Advertisement
ಸುಮಾರು 9 ವರ್ಷಗಳಲ್ಲಿ 4 ಲೋಕಸಭೆ ಚುನಾವಣೆಗಳನ್ನು ನೋಡಿದ್ದೆವು. ಭಾರತದ ಜನರು ಸಹನೆ ಕಳೆದುಕೊಂಡಿದ್ದರು ಮತ್ತು ಸರಕಾರಗಳ ಕಾರ್ಯ ಸಾಮರ್ಥ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದರು. ಇಂಥ ಸಮಯದಲ್ಲಿ ಸ್ಥಿರ ಮತ್ತು ಪರಿಣಾಮಕಾರಿ ಆಡಳಿತ ನೀಡುವ ಮೂಲಕ ಈ ಪರಿಸ್ಥಿತಿಯನ್ನು ಬದಲಾಯಿಸಿದವರು ಅಟಲ್ ಅವರು. ಸಾಮಾನ್ಯ ಹಿನ್ನೆಲೆಯಿಂದ ಬಂದ ಅವರು ಸಾಮಾನ್ಯರ ಹೋರಾಟ ಮತ್ತು ಪರಿಣಾಮಕಾರಿ ಆಡಳಿತದ ಪರಿವರ್ತಕ ಶಕ್ತಿಯನ್ನು ಅರಿತುಕೊಂಡರು.
Related Articles
ಸಾಮಾಜಿಕ ಕ್ಷೇತ್ರದಲ್ಲಿ ಸರ್ವಶಿಕ್ಷಾ ಅಭಿಯಾನದಂಥ ಯೋಜನೆಗಳು ದೇಶಾದ್ಯಂತ ಜನರು, ವಿಶೇಷವಾಗಿ ಬಡವರು ಮತ್ತು ಅಂಚಿನಲ್ಲಿರುವವರು ಆಧುನಿಕ ಶಿಕ್ಷಣವನ್ನು ಪ್ರವೇಶಿಸುವ ಭಾರತವನ್ನು ನಿರ್ಮಿಸುವ ಕನಸನ್ನು ಅಟಲ್ ಅವರು ಕಂಡಿದ್ದರು ಎಂಬುದನ್ನು ಎತ್ತಿ ತೋರಿಸುತ್ತದೆ. ಹಾಗೆಯೇ ಅವರ ಸರಕಾರವು ಹಲವಾರು ಆರ್ಥಿಕ ಸುಧಾರಣೆಗಳನ್ನು ತಂದಿತು. ಇದು ಸ್ವಜನಪಕ್ಷಪಾತ ಮತ್ತು ನಿಶ್ಚಲತೆಯನ್ನು ಉತ್ತೇಜಿಸುವ ಆರ್ಥಿಕ ತತ್ವವನ್ನು ಅನುಸರಿಸಿದ ದಶಕಗಳ ಅನಂತರ ಭಾರತದ ಆರ್ಥಿಕ ಉತ್ಕರ್ಷಕ್ಕೆ ವೇದಿಕೆಯಾಯಿತು.
Advertisement
ಪರಮಾಣು ಪರೀಕ್ಷೆ ಪರಾಕ್ರಮವಾಜಪೇಯಿ ಅವರ ನಾಯಕತ್ವದ ಅದ್ಭುತ ಉದಾಹರಣೆಯನ್ನು 1998ರ ಬೇಸಗೆಯಲ್ಲಿ ಕಾಣಬಹುದು. ಅವರ ಸರಕಾರವು ಆಗತಾನೇ ಅಧಿಕಾರ ವಹಿಸಿಕೊಂಡಿತ್ತು ಮತ್ತು ಮೇ 11 ರಂದು ಭಾರತವು “ಆಪರೇಶನ್ ಶಕ್ತಿ’ ಹೆಸರಿನಲ್ಲಿ ಪೊಖಾರಣ್ನಲ್ಲಿ ಪರಮಾಣು ಪರೀಕ್ಷೆಗಳನ್ನು ನಡೆಸಿತು. ಈ ಪರೀಕ್ಷೆಗಳು ಭಾರತದ ವೈಜ್ಞಾನಿಕ ಸಮುದಾಯದ ಶಕ್ತಿಗೆ ಉದಾಹರಣೆಯಾದವು. ಭಾರತ ಈ ಪರೀಕ್ಷೆ ನಡೆಸಿದಾಗ ವಿಶ್ವವೇ ಬೆಚ್ಚಿಬಿದ್ದು, ಅಸಮಾಧಾನವನ್ನು ವ್ಯಕ್ತಪಡಿಸಿತು.
