Advertisement

ಆಧಾರ್‌ ಸಮಸ್ಯೆ ನಿವಾರಣೆ ಯಾವಾಗ?

09:11 PM Jul 03, 2019 | Lakshmi GovindaRaj |

ಚಾಮರಾಜನಗರ: ಜಿಲ್ಲೆಯಲ್ಲಿ ಆಧಾರ್‌ ಕಾರ್ಡ್‌ ತಿದ್ದುಪಡಿಗಾಗಿ ಜನರು ಪಡುತ್ತಿರುವ ಬವಣೆಯ ಬಗ್ಗೆ “ಉದಯವಾಣಿ’ಯಲ್ಲಿ ಪ್ರಕಟವಾದ ವರದಿ, ಬುಧವಾರ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿತು. ವಿಕೇಂದ್ರೀಕರಣವಾಗಬೇಕಾದ, ಒಂದೆಡೆ ಕೇಂದ್ರೀಕೃತವಾಗಿರುವ ಪರಿಣಾಮ ಗ್ರಾಮೀಣ ಪ್ರದೇಶದ ಜನರು ಪ್ರತಿನಿತ್ಯ ಆಧಾರ್‌ ತಿದ್ದುಪಡಿಗಾಗಿ ಅಲೆದಾಡಬೇಕಾಗಿದೆ ಎಂದು ಸದಸ್ಯರು ತೀವ್ರ ಕಳವಳ ವ್ಯಕ್ತಪಡಿಸಿದರು.

Advertisement

ಜಿಪಂ ಅಧ್ಯಕ್ಷೆ ಶಿವಮ್ಮ ಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯ ಆರಂಭದಲ್ಲೇ ಹರವೆ ಕ್ಷೇತ್ರದ ಜಿಪಂ ಸದಸ್ಯ ಕೆರೆಹಳ್ಳಿ ನವೀನ್‌, ಇಲಾಖಾವಾರು ಚರ್ಚೆಗೆ ಮೊದಲು, ಜಿಲ್ಲೆಯ ಜನರು ಎದುರಿಸುತ್ತಿರುವ ಗಂಭೀರ ಸಮಸ್ಯೆಯನ್ನು ಸಭೆಯ ಮುಂದಿಡುವುದಾಗಿ ಹೇಳಿದರು. ಆಧಾರ್‌ ಕಾರ್ಡ್‌ ನಲ್ಲಿರುವ ಲೋಪದೋಷಗಳ ತಿದ್ದುಪಡಿಗಾಗಿ ಜಿಲ್ಲೆಯಾದ್ಯಂತ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಉದಯವಾಣಿ ಪತ್ರಿಕೆಯ ಜು. 2 ರ ಸಂಚಿಕೆಯಲ್ಲಿ ಈ ಬವಣೆಯ ಬಗ್ಗೆ ಸವಿವರ ವರದಿ ಪ್ರಕಟವಾಗಿದೆ ಎಂದು ಪತ್ರಿಕೆಯ ಪ್ರತಿಯನ್ನು ಸಭೆಯಲ್ಲಿ ಪ್ರದರ್ಶಿಸಿದರು.

