ಒಂದು ಕಾಲದಲ್ಲಿ ಒಬ್ಬ ದೊಡ್ಡ ದೊರೆ ಇದ್ದ. ಅಷ್ಟದಿಕ್ಕುಗಳಲ್ಲಿ ನೂರಾರು ಪ್ರಾಂತಗಳನ್ನು ಗೆದ್ದವನಾತ. ಆತನಿಗೆ ಒಂದು ಆಸೆಯಿತ್ತು. ಎಷ್ಟೇ ದುಃಖವಾದರೂ ನೋಟ ಮಾತ್ರದಲ್ಲಿ ಮರೆ ಯಿಸುವಂತಹ, ಹಾಗೆಯೇ ಭಾರೀ ಸಂತೋಷದಲ್ಲಿದ್ದರೂ ಕ್ಷಣದಲ್ಲಿ ವಾಸ್ತವವನ್ನು ನೆನಪಿಸಿಕೊಡುವಂತಹ ಯಾವುದಾದರೂ ಒಂದು ಮಾಂತ್ರಿಕ ವಸ್ತು ತನ್ನಲ್ಲಿರಬೇಕು ಎಂಬುದು ಅರಸನಿಗಿದ್ದ ಹಂಬಲ.
ದೊರೆ ಒಂದು ದಿನ ತನ್ನ ಆಸೆಯನ್ನು ಆಸ್ಥಾನದ ವಿದ್ವಾಂಸ ರಲ್ಲಿ ಹೇಳಿಕೊಂಡ. ಅವರು ನೂರಾರು ರೀತಿಗಳಲ್ಲಿ ಆಲೋ ಚಿಸಿ ಮಾಂತ್ರಿಕ ವಸ್ತುವೊಂದನ್ನು ಸಿದ್ಧಪಡಿಸಿ ಕೊಡುವ ಯಾವ ಸುಳಿವೂ ಅವರಿಗೆ ಸಿಗಲಿಲ್ಲ. ಕೊನೆಗೆ ದೂರದ ಊರಿನ ಸಂತ ಶ್ರೇಷ್ಠನೊಬ್ಬನ ಬಳಿಗೆ ಹೋದರು. ಅವನ ಬಳಿ ಅರಸನ ಬಯಕೆಯನ್ನು ಹೇಳಿಕೊಂಡರು.
ಆ ಸಂತನಲ್ಲಿ ಅಂಥ ಒಂದು ಮಾಂತ್ರಿಕ ವಸ್ತು ಸಿದ್ಧವಾಗಿಯೇ ಇತ್ತು. ಅದೊಂದು ಉಂಗುರ. ಲೋಹದ ಆ ಉಂಗುರದಲ್ಲಿ ಒಂದು ರತ್ನವನ್ನು ಕಟ್ಟಲಾಗಿತ್ತು. ರಾಜನ ಆಸ್ಥಾನದಿಂದ ಬಂದ ವಿದ್ವಾಂಸರಲ್ಲಿ ಸಂತ ಹೇಳಿದ, “ಇದು ಮಾಂತ್ರಿಕ ಉಂಗುರ. ಈ ರತ್ನದ ಅಡಿಯಲ್ಲಿ ಮಾಂತ್ರಿಕ ಸಂದೇಶವನ್ನು ಕೆತ್ತಲಾಗಿದೆ. ಒಂದೇ ಒಂದು ಷರತ್ತು ಎಂದರೆ ಅತ್ಯಂತ ಕಷ್ಟದ, ಇನ್ನು ವಿಧಿಯಿಲ್ಲ ಎಂಬ ಸ್ಥಿತಿಯಲ್ಲಿ ಮಾತ್ರ ಅದನ್ನು ತೆರೆದು ಓದಬೇಕು. ಅಂಥ ಸ್ಥಿತಿ ಬಾರದೆ, ಕುತೂಹಲಕ್ಕಾಗಿ ತೆರೆದರೆ ಸಂದೇಶದ ಶಕ್ತಿ ಮಾಯವಾಗಿ ಬಿಡುತ್ತದೆ.’
ವಿದ್ವಾಂಸರು ಉಂಗುರವನ್ನು ದೊರೆಗೆ ತಂದು ಒಪ್ಪಿಸಿದರು. ಸ್ವಲ್ಪ ಕಾಲದ ಬಳಿಕ ಶತ್ರುಗಳು ಆ ರಾಜ್ಯಕ್ಕೆ ಮುತ್ತಿಗೆ ಹಾಕಿದರು. ಅರಸನಿಗೆ ಸೋಲಾ ಯಿತು. ಆತ ತಪ್ಪಿಸಿಕೊಂಡು ಓಡಿಹೋದ. ಹೆಂಡತಿ, ಮಕ್ಕಳು, ಆಸ್ಥಾನಿಕರು, ಸೇನೆ – ಯಾರೂ ಜತೆಗಿರಲಿಲ್ಲ. ಉಂಗುರ ತೆರೆದು ಸಂದೇಶವನ್ನು ಓದಿಕೊಳ್ಳಲೇ ಎಂದು ಯೋಚಿಸಿದ ರಾಜ. ಮರುಕ್ಷಣವೇ, “ನಾನಿನ್ನೂ ಬದುಕಿದ್ದೇನಲ್ಲ. ರಾಜ್ಯ ಹೋದರೆ ಮತ್ತೆ ಪಡೆಯಬಹುದು. ಇದು ಕೊನೆಯಲ್ಲ’ ಎಂದುಕೊಂಡ.
