Advertisement

ಮೂವರಲ್ಲಿ ಯಾರಿಗೆ ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಗಾದಿ?

08:41 AM Feb 28, 2019 | Team Udayavani |

ದಾವಣಗೆರೆ: ಹರಪನಹಳ್ಳಿ ತಾಲೂಕಿನ ಏಳು ಜನ ಸದಸ್ಯರು ಮೂಲ ಬಳ್ಳಾರಿ ಜಿಲ್ಲೆ ತೆಕ್ಕೆಗೆ ಸೇರಿದ ನಂತರ ಮೊದಲ ಬಾರಿಗೆ ನಡೆಯುತ್ತಿರುವ ದಾವಣಗೆರೆ ಜಿಲ್ಲಾ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ.

Advertisement

ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ ಮೂವರ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. ಈ ಬಾರಿಯ ಜಿಲ್ಲಾ ಪಂಚಾಯತಿ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಬಾಡ ಕ್ಷೇತ್ರದ ಬಿಜೆಪಿ ಸದಸ್ಯೆ ಶೈಲಜಾ ಬಸವರಾಜ್‌, ಕಳೆದ ಬಾರಿ ಕೊನೆ ಕ್ಷಣದಲ್ಲಿ ಅವಕಾಶ ತಪ್ಪಿಸಿಕೊಂಡ ಹೊನ್ನೆಬಾಗಿ ಕ್ಷೇತ್ರದ ಯಶೋಧಮ್ಮ ಮರುಳಪ್ಪ ಮತ್ತು ಕುಂದೂರು ಕ್ಷೇತ್ರದ ದೀಪಾ ಜಗದೀಶ್‌ ಅಧ್ಯಕ್ಷ ಸ್ಥಾನಕ್ಕೇರಲು ಕಸರತ್ತು ನಡೆಸಿದ್ದಾರೆ.
 
ಬಾಡ ಕ್ಷೇತ್ರದ ಶೈಲಜಾ ಬಸವರಾಜ್‌ ಮೊದಲಿನಿಂದಲೂ ಅಧ್ಯಕ್ಷೆ ಸ್ಥಾನದ ನಿರೀಕ್ಷೆ ಹೊಂದಿದ್ದಾರೆ. ಪ್ರತಿ ಬಾರಿಯೂ ಅವರ ಹೆಸರು ಮುಂಚೂಣಿಗೆ ಬಂದು ಅಂತಿಮವಾಗಿ ಬೇರೆಯವರಿಗೆ ಅವಕಾಶ ಕೊಡುವುದು ನಡೆಯುತ್ತಲೇ ಇದೆ. ಈ ಬಾರಿಯಾದರೂ ಶೈಲಜಾ ಬಸವರಾಜ್‌ರವರ ಅಧ್ಯಕ್ಷೆ ಪಟ್ಟಕ್ಕೆರುವ ಕನಸು ನನಸಾಗಲಿದೆಯೇ ಎಂಬುದು ಕುತೂಹಲ ಮೂಡಿಸಿದೆ.

ಕಳೆದ ಆ. 10 ರಂದು ನಡೆದ ಚುನಾವಣೆಯಲ್ಲಿ ಅಂತಿಮ ಕ್ಷಣದವರೆಗೆ ಹೊನ್ನೆಬಾಗಿ ಕ್ಷೇತ್ರದ ಯಶೋಧಮ್ಮ ಮರುಳಪ್ಪ ಹೆಸರು ಮುಂದಿತ್ತು. ಕೊನೆ ಗಳಿಗೆಯಲ್ಲಿ ತೆಲಗಿ ಕ್ಷೇತ್ರದ ಕೆ.ಆರ್‌. ಜಯಶೀಲಾ ಅವರ ಪಾಲಾಯಿತು. ಸಾಮಾನ್ಯ ಮಹಿಳೆಗೆ ಅಧ್ಯಕ್ಷ ಸ್ಥಾನ ಮೀಸಲಾಗಿದ್ದರೂ ಹಿಂದುಳಿದ ವರ್ಗಗಳ ಜಯಶೀಲಾರಿಗೆ ಅಧ್ಯಕ್ಷ ಸ್ಥಾನ ಒಲಿಯಿತು. ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಯಶೋಧಮ್ಮ ಮರುಳಪ್ಪ ತೀವ್ರ ಪೈಪೋಟಿ ನಡೆಸಿದ್ದಾರೆ. ಚನ್ನಗಿರಿ ಶಾಸಕ ಕೆ. ಮಾಡಾಳ್‌ ವಿರೂಪಾಕ್ಷಪ್ಪ ನೇತೃತ್ವದಲ್ಲಿ ತಾಲೂಕು ಮುಖಂಡರು ಪ್ರಯತ್ನ ನಡೆಸಿದ್ದಾರೆ. 

