Advertisement

Yakshagana:ಆಗ ರಂಗದಲ್ಲಿ ಸ್ತ್ರೀಯಾಗುತ್ತಿದ್ದ ಬೆರಳೆಣಿಕೆ ಕಲಾವಿದರಿಗೆ ಸುಗ್ಗಿ..ಈಗ ಹಾಗಲ್ಲ

12:28 PM Jan 06, 2025 | Team Udayavani |

ಒಂದು ಕಾಲಘಟ್ಟವಿತ್ತು. ಸ್ತ್ರೀಪಾತ್ರಗಳಿಗೆ ಕಲಾವಿದರು ರೂಪುಗೊಳ್ಳುವುದು ತೀರಾ ಕಡಿಮೆ. ಹವ್ಯಾಸಿ ರಂಗದಲ್ಲೂ ನಿರ್ಲಕ್ಷಿತ. ಮೇಳಗಳ ಹೊರತಾದ ಆಟಗಳಲ್ಲೆಲ್ಲಾ ಸ್ತ್ರೀ ಪಾತ್ರಧಾರಿಗಳಿಲ್ಲದ ಪ್ರಸಂಗಗಳನ್ನು ಆಯ್ದುಕೊಳ್ಳಲಾಗುತ್ತಿತ್ತು. ಆಗ ರಂಗದಲ್ಲಿ ಸ್ತ್ರೀಯಾಗುತ್ತಿದ್ದ ಬೆರಳೆಣಿಕೆಯ ಕಲಾವಿದರಿಗೆ ಸುಗ್ಗಿ. ಅಭಿವ್ಯಕ್ತಿಗಿಂತಲೂ ರಂಗಕ್ಕೆ ಪಾತ್ರವು ಪ್ರವೇಶಿಸಿದರೆ ಸಾಕು!

Advertisement

ಈಗ ಹಾಗಲ್ಲ. ಸ್ತ್ರೀ ಪಾತ್ರಧಾರಿಗಳ ಸಂಖ್ಯೆ ಹೆಚ್ಚಾಗಿದೆ. ಪಾತ್ರವನ್ನು ಮಾಡಲು ಒಲವಿದೆ, ಮುಜುಗರವಿಲ್ಲ. ಶರೀರ, ಶಾರೀರ, ಒನಪು, ಒಯ್ಯಾರಗಳನ್ನು ರೂಢಿಸಿಕೊಂಡ ಕಲಾವಿದರು ಸಾಕಷ್ಟಿದ್ದಾರೆ. ವಿವಿಧ ಭಂಗಿಗಳ ಚಿತ್ರಗಳು ಫೇಸ್ ಬುಕ್ಕಿನಲ್ಲಿ ಇಣಕುತ್ತವೆ. ಅಬ್ಬಾ.. ಸ್ತ್ರೀಯರನ್ನು ನಾಚಿಸುವ ರೂಪ. ಕಲಾವಿದರ ಶ್ರಮ ಗುರುತರ. ಇದೊಂದು ಉತ್ತಮ ಬೆಳವಣಿಗೆ.

ಹೀಗಿದ್ದೂ ಅಭಿವ್ಯಕ್ಯಿಯಲ್ಲಿ ಪಾತ್ರಗಳು ಯಾಕೆ ಸೋಲುತ್ತವೆ? ಹಲವು ಸಮಯದಿಂದ ಕಾಡುವ ಚೋದ್ಯ. ತೊಡುವ ವೇಷದಲ್ಲಿ ಸೌಂದರ್ಯದ ಕಾಳಜಿಗೆ ಮೊದಲ ಮಣೆ. ಕೆಲವೊಮ್ಮೆ ಪಾತ್ರೋಚಿತವಾದ ವೇಷಭೂಷಣಗಳ ಜಾಗಕ್ಕೆ ನವ್ಯತೆಯ ಮೆರುಗು, ಥಳುಕು. ಸಖಿ ಪಾತ್ರಕ್ಕೂ, ರಾಣಿಗೂ ವ್ಯತ್ಯಾಸವಿಲ್ಲದೆ ತೊಡುವ ವೇಷಭೂಷಣಗಳನ್ನು ಪ್ರೇಕ್ಷಕರು ಸ್ವೀಕರಿಸಬಹುದು. ರಂಗ ಸ್ವೀಕರಿಸದು.