ಶತ್ರುಗಳು ಬೆನ್ನತ್ತಿಬಂದರು. ಅರಸನ ಕುದುರೆ ಸತ್ತುಹೋಯಿತು. ಓಡಿ ಓಡಿ ಅವನ ಬರಿಗಾಲುಗಳು ಗಾಯಗೊಂಡವು. ಜೀವ ಹೋಗುವಷ್ಟು ಬಾಯಾರಿಕೆ ಯಾಗು ತ್ತಿತ್ತು. ಆಗಲೂ “ನಾನು ಇದ್ದೇನಲ್ಲ, ಇದು ಕೊನೆ ಯಲ್ಲ’ ಎಂದು ಕೊಳ್ಳುತ್ತಲೇ ಮುಂದು ವರಿ ಯುತ್ತಿದ್ದ.
ಓಡಿ ಓಡಿ ರಾಜ ಬೆಟ್ಟ ವೊಂದರ ತುತ್ತತುದಿ ತಲುಪಿದ. ಎದುರು ಆಳ ವಾದ ಕಣಿವೆ. ಅಲ್ಲಿ ಘರ್ಜಿಸುತ್ತಿರುವ ವನ್ಯ ಪ್ರಾಣಿಗಳು. ಕೆಳಗೆ ಹಾರಿದರೆ ಸಾವು ಖಚಿತ. ಬೆನ್ನ ಹಿಂದೆ ಶತ್ರುಗಳ ಹೆಜ್ಜೆ ಸದ್ದು. ಸೋತು ಸುಣ್ಣವಾಗಿದ್ದ ರಾಜ ಆಗ ಉಂಗುರ ವನ್ನು ತೆರೆದು ಸಂದೇಶವನ್ನು ಓದಿದ. ಅಲ್ಲಿ “ಇದು ಶಾಶ್ವತವಲ್ಲ’ ಎಂದು ಬರೆದಿತ್ತು!
ಆ ಕ್ಷಣ ಶತ್ರುಗಳು ಬೇರೆ ದಾರಿ ಹಿಡಿದು ಹೋದರು. ಕಣಿವೆಯಲ್ಲಿ ಕಾಡುಪ್ರಾಣಿಗಳ ಗರ್ಜನೆ ನಿಂತಿತು. ಹತ್ತಿರದಲ್ಲೇ ಒಂದು ತೊರೆ ಕಾಣಿಸಿತು. ದೊರೆ ನಿರುಮ್ಮಳನಾಗಿ ತೊರೆಯ ನೀರು ಕುಡಿದು, ಕಾಡುಹಣ್ಣುಗಳನ್ನು ತಿಂದು ಮರದಡಿಯಲ್ಲಿ ಮಲಗಿ ವಿಶ್ರಮಿಸಿದ.
ಸ್ವಲ್ಪ ಕಾಲದ ಬಳಿಕ ದೊರೆಯ ಆಪ್ತ ಗೆಳೆಯರು ರಾಜ್ಯವನ್ನು ಮರಳಿ ಗಳಿಸುವಲ್ಲಿ ಅವನಿಗೆ ಸಹಾಯ ಮಾಡಿದರು. ನೆಚ್ಚಿನ ಸಾಮಂತರಲ್ಲಿ ಆಶ್ರಯ ಪಡೆದಿದ್ದ ಮಡದಿ, ಮಕ್ಕಳೂ ಮರಳಿ ಬಂದರು. ದೊರೆ ಹಿಂದಿರುಗಿದ ಸಂಭ್ರಮದಲ್ಲಿ ಪ್ರಜೆಗಳು ಭಾರೀ ಹರ್ಷಾಚರಣೆ ಏರ್ಪಡಿಸಿದರು.
ಆ ರಾತ್ರಿ ಸಂಭ್ರಮ, ನಲಿವಿನ ಕೂಟದ ನಡುವೆ ದೊರೆ ಮತ್ತೂಮ್ಮೆ ಉಂಗುರವನ್ನು ತೆರೆದ. “ಇದು ಶಾಶ್ವತವಲ್ಲ’ ಎಂಬ ಬರಹ ಆಗಲೂ ಅಲ್ಲಿ ಕೋರೈಸಿತು.
(ಸಾರ ಸಂಗ್ರಹ)