Advertisement
ಎಂಟು ಶ್ರೇಷ್ಠರ ಸೆಣಸಾಟ!ಪ್ರಸ್ತುತ ವರ್ಷದ ಕೂಟದಲ್ಲಿ ಅತ್ಯುತ್ತಮವಾಗಿ ಆಡಿದ ವಿಶ್ವದ ಅಗ್ರ 8 ಶ್ರೇಯಾಂಕ ಹೊಂದಿದ ಆಟಗಾರ್ತಿಯರಿಗೆ ಮಾತ್ರ ಅವಕಾಶ. ಈ ಲೆಕ್ಕಕ್ಕೆ ಕಡ್ಡಾಯವಾಗಿ ನಾಲ್ಕು ಗ್ರ್ಯಾನ್‌ಸ್ಲಾಮ್ ಫಲಿತಾಂಶಗಳನ್ನು ಒಳಗೊಂಡಂತೆ 16 ಟೂರ್ನಿಗಳ ಉತ್ತಮ ಪ್ರದರ್ಶನಗಳನ್ನು ಪರಿಗಣಿಸಲಾಗುತ್ತದೆ. ಅಗ್ರ 20 ಆಟಗಾರ್ತಿಯರಿಗೆ ಹಿಂದಿನ ವರ್ಷದ 5 ಮುಖ್ಯ ಟೂರ್ನಿಗಳ ಫಲಿತಾಂಶದ ಅಂಕಗಳನ್ನು ಸೇರ್ಪಡೆಗೊಳಿಸಿ ಅವರಿಗೆ ಅಷ್ಟರಮಟ್ಟಿಗೆ “ಕುಷನ್ ಕೊಡಲಾಗುತ್ತದೆ. ಒಂದು ನಿರ್ದಿಷ್ಟ ದಿನದಲ್ಲಿ ಅಂಕಗಳ ಸಂಗ್ರಹ ಆಧರಿಸಿ ಅಗ್ರ ಎಂಟನ್ನು ಅಂತಿಮಗೊಳಿಸಲಾಗುತ್ತದೆ. ನಿಜಕ್ಕಾದರೆ, ಈ ಎಂಟರಲ್ಲಿ ಒಬ್ಬರಾಗುವುದೇ ಒಂದು ಹಂಗಾಮ ಗೆದ್ದಂತೆ!
ಈ ಟೂರ್ನಿ ಇಂಗ್ಲೆಂಡ್‌ನಲ್ಲೇ ನೆಲಸಿರುವ ವಿಂಬಲ್ಡನ್, ರೊಲ್ಯಾಂಡ್ ಗ್ಯಾರಸ್‌ಗೆ ಮೀಸಲಾಗಿರುವ ಫ್ರೆಂಚ್ ಓಪನ್‌ನಂತಲ್ಲ. ನಗರಗಳಿಂದ ನಗರಕ್ಕೆ ತನ್ನ ವಾಸ್ತವ್ಯ ಬದಲಿಸುತ್ತದೆ. ಆ ಎಣಿಕೆಯಲ್ಲಿ ಸಿಂಗಾಪುರ 9ನೇ ನಗರ. ಒಂದು ನಗರ ಪರಮಾವಧಿ ಐದು ವರ್ಷ ಆತಿಥ್ಯ ವಹಿಸಬಹುದು. 2014ರಿಂದ ಆರಂಭವಾಗಿ ಇದು ಸಿಂಗಾಪೂರ್‌ಗೆ ಐದನೇ ಸಂಚಿಕೆ. ಅಕ್ಟೋಬರ್ 21ರಿಂದ 27ರವರೆಗೆ ನಡೆಯಲಿದೆ. 1972ರಲ್ಲಿ ಜಾರಿಗೆ ಬಂದ ಡಬ್ಲ್ಯುಟಿಎ ಟೂರ್ ಫೈನಲ್ ಟೂರ್ನಿಯಲ್ಲಿ ರುಚಿಗೇನೂ ಕೊರತೆಯಿಲ್ಲ. ಆದರೂ ಜನಪ್ರಿಯತೆ ಆ ಮಟ್ಟಿಗೆ ಸಿಕ್ಕಿಲ್ಲ.
