Advertisement

Cold Weather: ಬೀದರ್‌, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?

03:57 PM Jan 10, 2025 | Team Udayavani |

ಬೆಂಗಳೂರು: ಬೀದರ್‌, ವಿಜಯಪುರ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 5 ಡಿ.ಸೆ. ಕಡಿಮೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆಯು ಮುನ್ನೆಚ್ಚರಿಕೆ ನೀಡಿದೆ. ಇದರ ಜೊತೆಗೆ ಧಾರವಾಡ, ಗದಗ ಸೇರಿದಂತೆ ಉತ್ತರ ಕರ್ನಾಟಕದ 6 ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ.ಗೆ ಇಳಿಕೆಯಾಗುವ ಲಕ್ಷಣ ಗೋಚರಿಸಿದೆ.

Advertisement

ಮುಂದಿನ 24 ಗಂಟೆಗಳಲ್ಲಿ ಬೀದರ್‌, ವಿಜಯಪುರ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 3-5 ಡಿಗ್ರಿ ಸೆಲ್ಸಿಯಸ್‌ ಕಡಿಮೆ ಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಗುರುವಾರ ಬೀದರ್‌ನಲ್ಲಿ ರಾಜ್ಯದಲ್ಲೇ ಅತೀ ಕಡಿಮೆ ಕನಿಷ್ಠ ತಾಪಮಾನ 10 ಡಿ.ಸೆ.ದಾಖಲಾಗಿದ್ದು, ಹವಾಮಾನ ಇಲಾಖೆ ನೀಡಿರುವ ಮಾಹಿತಿಯಂತೆ ತಾಪಮಾನ ಇಳಿಕೆಯಾದರೆ ಇದರ ಪ್ರಮಾಣ 5 ಡಿ.ಸೆ.ಗೆ ಇಳಿಕೆಯಾಗಲಿದೆ. ಇನ್ನು ವಿಜಯಪುರದಲ್ಲಿ ದಾಖಲಾದ ಕನಿಷ್ಠ ತಾಪಮಾನ 11.4 ಡಿ.ಸೆ. ಇದ್ದು, 6.4 ಡಿ.ಸೆ.ಗೆ ಇಳಿಕೆಯಾಗುವ ಲಕ್ಷಣಗಳಿವೆ.

ಇದರ ಜೊತೆಗೆ ಧಾರವಾಡ, ಗದಗ, ಕಲಬುರಗಿ, ಯಾದಗಿರಿ, ರಾಯಚೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಈಗಿರುವ ತಾಪಮಾನಕ್ಕಿಂತ ಒಟ್ಟಾರೆ ಯಾಗಿ 2 ರಿಂದ 4 ಡಿ.ಸೆ.ವರೆಗೆ ಕಡಿಮೆಯಾಗುವ ಹೆಚ್ಚಿನ ಸಾಧ್ಯತೆಗಳಿವೆ. ಇದರ ಪ್ರಭಾವದಿಂದ ಉತ್ತರ ಕರ್ನಾಟಕದ ಭಾಗಗಳಲ್ಲಿ ಚಳಿಯ ಪ್ರಮಾಣ ಅಧಿಕವಾಗಿರಲಿದೆ. ಉಳಿದ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಯಾವುದೇ ದೊಡ್ಡ ಬದಲಾವಣೆ ಇಲ್ಲ. ನಂತರದ 6 ದಿನಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಕ್ರಮೇಣ ಏರಿಕೆ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕೆಲವು ಜಿಲ್ಲೆಗಳಲ್ಲಿ ದಟ್ಟ ಮಂಜು: ಶುಕ್ರವಾರ ರಾಜ್ಯದಾದ್ಯಂತ ಒಣ ಹವೆ ಇರುವ ಸಾಧ್ಯತೆಯಿದೆ. ವಿಜಯಪುರ, ಬೀದರ್‌, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು, ರಾಮನಗರ, ತುಮಕೂರು ಮತ್ತು ಚಾಮರಾಜನಗರ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ದಟ್ಟ ಮಂಜು ಇರಲಿದೆ. ಮುಂದಿನ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ ಶುಭ್ರ ವಾತಾವರಣ ಇರಲಿದೆ. ಕೆಲವು ಕಡೆ ಬೆಳಗಿನ ಸಮಯದಲ್ಲಿ ದಟ್ಟ ಮಂಜು ಇರುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 28 ಡಿ.ಸೆ ಮತ್ತು 15 ಡಿ.ಸೆ ಇರುವ ಸಾಧ್ಯತೆಗಳಿವೆ.

ಬೆಂಗಳೂರಿನಲ್ಲೇಕೆ ವಿಪರೀತ ಗಾಳಿ ? ಪೂರ್ವ ಭಾಗದಿಂದ ಪಶ್ಚಿಮದ ಕಡೆ ವೇಗವಾಗಿ ಗಾಳಿ ಬೀಸುತ್ತಿದ್ದು, ಇದರ ಪ್ರಭಾವದಿಂದ ಬೆಂಗಳೂರು ಸೇರಿ ದಂತೆ ದಕ್ಷಿಣ ಒಳನಾಡಿನಲ್ಲಿ ಕಳೆದ 2 ದಿನಗಳಿಂದ ವಿಪ ರೀತ ಚಳಿಗಾಳಿ ಬೀಸಲಾರಂಭಿಸಿದೆ. ಬಂಗಾಳ ಉಪಸಾಗರದಲ್ಲಿ ಉಂಟಾದ ಹವಾಮಾನ ವೈಪರೀತ್ಯದಿಂದ ಪೂರ್ವದಿಂದ ಪಶ್ಚಿಮದ ಕಡೆ ಬೀಸುವ ಗಾಳಿಯ ಪ್ರಮಾ ಣ ಅಧಿಕವಾಗಿವೆ. ಮುಂದಿನ ಕೆಲವು ದಿನಗಳಲ್ಲಿ ಗಾಳಿಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ವಿಭಾಗದ ನಿರ್ದೇಶಕ ಸಿ.ಎಸ್‌.ಪಾಟೀಲ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next