ಇಬ್ಬರ ಪ್ರಬಲ ಪೈಪೋಟಿಯ ನಡುವೆ ಕುಂದೂರು ಕ್ಷೇತ್ರದ ದೀಪಾ ಜಗದೀಶ್‌ ಸಹ ಪ್ರಯತ್ನ ನಡೆಸಿದ್ದಾರೆ. ಕಳೆದ ಬಾರಿಯ ಆಯ್ಕೆ ವೇಳೆಯಲ್ಲೂ ಅವರ ಹೆಸರು ಕೇಳಿ ಬಂದಿತ್ತು. ಇನ್ನು ಕೆಲವು ದಿನಗಳಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಲೋಕಲ್‌ ಮತಗಳನ್ನು ತಂದುಕೊಡುವ ಶಕ್ತಿ ಇರುವುದೋ ಅವರಿಗೇ ಅವಕಾಶ… ಎಂಬ ಮಾತು ಕೇಳಿ ಬರುತ್ತಿರುವ ಲೆಕ್ಕಾಚಾರದಲ್ಲಿ ಯಶೋಧಮ್ಮ ಮರುಳಪ್ಪ ಮುಂದಿದ್ದಾರೆ. 2 ಬಾರಿ ಅಧ್ಯಕ್ಷರಾಗಿರುವ ಅಣಬೂರು ಕ್ಷೇತ್ರದ ಜೆ. ಸವಿತಾ ಕಲ್ಲೇಶಪ್ಪ ಸಹ ಪ್ರಯತ್ನ ನಡೆಸಿದ್ದಾರೆ. ಈ ನಡುವೆಯೂ
ಅಧ್ಯಕ್ಷ ಗಾದಿ ಬೇರೆಯವರಿಗೆ ಒಲಿದರೆ ಅಚ್ಚರಿಪಡಬೇಕಾಗಿಲ್ಲ.

ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನಕ್ಕೆ ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಕ್ಷೇತ್ರದ ಸಿ. ಸುರೇಂದ್ರನಾಯ್ಕ ಮತ್ತು ಚನ್ನಗಿರಿ ತಾಲೂಕಿನ ಹಿರೇಕೋಗಲೂರು ಕ್ಷೇತ್ರದ ಬಿ.ಎಸ್‌. ಸಾಕಮ್ಮ ಹೆಸರು ಕೇಳಿ ಬರುತ್ತಿದೆ. ಒಂದೊಮ್ಮೆ ಚನ್ನಗಿರಿ ತಾಲೂಕಿಗೆ ಅಧ್ಯಕ್ಷ ಸ್ಥಾನ ಸಿಕ್ಕರೆ ಸುರೇಂದ್ರನಾಯ್ಕ, ಬೇರೆಯವರಿಗೆ ಅವಕಾಶ ದೊರೆತರೆ ಬಿ.ಎಸ್‌. ಸಾಕಮ್ಮ ಉಪಾಧ್ಯಕ್ಷರಾಗಬಹುದು.
 
ಆಸೆ ಈಡೇರಲೇ ಇಲ್ಲ: ಈ ಬಾರಿಯ ಜಿಲ್ಲಾ ಪಂಚಾಯತಿ ಅಸ್ತಿತ್ವಕ್ಕೆ ಬಂದಾಗನಿಂದಲೂ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಹರಪನಹಳ್ಳಿ ತಾಲೂಕಿನ ಹಲವಾಗಲು ಕ್ಷೇತ್ರದ ಸುವರ್ಣ ಆರುಂಡಿರವರ ಕನಸು ಕೊನೆಗೆ ಈಡೇರಲೇ ಇಲ್ಲ. ಇನ್ನು ಮುಂದೆ ಈಡೇರುವುದೂ ಇಲ್ಲ. ಕಾರಣ ಈಗ ಅವರು ಬಳ್ಳಾರಿ ಜಿಲ್ಲಾ ಪಂಚಾಯತ್‌ ಸದಸ್ಯೆ. 371 ಜೆ ಕಲಂ ಹಿನ್ನೆಲೆಯಲ್ಲಿ ಹರಪನಹಳ್ಳಿ ತಾಲೂಕನ್ನ ಮತ್ತೆ ಬಳ್ಳಾರಿ ಜಿಲ್ಲೆಗೆ ಸೇರ್ಪಡೆ ಮಾಡಲಾಗಿದೆ.

