Advertisement
ಯಕ್ಷಗಾನವನ್ನು ಸಮೃದ್ಧಿಯಿಂದ ಬೆಳೆಸಿ, ಬೆಳಗಿಸಿ ಮುಂದಿನ ತಲೆಮಾರಿಗೆ ಕೊಂಡೊಯ್ಯಲು ಇದು ಪೂರಕ. ಇಂತಹ ಕಾರ್ಯಶೀಲತೆಯಲ್ಲಿ ಯಕ್ಷಗಾನಪ್ರಿಯರು, ಬೋಧಕರು, ಸಾಧಕರು ದುಡಿಯಬೇಕು. ಹಿಂದೆ ಯಕ್ಷಗಾನದಲ್ಲಿ ಬದುಕು ಕಟ್ಟಿಕೊಳ್ಳುವುದಕ್ಕೆ ಅಸಾಧ್ಯ ಎಂಬ ಸ್ಥಿತಿ ಇತ್ತು. ಆದರೆ ಈಗ ಕಾಲ ಬದಲಾಗಿದೆ. ಮಳೆಗಾಲದಲ್ಲಿ ಯಕ್ಷಗಾನ ಸಂಘಟಕರು ಹೆಚ್ಚಿನ ಕಲಾವಿದರಿಗೆ ಅವಕಾಶ ಕಲ್ಪಿಸಿಕೊಟ್ಟರೆ ಯಕ್ಷಗಾನ ಕಲಾವಿದರ ಬದುಕು ಬೆಳಗುತ್ತದೆ.
Related Articles
Advertisement
ಹೀಗೆ ಸುದೀರ್ಘ ಪರಂಪರೆಯಲ್ಲಿ ಬಂದಿರು ವುದರಿಂದ ಖಚಿತವಾದ ಶಾಸ್ತ್ರೀಯತೆ, ಸಂಪ್ರದಾಯಗಳು ಯಾವ ಕಾಲಘಟ್ಟದ್ದನ್ನು ಪಾಲಿಸಬೇಕು ಎನ್ನುವಂಥ ವಿಚಾರ ಗಳು ಇವೆ. ಹಿಂದಿನ ಕಾಲಗಳಲ್ಲಿ ಅನಾನುಕೂಲತೆಗಳಿತ್ತು. ಕಲಾವಿದರು ಬೆಳವಣಿಗೆ ಹೊಂದಲು ಅನೇಕ ವರ್ಷಗಳ ಅಗತ್ಯವಿತ್ತು. ಈ ಸಂಕಷ್ಟ ಪಯಣದಲ್ಲಿ ಅಳಿದು ಉಳಿದವ ರಲ್ಲಿ ಕೆಲವರು ಮಾತ್ರ ಪ್ರಸಿದ್ಧಿಯಲ್ಲಿ ಇರುತ್ತಿದ್ದರು. ಇಂದಿನ ಕಾಲಮಾನದಲ್ಲಿ ಅಂಗೈಯಲ್ಲಿ ಎಲ್ಲವೂ ದೊರೆಯುವುದರಿಂದ ಕಲಾವಿದರು ವೇಗವಾಗಿ ಬೆಳೆಯುತ್ತಿದ್ದಾರೆ. ವ್ಯವಹಾರಿಕ ಪ್ರಜ್ಞೆ, ವಿದ್ಯೆ ಇಂದು ಕಲಾವಿದರನ್ನು ಬೆಳೆಸುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ.
ಕೆಲವು ದಶಕಗಳ ಹಿಂದಿನ ಪರಿಸ್ಥಿತಿಯಲ್ಲಿ ರಾತ್ರಿ ನೆತ್ತಿಗೆ ಮುತ್ತಿನ ಕಿರೀಟ. ಹಗಲು ತೊತ್ತಿನ ಚೀಲಕ್ಕೆ ಪರದಾಟ ಎಂಬ ಮಾತು ಚಾಲ್ತಿಯಲ್ಲಿತ್ತು. ಆ ಕಾಲದಲ್ಲಿ ವ್ಯವಹಾರಿಕ ಪ್ರಜ್ಞೆ ಇಲ್ಲದೆ ಮುಂದುವರಿದು ಕಲಾವಿದರು ಬಡತನದಲ್ಲಿ ನಲುಗುತ್ತಿದ್ದರು. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕಲೆ ವ್ಯಾಪಾರೀ ಕರಣವಾಗಬಾರದು ಎಂದು ಹೇಳುತ್ತ ಕಲಾವಿದರ ಬಡತನ ಗಳಿಗೆ ಕಾರಣರಾಗುತ್ತಿದ್ದರು. ಆ ಕಾಲದ ಪ್ರಸಂಗಕರ್ತರು ಯಕ್ಷಗಾನದ ಪೂರ್ಣಜ್ಞಾನಿ ಗಳಾಗಿದ್ದರು. ಸರ್ವಾಂಗ ಬಲ್ಲವರಾಗಿದ್ದರು ಪರಿಪೂರ್ಣವಾದ ನಿರ್ದೇಶನವನ್ನು ನೀಡುತ್ತಿದ್ದರು.