ಅಟಲ್ ಅವರು ಭಾರತೀಯ ಪ್ರಜಾಪ್ರಭುತ್ವವನ್ನು ಅರ್ಥಮಾಡಿಕೊಂಡರು ಮತ್ತು ಅದನ್ನು ಬಲಪಡಿಸುವ ಅಗತ್ಯವನ್ನೂ ಅರ್ಥೈಸಿಕೊಂಡರು. ಅಟಲ್ ಅವರು ಎನ್ಡಿಎಯ ಅಧ್ಯಕ್ಷತೆ ವಹಿಸಿದ್ದರು. ಇದು ಭಾರತೀಯ ರಾಜಕೀಯದಲ್ಲಿ ಮೈತ್ರಿಗಳನ್ನು ಮರು ವ್ಯಾಖ್ಯಾನಿಸಿತು. ಅವರು ಇತರರನ್ನು ಒಟ್ಟುಗೂಡಿಸಿದರು ಮತ್ತು ಎನ್ಡಿಎಯನ್ನು ಅಭಿವೃದ್ಧಿ, ರಾಷ್ಟ್ರೀಯ ಪ್ರಗತಿ ಮತ್ತು ಪ್ರಾದೇಶಿಕ ಮಹತ್ವಾಕಾಂಕ್ಷೆಗಳ ಶಕ್ತಿಯನ್ನಾಗಿ ಮಾಡಿದರು. ಅಟಲ್ ಅವರ ರಾಜಕೀಯ ಜೀವನದುದ್ದಕ್ಕೂ ಅವರ ಸಂಸದೀಯ ಪ್ರತಿಭೆ ಕಂಡುಬಂದಿದೆ. ಬೆರಳೆಣಿಕೆಯ ಸಂಸದರಿದ್ದ ಪಕ್ಷಕ್ಕೆ ಸೇರಿದ ಅವರು, ಆಗಿನ ಸರ್ವಶಕ್ತ ಕಾಂಗ್ರೆಸ್ ಪಕ್ಷದ ಅಧಿಕಾರವನ್ನೇ ಅಲ್ಲಾಡಿಸಲು ಅವರ ಮಾತು ಸಾಕಾಗಿತ್ತು. ಪ್ರಧಾನಿಯಾಗಿ ಅವರು ವಿಪಕ್ಷಗಳ ಟೀಕೆಗಳನ್ನು ತಮ್ಮ ಶೈಲಿ ಮತ್ತು ವಿಷಯದಿಂದ ಮೊಂಡಾಗಿಸಿದರು. ಅವರ ರಾಜಕೀಯ ಜೀವನವು ಹೆಚ್ಚಾಗಿ ವಿಪಕ್ಷದಲ್ಲಿಯೇ ಕಳೆಯಿತು, ಆದರೆ ಕಾಂಗ್ರೆಸ್ ಅವರನ್ನು ದೇಶದ್ರೋಹಿ ಎಂದು ಕರೆಯುವ ಕೀಳುಮಟ್ಟಕ್ಕೆ ಇಳಿದಾಗಲೂ ಅವರಲ್ಲಿ ಯಾರ ಬಗ್ಗೆಯೂ ಕಹಿಯ ಕುರುಹು ಕೂಡ ಇರಲಿಲ್ಲ! ಅವರು ಅವಕಾಶವಾದಿ ಮಾರ್ಗಗಳ ಮೂಲಕ ಅಧಿಕಾರಕ್ಕೆ ಅಂಟಿಕೊಂಡವರಲ್ಲ. 1996ರಲ್ಲಿ ಕುದುರೆ ವ್ಯಾಪಾರ ಮತ್ತು ಕೊಳಕು ರಾಜಕೀಯದ ಹಾದಿಯನ್ನು ಅನುಸರಿಸುವುದಕ್ಕಿಂತ ರಾಜೀನಾಮೆ ನೀಡುವುದು ಉತ್ತಮ ಎಂದು ಅವರು ಭಾವಿಸಿದರು. 