ಒಡಿಶಾ: ಸಾಗರೋತ್ತರ ಭಾರತೀಯರಿಗಾಗಿ ಆರಂಭಿಸಿದ ವಿಶೇಷ ಪ್ರವಾಸಿ ರೈಲು ‘ಪ್ರವಾಸಿ ಭಾರತೀಯ ಎಕ್ಸ್ಪ್ರೆಸ್’ಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ(ಜ.9) ಚಾಲನೆ ನೀಡಿದರು.
ಒಡಿಶಾದ ಭುವನೇಶ್ವರದಲ್ಲಿ ನಡೆದ ಪ್ರವಾಸಿ ಭಾರತೀಯ ದಿವಸ್ (ಪಿಬಿಡಿ) ಸಮಾವೇಶ ಉದ್ಘಾಟಿಸಿದ ಮೋದಿ, ಪ್ರವಾಸಿ ಭಾರತೀಯ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ನೀಡಿದರು. ರೈಲು ದೆಹಲಿಯ ನಿಜಾಮುದ್ದೀನ್ ರೈಲು ನಿಲ್ದಾಣದಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸಿ ಅನಿವಾಸಿ ಭಾರತೀಯರನ್ನು ಮೂರು ವಾರಗಳ ಕಾಲ ದೇಶಾದ್ಯಂತ ಅನೇಕ ಪ್ರವಾಸಿ ಮತ್ತು ಧಾರ್ಮಿಕ ಸ್ಥಳಗಳಿಗೆ ಕರೆದೊಯ್ಯುಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, “ಸ್ನೇಹಿತರೇ, ನಿಮ್ಮ ಅನುಕೂಲತೆ ಮತ್ತು ಮೂಲಭೂತ ಸೌಕರ್ಯಗಳಿಗೆ ನಾವು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೇವೆ. ನಿಮ್ಮ ಸುರಕ್ಷತೆ ಮತ್ತು ಯೋಗಕ್ಷೇಮ ನಮ್ಮ ಪ್ರಮುಖ ಆದ್ಯತೆಯಾಗಿದೆ. ನಮ್ಮ ಸಾಗರೋತ್ತರ ಭಾರತೀಯರು ಎಲ್ಲೇ ಇದ್ದರೂ ಬಿಕ್ಕಟ್ಟಿನ ಸಮಯದಲ್ಲಿ ಅವರಿಗೆ ಸಹಾಯ ಮಾಡುವುದು ನಮ್ಮ ಜವಾಬ್ದಾರಿ ಎಂದು ನಾವು ಪರಿಗಣಿಸುತ್ತೇವೆ. ಭಾರತವನ್ನು ಈಗ ‘ವಿಶ್ವ ಬಂಧು’ ಎಂದು ಕರೆಯಲಾಗುತ್ತಿದ್ದು, ಅದನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದರು.
ಪ್ರವಾಸಿ ಭಾರತೀಯ ದಿವಸ್ನ 18 ನೇ ಆವೃತ್ತಿಯನ್ನು ವಿದೇಶಾಂಗ ಸಚಿವಾಲಯ ಮತ್ತು ಒಡಿಶಾ ಸರ್ಕಾರವು ಜನವರಿ 8 ರಿಂದ ಜನವರಿ 10 ರವರೆಗೆ ಜಂಟಿಯಾಗಿ ಆಯೋಜಿಸುತ್ತಿರುವುದು ಗಮನಾರ್ಹ. ‘ಅಭಿವೃದ್ಧಿ ಹೊಂದಿದ ಭಾರತಕ್ಕೆ ಸಾಗರೋತ್ತರ ಭಾರತೀಯರ ಕೊಡುಗೆ’ ಎಂಬುದು ಈ ಸಮ್ಮೇಳನದ ವಿಷಯವಾಗಿದೆ ಎಂದು ಹೇಳಿದರು.