ಢಾಕಾ: “ಬಾಂಗ್ಲಾದೇಶ ವಿಮೋಚನೆಗಾಗಿ ನಾನೂ ಸತ್ಯಾಗ್ರಹ ನಡೆಸಿ ಜೈಲಿಗೆ ಹೋಗಿದ್ದೆ. ನನ್ನ ರಾಜಕೀಯ ಬದುಕಿನ ಮೊದಲ ಹೋರಾಟಗಳಲ್ಲಿ ಅದೂ ಒಂದಾಗಿತ್ತು…’
-ಪ್ರಧಾನಿ ಮೋದಿ ಅವರ ಮಾತಿದು. ಬಾಂಗ್ಲಾ ದೇಶದ 50ನೇ ಸ್ವಾತಂತ್ರೋತ್ಸವ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿರುವ ಅವರು, ಬಾಂಗ್ಲಾ ವಿಮೋಚನೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಬಾಂಗ್ಲಾ ವಿಮೋಚನೆಯಲ್ಲಿ ಭಾರತೀಯ ಸೇನೆ ನಿರ್ವಹಿಸಿದ್ದ ಪಾತ್ರದ ಬಗ್ಗೆ ಪ್ರಸ್ತಾವಿಸಿದರಲ್ಲದೆ ಭಾರತೀಯ ಯೋಧರನ್ನು ಕೊಂಡಾಡಿದರು.
ಬಾಂಗ್ಲಾದೇಶ ವಿಮೋಚನೆಯಲ್ಲಿ ವಂಗ ಬಂಧು ಶೇಖ್ ಮುಜೀಬುರ್ ರೆಹಮಾನ್ ಅವರ ನಾಯಕತ್ವ ಮತ್ತು ಭಾರತೀಯ ಸೇನೆಯ ತ್ಯಾಗ ಮತ್ತು ಬಲಿದಾನವನ್ನು ನೆನೆಯಬೇಕು. ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಭಾರತೀಯ ಸೇನೆಯ ವೀರ ಯೋಧರು ಹುತಾತ್ಮರಾಗಿದ್ದಾರೆ. ಈ ಯೋಧರಿಗೆ ನಮಿಸುತ್ತೇನೆ ಎಂದಿದ್ದಾರೆ.
“1971ರ ಬಾಂಗ್ಲಾ ವಿಮೋಚನೆಯ ದಿನಗಳು ಇನ್ನೂ ನೆನಪಿವೆ. ನನಗಾಗ 20-22 ವರ್ಷಗಳಾಗಿದ್ದಿರಬೇಕು, ನಾನು ಕಾಲೇಜಿನಲ್ಲಿ ಓದುತ್ತಿದ್ದೆ. ಬಾಂಗ್ಲಾ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ನಾನೂ ಭಾಗಿಯಾಗಿದ್ದೆ’ ಎಂದು ಮೋದಿ ನೆನಪಿಸಿಕೊಂಡರು.
ಕಾರ್ಯಕ್ರಮದ ಆರಂಭದಲ್ಲಿ ಶೇಖ್ ಮುಜೀಬುರ್ ರೆಹಮಾನ್ ಅವರಿಗೆ ಮರಣೋತ್ತರವಾಗಿ ಗಾಂಧಿ ಶಾಂತಿಪ್ರಶಸ್ತಿ ಪ್ರದಾನ ಮಾಡಲಾಯಿತು. ಮುಜೀಬುರ್ ರೆಹಮಾನ್ ಅವರ ಪರವಾಗಿ ಪುತ್ರಿಯರಾದ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಮತ್ತು ಶೇಕ್ ರೆಹಾನಾ ಅವರು ಪ್ರಶಸ್ತಿ ಸ್ವೀಕರಿಸಿದರು.