ನವದೆಹಲಿ: ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ವಿಶಿಷ್ಟವಾಗಿ ಆಚರಿಸಲು ನಿರ್ಧರಿಸಿರುವ
ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಯು ತನ್ನ 52 ವಾಯುಮಾರ್ಗಗಳಲ್ಲಿ ಸಂಪೂರ್ಣ ಮಹಿಳಾ ಸಿಬ್ಬಂದಿಗಳನ್ನೇ ನೇಮಿಸಿದೆ. 12 ಅಂತಾರಾಷ್ಟ್ರೀಯ ಮತ್ತು 40 ದೇಶೀಯ ವಿಮಾನಯಾನಗಳಲ್ಲಿ ಇವತ್ತು ವಿಮಾನ ಯಾನಿಗಳಿಗೆ ಮಹಿಳಾ ಸಿಬ್ಬಂದಿಗಳೇ ಕಾಣಸಿಗಲಿದ್ದಾರೆ.
ನವದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋ, ನ್ಯೂಯಾರ್ಕ್, ವಾಷಿಂಗ್ಟನ್, ಚಿಕಾಗೋ, ಸಿಡ್ನಿ, ರೋಮ್, ಲಂಡನ್, ಶಾಂಘ್ಯಾ, ಪ್ಯಾರಿಸ್ ಮತ್ತು ಮುಂಬಯಿಯಿಂದ ನ್ಯೂಯಾರ್ಕ್ ಗೆ ಪ್ರಯಾಣಿಸುವ ಏರ್ ಇಂಡಿಯಾ ವಿಮಾನಗಳ ಉಸ್ತುವಾರಿ ಇವತ್ತಿನ ಮಟ್ಟಿಗೆ ಮಹಿಳಾ ಸಿಬ್ಬಂದಿಗಳದ್ದಾಗಿರುತ್ತದೆ.
‘ವಾಯುಯಾನದ ಎಲ್ಲಾ ವಿಭಾಗಗಳಲ್ಲಿಯೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಪ್ರತೀ ದಿನ ತಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಏರ್ ಇಂಡಿಯಾದಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರಿಗೆಲ್ಲರಿಗೂ ನಮ್ಮದೊಂದು ಸೆಲ್ಯೂಟ್- ಅವರ ಬದ್ಧತೆಯನ್ನ ನಾವಿಂದು ಗುರುತಿಸುತ್ತಿದ್ದೇವೆ ಮತ್ತು ಈ ಕಾರಣಕ್ಕಾಗಿ ಇವತ್ತು 52 ವಾಯುಮಾರ್ಗಗಳಲ್ಲಿ ಮಹಿಳಾ ಸಿಬ್ಬಂದಿಗಳೇ ಕಾರ್ಯನಿರ್ವಹಿಸಲಿದ್ದಾರೆ’ ಎಂದು ಏರ್ ಇಂಡಿಯಾ ತನ್ನ ಅಧಿಕೃತ ಟ್ವಿಟರ್ ನಲ್ಲಿ ಪ್ರಕಟಿಸಿದೆ.
ಏರ್ ಇಂಡಿಯಾದ ಬಿ787 ಡ್ರೀಂಲೈನರ್ ಮತ್ತು ಬಿ777ಎಸ್ ವಿಮಾನಗಳನ್ನು ಇವತ್ತು ಮಹಿಳಾ ವಿಶೇಷ 12 ಅಂತಾರಾಷ್ಟ್ರೀಯ ವಾಯುಮಾರ್ಗಗಳಲ್ಲಿ ನಿಯೋಜನೆ ಮಾಡಲಿದೆ. ಮಹಿಳಾ ಪೈಲಟ್ ಗಳು ಮತ್ತು ಗಗನಸಖಿಯರು ಏರ್ ಬಸ್ ಫ್ಯಾಮಿಲಿ ಏರ್ ಕ್ರಾಫ್ಟ್ ಮತ್ತು ಡ್ರೀಂ ಲೈನರ್ ವಿಮಾನಗಳಲ್ಲಿ ಇಂದು ಕಾರ್ಯನಿರ್ವಹಿಸಲಿದ್ದಾರೆ.
ಏರ್ ಇಂಡಿಯಾ ಮಾತ್ರವಲ್ಲದೇ ಇತರೇ ವಿಮಾನ ಯಾನ ಸಂಸ್ಥೆಗಳಾಗಿರುವ ಸ್ಪೈಸ್ ಜೆಟ್, ಗೊ ಏರ್, ಇಂಡಿಗೋ ಸಹ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಹಲವು ವಿಶೇಷತೆಗಳೊಂದಿಗೆ ಇಂದಿನ ತಮ್ಮ ವಿಮಾನ ಯಾನ ಸೇವೆಯನ್ನು ನೀಡುತ್ತಿವೆ. ಗೊ ಏರ್ ನಲ್ಲಿ ಇಂದು ಮಹಿಳಾ ಪ್ರಯಾಣಿಕರಿಗೆ ವಿಶೇಷ ರಿಯಾಯಿತಿಯನ್ನು ಪ್ರಕಟಿಸಿದೆ.