ಕಲಾವಿದರಿಗೆ ಯಾವುದೇ ರೀತಿಯ ಭಯ ಒತ್ತಡಗಳಿರಲಿಲ್ಲ. ಈ ಕಾಲದ ಕೆಲವು ಪ್ರಸಂಗಕರ್ತರಲ್ಲಿ ಯಕ್ಷ ಗಾನ ಜ್ಞಾನದ ಕೊರತೆ ಇದೆ. ಅವರು ಕೊಟ್ಟಿರುವ ಪ್ರಸಂಗದಲ್ಲಿ ವೇಷ ಮಾಡುವಾಗ ವಿವಾದದ ಭಯ, ಒತ್ತಡಗಳು ಕಲಾವಿದರಿಗೆ ಬರುತ್ತದೆ. ಯಕ್ಷಗಾನ ಪ್ರಜ್ಞೆ ಇಲ್ಲದ ಕಥೆಗಳು ಪದ್ಯ ಯಾರಧ್ದೋ, ಕಥೆ ಯಾರದ್ದೋ … ಹೀಗೆ ತಾತ್ವಿಕ ನೆಲಗಟ್ಟಿಲ್ಲದ ಸಮಸ್ಯೆಗಳು ಇಂದು ಇವೆ. ಪ್ರಸಂಗಕರ್ತರ ಸಂಖ್ಯೆ ಹೆಚ್ಚಿರುವುದರಿಂದ ಪ್ರಸಂಗಕರ್ತರೇ ತಮ್ಮ ಪ್ರಸಂಗ ವನ್ನು ತಾವೇ ಆಟ ಮಾಡಿಸಿ ಕಲಾವಿದರಿಂದ ವೇಷ ಮಾಡಿಸುವ ಸಂದರ್ಭಗಳು ಬರುತ್ತಿದೆ.
ಹೀಗೆ ದಿನಕ್ಕೊಂದು ಹೊಸ ಪ್ರಸಂಗ ಆಡುವುದರಿಂದ ಕಲಾವಿದನೊಳಗಿದ್ದ ಕಲೆ ಹೊರ ಹೊಮ್ಮುವುದಿಲ್ಲ. ದಿನಕ್ಕೊಂದು ಪಾತ್ರ ಕಲಾವಿದನಿಗೆ ಕೊಟ್ಟರೆ ಆ ಪಾತ್ರಕ್ಕೆ ಆತನು ಅಪರಿಚಿತ ಪಾತ್ರ ಚಿತ್ರಣ ಮಾಡಲು ಮತ್ತು ಆ ಪಾತ್ರದ ಒಳಗೆ ಸೇರಲು ಅಸಾಧ್ಯವಾಗಿ ಬಿಡುತ್ತದೆ. ಕಲಾವಿದನು ಸೊರಗುತ್ತಾನೆ, ಪಾತ್ರಗಳು ಸೊರಗುತ್ತವೆ. ಯಕ್ಷಗಾನವು ಸೊರಗುತ್ತದೆ. ಆದರೆ ಇಂದಿನ ಎರಡು ತಿಟ್ಟುಗಳಲ್ಲಿ ಪ್ರಸಂಗದ ವಿಚಾರವಾಗಿ ಭಿನ್ನ-ಭಿನ್ನವಾದ ಸಮಸ್ಯೆಗಳಿವೆ. ಇಂದು ಎರಡು ತಿಟ್ಟುಗಳಲ್ಲಿಯೂ ಪ್ರಸಂಗಗಳು ಕಲಾವಿದರಿಗೆ ಪ್ರೇರಕವಾಗಿದೆಯೇ ಎಂದು ಪ್ರಶ್ನಿಸಿದರೆ ಉತ್ತರಿಸಲು ಕೆಲವೊಂದು ಅಡೆತಡೆಗಳು ಅಲ್ಲಲ್ಲಿ ಕಾಣಿಸುತ್ತವೆ.
