Advertisement
ಕಳೆದ 75 ವರ್ಷಗಳಲ್ಲಿ ವಿಟೊ ಹೊಂದಿರುವ ದೇಶಗಳು ತಮ್ಮ ಉದ್ದೇಶಿತ ರಾಜಕೀಯ ಹಿತಾಸಕ್ತಿ ಸಾಧಿಸುವುದಕ್ಕೆ ಮಾತ್ರ ವಿಟೊವನ್ನು ಬಳಸುತ್ತಿವೆ. ಎಲ್ಲಿಯವರೆಗೆ ಈ ವ್ಯವಸ್ಥೆಯಿರುತ್ತದೋ, ಅಲ್ಲಿಯವರೆಗೆ ಈ ರಾಷ್ಟ್ರಗಳು ಹೀಗೆಯೇ ಮಾಡುತ್ತಿರುತ್ತವೆ ಎಂದು ಮಾಥುರ್ ಕಿಡಿಕಾರಿದ್ದಾರೆ. 15 ದೇಶಗಳ ಭದ್ರತಾ ಸಮಿತಿಯಲ್ಲಿ ಅಮೆರಿಕ, ರಷ್ಯಾ, ಚೀನ, ಫ್ರಾನ್ಸ್, ಬ್ರಿಟನ್‌ಗಳಿಗೆ ಮಾತ್ರ ವಿಟೊ ಅವಕಾಶವಿದೆ. ಉಳಿದ 10 ರಾಷ್ಟ್ರಗಳನ್ನು ಕೇವಲ 2 ವರ್ಷಗಳ ಅವಧಿಗೆ ಮಾತ್ರ ಆರಿಸಲಾಗುತ್ತದೆ. ಈ ರಾಷ್ಟ್ರಗಳಿಗೆ ವಿಟೊ ಅಧಿಕಾರವಿಲ್ಲ.
ಪ್ರತೀಕ್ ಮಾಥುರ್ ವಿಶ್ವಸಂಸ್ಥೆಯಲ್ಲಿ ಪಾಕಿಸ್ಥಾನ ಮಾಡಿದ ನಾಟಕವನ್ನು ಕಟುವಾಗಿ ಟೀಕಿಸಿದ್ದಾರೆ. ಯಾರೆಷ್ಟೇ ಲಾಬಿ, ಅಪಪ್ರಚಾರ, ಸುಳ್ಳು ಮಾಹಿತಿ ನೀಡಿದರೂ ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿಯೇ ಉಳಿಯಲಿದೆ. ಜಮ್ಮು-ಕಾಶ್ಮೀರ ಪಾಕಿಸ್ಥಾನಕ್ಕೆ ಸೇರಬೇಕೆಂದು ಆ ದೇಶದ ವಿಶ್ವಸಂಸ್ಥೆ ಪ್ರತಿನಿಧಿ ಮುನೀರ್ ಅಕ್ರಮ್ ಹೇಳಿದ್ದಕ್ಕೆ ಮೇಲಿನಂತೆ ಪ್ರತಿಕ್ರಿಯೆ ನೀಡಲಾಗಿದೆ. ವಿಶ್ವಸಂಸ್ಥೆಯಲ್ಲಿ ಯಾವುದೇ ವಿಷಯ ಚರ್ಚೆಯಲ್ಲಿರಲಿ, ಪಾಕಿಸ್ಥಾನ ಜಮ್ಮು-ಕಾಶ್ಮೀರದ ವಿಚಾರವನ್ನು ಸತತವಾಗಿ ಪ್ರಸ್ತಾವ ಮಾಡುತ್ತದೆ. ಈ ನಾಟಕವನ್ನು ಭಾರತ ತರಾಟೆಗೆ ತೆಗೆದುಕೊಂಡಿದೆ.