ಬೆಂಗಳೂರು: ಸಿನೆಮಾ ಬಿಡುಗಡೆಗೂ ಮೊದಲೇ ಆ ಚಿತ್ರದ ಬಗೆಗೆ ಪ್ರೇಕ್ಷಕ ವರ್ಗದವರ ಕ್ರೇಜ್ ಹೆಚ್ಚಾಗಬೇಕಾದ್ರೆ ಚಿತ್ರದ ಕಥೆಯಲ್ಲಿಯಲ್ಲಿ ಸ್ವಾರಸ್ಯವಿರಬೇಕು ಅನ್ನೋ ಸುಳಿವು ಸಿನಿಪ್ರೇಮಿಗಳಿಗೆ ಸಿಗಬೇಕು.
ಹೀಗೆ ರಿಲೀಸ್ ಗೂ ಮೊದಲೇ ನಿರೀಕ್ಷೆ, ಕುತೂಹಲ ಹುಟ್ಟುಹಾಕಿರೋ ಸಿನೆಮಾವೇ ವಿಕ್ರಂ ಪ್ರಭು ನಿರ್ದೇಶನದ ವೆಡ್ಡಿಂಗ್ ಗಿಫ್ಟ್. ಯಾರಿಗೆ ಆಗಲಿ ತಮ್ಮ ಜೀವನಕ್ಕೆ ತೀರ ಹತ್ತಿರವೆನಿಸೋ, ದಿನ ಪ್ರತಿ ಕಣ್ಣೆದುರು ಘಟಿಸೋ ಕಥೆಗಳನ್ನೇ ತೆರೆಯಮೇಲೆ ತರೋ ಪ್ರಯತ್ನವಾದಾಗ ಸಾಧಾರಣವಾಗಿ ಆ ಸಿನೆಮಾದ ಮೇಲೆ ಸಾಕಷ್ಟು ನಿರೀಕ್ಷೆಗಳು ಹುಟ್ಟುತ್ತವೆ.
ಬದುಕಿನ ಪ್ರಮುಖ ಘಟ್ಟದಲ್ಲಿ ಮದುವೆ ಅತಿ ಮುಖ್ಯ ಪಾತ್ರ ವಹಿಸುತ್ತೆ. ಸಂಬಂಧಗಳು ಬೆಸೆದು ಜೋಡಿಯಾಗುವ ಈ ಮದುವೆ ಸ್ವರ್ಗ ನಿಶ್ಚಿತ ಎಂಬ ಮಾತಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಇದು ಅಪವಾದವಾಗಿದೆ, ಯಾಕಂದ್ರೆ ಇವತ್ತಾದ ಮದುವೆ ಮೂರೇ ದಿನಕ್ಕೆ ಮುರಿದು ಬಿದ್ದು , ವಿಚ್ಚೇದನ ಕ್ಕಾಗಿ ಕೋರ್ಟ್ ಮೆಟ್ಟಿಲು ಹತ್ತುವ ಉದಾಹರಣೆಗಳು ಹೆಚ್ಚಾಗುತ್ತಿದೆ. ಅಮೂಲ್ಯ ಬಂಧ ಬೆಸೆಯುವ ಮದುವೆ ಇಂದು ಹಣದಾಸೆ, ಕಾನೂನಿನ ದುರ್ಬಳಕೆ, ಮುಗ್ಧ ಗಂಡನಿಗೆ ಕಾನೂನಾತ್ಮಕ ದೌರ್ಜನ್ಯ, ಯಾರದೋ ಮಾತಿಗೆ ಕಿವಿಯಾಗಿ ಮದುವೆಯ ಮೌಲ್ಯವರಿಯದ ಹೆಣ್ಣೊಬ್ಬಳ ಕಥೆಯ ಎಳೆ ಹಿಡಿದು ಈ ಕಥೆ ಸಾಗುತ್ತದೆ. ಸೀರಿಯಸ್ ವಿಚಾರಗಳನ್ನೇ ಮನರಂಜನೆಗೂ ಕೊರತೆಯಾಗದಂತೆ ಸಮಾಜಕ್ಕೊಂದು ಅರಿವು, ಜಾಗೃತಿ ಮೂಡಿಸ ಹೊರಟ ಚಿತ್ರವೇ ವೆಡ್ಡಿಂಗ್ ಗಿಫ್ಟ್.
ಈ ಚಿತ್ರದ ಇನ್ನೊಂದು ವಿಶೇಷ ವೆಂದರೆ ಚಿತ್ರರಂಗದಲ್ಲಿ ಒಂದುಕಾಲದಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ್ದ ಪ್ರೇಮಾ ಖಡಕ್ ಲಾಯರ್ ಪಾತ್ರದ ಮೂಲಕ ಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಬಹುವರ್ಷಗಳ ಬ್ರೇಕ್ ಬಳಿಕ ವೆಡ್ಡಿಂಗ್ ಗಿಫ್ಟ್ ನಲ್ಲಿ ಮತ್ತೆ ಪ್ರೇಮಾ ಬಣ್ಣ ಹಚ್ಚಿದ್ದಾರೆ ಅಂದ್ರೆ ಈ ಚಿತ್ರದಲ್ಲಿ ಏನೋ ವಿಶೇಷತೆ ಇದೆ ಅನ್ನೋದು ಅವರ ಅಭಿಮಾನಿಗಳಿಗೆ ಪಕ್ಕಾ ಆಗಿದೆ. ಯಾಕಂದ್ರೆ ನಾಯಕಿಯಾಗಿ ಬೆಳ್ಳಿತೆರೆಗೆ ಪ್ರೇಮಾ ಎಂಟ್ರಿ ಕೊಟ್ಟಾಗಿನಿಂದ ಅವರು ನಿರ್ವಹಿಸಿರುವ ಪಾತ್ರಗಳು ಒಂದಕ್ಕಿಂತ ಒಂದು ಮರೆಯದಂತೆ ಮನಸಲ್ಲಿ ಇಂದಿಗೂ ಉಳಿದಿವೆ. ಪಾತ್ರಗಳ ಆಯ್ಕೆಯಲ್ಲಿ ಮೊದಲಿನಿಂದಲೂ ದಿ ಬೆಸ್ಟ್ ಅನಿಸಿಕೊಂಡಿದ್ದ ಇವರು ವೆಡ್ಡಿಂಗ್ ಗಿಫ್ಟ್ ಮೂಲಕ ಮತ್ತೊಮ್ಮೆ ಚಿತ್ರರಂಗಕ್ಕೆ ಬರುತ್ತಿದ್ದಾರೆ.
ಜುಲೈ 8 ರಂದು ರಾಜ್ಯಾದ್ಯಂತ ವೆಡ್ಡಿಂಗ್ ಗಿಫ್ಟ್ ಚಿತ್ರ ತೆರೆಕಾಣಲಿದೆ. ಈ ಮೂಲಕ ನಟಿ ಪ್ರೇಮಾ ಚಿತ್ರ ಬದುಕಿನ ಎರಡನೇ ಇನ್ನಿಂಗ್ಸ್‌ಗೆ ಭರ್ಜರಿ ಓಪನಿಂಗ್ ಸಿಗುತ್ತದೆಂಬ ನಂಬಿಕೆಯೊಂದಿಗೆ, ವೆಡ್ಡಿಂಗ್ ಗಿಫ್ಟ್ ಕಣ್ತುಂಬಿಕೊಂಡ ಪ್ರೇಕ್ಷಕರ ಅಭಿಪ್ರಾಯ ಪಡೆಯಲು ಚಿತ್ರತಂಡ ತಯಾರಾಗಿದೆ.