Advertisement

ಬರವಣಿಗೆಯಿಂದ ಮಾತ್ರ ಭಾಷೆ, ಸಂಸ್ಕೃತಿ ಜೀವಂತ

12:49 PM May 29, 2017 | |

ಬೆಂಗಳೂರು: ಭಾಷೆ, ಸಂಸ್ಕೃತಿ ಹಾಗೂ ಆಯಾ ಪ್ರದೇಶಗಳ ಜನಜೀವನದ ಸಾರವನ್ನು ಜೀವಂತವಾಗಿಡಲು ಬರಣಿಗೆಯಿಂದ ಮಾತ್ರ ಸಾಧ್ಯ ಎಂದು ಸಂಸ್ಕೃತ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್‌ ಅಭಿಪ್ರಾಯಪಟ್ಟರು.

Advertisement

ಸ್ನೇಹ ಬುಕ್‌ ಹೌಸ್‌ ಮತ್ತು ಸಮಕಾಲೀನ ಸಾಮಾಜಿಕ ಸಾಂಸ್ಕೃತಿಕ ವೇದಿಕೆ ಭಾನುವಾರ ವಾಡಿಯಾ ಸಭಾಂಗಣದಲ್ಲಿ ಆಯೋಜಿಸಿದ್ದ ಹಿರಿಯ ಬರಹಗಾರ ಎಚ್‌.ಜಿ.ಸೋಮಶೇಖರ ರಾವ್‌ ಅವರ “ಸೋಮಣ್ಣನ ಸ್ಟಾಕ್‌ ನಿಂದ’ ಮತ್ತು “ಮಿಂಚು-ಗುಡುಗು’ ಕೃತಿಗಳ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಒಂದು ದೀಪದಿಂದ ಲಕ್ಷಾಂತರ ದೀಪಗಳನ್ನು ಬೆಳಗಿಸಬಹುದು. ಒಬ್ಬ ಬರಹಗಾರ ತನ್ನ ಅಮೂಲ್ಯ ಕೃತಿಗಳಿಂದ ಮತ್ತೂಬ್ಬ ಬರಹಗಾರರನ್ನು ಹಾಗೂ ಲಕ್ಷಾಂತರ ಓದುಗರನ್ನು ಹುಟ್ಟುಹಾಕಲು ಸಾಧ್ಯ. ಒಳ್ಳೆಯ ಕೃತಿಗಳು ಆರೋಗ್ಯಕರ ಸಮಾಜವನ್ನು ಹಾಗೂ ಜ್ಞಾನದ ಬೆಳಕನ್ನು ನೀಡುತ್ತವೆ ಎಂದರು.

ಹಿರಿಯ ಸಾಹಿತಿ ಎಚ್‌.ಎಸ್‌.ವೆಂಕಟೇಶ್‌ ಮೂರ್ತಿ ಮಾತನಾಡಿ, ಅನುಭವ, ವಯೋಮಿತಿಯ ವ್ಯತ್ಯಾಸ ಕಾರಣದೆ ಸಮಾನ ಮನಸ್ಥಿತಿಯನ್ನು ಹುಟ್ಟುಹಾಕುವುದೇ ಚಲನಶೀಲ ಸಂಸ್ಕೃತಿ ಲಕ್ಷಣ ಎಂಬುದು ಗೋಪಾಲಕೃಷ್ಣ ಅಡಿಗರ ಮಾತು. ಸೋಮಶೇಖರ್‌ ಕೂಡ ಅವರ ಮಾತಿಗೆ ಇಂಬುಕೊಡುವಂತೆ ಬದುಕುತ್ತಿದ್ದಾರೆ. ಮೇಲು-ಕೀಳು, ದೊಡ್ಡವ-ಚಿಕ್ಕವ ಎನ್ನುವ ವ್ಯತ್ಯಾಸ ಅವರಲ್ಲಿಲ್ಲ. ಎಲ್ಲರನ್ನೂ ಸಮಾನರಾಗಿ ಕಾಣುವಂತಹ ವ್ಯಕ್ತಿತ್ವ ಅವರಲ್ಲಿದೆ ಎಂದರು.

ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರು ಮಾತನಾಡಿ, ಎಚ್‌.ಜಿ.ಸೋಮಶೇಖರ್‌ರವರು ಬರಹಗಾರರಿಗಿಂತ ಅತ್ಯುತ್ತಮ ನಟರಾಗಿ ನಾಡಿನ ರಂಗಭೂಮಿಯನ್ನು ಬೆಳಗಿಸಿದ್ದಾರೆ. ಅವರು ಅಭಿನಯಿಸಿದ್ದ “ಜೋಕುಮಾರ‌ಸ್ವಾಮಿ’ ಹಾಗೂ “ಸಂಗ್ಯಾ ಬಾಳ್ಯ’ ನಾಟಕವು ಅತ್ಯಂತ ಹೆಚ್ಚು ಜನಪ್ರಿಯತೆ ತಂದು ಕೊಟ್ಟಿತ್ತು ಎಂದು ಹೇಳಿದರು. ಲೇಖಕ ಎಚ್‌.ಜಿ.ಸೋಮಶೇಖರ್‌, ಜಾನಪದ ಗಾಯಕ ಶಿವಮೊಗ್ಗ ಸುಬ್ಬಣ್ಣ , ಸ್ನೇಹ ಬುಕ್‌ಹೌಸ್‌ನ ಪರಮಶಿವಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next