ಕಲಾವಿದರ ಬೆಳವಣಿಗೆಗೆ ಕೆಲವೊಂದು ವಿಚಾರಗಳು ಬಾಧಕವಾಗಿಯೂ ಇದೆ. ತೆಂಕುತಿಟ್ಟಿನಲ್ಲಿ ಹಲವು ವರ್ಷಗಳಿಂದ ದೇವಿ ಮಹಾತ್ಮೆ ಮತ್ತು ಒಂದೇ ಕ್ಷೇತ್ರ ಮಹಾತ್ಮೆಯನ್ನು ಅತೀ ಹೆಚ್ಚು ಆಡುವ ಮೇಳಗಳು ಇವೆ. ಇದರಿಂದ ಕಲಾವಿದನಿಗೆ ನಾಟಕಗಳ ಡೈಲಾಗ್‌ಗಳಂತೆ ಪ್ರತೀ ದಿನ ಆಟದಲ್ಲೂ ಹೇಳಿದ್ದನ್ನೆ ಹೇಳಬೇಕು. ಇದರಿಂದ ಕಲಾವಿದನ ಬಹುಮುಖ ಪ್ರತಿಭೆ ನಷ್ಟವಾಗುತ್ತದೆ. ಬೆಳವಣಿಗೆ ಇಲ್ಲದೆ ಕುಂಠಿತಗೊಳ್ಳುತ್ತಾನೆ. ಇದರಿಂದ ಮೂಲ ವೈಭವ ಕಳೆದುಕೊಳ್ಳುವ ಸಾಧ್ಯತೆಗಳು ಇದೆ. ಬಡಗಿನಲ್ಲಿ ಹೊಸ ಹೊಸ ಕ್ಷೇತ್ರ ಮಹಾತ್ಮೆಗಳಿಂದ ಹಿಮ್ಮೇಳ, ಮುಮ್ಮೇಳ ವಿದ್ವತ್ಪೂರ್ಣವಾದಂತಹ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದೆ.
ನಲಿಕೆ ಕಲೆಯಾಗಿ ಮಾರ್ಪಾಡಾಗುತ್ತಿದೆ. ಇನ್ನು ಕಾಲಮಾನ ಪರಿಸ್ಥಿತಿ ಅರಿತು ಮುಸ್ಲಿಂ ಪಾತ್ರಗಳನ್ನು ಕೈಬಿಟ್ಟು ಬದಲಿ ಪಾತ್ರಗಳನ್ನು ನೀಡಬೇಕಾದ್ದು ಮತ್ತು ಜಾತಿ ಹೆಸರಿನ ಪಾತ್ರಗಳನ್ನು ಪರಿವರ್ತಿಸಬೇಕಾದ್ದು ಮತ್ತು ನಮ್ಮ ಧರ್ಮ, ದೇವರಾದ ಈಶ್ವರ, ವಿಷ್ಣು, ದೇವಿ, ಭೂತ ಪ್ರೇತದೊಂದಿಗೆ ಹಾಡಿಗುಡ್ಡೆಯಲ್ಲಿ ಬರುವುದು ಇದನ್ನೆಲ್ಲ ಮೇಳದ ಯಜಮಾನರುಗಳು ಕೈ ಬಿಡುವ ತೀರ್ಮಾನ ಮಾಡಬೇಕಾಗಿದೆ. ಇಂದು ಮೇಳಗಳ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಅನಗತ್ಯ ಸ್ಪರ್ಧೆ, ಪೈಪೋಟಿ. ಹಾಗಾಗಿ ಇದರ ಪರಿಣಾಮಗಳೇನು ಎಂಬ ಪ್ರಶ್ನೆಗಳು ಈಗ ಮೂಡಿವೆ.
