Advertisement
ಇಲ್ಲಿ ಅತಿ ಹೆಚ್ಚು ಬಳಕೆಯಾಗಿರುವ ಗ್ರಾಫಿಕ್ಸ್ ಬಗ್ಗೆ ಹೊಗಳಬೇಕೋ, ತಡೆದುಕೊಳ್ಳಲಾಗದಷ್ಟು “ಭಯಾನಕ’ ಟಾರ್ಚರ್ ಕೊಡುವ ಆತ್ಮಗಳ ಬಗ್ಗೆ ಹೇಳಬೇಕೋ, ದೆವ್ವಗಳ ಹುಚ್ಚಾಟಕ್ಕೆ ನಗಬೇಕೋ ಅಥವಾ ಎಲ್ಲಾ ಆತ್ಮ ಕಥೆಗಳ ಸಾಲಿಗೆ ಇದೂ ಒಂದು ಅಂತ ಕರೆಯಬೇಕೋ ಎಂಬ ಗೊಂದಲದಲ್ಲೇ “ಅನುಷ್ಕ’ಳ ಆರ್ಭಟದೊಂದಿಗೆ ಕಟ್ಟು ಕಥೆಯೊಂದನ್ನು ಅಂತ್ಯಗೊಳಿಸಲಾಗಿದೆ.
Related Articles
Advertisement
ಒಂದೇ ಒಂದು ಎಳೆ ಇಟ್ಟುಕೊಂಡು, ವಿನಾಕಾರಣ, ದೆವ್ವಗಳ ಭಯ ಸೃಷ್ಟಿಸಿ, ಅದಕ್ಕೊಂದು ಮಾಫಿಯಾದ ಲೇಪನ ಮಾಡಿ, ನೋಡುಗರ ತಾಳ್ಮೆಗೆಡಿಸಲಾಗಿದೆಯಷ್ಟೇ. ಮೊದಲರ್ಧ ಒಂಚೂರು ಭಯದ ಜೊತೆಗೆ ಸಾಗುವ ಚಿತ್ರ, ದ್ವಿತಿಯಾರ್ಧದಲ್ಲಿ ಕಥೆ ಎಲ್ಲೆಲ್ಲೋ ಹರಿದಾಡಿ, ಒಂದಷ್ಟು ಗೊಂದಲಕ್ಕೀಡಾಗಿ, ಕೊನೆಗೆ ಟ್ರ್ಯಾಕ್‌ಗೆ ಬರುವ ಹೊತ್ತಿಗೆ ನೋಡುಗ ಸೀಟಿಗೆ ಒರಗಿರುತ್ತಾನೆ. ಇಂತಹ ಕಥೆಗೆ ಎಫೆಕ್ಟ್ಸ್ , ಹಿನ್ನೆಲೆ ಸಂಗೀತ ಸಾಥ್ ನೀಡಬೇಕು.
ಆದರೆ, ಅದ್ಯಾವುದನ್ನೂ ಇಲ್ಲಿ ನಿರೀಕ್ಷಿಸುವಂತಿಲ್ಲ. ಬಹುತೇಕ ಒಂದು ಬಂಗಲೆ, ಒಂದು ರಸ್ತೆ, ಒಂದಷ್ಟು ಮೈದಾನ ಬಿಟ್ಟರೆ ಚಿತ್ರ ಬೇರೆಲ್ಲೂ ಸಾಗಿಲ್ಲ. ಹೊಸದಾಗಿ ಮದುವೆಯಾದ ದಂಪತಿ ಹನಿಮೂನ್‌ಗೆಂದು ರಾಣಿ ವಿಲಾಸ ಗೆಸ್ಟ್ ಹೌಸ್ ಕಡೆಗೆ ಪಯಣ ಬೆಳೆಸುತ್ತಾರೆ. ರಾತ್ರಿ ಪಯಣದಲ್ಲಿ ವಿಚಿತ್ರ ಘಟನೆಗಳು ಎದುರಾಗುತ್ತವೆ, ಯಾವುದೋ ಒಂದು ಗೊಂಬೆ ಅವರನ್ನು ಹಿಂಬಾಲಿಸುತ್ತೆ. ಆದರೂ, ಹೇಗೋ ಆ ದಂಪತಿ ರಾಣಿ ವಿಲಾಸ ಗೆಸ್ಟ್ ಹೌಸ್ ತಲುಪುತ್ತೆ.
