ಸಿಂಗಾಪುರ: ವಿಶ್ವ ಚೆಸ್ ಪಂದ್ಯಾವಳಿಯ 11ನೇ ಸುತ್ತಿನ ಪಂದ್ಯವನ್ನು ಗೆಲ್ಲುವ ಮೂಲಕ ಭಾರತದ ಡಿ. ಗುಕೇಶ್ ಅಮೋಘ ಮುನ್ನಡೆ ಸಾಧಿಸಿದ್ದಾರೆ. 6-5 ಅಂಕಗಳ ಲೀಡ್ ಹೊಂದಿದ್ದು, ಗೆಲುವಿನ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿದ್ದಾರೆ. 14 ಪಂದ್ಯಗಳ ಈ ಸರಣಿಯಲ್ಲಿ ಉಳಿದಿರುವ ಕೊನೆಯ 3 ಪಂದ್ಯಗಳು ಡ್ರಾಗೊಂಡರೆ ಗುಕೇಶ್ ವಿಜೇತರೆನಿಸಿಕೊಳ್ಳಲಿದ್ದಾರೆ.
ರವಿವಾರದ ಪಂದ್ಯದಲ್ಲಿ ಬಿಳಿ ಕಾಯಿಯೊಂದಿಗೆ ಆಡಿದ ಡಿ. ಗುಕೇಶ್, ಕಪ್ಪು ಕಾಯಿಯೊಂದಿಗೆ ಆಡಿದ ಡಿಂಗ್ ಲಿರೆನ್ ವಿರುದ್ಧ ತನ್ನ 29ನೇ ನಡೆಯಲ್ಲಿ ಜಯ ದಾಖಲಿಸಿದರು. 28ನೇ ನಡೆಯಲ್ಲಿ ಲಿರೆನ್, ರಾಣಿಯನ್ನು ತಪ್ಪಾಗಿ ನಡೆಸಿ ಇಕ್ಕಟ್ಟಿಗೆ ಸಿಲುಕಿದರು.
ಈ ವೇಳೆ ಗುಕೇಶ್ ಗೆಲುವು ಖಾತ್ರಿಯಾಗುತ್ತಲೇ ರಿಸೈನ್ ಮೂಲಕ ಲಿರೆನ್ ಸೋಲನ್ನು ಒಪ್ಪಿಕೊಂಡರು. ಈವರೆಗಿನ 11 ಪಂದ್ಯಗಳಲ್ಲಿ 8 ಪಂದ್ಯಗಳು ಡ್ರಾಗೊಂಡಿವೆ. 14 ಸುತ್ತಿನ ಈ ಪಂದ್ಯಾವಳಿಯಲ್ಲಿ ಮೊದಲಿಗೆ 7.5 ಅಂಕ ಗಳಿಸುವವರು ವಿಜೇತರೆನಿಸಿಕೊಳ್ಳುತ್ತಾರೆ.
ಗುಕೇಶ್ ಗೆದ್ದರೆ ದಾಖಲೆ
ಚೆನ್ನೈಯವರಾದ 18 ವರ್ಷದ ಗುಕೇಶ್ ದೊಮ್ಮರಾಜು ಒಂದು ವೇಳೆ ಈ ಪಂದ್ಯಾವಳಿಯಲ್ಲಿ ಗೆದ್ದರೆ, ಅವರು ಈ ಸಾಧನೆ ಮಾಡಿದ ವಿಶ್ವದ ಅತೀ ಕಿರಿಯ ವಿಶ್ವ ಚಾಂಪಿಯನ್ ಎನಿಸಿಕೊಳ್ಳಲಿದ್ದಾರೆ. ದಾಖಲೆ ರಷ್ಯಾದ ದಂತಕತೆ ಗ್ಯಾರಿ ಕ್ಯಾಸ್ಪರೋವ್ ಹೆಸರಲ್ಲಿದೆ (22 ವರ್ಷ).