ಸಿಂಗಾಪುರ: ಸೋಮವಾರದಿಂದ ಡಿ. 15ರ ವರೆಗೆ ಸಿಂಗಾಪುರದಲ್ಲಿ ವಿಶ್ವ ಚೆಸ್ ಚಾಂಪಿಯನ್ಶಿಪ್ ನಡೆಯಲಿದೆ. ಭಾರತದ ಗ್ರ್ಯಾಂಡ್ ಮಾಸ್ಟರ್ ಗುಕೇಶ್ ದೊಮ್ಮರಾಜು ಮತ್ತು ಹಾಲಿ ವಿಶ್ವ ಚಾಂಪಿಯನ್, ಚೀನದ ಡಿಂಗ್ ಲಿರೆನ್ ಮುಖಾಮುಖಿಯಾಗಲಿದ್ದಾರೆ.
18 ವರ್ಷದ ಗುಕೇಶ್, ಕಳೆದ ಎಪ್ರಿಲ್ನಲ್ಲಿ ಕೆನಡಾದ ಟೊರೊಂಟೋದಲ್ಲಿ ನಡೆದ ಕ್ಯಾಂಡಿಡೇಟ್ಸ್ ಚೆಸ್ ಪಂದ್ಯಾವಳಿಯಲ್ಲಿ ಗೆದ್ದು ವಿಶ್ವ ಚೆಸ್ ಚಾಂಪಿಯನ್ಶಿಪ್ಗೆ ಆಯ್ಕೆಯಾಗಿದ್ದರು.
ಈ ಮೂಲಕ ವಿಶ್ವ ಚಾಂಪಿಯನ್ಶಿಪ್ನ ಅತೀ ಕಿರಿಯ ಚಾಲೆಂಜರ್ ಆಗಿ ಗುಕೇಶ್ ಇತಿಹಾಸ ನಿರ್ಮಿಸಿದ್ದರು.
ಕ್ಯಾಂಡಿಡೇಟ್ಸ್ ಚೆಸ್ ಬಳಿಕ ಗುಕೇಶ್, ಬುಡಾಪೆಸ್ಟ್ನಲ್ಲಿ ನಡೆದಿದ್ದ ಚೆಸ್ ಒಲಿಂಪಿಯಾಡ್ನಲ್ಲಿ 10ರಲ್ಲಿ 9 ಅಂಕ ಪಡೆದು ಮಿಂಚಿದ್ದರು. ಈ ಕೂಟದಲ್ಲಿ ಭಾರತ, ಪುರುಷರ ಮತ್ತು ಮಹಿಳಾ ವಿಭಾಗಳಲ್ಲಿ ಬಂಗಾರ ಜಯಿಸಿತ್ತು.
ಡಿಂಗ್ ಲಿರೆನ್ 2023ರಲ್ಲಿ ಕಜಕೀಸ್ಥಾನದಲ್ಲಿ ನಡೆದಿದ್ದ ವಿಶ್ವ ಚೆಸ್ ಚಾಂಪಿಯನ್ಶಿಪ್ನಲ್ಲಿ ರಷ್ಯಾದ ಇಯಾನ್ ನೆಪೋಮ್ನಿಯಾಚ್ಚಿ ವಿರುದ್ಧ ಗೆದ್ದಿದ್ದರು. 2007ರಿಂದ 2012ರ ವರೆಗೆ ಭಾರತದ ವಿಶ್ವನಾಥನ್ ಆನಂದ್ ಚಾಂಪಿಯನ್ ಆಗಿದ್ದನ್ನು ನೆನಪಿಸಿಕೊಳ್ಳಬಹುದು.