ಅಲ್ಲಿರುವ ವಾಚ್‌ಮೆನ್, ಮನೆ ಕೆಲಸದಾಕೆ ಅವರನ್ನು ಬರಮಾಡಿಕೊಳ್ಳುತ್ತಾರೆ. ಮನೆಯೊಳಗೆ ವಿಚಿತ್ರ ಅನುಭವ ಶುರುವಾಗುತ್ತದೆ. ಅಸಲಿಗೆ ಅವರು ಮನುಷ್ಯರಲ್ಲ, ಆತ್ಮಗಳು ಅನ್ನೋದು ಅರಿವಾಗುತ್ತಿದ್ದಂತೆಯೇ, ಅಲ್ಲೊಂದು ಸಂಚಿನ ಕಥೆ ಬಿಚ್ಚಿಕೊಳ್ಳುತ್ತೆ. ಅದರೊಳಗೊಂದು ಮಾಫಿಯಾ ಕೂಡ ಇಣುಕಿ ನೋಡುತ್ತೆ. ಆಮೇಲೆ ಏನೆಲ್ಲಾ ಆಗುತ್ತೆ ಅನ್ನೋದು ಕಥೆ.
ಇಲ್ಲೊಂದು ರಾಣಿಯ ಕಥೆಯೂ ಇದೆ. ನೂರಾರು ವರ್ಷಗಳ ಹಿಂದೆ ರಾಣಿ ಅನುಷ್ಕ ದೇವಿ ಆ ವಿಲಾಸ ಗೆಸ್ಟ್‌ಹೌಸ್‌ನಲ್ಲಿ ವಾಸವಿರುತ್ತಾಳೆ. ಆ ಊರ ಜನರ ಪರ ಕೆಲಸ ಮಾಡುತ್ತಿರುತ್ತಾಳೆ. ಆಕೆ ಯುದ್ಧದಲ್ಲಿ ಮಡಿದರೂ, ಆ ಊರ ಜನರಿಗೆ ತೊಂದರೆಯಾದರೆ, ಪ್ರತ್ಯಕ್ಷಗೊಂಡು, ಭ್ರಷ್ಟರನ್ನು ಹಿಗ್ಗಾಮುಗ್ಗ ಥಳಿಸಿ, ಸಂಹರಿಸುತ್ತಾಳೆ. ಆ ಕಥೆಯಲ್ಲಿ ಬರುವ ಅನುಷ್ಕ ದೇವಿ, ಆ ದಂಪತಿ ಹಿಂದೆ ನಿಲ್ಲುತ್ತಾಳ, ಅವರನ್ನು ರಕ್ಷಿಸುತ್ತಾಳ ಅನ್ನೋದು ಕಥೆ.
ರೂಪೇಶ್ ಶೆಟ್ಟಿ ಸಿಕ್ಕ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಅಮೃತಾ ಕೂಡ ಪಾತ್ರಕ್ಕೆ ಸಾಧ್ಯವಾದಷ್ಟು ನ್ಯಾಯ ಸಲ್ಲಿಸಿದ್ದಾರೆ. ಉಳಿದಂತೆ ಸಾಧುಕೋಕಿಲ ಅವರ ಹಾಸ್ಯ ಎಂದಿನಂತೆ ಸಾಗಿದೆ. ಆದಿಲೋಕೇಶ್, ಬಲರಾಜ್ ಇತರೆ ಪಾತ್ರಗಳು ಇರುವುಷ್ಟು ಸಮಯ ಗಮನಸೆಳೆಯುತ್ತವೆ. ವಿಕ್ರಮ್ ಸೆಲ್ವ ಸಂಗೀತದಲ್ಲಿ “ಸದಾ ನಿನ್ನ ಕಣ್ಣಲೀ ಸಮಾಚಾರ ಹೇಳಿದೆ..’ ಹಾಡು ಗುನುಗುವಂತಿದೆ. ವೀನಸ್ ಮೂರ್ತಿ ಛಾಯಾಗ್ರಹಣ ಪರವಾಗಿಲ್ಲ.
ಚಿತ್ರ: ಅನುಷ್ಕನಿರ್ಮಾಣ: ಎಸ್.ಕೆ.ಗಂಗಾಧರ್
ನಿರ್ದೇಶನ: ದೇವರಾಜ್‌ಕುಮಾರ್
ತಾರಾಗಣ: ಅಮೃತಾ, ರೂಪೇಶ್ ಶೆಟ್ಟಿ, ಸಾಧುಕೋಕಿಲ, ರೂಪ ಶರ್ಮ, ಬಲರಾಜ್, ಆದಿಲೋಕೇಶ್ ಇತರರು. * ವಿಭ