Advertisement

ನಿಗದಿತ ಸಮಯದಲ್ಲಿ ಜನರ ಕೆಲಸ ಮಾಡಿಕೊಡಿ

05:06 PM Jul 20, 2018 | Team Udayavani |

ಬಾದಾಮಿ: ಸಾರ್ವಜನಿಕರು ಯಾವುದೇ ಕೆಲಸಗಳಿಗೆ ಕಚೇರಿಗೆ ಬಂದರೆ ನಿಗದಿತ ಕಾಲಮಿತಿಯೊಳಗೆ ಕೆಲಸ ಮಾಡಿಕೊಡಬೇಕು ಎಂದು ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು. ಗುರುವಾರ ಲೋಕೋಪಯೋಗಿ ಇಲಾಖೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಕೆಲಸಕ್ಕಾಗಿ ಲಂಚ ತೆಗೆದುಕೊಳ್ಳುವುದು, ಕೊಡುವುದು ಅಪರಾಧ. ಲಂಚ ಕೊಡುವುದರಿಂದ ಲಂಚಾವತಾರ ಹೆಚ್ಚಾಗುತ್ತದೆ. ಮೊದಲು ಲಂಚ ಕೊಡುವವರು ಬದಲಾಗಬೇಕು. ಅಧಿಕಾರಿಗಳು ಜನರು ಲಂಚ ತೆಗೆದುಕೊಳ್ಳುವುದು ಕೊಡುವುದು ಬಿಡಬೇಕು. ಅಂದಾಗ ಮಾತ್ರ ಲಂಚ ನಿಲ್ಲುತ್ತದೆ. ಇದರಿಂದ ಲಂಚ ಸಂಪೂರ್ಣ ನಿಲ್ಲುತ್ತದೆ ಎಂದು ನಾನು ಹೇಳುವುದಿಲ್ಲ. ಅಧಿಕಾರಿಗಳು ವರ್ಗಾವಣೆ ಆಗಿ ಇಲ್ಲಿಗೆ ಬರುವವರು ಯಾರಿಗೂ ಲಂಚ ಕೊಡಬೇಕಾಗಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿರಿ. ಮುಖಂಡರು ಸಹಿತ ಲಂಚಕ್ಕೆ ಸಹಕಾರ ಮಾಡಬಾರದು. ಜನರು ಆಡಳಿತದ ಬಳಿಗೆ ಬರಬಾರದು. ಆಡಳಿತ ಜನರ ಬಳಿಗೆ ಹೋಗಬೇಕು. ಲಂಚ ಪಡೆಯದೇ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

Advertisement

ಪ್ರತಿ ಹೋಬಳಿ ಮಟ್ಟದಲ್ಲಿ ಪ್ರತಿ ತಿಂಗಳು ಜನಸಂಪರ್ಕ ಸಭೆ ಆಯೋಜಿಸಬೇಕು. ನಾನು ಪ್ರತಿ ಮೂರು ತಿಂಗಳಿಗೊಮ್ಮೆ ಸಂಪರ್ಕ ಸಭೆ ಮಾಡುತ್ತೇನೆ. ಜನರು ಕೆಲಸ ಆಗದಿದ್ದರೆ ಪದೇ ಪದೇ ಕಳೆದ ತಿಂಗಳ ಸಮಸ್ಯೆ ನನ್ನ ಗಮನಕ್ಕೆ ತಂದರೆ ಸಂಬಂಧಿಸಿದ ಅಧಿಕಾರಿ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು. ಅರಣ್ಯ ಇಲಾಖೆಯವರು ಬಡವರಿಗೆ ಯಾವುದೇ ಕಾರಣಕ್ಕೂ ತೊಂದರೆ ಕೊಡಬಾರದು ಎಂದು ಹೇಳಿದರು.

ಬಾದಾಮಿ ಇನ್ನೂ ನಿಗದಿತ ಪ್ರಮಾಣದಲ್ಲಿ ಅಭಿವೃದ್ಧಿ ಆಗಿಲ್ಲ. ಆಲಮಟ್ಟಿ ಡ್ಯಾಂನಿಂದ ಬಾದಾಮಿಗೆ 24ಗಿ7 ಕುಡಿಯುವ ನೀರಿಗೆ ರೂ.125 ಕೋಟಿ ವೆಚ್ಚದಲ್ಲಿ ಮಾಡಲಾಗುತ್ತದೆ. ಕೆರೆಗಳಿಗೆ ನೀರು ತುಂಬಿಸುವುದು, ಚಾಲುಕ್ಯ ಅಭಿವೃದ್ಧಿ ಪ್ರಾಧಿಕಾರಕ್ಕೆ ಅನುದಾನ ನೀಡಿಕೆ, ಪ್ರವಾಸೋದ್ಯಮ ಅಭಿವೃದ್ಧಿ, ಎಸ್‌.ಸಿ, ಎಸ್‌.ಟಿ ಮತ್ತು ಸಾಮಾನ್ಯ ಜನರು ವಾಸಿಸುವ ಕಾಲೋನಿಯಲ್ಲಿ ಸಿಸಿ ರಸ್ತೆ, ಒಳಚರಂಡಿ ನಿರ್ಮಾಣಕ್ಕೆ ವಿಶೇಷ ಅನುದಾನ ಮಂಜೂರು ಮಾಡಲಾಗುವುದು. ಮುಂದಿನ ತಿಂಗಳು ಬಾದಾಮಿಯಲ್ಲಿ ಪ್ರವಾಸೋದ್ಯಮ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಗುವುದು ಎಂದು ಹೇಳಿದರು.