Advertisement

7 ಸದಸ್ಯರು ಬಳ್ಳಾರಿ ಜಿಲ್ಲೆಗೆ: 371 ಜೆ ಕಲಂ ಹಿನ್ನೆಲೆಯಲ್ಲಿ ಹರಪನಹಳ್ಳಿ ತಾಲೂಕು ಮತ್ತೆ ಬಳ್ಳಾರಿ ಜಿಲ್ಲೆಗೆ ಸೇರಿರುವುದರಿಂದ 7 ಜನ ಸದಸ್ಯರು ಬಳ್ಳಾರಿ ಜಿಲ್ಲಾ ಪಂಚಾಯತ್‌ ಸದಸ್ಯರಾಗಿದ್ದಾರೆ. ಒಂದೇ ಅವಧಿಯಲ್ಲಿ ಎರಡು ಜಿಲ್ಲಾ ಪಂಚಾಯತ್‌ ಸದಸ್ಯರಾಗಿದ್ದಾರೆ. ಅವರಲ್ಲಿ ಒಬ್ಬರು ಮಾಜಿ ಅಧ್ಯಕ್ಷರಾಗಿದ್ದರೆ(ಕೆ. ಆರ್‌. ಜಯಶೀಲಾ), ಇಬ್ಬರು(ಡಿ. ಸಿದ್ದಪ್ಪ, ರಶ್ಮಿ ರಾಜಪ್ಪ) ಉಪಾಧ್ಯಕ್ಷರಾಗಿದ್ದವರು.

ಹರಪನಹಳ್ಳಿ ತಾಲೂಕಿನ ಹಲವಾಗಲು ಕ್ಷೇತ್ರದ ಬಿಜೆಪಿಯ ಸುವರ್ಣ ಆರುಂಡಿ, ಉಚ್ಚಂಗಿದುರ್ಗದ ಬಿಜೆಪಿ ಸದಸ್ಯೆ ಜಿ. ರಶ್ಮಿ ರಾಜಪ್ಪ, ಕಂಚೀಕೆರೆ ಕ್ಷೇತ್ರದ ಬಿಜೆಪಿ ಸದಸ್ಯ ಡಿ.ಸಿದ್ದಪ್ಪ, ತೆಲಗಿ ಕ್ಷೇತ್ರದ ಕೆ.ಆರ್‌. ಜಯಶೀಲಾ, ಅರಸೀಕೆರೆ ಕ್ಷೇತ್ತದ ಕಾಂಗ್ರೆಸ್‌ನ ಸುಶೀಲಮ್ಮ ದೇವೇಂದ್ರಪ್ಪ, ನೀಲಗುಂದ ಕ್ಷೇತ್ರದ ಪಕ್ಷೇತರ ಸದಸ್ಯ ಎಚ್‌.ಬಿ. ಪರಶುರಾಮಪ್ಪ, ಚಿಗಟೇರಿ ಕ್ಷೇತ್ರದ ಪಕ್ಷೇತರ ಸದಸ್ಯ ಡಾ| ಉತ್ತಂಗಿ ಮಂಜುನಾಥ್‌ ಈಗ ಬಳ್ಳಾರಿ ಜಿಲ್ಲಾ ಪಂಚಾಯತ್‌ ಸದಸ್ಯರಾಗಿದ್ದಾರೆ. 

ಸದಸ್ಯರ ಸಂಖ್ಯೆ ಈಗ 29: ಹರಪನಹಳ್ಳಿ ತಾಲೂಕಿನ 7 ಜನ ಸದಸ್ಯರು ಬಳ್ಳಾರಿ ಜಿಲ್ಲೆಗೆ ಸೇರಿದ್ದರ ಪರಿಣಾಮ ಒಟ್ಟಾರೆ 36 ಸದಸ್ಯತ್ವ ಬಲದ ದಾವಣಗೆರೆ ಜಿಲ್ಲಾ ಪಂಚಾಯತ್‌ ಸದಸ್ಯತ್ವ ಬಲ ಈಗ 29. ಜಿಲ್ಲಾ ಪಂಚಾಯತ್‌ನಲ್ಲಿ 22 ಸದಸ್ಯರನ್ನ ಹೊಂದಿದ್ದ ಬಿಜೆಪಿಯಲ್ಲಿ ಈಗ 18 ಸದಸ್ಯರಿದ್ದಾರೆ. ಹಾಗಾಗಿ ಬಿಜೆಪಿಗೆ ಬಹುಮತದ ಕೊರತೆಯ ಪ್ರಶ್ನೆಯೇ ಇಲ್ಲ. ಎಂಟು ಸದಸ್ಯರನ್ನ ಹೊಂದಿದ್ದ ಕಾಂಗ್ರೆಸ್‌ ಬಲ 7ಕ್ಕೆ ಕುಸಿದಿದೆ.
ಇಬ್ಬರು ಪಕ್ಷೇತರರು ಸಹ ಬಳ್ಳಾರಿ ಜಿಲ್ಲೆಯ ತೆಕ್ಕೆಗೆ ಜಾರಿದ್ದಾರೆ.

„ರಾ.ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next