Advertisement

Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ

04:19 AM Dec 19, 2024 | Team Udayavani |

ಬೆಳಗಾವಿ: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ ಹಾಕುವ 2024ನೇ ಸಾಲಿನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯ (ತಿದ್ದುಪಡಿ) ಮಸೂದೆಗೆ ಮೇಲ್ಮನೆಯಲ್ಲೂ ಬಹುಮತದ ಒಪ್ಪಿಗೆ ದೊರಕಿದೆ. ಪರಿಷತ್‌ನಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿಕೂಟಕ್ಕೆ ಸಂಖ್ಯಾಬಲವಿದ್ದರೂ 1 ಮತದಿಂದ ಸೋಲಾಗುವ ಮೂಲಕ ಮುಖಭಂಗ ಅನುಭವಿಸಿದೆ.

Advertisement

ಬಿಜೆಪಿ-ಜೆಡಿಎಸ್‌ ಮಿತ್ರಕೂಟದಿಂದ 25, ಕಾಂಗ್ರೆಸ್‌ನಿಂದ 26 ಮತಗಳು ಚಲಾವಣೆಗೊಂಡವು. ಪರಿಷತ್‌ನಲ್ಲಿ ಮಿತ್ರಕೂಟಕ್ಕೆ 37 ಸದಸ್ಯ ಬಲದೊಂದಿಗೆ ಬಹುಮತವಿದೆ. ಕಾಂಗ್ರೆಸ್‌ 33 ಸದಸ್ಯ ಬಲಹೊಂದಿದೆ. ಮಿತ್ರಕೂಟದ ಕೆಲವರು ಗೈರಾಗಿದ್ದರಿಂದ ಸೋಲಾಗಿದೆ.

ರಾಜ್ಯಪಾಲರ ಬದಲಿಗೆ ಮುಖ್ಯಮಂತ್ರಿಯನ್ನು ಕುಲಾಧಿಪತಿ ಮಾಡುವ ಈ ತಿದ್ದುಪಡಿ ಮಸೂದೆಯನ್ನು ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್‌ ಖರ್ಗೆ ಸದನದಲ್ಲಿ ಮಂಡಿಸಿದರು. ಚರ್ಚೆ ಬಳಿಕ ಮತಕ್ಕೆ ಹಾಕಲು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಬೇಡಿಕೆ ಇಟ್ಟರು. ಅದರಂತೆ, ಸಭಾಪತಿ ಬಸವರಾಜ್‌ ಹೊರಟ್ಟಿ ಅವರು ಪ್ರಸ್ತಾಪವನ್ನು ಮತಕ್ಕೆ ಹಾಕಿದರು. ತಿದ್ದುಪಡಿ ವಿಧೇಯಕದ ಪರ 26 ಮತ ಬಿದ್ದರೆ, ವಿರೋಧವಾಗಿ 25 ಮತಗಳು ಬಿದ್ದವು. ಈ ರೀತಿ ಒಂದು ಮತದಿಂದ ವಿಧೇಯಕಕ್ಕೆ ಮೇಲ್ಮನೆಯಲ್ಲಿ ಗೆಲುವು ಸಿಕ್ಕಿತು. ವಿಧೇಯಕದ ಕುರಿತು 18 ಸದಸ್ಯರು ಮಾತನಾಡಿದರು. ಬಿಜೆಪಿ-ಜೆಡಿಎಸ್‌ ಸದಸ್ಯರು ವಿರೋಧ ವ್ಯಕ್ತಪಡಿಸಿದರೆ, ಕಾಂಗ್ರೆಸ್‌ ಸದಸ್ಯರು ಬೆಂಬಲಿಸಿದರು.

ಬೇರೆ ರಾಜ್ಯಗಳಲ್ಲೂ ಇದೆ:
ಚರ್ಚೆ ವೇಳೆ ವಿಪಕ್ಷ ಸದಸ್ಯರು ವಿಧೇಯಕವನ್ನು ವಿರೋಧಿಸುತ್ತ, ರಾಜ್ಯಪಾಲರನ್ನು ಕುಲಾಧಿಪತಿ ಮಾಡುವ ಪರಂಪರೆ ದಶಕಗಳಿಂದ ನಡೆದುಕೊಂಡು ಬಂದಿದೆ. ರಾಜ್ಯಪಾಲರ ಕುಲಾಧಿಪತಿ ಅಧಿಕಾರ ಮೊಟಕುಗೊಳಿಸುವುದು ಸೂಕ್ತವಲ್ಲ. ಗ್ರಾಮೀಣಾಭಿವೃದ್ಧಿ ವಿವಿ ಮೂಲಕ ಮುಂದಿನ ದಿನಗಳಲ್ಲಿ ಎಲ್ಲ ವಿ.ವಿ.ಗಳಲ್ಲಿ ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸುವ ಗುಪ್ತ ಕಾರ್ಯಸೂಚಿಯನ್ನು ಸರಕಾರ ಹೊಂದಿದಂತಿದೆ ಎಂದು ಆರೋಪಿಸಿದರು. ಸಚಿವ ಪ್ರಿಯಾಂಕ್‌ ಖರ್ಗೆ ಉತ್ತರಿಸಿ, ರಾಷ್ಟ್ರಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ ಎಂದರು.

