ತಿರುವನಂತಪುರಂ: ಮಾಲಿವುಡ್ (Mollywood) ಚಿತ್ರರಂಗದ ಹಿರಿಯ ನಟಿ ಮೀನಾ ಗಣೇಶ್ ( Meena Ganesh) ಗುರುವಾರ (ಡಿ.19 ರಂದು) ನಿಧನ ಹೊಂದಿದರು.
ಮೀನಾ ಗಣೇಶ್ (81) ಕೇರಳದ ಒಟ್ಟಪಾಲಂನಲ್ಲಿರುವ ತಮ್ಮ ಮನೆಯಲ್ಲಿ ನಿಧನರಾದರು. ಕೆಲ ಸಮಯದಿಂದ ಪಾರ್ಶ್ವವಾಯುವಿಗೆ ತುತ್ತಾಗಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ವರದಿ ತಿಳಿಸಿದೆ.
ಮಾಲಿವುಡ್ ಚಿತ್ರರಂಗದಲ್ಲಿ ಅಪಾರ ಸಾಧನೆಗೈದ ಮೀನಾ ಗಣೇಶ್ 1942 ರಲ್ಲಿ ಪಾಲಕ್ಕಾಡ್ನಲ್ಲಿ ಜನಿಸಿದರು. ಅವರು ತಮ್ಮ 19 ನೇ ವಯಸ್ಸಿನಲ್ಲಿ ರಂಗಭೂಮಿ ಕಲಾವಿದರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.
ಇದನ್ನೂ ಓದಿ: Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
1976 ರಲ್ಲಿ ಮಣಿಮುಳಕಂ ಚಿತ್ರದಲ್ಲಿ ಸಣ್ಣ ಪಾತ್ರದ ಮೂಲಕ ಚಿತ್ರರಂಗಕ್ಕೆ ಅವರು ಪಾದಾರ್ಪಣೆ ಮಾಡಿದರು. 1991 ರ ʼಮುಖಚಿತ್ರಂʼ ಚಿತ್ರದಲ್ಲಿನ ಪಾತುಮ್ಮ ಎನ್ನುವ ಪಾತ್ರ ಅವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿತು.
ಮೀನಾ ಸುಮಾರು 105 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ತಮ್ಮ ವೃತ್ತಿಜೀವನದಲ್ಲಿ ಮೋಹನ್ಲಾಲ್, ಪೃಥ್ವಿರಾಜ್ ಸುಕುಮಾರನ್, ಮಮ್ಮುಟ್ಟಿ, ಕಲಾಭವನ್ ಮಣಿ ಮತ್ತು ದಿಲೀಪ್ ಸೇರಿದಂತೆ ಅನೇಕ ಹೆಸರಾಂತ ನಟರೊಂದಿಗೆ ಕೆಲಸ ಮಾಡಿದ್ದಾರೆ.
ʼಮಣಿಮುಝಕ್ಕಂʼ, ʼಮಂದನ್ಮಾರ್ ಲೋಂಡನಿಲ್ʼ, ʼಪ್ರಶ್ನಮ್ ಗುರುತರಂʼ, ʼಭಗವಾನ್ʼ, ʼನಖಕ್ಷತಂಗಳ್ʼ, ʼಮುಖ ಚಿತ್ರಂʼ, ʼತಾಳಯನಮಂತ್ರಂʼ, ʼಉತ್ಸವಮೇಳಂʼ, ʼವಲಯಂʼ, ʼಪೊನ್ನರಾಮತೂಟ್ಟತೆ ರಾಜಾವುʼ, ʼಸ್ನೇಹಸಾಗರಂʼ, ʼಗೊಲಾಂತರಾವರ್ತʼ, ʼಭೂಮಿಗೀತಂʼ, ʼಸಾಕ್ಷಲ್ ಶ್ರೀಮಾನ್ ಚತುರ್ಥಿ ಶ್ರೀಮಾನ್ ಚತುಷ್ಮಾರ್ʼ ಮುಂತಾದ ಸಿನಿಮಾದಲ್ಲಿನ ಅವರ ಅಭಿನಯ ಜನ ಮೆಚ್ಚುಗೆ ಗಳಿಸಿತು.
ಸಿನಿಮಾರಂಗ ಮಾತ್ರವಲ್ಲದೆ ಕಿರುತೆಯಲ್ಲೂ ಅವರು ಖ್ಯಾತಿಗಳಿಸಿದ್ದರು. ʼಗೀತಾಂಜಲಿʼ, ʼದೇವರಗಂʼ, ʼಸ್ನೇಹತೀರಂʼ, ʼವೆಲಂಕಣಿ ಮಾತಾವುʼ, ʼರಾಮಾಯಣಂʼ, ʼಕಲ್ಕತ್ತಾ ಆಸ್ಪತ್ರೆʼ, ʼಎಂಟು ಸುಂದರಿಕಳುಂ ನಾನುಂʼ, ʼʼಮಾಂಗಲ್ಯಂ, ʼಕಲ್ಯಾಣವೀರನ್ʼ, ʼಕಾರುಣ್ಯಂʼ, ʼವಯಲ್ಕಿಲಿಕಲ್ʼ, ʼಸ್ತ್ರೀ, ಮಿನ್ನುಕೆಟ್ಟುʼ, ʼಆ ಅಮ್ಮʼ ಧಾರಾವಾಹಿಗಳಲ್ಲಿ ನಟಿಸಿದ್ದರು.
ಮೀನಾ ಅವರು ದಿವಂಗತ ರಂಗಭೂಮಿ ಕಲಾವಿದ ಎಎನ್ ಗಣೇಶ್ ಅವರನ್ನು ವಿವಾಹವಾಗಿದ್ದರು. ಅವರಿಗೆ ಸಂಗೀತಾ ಎಂಬ ಮಗಳು ಮತ್ತು ಮನೋಜ್ ಗಣೇಶ್ ಎಂಬ ಮಕ್ಕಳಿದ್ದಾರೆ.
ನಟಿಯ ಅಂತ್ಯಕ್ರಿಯೆ ಗುರುವಾರ(ಡಿ.19 ರಂದು) ಸಂಜೆ 4 ಗಂಟೆಗೆ ಶಾಂತಿತೀರಂನಲ್ಲಿ ನಡೆಯಲಿದೆ.