ಹೊಸದಿಲ್ಲಿ: ದಿಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರಚಾರ ಬಿರುಸುಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ. “ದಿಲ್ಲಿ ವಿಶ್ವದ ನಂ.1 ರಾಜಧಾನಿ ಎನಿಸಿಕೊಳ್ಳಬೇಕಿದ್ದರೆ, ಬಿಜೆಪಿ ಅಧಿಕಾರಕ್ಕೇರಿದರೆ ಮಾತ್ರ ಸಾಧ್ಯ’ ಎಂದು ಈ ವೇಳೆ ಅವರು ಹೇಳಿದರು.
ಬಿಜೆಪಿ ರವಿವಾರ ಆಯೋಜಿಸಿದ್ದ ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡಿದ ಮೋದಿ, “ದಿಲ್ಲಿಯಲ್ಲಿ ಕಮಲ ಅರಳುತ್ತದೆ ಎಂಬುದರ ಬಗ್ಗೆ ನನಗೆ ವಿಶ್ವಾಸವಿದೆ. ಬಿಜೆಪಿ ಮಾತ್ರ ದಿಲ್ಲಿಗೆ ವಿಶ್ವದ ಶ್ರೇಷ್ಠ ರಾಜಧಾನಿ ಎಂಬ ಖ್ಯಾತಿ ದೊರಕಿಸಿಕೊಡಬಲ್ಲದು. ದಿಲ್ಲಿಗೆ ಆಪತ್ತಾಗಿ ರುವ ಆಪ್ ಸರಕಾರವನ್ನು ನಿರ್ಮೂಲನೆ ಮಾಡಲು ಇದು ಉತ್ತಮ ಸಮಯ’ ಎಂದು ಹೇಳಿದರು.
ಆಪ್ ವಿರುದ್ಧ ವಾಗ್ಧಾಳಿ: 10 ವರ್ಷದಿಂದ ದಿಲ್ಲಿಯಲ್ಲಿ ಆಡಳಿತ ನಡೆಸುತ್ತಿರುವ ಆಪ್ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದ ಪ್ರಧಾನಿ, 10 ವರ್ಷಗಳಲ್ಲಿ ಆಪ್ ಯಾವುದೇ ಅಭಿವೃದ್ಧಿಯನ್ನು ಕೈಗೊಂಡಿಲ್ಲ ಎಂದರು. ಆಪ್ ಸರಕಾರ ಪ್ರತಿ ವರ್ಷ, ಹೊಸದಿಲ್ಲಿಯ ಪ್ರತಿ ಚಳಿಗಾಲವನ್ನು ಅಪಾಯಕಾರಿಯಾಗಿಸುತ್ತಿದೆ. ಒಂದು ವೇಳೆ ಆಪ್ ಸರಕಾರವನ್ನು ನೀವು ತೊಲಗಿಸಿದರೆ, ದಿಲ್ಲಿಯಲ್ಲಿ ಡಬ್ಬಲ್ ಎಂಜಿನ್ ಸರಕಾರ ಅಭಿವೃದ್ಧಿಯನ್ನು ಮಾಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಕೋವಿಡ್ ಕಾಲದಲ್ಲಿ ಶೀಶ್ಮಹಲ್ ಅಭಿವೃದ್ಧಿ: ಇಡೀ ದೇಶ ಕೋವಿಡ್ ಸಾಂಕ್ರಾಮಿಕದಿಂದ ನರಳುತ್ತಿ ದ್ದರೆ ಆಪ್ ಸರಕಾರ ಶೀಶ್ ಮಹಲ್ ನಿರ್ಮಾಣದಲ್ಲಿ ತೊಡಗಿತ್ತು ಎಂದು ಮೋದಿ ಆರೋಪಿಸಿದ್ದಾರೆ. ಅಂದು ದಿಲ್ಲಿ ಮುಖ್ಯಮಂತ್ರಿಯಾಗಿದ್ದ ಅರವಿಂದ ಕೇಜ್ರಿವಾಲ್ ಅವರ ನಿವಾಸದ ನವೀಕರಣಕ್ಕೆ ಭಾರೀ ಹಣ ಖರ್ಚು ಮಾಡಿದ್ದಾರೆ. ಆದರೆ ಕೇಂದ್ರ ಸರಕಾರ ಬಡವರ ಮನೆ ನಿರ್ಮಾಣಕ್ಕೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಹಣ ಬಿಡುಗಡೆ ಮಾಡುತ್ತಿದೆ ಎಂದು ಹೇಳಿದರು. ಕೇಜ್ರಿವಾಲ್ ಅವರು ತಮ್ಮ ನಿವಾಸದ ನವೀಕರಣಕ್ಕೆ 45 ಕೋಟಿ ರೂ. ವೆಚ್ಚ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸುತ್ತಿದೆ.
12,500 ಕೋಟಿ ರೂ. ಮೊತ್ತದ ಯೋಜನೆ ಉದ್ಘಾಟಿಸಿದ ಪ್ರಧಾನಿ
ಬಿಜೆಪಿಯ ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡುವುದಕ್ಕೂ ಮುನ್ನ ಹಲವು ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ ನೀಡಿದರು. ಬರೋಬ್ಬರಿ 12,500 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಮೋದಿ ಚಾಲನೆ ನೀಡಿದರು.
ದಿಲ್ಲಿ ಮೆಟ್ರೋ 4ನೇ ಹಂತದ ನಿಲ್ದಾಣ (1200 ಕೋಟಿ ರೂ.) ಉದ್ಘಾಟನೆ
ನಮೋ ಭಾರತ್ ಕಾರಿಡಾರ್ (4,600 ಕೋಟಿ ರೂ.)ಗೆ ಚಾಲನೆ
ರಿತಾಲ ಮೆಟ್ರೋ ಕಾಮಗಾರಿ (6,230 ಕೋಟಿ ರೂ.)ಗೆ ಶಂಕು
ದಿಲ್ಲಿ ನಾತುಪುರ್ ರಸ್ತೆ ಉದ್ಘಾಟನೆ
ಸ್ಟೇಟ್ ಆಫ್ ಆರ್ಟ್ ಕಟ್ಟಡ (185 ಕೋಟಿ ರೂ.) ಉದ್ಘಾಟನೆ