಸರಿಯೇ?
ಅದು ಸಮಂಜಸ ಎನಿಸುವುದಿಲ್ಲ. ನಮ್ಮತನವನ್ನು ನಾವು ಮರೆತಂತೆ ಆಗುತ್ತದೆ. ಸಿನೆಮಾದಂತಹ ಮಾಧ್ಯಮದಿಂದ ತಂದು ಹಾಕಿದರೆ ಯಕ್ಷಗಾನದಲ್ಲಿ ಕೊರತೆ ಇದೆ, ಕಡಿಮೆಯಾದುದಕ್ಕೆ ತಂದದ್ದು ಎಂದಾಗುತ್ತದೆ. ಕೆರೆಮನೆ ಶಂಭು ಹೆಗಡೆಯವರು ಹೇಳುತ್ತಿದ್ದಂತೆ, ಅರ್ಥ, ಹಿಮ್ಮೇಳ, ನಾಟ್ಯ ಸಮಾನವಾಗಿ ಇದ್ದರೆ ಚಂದ. ಪೌರಾಣಿಕ ಪ್ರಸಂಗಗಳು ಇಂದಿಗೂ ಹಳೆ ಮಾದರಿಯಲ್ಲಿಯೇ ಚಾಲ್ತಿಯಲ್ಲಿದೆ ಎಂದಾದರೆ ಅದು ಸ್ವೀಕಾರಾರ್ಹವಾಗಿಯೇ ಇದೆ ಎಂದೇ ಅರ್ಥವಲ್ಲವೇ?

ಯಕ್ಷಗಾನಕ್ಕೆ ಇನ್ನಷ್ಟು ಆವಿಷ್ಕಾರ ಬೇಡವೇ?
ಯಕ್ಷಗಾನದಲ್ಲಿ ಎಲ್ಲವೂ ಇದೆ. ಹೊಸತನದ ಆವಿಷ್ಕಾರದ ಅಗತ್ಯ ಇಲ್ಲ. ವರ್ತಮಾನದ ರಂಗದ ಪೌರಾಣಿಕ ಸ್ತ್ರೀಪಾತ್ರಗಳು ತನ್ನ ಪೌರಾಣಿಕ ನೆಲೆಯನ್ನು ಮರೆತಿವೆ. ಪಾತ್ರವು ನಮ್ಮೊಳಗೆ ಪರಕಾಯ ಪ್ರವೇಶವಾಗಬೇಕು. ಪಾತ್ರವೇ ನಾವಾಗಬೇಕು. ರಂಗದಲ್ಲಿ ಮನೆಯ ವಿದ್ಯಮಾನ, ವ್ಯವಹಾರ ನೆನಪಾದರೆ ಪಾತ್ರ ಯಶಸ್ಸಾಗದು.

ನಾಲ್ಕು ದಶಕಗಳ ಹಿಂದೆಯೇ ಜನಪ್ರಿಯ
1988-90ರ ಕಾಲಮಾನದಲ್ಲಿ ಮಂಗಳೂರು ಪುರಭವನದಲ್ಲಿ ಟಿಕೆಟ್‌ ಆಟಗಳದ್ದೇ ಸುಗ್ಗಿ. ತಿಂಗಳಿಗೆರಡು ದಕ್ಷಾಧ್ವರ ಪ್ರಸಂಗ ಇರುತ್ತಿತ್ತು. ಎಂಪೆಕಟ್ಟೆ ರಾಮಯ್ಯ ರೈಗಳ ದೇವೇಂದ್ರ, ಶೇಣಿ ಗೋಪಾಲಕೃಷ್ಣ ಭಟ್ಟರ ದಕ್ಷ, ಕುಂಬಳೆ ಸುಂದರ ರಾಯರ ಈಶ್ವರ, ಕೊಕ್ಕಡ ಈಶ್ವರ ಭಟ್ಟರ ದಾಕ್ಷಾಯಿಣಿ, ಬಣ್ಣದ ಮಾಲಿಂಗರ ವೀರಭದ್ರ. ಇದು ಖಾಯಂ ಸೆಟ್‌. ಒಂದೊಂದು ಪ್ರದರ್ಶನವೂ ಭಿನ್ನ. ಕೊಕ್ಕಡ ಈಶ್ವರ ಭಟ್ಟರ ಸ್ತ್ರೀ ಪಾತ್ರದ ಲಾಲಿತ್ಯಕ್ಕೆ ವಿದ್ವತ್‌ ರಸಿಕರು ಅಂದೇ ಮಾರುಹೋಗಿದ್ದರು.

 ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next