Related Articles
Advertisement
ಹುಳಿ ಉಪ್ಪು ಖಾರ ಕಡಿಮೆ!ವರ್ಷಾಂತ್ಯದ ಟೂರ್ನಿಗೆ ಕೆಲವು ನಕಾರಾತ್ಮಕ ಗುಣಗಳೂ ಇರುತ್ತವೆ. ಜನವರಿಯಿಂದ ನಿರಂತರವಾಗಿ ಆಡುತ್ತಿರುವ ಆಟಗಾರ್ತಿಯರಿಗೆ ನಾಲ್ಕೂ ಗ್ರಾನ್‌ಸ್ಲಾಂಗಳು ಮುಗಿದ ನಂತರ ಒಂದು ಪ್ರಮಾಣದ ಸೋಮಾರಿತನ ಮೂಡುತ್ತದೆ. ಹತ್ತಿಕ್ಕಿಕೊಂಡ ಸಣ್ಣಪುಟ್ಟ ಗಾಯಗಳು ಈಗ ತಮ್ಮ ಪ್ರತಾಪ ತೋರಿಸಲಾರಂಭಿಸುತ್ತವೆ. ಹತ್ತಿರವಾಗುತ್ತಿರುವ ಕ್ರಿಸ್‌ಮಸ್ ಸಂಭ್ರಮ, ಯುರೋಪ್ ದೇಶಗಳಲ್ಲಿ ಹೆಚ್ಚು ಚಳಿ ಆಟಗಾರರನ್ನು ಅಕ್ಷರಶಃ ಮುದುಡಿಸುತ್ತದೆ. ಹಾಗಾಗೇ ಹಲವು ಪ್ರಮುಖ ಆಟಗಾರ್ತಿಯವರು ಇಲ್ಲಿ ಆಡದಿದ್ದರೆ ತೀರಾ ಅಚ್ಚರಿಯೇನೂ ಆಗುವುದಿಲ್ಲ. ಈ ಬಾರಿ 11ನೇ ಶ್ರೇಯಾಂಕದ ಅಮೆರಿಕಾದ ಸೆರೆನಾ ವಿಲಿಯಮ್ಸ್ ಗಾಯದ ಕಾರಣವೊಡ್ಡಿ ಬೀಜಿಂಗ್‌ನಲ್ಲಿ ಆಡುತ್ತಿಲ್ಲ. ಗಾಯ ನಿಜವಿರಬಹುದು, ಇದರಿಂದ ಸೆರೆನಾ ಡಬ್ಲ್ಯುಟಿಎ ಫೈನಲ್ಸ್ ಆಡುವುದಿಲ್ಲ ಎಂಬುದು ಖಚಿತಗೊಳ್ಳುತ್ತದೆ. ಹಾಲೆಪ್ ಗಾಯಾಳುವಾಗಿರುವುದರಿಂದ ಅಂಕಣಕ್ಕಿಳಿಯುವುದೇ ಅನಿಶ್ಚಿತ. ಆಸ್ಟ್ರೇಲಿಯನ್ ಓಪನ್ ಗೆದ್ದ ವೋಜ್ನಿಯಾಕಿಯವರಿಗೆ ಕೂಡ ಪಾಲ್ಗೊಳ್ಳುವಿಕೆ ಗ್ಯಾರಂಟಿಯಾಗಿಲ್ಲ. ಈ ಸ್ಪರ್ಧೆಗೆ ಹೆಚ್ಚಿನ ಡಬ್ಲ್ಯುಟಿಎ ಪಾಯಿಂಟ್‌ಗಳನ್ನು ಪುರುಷರ ಎಟಿಪಿ ಸ್ಪರ್ಧೆಯಲ್ಲಿಟ್ಟಂತೆ ಇಡುವುದರಿಂದ ಹೆಚ್ಚು ಆಕರ್ಷಣೀಯಗೊಳಿಸಬಹುದು. ಎಟಿಪಿ ಹೆಜ್ಜೆಗಳ ಅನುಸರಣೆ!