ಐತಿಹಾಸಿಕ ತಾಣವಾಗಿರುವ ಬಾದಾಮಿಯಲ್ಲಿ ಪುರಾತತ್ವ ಇಲಾಖೆಯ ಕಿರಿಕಿರಿ ಇದೆ. ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ನಂತರ ತಾಲೂಕಿನ ವಿವಿದ ಭಾಗಗಳಿಂದ ಬಂದಂತಹ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು. ವಿಪಸದಸ್ಯ ಎಸ್‌.ಆರ್‌.ಪಾಟೀಲ, ಮಾಜಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ, ಎಸ್‌.ಜಿ.ನಂಜಯ್ಯನಮಠ, ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಂ, ಜಿಪಂ ಸಿಇಒ ವಿಕಾಸ ಸುರಳ್ಕರ, ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ, ತಹಶೀಲ್ದಾರ್‌ ಎಸ್‌.ಎಸ್‌.ಇಂಗಳೆ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಎಸ್‌ಸಿ-ಎಸ್‌ಟಿ ಬಡ್ತಿ ಮೀಸಲಾತಿ ಕಾಯ್ದೆ ಜಾರಿಗೊಳಿಸಲು ಮನವಿ
ಬಾಗಲಕೋಟೆ: ರಾಷ್ಟ್ರಪತಿಗಳಿಂದ ಅಂಕಿತ ಆಗಿರುವ ಬಡ್ತಿ ಮೀಸಲಾತಿ ಕಾಯ್ದೆ 2017ವನ್ನು ಶೀಘ್ರ ಅನುಷ್ಠಾನಗೊಳಿಸುವಂತೆ ಜಿಲ್ಲೆಯ ಎಸ್‌.ಸಿ, ಎಸ್‌.ಟಿ ನೌಕರರು ಒತ್ತಾಯಿಸಿದ್ದಾರೆ. ಗುರುವಾರ ಬಾದಾಮಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ, ಅವರು ಬೇಡಿಕೆಗೆ ಸರ್ಕಾರದ ಮೇಲೆ ಒತ್ತಡ ತರಲು ಮನವಿ ಮಾಡಿದರು. ರಾಜ್ಯದಲ್ಲಿರುವ ಎಸ್ಸಿ ಮತ್ತು ಎಸ್ಟಿ ನೌಕರರ ಮೀಸಲಾತಿ ಅಡಿಯಲ್ಲಿ ಬಡ್ತಿ ಹೊಂದಿದ್ದನ್ನು ರದ್ದುಪಡಿಸಿ ಅವರಿಗೆ ಹಿಂಬಡ್ತಿ ನೀಡಲಾಗಿದೆ. ಇದರಿಂದ ದಲಿತ ನೌಕರರಿಗೆ ಅನ್ಯಾಯವಾಗಿದೆ. ತೀರ್ಪಿಯಿಂದ ತೊಂದರಗಿಡಾಗಿರುವ ನೌಕರರ ಪರವಾಗಿ ಎಸ್ಸಿ ಮತ್ತು ಎಸ್ಟಿ ನೌಕರರ ಬಡ್ತಿ ಮೀಸಲಾತಿ ಸಂರಕ್ಷಣಾ ಮಸೂದೆ 2017 ವನ್ನು ರಾಜ್ಯದ ಎಲ್ಲ ಜನಾಂಗದ ವಿರೋಧವನ್ನು ಲೆಕ್ಕಸದೆ ರಾಷ್ಟ್ರಪತಿ ಅವರ ಅಂಕಿತಕ್ಕೆ ಕಳುಹಿಸಿದ್ದು ತಮ್ಮ  ಧೀಮಂತಕ್ಕೆ ಸಾಕ್ಷಿಯಾಗಿದೆ ಎಂದು ಮನವಿಯಲ್ಲಿ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next