Advertisement

Prakruthi Soundarya; ಪ್ರಕೃತಿ ಮಡಿಲಿಗೆ ಹೊಸ ಸಿನಿಮಾ

05:59 PM Dec 13, 2024 | Team Udayavani |

ಕನ್ನಡ ಚಿತ್ರರಂಗದಲ್ಲಿ ಇದೀಗ ಸಾಕಷ್ಟು ಹೊಸ ಪ್ರತಿಭೆಗಳ ಆಗಮನವಾಗುತ್ತಿದೆ. ಹಾಗೆ ಬಂದವರಲ್ಲಿ ಸರಳ ಸುಂದರಿಯಾದ ಪ್ರಕೃತಿ ಸೌಂದರ್ಯ ಕೂಡ ಒಬ್ಬರು. ಯಾರು ಈ ಪ್ರಕೃತಿ ಎಂದರೆ, ನೀವು ದುನಿಯಾ ವಿಜಯ್‌ ನಿರ್ದೇಶನದ ಭೀಮ ಚಿತ್ರ ನೆನಪಿಸಿ ಕೊಳ್ಳಬೇಕು. ಆ ಚಿತ್ರದಲ್ಲಿ ಡ್ರಾಗನ್‌ ಮಂಜು ಪತ್ನಿಯಾಗಿ ರಗಡ್‌ ಅವತಾರದಲ್ಲಿ ಕಾಣಿಸಿಕೊಂಡಿದ್ದ ಇವರ ಪಾತ್ರ ಎಲ್ಲರ ಗಮನ ಸೆಳೆದಿತ್ತು.

Advertisement

ಮೂಲತಃ ತುಮಕೂರಿನವರಾದ ಪ್ರಕೃತಿ ಸೌಂದರ್ಯ, ಚಿಕ್ಕಂದಿನಿಂದಲೇ ಕಲೆಯ ನಂಟು ಬೆಳೆಸಿಕೊಂಡವರು. ಇವರ ತಾತ ರಂಗಭೂಮಿ ಕಲಾವಿದರಾಗಿ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದರು. ಕಾಲೇಜು ದಿನಗಳಲ್ಲಿ ಗಾಯಕಿಯಾಗಿ ಗುರುತಿಸಿ ಕೊಂಡಿದ್ದ ಪ್ರಕೃತಿ ಸೌಂದರ್ಯಗೆ, ಸ್ನೇಹಿತೆ ಯರೆಲ್ಲ “ನೀನು ಚೆನ್ನಾಗಿ ದ್ದೀಯ, ಹಾಡುವುದ ಕ್ಕಿಂತ ನಟನೆ ಮಾಡಿದರೆ ಚೆನ್ನಾಗಿರುತ್ತೆ’ ಎಂದು ಸಲಹೆ ನೀಡಿದರಂತೆ. ಆ ಮಾತನ್ನೇ ಆಳವಾಗಿ ತೆಗೆದುಕೊಂಡ ಪ್ರಕೃತಿ “ನಾನು ನಟಿಯಾಗಿ ಬೆಳೆಯಬೇಕು ಎಂದು ಕನಸು ಕಟ್ಟಿಕೊಂಡಿದ್ದಾರೆ. ನಂತರ ಸ್ನೇಹಿತರೊಬ್ಬರ ಸಹಾಯದಿಂದ ಕಿರುತೆರೆಯ “ಗೀತಾ’ ಧಾರಾವಾಹಿಯಲ್ಲಿ ಸಣ್ಣದೊಂದು ಪಾತ್ರ ಗಿಟ್ಟಿಸಿಕೊಂಡರು.

ಆನಂತರ ಸಿಕ್ಕ ದೊಡ್ಡ ಅವಕಾಶವೇ “ಕನ್ಯಾದಾನ’. ಈ ಸೀರಿಯಲ್‌ನ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡ ಪ್ರಕೃತಿ ಸೌಂದರ್ಯ ತಮ್ಮ ಅಭಿನಯದಿಂದ ಎಲ್ಲರ ಗಮನ ಸೆಳೆದರು. ಅದಾದ ನಂತರ ದುನಿಯಾ ವಿಜಯ್‌, ತಮ್ಮ ಭೀಮ ಚಿತ್ರದ ಪ್ರಮುಖ ಪಾತ್ರಕ್ಕೆ ಇವರೇ ಸೂಕ್ತ ಎಂದು ಆಯ್ಕೆ ಮಾಡಿಕೊಂಡರು. ಭೀಮ ಚಿತ್ರದ ಪಾತ್ರ ನೋಡಿ, ತೆಲುಗು ಚಿತ್ರರಂಗದಿಂದಲೂ ಸದ್ಯ ಇವರಿಗೆ ಹಲವು ಆಫ‌ರ್‌ಗಳು ಬರುತ್ತಿವೆ.

ಈಗಾಗಲೇ ತೆಲುಗು ಸೀರಿಯಲ್‌ ಒಂದರಲ್ಲಿ ಕೂಡ ಪ್ರಕೃತಿ ಸೌಂದರ್ಯ ಅಭಿನಯಿಸಿದ್ದಾರೆ. ಸದ್ಯ ಕನ್ನಡದ ಬಿಗ್‌ ಪ್ರಾಜೆಕ್ಟ್ ವೊಂದರಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದ್ದು, ಅದರ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡುವುದಾಗಿ ಹೇಳಿದ ಪ್ರಕೃತಿ ಸೌಂದರ್ಯ ಅವರಿಗೆ, ತಾನು ಜನರು ಗುರುತಿಸುವ ಹಾಗೂ ಅಭಿನಯಕ್ಕೆ ಹೆಚ್ಚು ಅವಕಾಶ ಇರುವ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆಂಬ ಕನಸಿದೆ.

Advertisement

Udayavani is now on Telegram. Click here to join our channel and stay updated with the latest news.

Next