ಉದಾ: ದೇವಿ ಮಹಾತ್ಮೆ ಪ್ರಸಂಗದ ‘ದಿತಿ’. ಕಲಾವಿದನಿಗೆ ಮಾಲಿನಿ ಪಾತ್ರ(ಧಾರಿ)ಕ್ಕಿಂತ ತಾನು ಕಡಿಮೆಯೇನಲ್ಲ ಎನ್ನುವ ಮನಃಸ್ಥಿತಿಯಿಂದ ಶೃಂಗಾರಗೊಂಡು ರಂಗಕ್ಕೆ ಬಂದರೆ? ಋಷಿ ಪತ್ನಿಯರ ಪಾತ್ರಕ್ಕೊಂದು ಸಿದ್ಧ ಮಾದರಿಗಳಿವೆ. ಅವುಗಳು ಹೊಳೆಯುವ ಆಭರಣಗಳನ್ನು ಧರಿಸಿದರೆ? ದ್ವಿಜನ ಹೆಂಡತಿಯ ಪಾತ್ರ ಸಕಲಾಭರಣ ಭೂಷಿತೆಯಾಗಿ ಬಂದರೆ? ಇವೆಲ್ಲಾ ‘ಔಚಿತ್ಯ’ ಬಯಸುವ ಪ್ರಶ್ನೆಗಳು. ಇವಕ್ಕೆ ಸಮರ್ಥನೆಯ ಉತ್ತರಗಳು ಬೇಕಾದಷ್ಟಿವೆ ಬಿಡಿ.

Advertisement

ದೇವಿ ಮಹಾತ್ಮೆಯ ‘ಮಾಲಿನಿ’ಯ ಪ್ರವೇಶದಲ್ಲಿ ಪ್ರಸಂಗದಲ್ಲಿ ಮೂರು ಪದ್ಯಗಳಿವೆ. ಆಕೆ ಯೌವನಭರಿತೆಯಾದರೂ ಸನ್ನಿವೇಶದಲ್ಲಿ ಶೃಂಗಾರ ಭಾವವಿಲ್ಲ. ಹಲವು ಮಾಲಿನಿಯರನ್ನು ನೋಡಿದ್ದೇನೆ. ಅಬ್ಬಾ.. ಶೃಂಗಾರದ ವಿಲಾಸವೆ..! ಮೋಹಿನಿಯೂ ನಾಚುವ ಅಭಿವ್ಯಕ್ತಿ. ಭಾಗವತರಿಗೂ ಹಾಡಲು ಹುಮ್ಮಸ್ಸು. ಪಾತ್ರಧಾರಿಗಳಿಗೂ ಕುಣಿಯಲು ಉತ್ಸಾಹ. ಈ ಮಧ್ಯೆ ಪಾತ್ರದ ಆಶಯ, ಅಭಿವ್ಯಕ್ತಿ ಮಣ್ಣುಪಾಲು! “ಕುಣಿಯದಿದ್ದರೆ ಪ್ರೇಕ್ಷಕರು ಸಹಿಸರು. ಆತನಿಗೆ ಕುಣಿಯಲು ಗೊತ್ತಿಲ್ಲ ಅಂತಾರೆ. ಈಗಿನ ಕಾಲಕ್ಕೆ ಬೇಕಲ್ವಾ” – ಕಲಾವಿದರೊಬ್ಬರ ಅಭಿಪ್ರಾಯ. ಔಚಿತ್ಯವನ್ನು ಮೀರಿದ ರಂಗಕ್ರಮವನ್ನು ಯಾವ ಪ್ರೇಕ್ಷಕನೂ ಬಯಸಲಾರ ಎಂಬುದು ಪಾತ್ರಧಾರಿಗಳಿಗೆ ತಿಳಿದಿರಬೇಕಲ್ವಾ. ಈಗಿನ ಕಾಲ ಅಂದರೆ..?

ದಕ್ಷಾಧ್ವರ ಪ್ರಸಂಗದ ‘ದಾಕ್ಷಾಯಿಣಿ’. ಹಲವು ರಸಗಳ ಅಭಿವ್ಯಕ್ತಿಗೆ ಒದಗುವ ಪಾತ್ರ. ಪ್ರವೇಶದಿಂದ ಅಂತ್ಯದ ತನಕ ವಿವಿಧ ಭಾವಗಳ ಪ್ರಸ್ತುತಿಗಳಿಗೆ ಹೇರಳ ಅವಕಾಶ. ‘ವರಮಹಾ ಕೈಲಾಸ ಶಿಖರದಿ’ ಎನ್ನುವ ಭಾಮಿನಿಗೆ ಪಾತ್ರ ಪ್ರವೇಶ. ಗರತಿ ಪಾತ್ರವಾದ್ದರಿಂದ ಹಿತಮಿತ ನಾಟ್ಯ ಸಾಕು. ಯಾಕೋ ಏನೋ, ಕೆಲವು ದಾಕ್ಷಾಯಣಿ ಪಾತ್ರಗಳು ರಂಗದಲ್ಲಿ ‘ಮಾಯಾ ಶೂರ್ಪನಖಿ’ಯನ್ನು ನಾಚಿಸುತ್ತಿವೆ. ಶಿವನ ಮಡದಿ ಎನ್ನುವ ಪ್ರಜ್ಞೆಯನ್ನು ಮರೆತಿವೆ. ಪಾತ್ರ ಘೋಷಣೆಗೆ ಬೇಕಾದ ಭಾವಗಳ ರಸಘಟ್ಟಿಗಳ ತೇವ ಆರಿದೆ!

