Advertisement

ಕಲಾವಿದರ ಮಾಸಾಶ‌ನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ

12:12 AM Jan 07, 2025 | Team Udayavani |

ಉಡುಪಿ: ರಾಜ್ಯ ಬೊಕ್ಕಸಕ್ಕೆ “ಆರ್ಥಿಕ ಹೊರೆ’ ಎಂಬ ಟಿಪ್ಪಣಿ ರಾಜ್ಯದ ಹಿರಿಯ ಕಲಾವಿದರನ್ನೂ ಸಂಕಷ್ಟಕ್ಕೆ ಸಿಲುಕಿಸಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಸಾಶನ ಹೆಚ್ಚಳ ಮರು ಪ್ರಸ್ತಾವ ನಾಲ್ಕು ತಿಂಗಳುಗಳಿಂದ ಆರ್ಥಿಕ ಇಲಾಖೆಯಲ್ಲಿ ಧೂಳು ಹಿಡಿದಿದೆ.

Advertisement

ರಾಜ್ಯದಲ್ಲಿ ಪ್ರಸ್ತುತ 13,108 ಕಲಾವಿದರು ಮಾಶಾಸನ ಪಡೆಯುತ್ತಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಸಂಗೀತ, ನೃತ್ಯ, ನಾಟಕ, ಜಾನಪದ, ಯಕ್ಷಗಾನ, ಬಯಲಾಟ, ಲಲಿತಕಲೆ ಸಹಿತ ವಿವಿಧ ಕಲಾ ಪ್ರಕಾರಗಳ ಹಿರಿಯ ಕಲಾವಿದರಿಗೆ 2 ಸಾವಿರ ರೂ. ನೀಡಲಾಗುತ್ತಿದ್ದು, ಹೆಚ್ಚಳವಾದರೆ 3 ಸಾವಿರ ರೂ. ದೊರೆಯಲಿದೆ. ಇವರೆಲ್ಲ ಇಳಿವಯಸ್ಸಿನವರಾಗಿದ್ದು, ಆರೋಗ್ಯ ಸಹಿತ ನಾನಾ ಸಮಸ್ಯೆಗಳಿಂದ ಬಳಲುತ್ತಿದ್ದು, ಮಾಸಾಶನ ಹೆಚ್ಚಳದಿಂದ ಅನುಕೂಲವಾಗಲಿದೆ.

ಈ ಜನವರಿಯೊಳಗೆ ಆದೇಶ ಹೊರಬಿದ್ದು ಹೆಚ್ಚಳ ಜಾರಿಯಾದೀತೆಂಬ ನಿರೀಕ್ಷೆಯಿತ್ತು. ಆದರೆ ಸಂಸ್ಕೃತಿ ಇಲಾಖೆಯ ಅಕ್ಟೋಬರ್‌ನಲ್ಲಿ ಕಳುಹಿಸಿದ್ದ ಮರು ಪ್ರಸ್ತಾವಕ್ಕೂ ಯಾವುದೇ ರೀತಿಯಲ್ಲೂ ಪ್ರತಿಕ್ರಿಯಿಸಿಲ್ಲ. ಈ ಮೊದಲು ಕಲಾವಿದರ ಬೇಡಿಕೆಗೆ ಮಣಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ 2024 ರ

ಆಗಸ್ಟ್‌ನಲ್ಲಿ ಹಲವು
ಸುತ್ತಿನ ಸಭೆ ನಡೆಸಿ, ಮಾಸಾಶನ ಹೆಚ್ಚಳಕ್ಕೆ ಮುಂದಿನ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಇಲಾಖೆಯು ಪ್ರಸ್ತಾವವನ್ನು ಆರ್ಥಿಕ ಇಲಾಖೆಗೆ ಸಲ್ಲಿಸಿತ್ತು. ಆದರೆ ಮಾಸಾಶನ ಹೆಚ್ಚಳ ಆರ್ಥಿಕ ಭಾರ ಎಂದು ಕಾರಣ ನೀಡಿ, ಪ್ರಸ್ತಾವವನ್ನು ಆರ್ಥಿಕ ಇಲಾಖೆ ತಿರಸ್ಕರಿಸಿತ್ತು.