ಕುಂದನಾಡಿನಂತಹ ಕಲಾಸಂಸ್ಕೃತಿಯ ಬೀಡು ಮತ್ತೂಂದು ಇರುವುದಕ್ಕೆ ಸಾಧ್ಯವಿಲ್ಲ. ಅಷ್ಟೊಂದು ಸಾಂಸ್ಕೃತಿಕ ರಂಗಸ್ಥಳ ಪ್ರದರ್ಶನಗಳು ಇಲ್ಲಿ ನಡೆಯುತ್ತಿವೆ. ಜಿಲ್ಲೆಯ ಹೊರ ಜಿಲ್ಲೆ ಗಳ ಕಲಾವಿದರು ಇಲ್ಲಿ ಕಲೆಯಿಂದ ಜೀವನವನ್ನ ಕಟ್ಟಿಕೊಂಡಿದ್ದಾರೆ. ಅನಗತ್ಯ ಪೈಪೋಟಿ ಮೇರೆ ಮೀರಿದರೆ, ಇನ್ನು ಇಲ್ಲಿ ಮೇಳಗಳ ಸಂಖ್ಯೆ ಜಾಸ್ತಿಯಾದರೆ ಕಲಾವಿದರ ಜೀವನ ಅಭದ್ರಗೊಳ್ಳುತ್ತದೆ. ಆದ್ದರಿಂದ ಇಲ್ಲಿನ ಒತ್ತಡ ಕಡಿಮೆಯಾಗಲು ಹೊರ ಜಿಲ್ಲೆಗಳಲ್ಲಿ ಯಕ್ಷಗಾನದ ಮೇಳಗಳನ್ನು ಕಟ್ಟಬೇಕು ಮತ್ತು ಪ್ರದರ್ಶನಗಳನ್ನು ಹೆಚ್ಚಿಸಬೇಕಾದ ಅಗತ್ಯವಿದೆ.
3 ಜನ ಹಿಮ್ಮೇಳ, 7 ಜನ ಮುಮ್ಮೇಳ ಒಟ್ಟು ಹತ್ತು ಜನರ ನ್ಯಾನೋ ಮೇಳ ಹಲವಾರು ಬರುವ ಪರಿಸ್ಥಿತಿ ಮುಂದೆ ಕಾಡಬಹುದು. ಇದರಿಂದ ವೈಭವದ ಯಕ್ಷಗಾನ ಮರೆಯಾಗುತ್ತದೆ. 20-30 ಕಲಾವಿದರಿರುವ ಸಂಪ್ರದಾಯ ಮೇಳಗಳಿಗೆ ಸಂಚಾರ ಮಾಡಲು ಸಂಕಷ್ಟ ಒದಗಿ ಬರಬಹುದು. ಸಾಧ್ಯವಾದಷ್ಟು ಯಕ್ಷಗಾನ ಅಭಿಮಾನಿಗಳು ದೊಡ್ಡ ದೊಡ್ಡ ಮೇಳಗಳನ್ನು ಉಳಿಸಿಕೊಳ್ಳುವುದೇ ಕಲೆಯ ಯಶಸ್ವಿಗೆ ಒಳ್ಳೆಯದು.
ಮಳೆಗಾಲದಲ್ಲಿ ಆಟಗಳಿಗೆ ಕೇವಲ ಬೆರಳೆಣಿಕೆಯ ಪ್ರಸಿದ್ಧ ಕಲಾವಿದರನ್ನು ಮಾತ್ರ ಆಯ್ಕೆ ಮಾಡಿಕೊಳ್ಳ ಲಾಗುತ್ತಿದೆ. ಯಕ್ಷಗಾನದ ಸಮಗ್ರ ಸಮೃದ್ಧಿಗಾಗಿ ಸಂಘಟಕರು ನೂರಾರು ಮಂದಿ ಪ್ರತಿಭಾವಂತ ಕಲಾ ವಿದರನ್ನು ಹುಡುಕಿ ಮಳೆಗಾಲದಲ್ಲಿ ಎಲ್ಲರಿಗೂ ಅವ ಕಾಶ ನೀಡುವಂತಹ ನೀತಿಯನ್ನು ಪಾಲಿಸಬೇಕು. ಮತ್ತೆ ಇಂದಿರುವ ಕಾಲಗತಿ, ಕಾಲಮಿತಿ ಮತ್ತು ಇಡೀ ರಾತ್ರಿ ಆಟ ಕಲಾಭಿಮಾನಿಗಳ ಇಚ್ಛೆಯಂತೆ ಮುನ್ನಡೆಯಬೇಕಾಗುತ್ತದೆ.
– ದಿವಾಕರ ಶೆಟ್ಟಿ, ಬಸ್ರೂರು