ಬಬ್ರುವಾಹನ ಕಾಳಗ ಪ್ರಸಂಗದ ‘ಚಿತ್ರಾಂಗದೆ’. ಇದು ಗರತಿ ಪಾತ್ರ. ತನ್ನೂರಿಗೆ ಅರ್ಜುನ ಬಂದಿದ್ದಾನೆ ಎಂಬ ಸುದ್ದಿ ತಿಳಿದ ಆಕೆ ಸಂತೋಷದಿಂದ ‘ಅಹುದೇ ಎನ್ನಯ ರಮಣ’ ಎನ್ನುವ ಪದ್ಯಕ್ಕೆ ಕುಣಿಯುವ ಪರಿನೋಡಿದರೆ ಸಂತೋಷದ ಪರಾಕಾಷ್ಟೆ! ತಾನು ಆಳೆತ್ತರ ಬೆಳೆದ ಹೊಂತಕಾರಿ ಬಬ್ರುವಾಹನನ ತಾಯಿ ಎನ್ನುವ ಪ್ರಜ್ಞೆಯನ್ನು ಪಾತ್ರಧಾರಿ ಮರೆಯುವುದು ಅಪಕ್ವತೆಯ ಲಕ್ಷಣ. ಪುರಾಣ ಪಾತ್ರಗಳು, ಅವುಗಳ ನಡೆಯನ್ನು ತಮಗೆ ಬೇಕಾದಂತೆ ಹಿಗ್ಗಾಮುಗ್ಗಾ ಜಗ್ಗಲು ಬರುವುದಿಲ್ಲ.

ತನಗೆ ಕುಣಿಯಲು ಬರುತ್ತದೆ ಎಂದು –  ವನವಾಸದ ಸೀತೆ, ರೇಣುಕೆ, ಖ್ಯಾತಿ – ಮೊದಲಾದ ಪಾತ್ರಗಳನ್ನು ಹಿಚುಕುವಾಗ ಕಿಂಚಿತ್ತೂ ನೋವಾಗುವುದಿಲ್ಲವಲ್ಲಾ! ಹಿರಿಯರು ಹಾಕಿದ ದಾರಿಯಲ್ಲಿ ಸಾಗುತ್ತಿದ್ದೇವೆ ಎನ್ನುವ ಕನಿಷ್ಟ ಸೌಜನ್ಯವೂ ಇಲ್ಲವಲ್ಲಾ. ಪಾತ್ರಧಾರಿಯಲ್ಲಿ ಯೌವನವವಿದೆ, ರೂಪವಿದೆ, ಲಾವಣ್ಯವಿದೆ ಎನ್ನುವ ಅರ್ಹತೆಯು ಔಚಿತ್ಯವನ್ನು ಮೀರಿಸಲು ಮಾನದಂಡವಾಗಬಾರದು. ಮದುವೆ ದೃಶ್ಯದಲ್ಲಿ ಪುರೋಹಿತನ ಜತೆ ಬರುವ ಆತನ ಪತ್ನಿಯನ್ನು ‘ಜೋಕರ್‌’ ರೀತಿಯಲ್ಲಿ ಬಿಂಬಿಸಲಾಗುತ್ತದೆ. ದ್ವಂದ್ವಾರ್ಥ ಸಂಭಾಷಣೆಗೆ ಪ್ರೇಕ್ಷಕರು ನಗುವುದು ‘ಅಭಿವ್ಯಕ್ತಿಗೆ ಸಿಕ್ಕ ಮಾನ್ಯತೆ’ ಎಂದು ಕಲಾವಿದ ತಿಳಿದುಕೊಂಡರೆ ಅದು ಆತನ ದೌರ್ಬಲ್ಯ.