ಹಳೆಯ ಬೇಡಿಕೆ
2020ರಲ್ಲಿ ಕೋವಿಡ್‌ ಆವರಿಸಿದ್ದಾಗ ಸಾಂಸ್ಕೃತಿಕ ಚಟುವಟಿಕೆಗಳು ಸಂಪೂರ್ಣ ಸ್ತಬ್ಧವಾಗಿದ್ದವು. ಸುಮಾರು ಎರಡೂವರೆ ವರ್ಷ ಅವಕಾಶಗಳಿಲ್ಲದೆ ಕಲಾವಿದರು ಸಂಕಷ್ಟಕ್ಕೆ ಸಿಲುಕಿ, ಅನ್ಯ ವೃತ್ತಿಯನ್ನು ಅವಲಂಬಿಸಿದ್ದರು. ಆ ವೇಳೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕಲಾವಿದರಿಗೆ ಸರಕಾರ ಘೋಷಿಸಿದ್ದ 3 ಸಾವಿರ ರೂ. ನೆರವಿಗೆ 26 ಸಾವಿರಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಸಿದ್ದರು. ಇದೇ ವೇಳೆ ಹಿರಿಯ ಕಲಾವಿದರ ಮಾಸಾಶನ ಹೆಚ್ಚಳಕ್ಕೂ ಆಗ್ರಹ ಕೇಳಿಬಂದಿತ್ತು. ಆಗ ಬಿಜೆಪಿ ಸರಕಾರ ಮಾಸಾಶನ ಹೆಚ್ಚಳದ ಭರವಸೆ ನೀಡಿದ್ದರೂ ಜಾರಿಗೊಳಿಸಿರಲಿಲ್ಲ.

Advertisement

ನಿಯಮ ಸರಳಗೊಳಿಸಲು ಆಗ್ರಹ
ಹಿರಿಯ ಕಲಾವಿದರು ಜಿಲ್ಲೆಯಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮಾಶಾಸನಕ್ಕೆ ಅರ್ಜಿ ಸಲ್ಲಿಸಬೇಕು. ಅದು ಆಯಾ ಅಕಾಡೆಮಿಗಳಿಗೆ ಹೋಗಿ, ಸಂದರ್ಶನ ನಡೆದು, ಮತ್ತೆ ಪ್ರಧಾನ ಕಚೇರಿಗೆ ವಾಪಸು ಬಂದು ಸರಕಾರಕ್ಕೆ ಸಲ್ಲಿಕೆಯಾಗಲಿದೆ. ಬಳಿಕ ಎಫ್ಡಿಯಿಂದ ಮಂಜೂರಾಗಬೇಕು. ಈ ಇಡೀ ಪ್ರಕ್ರಿಯೆಗೆ 4 ವರ್ಷ ಹಿಡಿಯುವ ಸಾಧ್ಯತೆಯೂ ಇದೆ. ಇದರಿಂದ ಹಿರಿಯ ಕಲಾವಿದರಿಗೆ ಕಷ್ಟವಾಗುತ್ತಿದ್ದು, ನಿಯಮಗಳನ್ನು ಸರಳಗೊಳಿಸುವಂತೆ ಆಗ್ರಹಿಸಿದ್ದಾರೆ.

ಮರು ಪ್ರಸ್ತಾವ ಸಲ್ಲಿಕೆ
ಕಲಾವಿದರ ಮಾಸಾಶನ ಹೆಚ್ಚಳಕ್ಕೆ ಈ ಹಿಂದೆಯೇ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದು ನಿರಾಕರಿಸಲ್ಪಟ್ಟಿದೆ. ಮತ್ತೆ ಹೆಚ್ಚುವರಿ ಅಗತ್ಯದ ಮಾಹಿತಿ ಉಲ್ಲೇಖೀಸಿ, ಕಡತವನ್ನು ಹಣಕಾಸು ಇಲಾಖೆಗೆ ಅಕ್ಟೋಬರ್‌ನಲ್ಲಿ ಸಲ್ಲಿಸಿದ್ದು, ಒಪ್ಪಿಗೆಗಾಗಿ ಕಾಯುತ್ತಿದ್ದೇವೆ.
-ಡಾ| ಕೆ. ಧರಣಿದೇವಿ, ನಿರ್ದೇಶಕಿ ಕನ್ನಡ ಮತ್ತು
ಸಂಸ್ಕೃತಿ ಇಲಾಖೆ ಬೆಂಗಳೂರು

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next