“ನೀಲವಂತಿ’ ಎಂಬ ಸಿನಿಮಾವೊಂದು ಆರಂಭವಾಗಿದೆ. ಇತ್ತೀಚೆಗೆ ಈ ಚಿತ್ರದ ಟೈಟಲ್ ಅನಾವರಣವಾಯಿತು.
ಕರಣ್ ಆರ್ಯನ್ ಈ ಚಿತ್ರದ ನಾಯಕ. ಈ ಚಿತ್ರದ ಬಗ್ಗೆ ಮಾತನಾಡುವ ಅವರು, “ಒಂದಷ್ಟು ಸಿನಿಮಾಗಳಲ್ಲಿ ಖಳನಾಯಕನಾಗಿ ನಟಿಸುತ್ತಿದ್ದೆ. ನಾನು ಮೊದಲು ಹಾರರ್ ಚಿತ್ರದ ಮೂಲಕವೇ ಇಂಡಸ್ಟ್ರೀಗೆ ಬಂದಿದ್ದು. ಆದರೆ ಅಷ್ಟು ಸಕ್ಸಸ್ ಸಿಗಲಿಲ್ಲ. ಹೀಗಾಗಿ ಖಳನಾಯಕನಾಗಿ ಸಿನಿಮಾ ಮಾಡೋಣಾ. ಆ ಬಳಿಕ ಹೀರೋ ಆಗಬೇಕು ಎಂದುಕೊಂಡಿದ್ದೆ. ಒಂದಷ್ಟು ದೊಡ್ಡ ದೊಡ್ಡ ಪ್ರೊಡಕ್ಷನ್ ನಲ್ಲಿ ವಿಲನ್ ಆಗಿ ನಟಿಸಿದ್ದೇನೆ. ಈಗ ಹೀರೋ ಆಗಿ ಲವ್ ಹಾಗೂ ಮಾಸ್ ಸಬ್ಜೆಕ್ಟ್ ಮಾಡುತ್ತಿದ್ದೇನೆ. ನೀಲವಂತಿ ಹಾರರ್ ಸಿನಿಮಾ. ಕಥೆ ಬಹಳ ವಿಭಿನ್ನ ಎನಿಸಿತು. ಇದು ನೈಜ ಘಟನೆಯಾಧಾರಿತ ಚಿತ್ರ. ಯಾರೂ ಮಾಡದ ಕಥೆಯನ್ನು ಮಾಡಿದ್ದೇವೆ. ನಾವು ರಿಸ್ಕ್ ತೆಗೆದುಕೊಂಡು ಈ ಚಿತ್ರ ಮಾಡಿದ್ದೇವೆ’ ಎಂದರು.
ನಿರ್ದೇಶಕ ಶ್ರೀಮುರಳಿ ಪ್ರಸಾದ್ ಮಾತನಾಡಿ, “ನೀಲವಂತಿ ಸಿನಿಮಾ ಎಲ್ಲರಿಗೂ ಇಷ್ಟವಾಗಲಿದೆ. ನನ್ನ ಸ್ನೇಹಿತ ಕಥೆ ಇಷ್ಟಪಟ್ಟು ಚಿತ್ರ ನಿರ್ಮಾಣ ಮಾಡಿದ್ದಾರೆ. ನೀಲವಂತಿ ಅನ್ನೋದು ಒಂದು ಗ್ರಂಥ. ಅದನ್ನು ಇಟ್ಕೊಂಡು ಫಿಕ್ಷನಲ್ ಸಿನಿಮಾ ಮಾಡುತ್ತಿದ್ದೇವೆ’ ಎಂದರು.
ಮಲಯಾಳಂ ನಟಿ ಮೋಕ್ಷಾ ಈ ಚಿತ್ರದ ನಾಯಕಿ. ಉಳಿದಂತೆ ಕಾರ್ತಿಕ್ ಸುಂದರಂ, ದೀಪಿಕಾ ಕೆಟಿ, ಕಾವ್ಯ ಗೌಡ, ವಿರಾಟ್, ಭಾರ್ಗವ್, ಭಾಸ್ಕರ ಗೌಡ, ಆನಂದ ಕೆಂಗೇರಿ , ವಂಶಿ ಗೌಡ, ಕ್ಯಾಂಡಿ ದಾಸ್, ಧನಿ ಬೋಸ್ ತಾರಾಬಳಗದಲ್ಲಿದ್ದಾರೆ.
ಕೋಗರ ಸಿನಿ ಕ್ರಿಯೇಷನ್ ಬ್ಯಾನರ್‌ನಡಿ ಮುಕುಂದ್ ಕೋಗರ ನೀಲವಂತಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಗಗನ್ ಗೌಡ ಕ್ಯಾಮೆರಾ ಹಿಡಿಯುವುದರ ಜೊತೆಗೆ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆಕಾಶ್ ಸಂಕಲನ ಚಿತ್ರಕ್ಕಿದೆ. ಚಿತ್ರೀಕರಣ ಈಗಾಗಲೇ ಶೇ 30ರಷ್ಟು ಮುಗಿದಿದೆ. ಎರಡನೇ ಹಂತದ ಚಿತ್ರೀಕರಣವನ್ನು ಸಕಲೇಶಪುರ, ಕಳಸ ಸುತ್ತಮುತ್ತ ಚಿತ್ರೀಕರಿಸಲು ಚಿತ್ರತಂಡ ಸಜ್ಜಾಗಿದೆ.