ನಿತ್ಯ ತೊಂದರೆ: ಬೆಳಗಿನ ಜಾವ 4 ಗಂಟೆಗೇ ಗ್ರಾಮೀಣ ಪ್ರದೇಶದ ಜನರು ಜಿಲ್ಲಾ ಕೇಂದ್ರಕ್ಕೆ ಬಂದು ಮೂರು ಬ್ಯಾಂಕ್‌ಗಳ ಮುಂದೆ, ತಾಲೂಕು ಕಚೇರಿ ಮುಂದೆ ಸರದಿಯ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಗ್ರಾಪಂ ಮಟ್ಟದಲ್ಲೇ ಆಧಾರ್‌ ತಿದ್ದುಪಡಿ ಮಾಡಬೇಕೆಂದು ಈ ಹಿಂದೆ ಹೇಳಲಾಗಿತ್ತು. ಜನರಿಗೆ ಸೌಲಭ್ಯಗಳು ದೊರಕಲು ಆಡಳಿತ ಯಂತ್ರ ವಿಕೇಂದ್ರೀಕರಣಗೊಳ್ಳಬೇಕೆಂಬ ಉದ್ದೇಶದಿಂದ ಗ್ರಾಪಂಗಳನ್ನು ಸ್ಥಾಪಿಸಲಾಗಿದೆ. ಆದರೆ ಸಾಮಾನ್ಯ ಜನರು, ತಮ್ಮ ಆಧಾರ್‌ ಕಾರ್ಡ್‌ಗಳಲ್ಲಿನ ದೋಷಗಳನ್ನು ಸರಿಪಡಿಸಿಕೊಳ್ಳಲು ಜಿಲ್ಲಾ ಕೇಂದ್ರಕ್ಕೆ ಬರಬೇಕಾಗಿದೆ. ಅದರಲ್ಲೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಜನರು ತಿದ್ದುಪಡಿಗಾಗಿ ಹೆಚ್ಚಿನ ಬವಣೆ ಅನುಭವಿಸುತ್ತಿದ್ದಾರೆ. ಅವರು ಜಿಲ್ಲಾ ಕೇಂದ್ರಕ್ಕೆ ಬರಬೇಕಾಗಿದೆ. ಇದೇ ಒಂದು ದೊಡ್ಡ ಸಮಸ್ಯೆಯಾಗಿದೆ ಇದನ್ನು ಬಗೆಹರಿಸಿ ಎಂದು ಅಧ್ಯಕ್ಷರನ್ನು ಒತ್ತಾಯಿಸಿದರು.

ಅಗತ್ಯ ಕ್ರಮ: ಇದರ ಬಗ್ಗೆ ವಿವರಣೆ ನೀಡಿದ ಜಿಪಂ ಸಿಇಒ ಅಧಿಕಾರಿ ಕೆ.ಎಸ್‌. ಲತಾಕುಮಾರಿ, ಆಧಾರ್‌ ತಿದ್ದುಪಡಿಗಾಗಿ ಜನರು ಅನುಭವಿಸುತ್ತಿರುವ ತೊಂದರೆ ನನ್ನ ಗಮನಕ್ಕೆ ಬಂದಿದೆ. 130 ಗ್ರಾಪಂಗಳಲ್ಲೂ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಆಧಾರ್‌ ತಿದ್ದುಪಡಿ ಕುರಿತು ಈ ಹಿಂದೆ ತರಬೇತಿ ನೀಡಲಾಗಿದೆ. ಆದರೆ ಆಧಾರ್‌ ತಿದ್ದುಪಡಿಗಾಗಿ ಇರುವ ಸಾಫ್ಟ್ವೇರ್‌ ಕೆಲಸ ಮಾಡುತ್ತಿಲ್ಲ. ರಾಜ್ಯಮಟ್ಟದಲ್ಲೇ ಈ ಸಾಫ್ಟ್ವೇರ್‌ ಕೆಲಸ ಮಾಡುತ್ತಿಲ್ಲ. ಹೀಗಾಗಿ ಗ್ರಾಪಂಗಳಲ್ಲಿ ಆಧಾರ್‌ ತಿದ್ದುಪಡಿಗೆ ಸಮಸ್ಯೆಯಾಗಿದೆ. ಈ ಬಗ್ಗೆ ಸಂಬಂಧಿಸಿದವರ ಗಮನಕ್ಕೆ ತರಲಾಗಿದೆ. ಈ ಸಮಸ್ಯೆಯನ್ನು ನಿವಾರಿಸಲು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಗುಂಡ್ಲುಪೇಟೆ ತಾಲೂಕಿನ ಕೆಬ್ಬೇಕಟ್ಟೆಯಲ್ಲಿ ನಡೆದ ದಲಿತ ಯುವಕನ ದೌರ್ಜನ್ಯ ಪ್ರಕರಣ ಜಿಲ್ಲೆಗೆ ಒಂದು ಕಪ್ಪುಚುಕ್ಕೆಯಾಗಿದ್ದು, ಘಟನೆಗೆ ಕಾರಣರಾದವರಿಗೆ ತಕ್ಕ ಶಿಕ್ಷೆಯಾಗಬೇಕು. ಜಿಲ್ಲೆಯಲ್ಲಿ ಕೋಮು ಸೌಹಾರ್ದತೆ ಕಾಪಾಡಿಕೊಂಡು ಹೋಗಬೇಕು ಎಂದು ಆರ್‌. ಬಾಲರಾಜು ಹೇಳಿದರು. ಜಿಪಂ ಉಪಾಧ್ಯಕ್ಷ ಕೆ.ಎಸ್‌. ಮಹೇಶ್‌ ಉಪಸ್ಥಿತರಿದ್ದರು.