ಇದೇ ರೀತಿ ಪುರುಷರ ವಿಭಾಗದಲ್ಲಿಯೂ ಪ್ರತಿ ವರ್ಷ ಎಟಿಪಿ ಟೂರ್ ಫೈನಲ್ಸ್ ನಡೆಯುತ್ತದೆ. ಈ ವರ್ಷದ ಸ್ಪರ್ಧೆ ಲಂಡನ್‌ನಲ್ಲಿ ನವೆಂಬರ್ 11ರಿಂದ 18ರವರೆಗೆ ನಡೆಯಲಿದೆ. ಪ್ರತಿ ಸುತ್ತಿನ ಜಯಕ್ಕೆ ಗರಿಷ್ಠ ಶ್ರೇಯಾಂಕ ಪಾಯಿಂಟ್, ಅಗ್ರ ಎಂಟರ ಆಯ್ಕೆಗೆ ವಿನೂತನ ಕ್ರಮಗಳ ಮೂಲಕ ಎಟಿಪಿ ಪ್ರಾಯೋಜಕತ್ವದಲ್ಲಿ ನಡೆಯುವ ಸ್ಪರ್ಧೆಗೆ ಹೆಚ್ಚಿನ ಆಯಾಮಗಳನ್ನು ಸೃಷ್ಟಿಸಿದೆ. ಅತ್ತ ನೋಡುವುದಾದರೆ, ಅಲ್ಲಿ ರಫೆಲ್ ನಡಾಲ್ ಹಾಗೂ ನೋವಾಕ್ ಜೋಕೋವಿಚ್ ಮಾತ್ರವೇ ಈವರೆಗೆ ಪಾಲ್ಗೊಳ್ಳುವ ರಹದಾರಿ ಪಡೆದಿದ್ದಾರೆ. ರೌಂಡ್ ರಾಬಿನ್ ಸ್ಪರ್ಧೆ ಮತ್ತು ಸತತ ಮೂರು ದಿನದ ಪಂದ್ಯಗಳು ದಣಿದ ದೇಹಗಳಿಗೆ ಸುಲಭದ ತುತ್ತಲ್ಲ. ಇದೇ ಕಾರಣಕ್ಕೆ ಎರಡು ಪಂದ್ಯ ಗೆದ್ದ ಆಟಗಾರ್ತಿ ಮೂರನೇ ಪಂದ್ಯಕ್ಕೆ ರಿಲ್ಯಾಕ್ಸ್ ಆಗಬಹುದು. ತಮ್ಮ ಎದುರಾಳಿ ಯಾರಾಗಬೇಕು ಎಂಬುದನ್ನು ನಿರ್ಧರಿಸಲು ಆಟದ ಮಟ್ಟದಲ್ಲಿಯೇ ವೆತ್ಯಾಸ ಮಾಡಿಕೊಳ್ಳಬಹುದು. ಎದುರು ಗುಂಪಿನ ಟಾಪ್ 2 ಆಟಗಾರ್ತಿಯ ಎದುರು ಆಡಬಾರದು ಎಂದು ತಮ್ಮ ಗುಂಪಲ್ಲಿ ಒಂದು ಪಂದ್ಯ ಕೈಚೆಲ್ಲಿ ಗುಂಪಿನ ದ್ವಿತೀಯ ಸ್ಥಾನ ಪಡೆಯಬಹುದು. ಬಹುಷಃ ಮಹಿಳಾ ವಿಭಾಗದಲ್ಲಿಯೂ ಈ ಸ್ಪರ್ಧೆಗೆ ಇನ್ನಷ್ಟು ಒಗ್ಗರಣೆಯನ್ನು ಬೆರೆಸುವ ಅಗತ್ಯವಿದೆ. ಗುರು ಸಾಗರ