ಬಿಜೆಪಿಗೆ ಮುಖಭಂಗ
ಸಾಕಷ್ಟು ಚರ್ಚೆಯ ಅನಂತರ ವಿಧೇಯಕವನ್ನು ಮತಕ್ಕೆ ಹಾಕಲಾಯಿತು. ಇಲ್ಲಿ ಕಾಂಗ್ರೆಸ್‌ ಆಡಳಿತ ಪಕ್ಷವಾಗಿದ್ದರೂ 33 ಸದಸ್ಯರಿರುವುದರಿಂದ ಬಹುಮತಕ್ಕೆ ದೂರವಿದೆ. ಇನ್ನು ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಮಾಡಿಕೊಂಡಿರುವುದರಿಂದ ಬಿಜೆಪಿಯ 29 ಮತ್ತು ಜೆಡಿಎಸ್‌ನ 8 ಸದಸ್ಯರು ಸೇರಿ ಒಟ್ಟು 37 ಸದಸ್ಯ ಬಲ ಆಗುವುದರಿಂದ ಬಹುಮತ ಮಿತ್ರಪಕ್ಷಕ್ಕೇ ಇತ್ತು.

Advertisement

ಆದರೆ ಮತಕ್ಕೆ ಹಾಕಿದಾಗ ವಿಧೇಯಕದ ಪರವಾಗಿ 26 ಮತ ಮತ್ತು ವಿರುದ್ಧವಾಗಿ 25 ಮತಗಳು ಬಿದ್ದಿವೆ. ಮಿತ್ರಪಕ್ಷದ ಎಲ್ಲ ಸದಸ್ಯರೂ ಈ ಸಂದರ್ಭದಲ್ಲಿ ಹಾಜರಿಲ್ಲದೆ ಇದ್ದರಿಂದ ವಿಧೇಯಕಕ್ಕೆ ಸುಲಭವಾಗಿ ಅಂಗೀಕಾರ ದೊರೆಯಿತು. ಬಹುಮತವಿದ್ದರೂ ವಿಪಕ್ಷಕ್ಕೆ ಹಿನ್ನಡೆಯಾಗಿದೆ. ಈ ವೇಳೆ ಮೂರರಿಂದ ನಾಲ್ವರು ಜೆಡಿಎಸ್‌ ಸದಸ್ಯರು ಹಾಜರಿದ್ದರೆ, ಬಿಜೆಪಿಯ 21-22 ಮಂದಿ ಬಿಜೆಪಿ ಸದಸ್ಯರಿದ್ದರು. ಉಳಿದಂತೆ ಕಾಂಗ್ರೆಸಿನ 33 ಸದಸ್ಯರ ಪೈಕಿ 26 ಸದಸ್ಯರಿದ್ದರು.

ಕುಲಪತಿ ಹುದ್ದೆ 20 ಕೋಟಿಗೆ ಬಿಕರಿ
ಮಸೂದೆ ಬೆಂಬಲಿಸಿ ಮಾತನಾಡಿದ ಕಾಂಗ್ರೆಸ್‌ ಸದಸ್ಯ ಪುಟ್ಟಣ, ತಿದ್ದುಪಡಿ ತಂದಿರುವುದು ಸೂಕ್ತವಾಗಿದೆ. ಬೇರೆ ರಾಜ್ಯದಿಂದ ಬಂದು 5 ವರ್ಷ ಇದ್ದು ಹೋಗುವ ರಾಜ್ಯಪಾಲರಿಗೆ ಏನೂ ಗೊತ್ತಿರುವುದಿಲ್ಲ. ಯಾವುದೇ ವಿಚಾರವನ್ನು ರಾಜ್ಯಪಾಲರ ಬಳಿ ಕೇಳುವಂತೆಯೂ ಇಲ್ಲ. ಮುಖ್ಯಮಂತ್ರಿ ಕುಲಾಧಿಪತಿ ಇದ್ದರೆ, ಅವರನ್ನು ಕೇಳಬಹುದು. ವಿವಿಗಳಲ್ಲಿ 20 ವರ್ಷಗಳಿಂದ ನೇಮಕಾತಿ ನಡೆದಿಲ್ಲ. ಎಲ್ಲ ಕಡೆ ಏಜೆಂಟರು ಹುಟ್ಟಿಕೊಂಡಿದ್ದಾರೆ. ವಿವಿ ಕುಲಪತಿ ಹುದ್ದೆಗಳು 20 ಕೋಟಿ ರೂ.ಗೆ ಬಿಕರಿ ಆಗುತ್ತಿವೆ. ಸಿಂಡಿಕೇಟ್‌ ಮತ್ತಿತರ ನೇಮಕಾತಿಗೆ 1ರಿಂದ 1.5 ಕೋಟಿ ನಿಗದಿ ಆಗಿದೆ. ಈ ದುಡ್ಡೆಲ್ಲ ಎಲ್ಲಿ ಹೋಗುತ್ತಿದೆ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next