Advertisement

ಪಿಡಿಒಗಳ ಭ್ರಷ್ಟಾಚಾರ: ಚಂದಕವಾಡಿ ಕ್ಷೇತ್ರದ ಜಿ.ಪಂ. ಸದಸ್ಯ ಆರ್‌. ಬಾಲರಾಜು ಮಾತನಾಡಿ, ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗಳು ಹಲವಾರು ವರ್ಷಗಳಿಂದ ಒಂದೇ ಕಡೆ ಬೀಡು ಬಿಟ್ಟಿದ್ದಾರೆ. ಪಂಚಾಯಿತಿಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಇ ಖಾತಾ ಆದಾಲತ್‌ ನಡೆಯಿತು. ಆದರೆ ಈಗ ಇ ಖಾತಾ ಮಾಡಿಕೊಡುತ್ತಿಲ್ಲ. ಒಂದು ಖಾತೆ ಮಾಡಿಕೊಡಲು ಪಿಡಿಓಗಳು 3ರಿಂದ 4 ಸಾವಿರ ಲಂಚ ತೆಗೆದುಕೊಳ್ಳುತ್ತಿದ್ದಾರೆ. ಬಿಡಿಒಗಳು ಮಾತ್ರವಲ್ಲ ಬಿಲ್‌ ಕಲೆಕ್ಟರ್‌, ಡಾಟಾ ಎಂಟ್ರಿ ಆಪರೇಟರ್‌ಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಇವರ ಜೀವನ ಶೈಲಿ ನೋಡಿದರೆ ಸಾಕು ಇವರ ಆದಾಯ ಎಷ್ಟು ಎಂಬುದು ತಿಳಿಯುತ್ತದೆ. ಅವರ ವೇತನದಿಂದ ಇಷ್ಟೆಲ್ಲ ಲಕ್ಸುರಿಯಾಗಿರಲು ಸಾಧ್ಯವಿಲ್ಲ ಎಂದು ಆರೋಪಿಸಿದರು.

ಜಿಪಂ ಸಿಇಒ ಲತಾಕುಮಾರಿ ಮಾತನಾಡಿ, ಭ್ರಷ್ಟಾಚಾರದ ಬಗ್ಗೆ ನಿರ್ದಿಷ್ಟ ಪಿಡಿಒ, ನಿರ್ದಿಷ್ಟ ಪಂಚಾಯಿತಿಯ ಬಗ್ಗೆ ತಿಳಿಸಿದರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಅನೇಕ ಪಂಚಾಯಿತಿಗಳಲ್ಲಿ ಸಮಸ್ಯೆ ಇದೆ ಎಂದು ಸದಸ್ಯರು ಹೇಳಿದರು. ಸದಸ್ಯ ಕೆ.ಪಿ. ಸದಾಶಿವಮೂರ್ತಿ ಮಾತನಾಡಿ, ಜಿಪಂ ಅಧ್ಯಕ್ಷರ ಸಮ್ಮುಖದಲ್ಲಿ ಸದಸ್ಯರು ಹಾಗೂ ಪಿಡಿಒಗಳ ಸಭೆ ಕರೆದು ಸಮಸ್ಯೆಗಳ ಬಗ್ಗೆ ಚರ್ಚಿಸಿ ಎಂಬ ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next