1999ರಲ್ಲಿ ಅವರ ಸರಕಾರ ಒಂದು ಮತದಿಂದ ಸೋತಿತು. ಆ ಸಮಯದಲ್ಲಿ ನಡೆಯುತ್ತಿದ್ದ ಅನೈತಿಕ ರಾಜಕಾರಣವನ್ನು ಪ್ರಶ್ನಿಸುವಂತೆ ಅನೇಕರು ಕೇಳಿಕೊಂಡರು, ಆದರೆ ಅವರು ನಿಯಮಗಳನ್ನು ಅನುಸರಿಸಲು ಆದ್ಯತೆ ನೀಡಿದರು. ಅಂತಿಮವಾಗಿ ಅವರು ಜನರಿಂದ ಮತ್ತೂಂದು ಪ್ರಬಲ ಜನಾದೇಶದೊಂದಿಗೆ ಮರಳಿದರು. ಸಂವಿಧಾನ ರಕ್ಷಕ
ಸಂವಿಧಾನವನ್ನು ರಕ್ಷಿಸುವ ಬದ್ಧತೆಯ ವಿಷಯಕ್ಕೆ ಬಂದಾಗ, ಅಟಲ್ ಅವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಡಾ| ಶ್ಯಾಮಪ್ರಸಾದ್ ಮುಖರ್ಜಿಯವರ ಬಲಿದಾನದಿಂದ ಅವರು ಆಳವಾಗಿ ಪ್ರಭಾವಿತರಾಗಿದ್ದರು. ವರ್ಷಗಳ ಅನಂತರ ಅವರು ತುರ್ತು ಪರಿಸ್ಥಿತಿ ವಿರೋಧಿ ಚಳವಳಿಯ ಆಧಾರಸ್ತಂಭವಾಗಿದ್ದರು. ತುರ್ತು ಪರಿಸ್ಥಿತಿಯ ಅನಂತರ 1977ರ ಚುನಾವಣೆಯ ಸಮಯದಲ್ಲಿ ಅವರು ತಮ್ಮ ಪಕ್ಷ ಜನಸಂಘವನ್ನು ಜನತಾ ಪಕ್ಷದೊಂದಿಗೆ ವಿಲೀನಗೊಳಿಸಲು ಒಪ್ಪಿಕೊಂಡರು. ಇದು ಅವರಿಗೆ ಮತ್ತು ಇತರರಿಗೆ ನೋವಿನ ನಿರ್ಧಾರವಾಗಿತ್ತೆಂದು ನನಗೆ ಖಾತ್ರಿಯಿದೆ, ಆದರೆ ಸಂವಿಧಾನವನ್ನು ರಕ್ಷಿಸುವುದು ಅತ್ಯಂತ ಮುಖ್ಯವಾಗಿತ್ತು. ಭಾರತೀಯ ಸಂಸ್ಕೃತಿಯಲ್ಲಿ ಅಟಲ್ ಅವರು ಎಷ್ಟು ಆಳವಾಗಿ ಬೇರೂರಿದ್ದರು ಎಂಬುದು ಕೂಡ ಗಮನಾರ್ಹವಾಗಿದೆ. ಭಾರತದ ವಿದೇಶಾಂಗ ಸಚಿವರಾದ ಅನಂತರ ವಿಶ್ವಸಂಸ್ಥೆಯಲ್ಲಿ ಹಿಂದಿಯಲ್ಲಿ ಮಾತನಾಡಿದ ಮೊದಲ ಭಾರತೀಯ ನಾಯಕರಾದರು. ಇದು ಭಾರತದ ಪರಂಪರೆ ಮತ್ತು ಅಸ್ಮಿತೆಯ ಬಗ್ಗೆ ಅವರಿಗಿದ್ದ ಅಪಾರ ಹೆಮ್ಮೆಯನ್ನು ಪ್ರದರ್ಶಿಸಿತು, ಜಾಗತಿಕ ವೇದಿಕೆಯಲ್ಲಿ ಅಳಿಸಲಾಗದ ಗುರುತು ಮೂಡಿಸಿತು. ಆಕರ್ಷಕ ವ್ಯಕ್ತಿತ್ವ
ಅಟಲ್ ಅವರು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿದ್ದರು ಮತ್ತು ಅವರ ಸಾಹಿತ್ಯ ಮತ್ತು ಅಭಿವ್ಯಕ್ತಿಯ ಮೇಲಿನ ಪ್ರೀತಿಯಿಂದ ಅವರ ಜೀವನವು ಶ್ರೀಮಂತವಾಗಿತ್ತು. ಸೃಜನಶೀಲ ಬರಹಗಾರ ಮತ್ತು ಕವಿಯಾಗಿ ಅವರು ಸ್ಫೂರ್ತಿ ನೀಡಲು, ಆಲೋಚನೆಯನ್ನು ಪ್ರಚೋದಿಸಲು ಮತ್ತು ಸಾಂತ್ವನ ಹೇಳಲು ಪದಗಳನ್ನು ಬಳಸಿದರು. ರಾಷ್ಟ್ರಕ್ಕಾಗಿ ಅವರ ಆಂತರಿಕ ಹೋರಾಟಗಳು ಮತ್ತು ಭರವಸೆಗಳನ್ನು ಪ್ರತಿಬಿಂಬಿಸುವ ಅವರ ಕವಿತೆಗಳು ಎಲ್ಲ ವಯೋಮಾನದ ಜನರಲ್ಲಿ ಅನುರಣಿಸುತ್ತಲೇ ಇವೆ.
ವಾಜಪೇಯಿ ಅವರ 100ನೇ ಜನ್ಮ ವಾರ್ಷಿಕೋತ್ಸವದಂದು ಅವರ ಆದರ್ಶಗಳನ್ನು ಸಾಕಾರಗೊಳಿಸಲು ಮತ್ತು ಭಾರತಕ್ಕಾಗಿ ಅವರ ಕನಸನ್ನು ನನಸಾಗಿಸಲು ನಮ್ಮನ್ನು ಸಮರ್ಪಿಸಿಕೊಳ್ಳೋಣ. ಅವರ ಉತ್ತಮ ಆಡಳಿತ, ಏಕತೆ ಮತ್ತು ಪ್ರಗತಿಯ ತತ್ವಗಳನ್ನು ಒಳಗೊಂಡ ಭಾರತವನ್ನು ನಿರ್ಮಿಸಲು ನಾವು ಶ್ರಮಿಸೋಣ. ನಮ್ಮ ರಾಷ್ಟ್ರದ ಸಾಮರ್ಥ್ಯದ ಬಗ್ಗೆ ಅಟಲ್ಜೀ ಅವರ ಅಚಲವಾದ ನಂಬಿಕೆಯು ಉನ್ನತ ಗುರಿಗಾಗಿ ಹೆಚ್ಚು ಶ್ರಮಿಸಲು ನಮ್ಮನ್ನು ಪ್ರೇರೇಪಿಸುತ್ತಿದೆ. -ನರೇಂದ್ರ ಮೋದಿ, ಪ್ರಧಾನಿ