‘ಶ್ರೀದೇವಿ’ ಯ ಪಾತ್ರ. ಗಂಭೀರ ಸ್ವ-ಭಾವ. ಹರಿಯ ಸ್ತ್ರೀ ಪಾತ್ರಧಾರಿ ಪಾತಾಳ ವೆಂಕಟ್ರಮಣ ಭಟ್‌ ಹೇಳುತ್ತಾರೆ. “ಕೊರಳಿಗೆ ಹಾಕಿದ ಮಲ್ಲಿಗೆ ಹೂವಿನ ಹಾರದ ಒಂದು ಹೂ ಕೂಡ ರಂಗದಲ್ಲಿ ಉದುರಿ ಬೀಳಬಾರದು. ಆ ಪಾತ್ರ ಗಂಭೀರವಾದಷ್ಟು ಪರಿಣಾಮ ಹೆಚ್ಚು. ಭಯ, ಭಕ್ತಿಯ ಭಾವದಿಂದ ಪ್ರೇಕ್ಷಕರು ಸ್ವೀಕರಿಸುವ ಪಾತ್ರದ ಘನತೆಯನ್ನು ಕಾಪಾಡಬೇಕು.” ಶುಂಭ-ನಿಶುಂಭರಿಂದ ಸೋತ ದೇವೇಂದ್ರನು ದೇವಿಯ ಮೊರೆ ಹೋಗುತ್ತಾನೆ. ದೇವಿ ಅಭಯ ನೀಡಿದ ಬಳಿಕ ‘ಎಂದು ಯೋಚಿಸಿ ಮಹಮ್ಮಾಯೆ’ ಎಂದು ಸ್ವ-ಯೋಚಿಸುವ ಪದ್ಯಗಳಿಗೆ ಹಿತ-ಮಿತವಾದ ನಾಟ್ಯ ಸಾಕು. ಆ ಸನ್ನಿವೇಶ ಶೃಂಗಾರವಲ್ಲ.

ಸತ್ಯಹರಿಶ್ಚಂದ್ರ, ಸತಿ ಸಾವಿತ್ರಿ, ನಳದಮಯಂತಿ ಪ್ರಸಂಗಗಳ ಪಾತ್ರಗಳಿಗೆ ಹಿರಿಯ ಕಲಾವಿದರು ಛಾಪನ್ನು ಒತ್ತಿ ಪ್ರಸಿದ್ಧಿಯಾದವರು. ಅವರೆಲ್ಲರೂ ದಂತಕಥೆಗಳಾಗಿ ಮಾತಿಗೆ ನಿಲುಕುತ್ತಾರೆ. ಆ ಜಾಡಿನಲ್ಲಿ ಸಾಗಿದರೆ ‘ಯಕ್ಷಗಾನ ವೇಷ’ವನ್ನು ರಂಗದಲ್ಲಿ ಕಾಣಬಹುದು. ಪಾತ್ರವು ಬಯಸುವ ‘ವೇಷಭೂಷಣ, ಭಾವ, ಮಾತು, ರಂಗನಡೆ’ ಯನ್ನು ಕಲಾವಿದ ರೂಢಿಸಿಕೊಳ್ಳಬೇಕಾದ್ದು ಅಗತ್ಯ. ಇವೆಲ್ಲವೂ ಅನುಭವದಲ್ಲಿ ಮಿಳಿತಗೊಂಡು ರಂಗಮರ್ಯಾದೆಗೆ ಗೌರವ ತರುತ್ತಿರುವ ಕೆಲವು ಕಲಾವಿದರ ಶ್ರಮ ಗುರುತರ, ಮಾನ್ಯ.

ಭಾವದೆಲೆಯಲ್ಲಿ ಮೀಯಲು ಪಾತ್ರಗಳು ಕಾಯುತ್ತಿವೆ! ತಮ್ಮನ್ನು ಮೀರಿಸುವ ಪಾತ್ರಗಳನ್ನು ನೇಪಥ್ಯದಿಂದ ನೋಡುತ್ತಿರುವ ‘ಮಾಯಾ ಶೂರ್ಪನಖಿ, ಮೋಹಿನಿ, ಮಾಯಾ ಅಜಮುಖಿ, ರಂಭೆ, ಊರ್ವಶಿ’ಯರು ಮರುಗುತ್ತಿದ್ಧಾರೆ!

(ಅಡ್ಡಿಗೆ- ಯಕ್ಷ ಯವನಿಕೆಯ ಸುತ್ತಮುತ್ತ: ನಾ.ಕಾರಂತ ಪೆರಾಜೆ ಯವರ ಪುಸ್ತಕದಿಂದ ಆಯ್ದ ಭಾಗ)

Advertisement

Udayavani is now on Telegram. Click here to join our channel and stay updated with the latest news.

Next