Advertisement

ತಪಾಸಣೆಗೆ ನೀರಿನ ಮಾದರಿ ಸಂಗ್ರಹ

01:20 PM Aug 15, 2017 | |

ಹುಮನಾಬಾದ: ಕೈಗಾರಿಕಾ ಪ್ರದೇಶದ ವಿವಿಧ ಕಾರ್ಖಾನೆಗಳ ರಾಸಾಯನಿಕ ಮಿಶ್ರಿತ ತ್ಯಾಜ್ಯ ಹಳ್ಳಗಳ ಮೂಲಕ ಕಾರಂಜಾ
ಜಲಾಶಯಕ್ಕೆ ಸೇರುತ್ತಿರುವ ಹಿನ್ನೆಲೆಯಲ್ಲಿ ಉದಯವಾಣಿ ಪ್ರಕಟಿಸಿದ ವರದಿಗೆ ಸ್ಪಂದಿಸಿ ಆರೋಗ್ಯ ಅಧಿಕಾರಿಗಳು ಸೋಮವಾರ ಗಡವಂತಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆರೋಗ್ಯ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡರು. ಈ ಹಿಂದೆ ಕೆಲ ಬಾರಿ ನೀರಿನ ತಪಾಸಣೆ ನಡೆಸಿದ್ದು, ನೀರು ಕುಡಿಯಲು ಯೋಗ್ಯ ಎಂದು ವರದಿ ಬರುತ್ತಿದೆ. ಗಡವಂತಿ ಗ್ರಾಮದ ನೀರು ಎಂದ ಕೂಡಲೆ ಪ್ರಯೋಗಾಲಯಗಳು ಪರೀಕ್ಷೆಗೆ ಮುಂದಾಗುತ್ತಿಲ್ಲ. ನೀರು ತಪಾಸಣೆಯ ಮಧ್ಯದಲ್ಲಿ ಅನೇಕ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು. ಗ್ರಾಮಕ್ಕೆ ಭೇಟಿ ನೀಡುವ ಅಧಿಕಾರಿಗಳು ಇಲ್ಲಿನ ನೀರು
ಕುಡಿದರೆ ನಮ್ಮ ಆತ್ಮತೃಪ್ತಿಯಾಗುತ್ತದೆ. ಕಾರಣ ಇಲ್ಲಿನ ನೀರಿನಲ್ಲಿರುವ ಸಮಸ್ಯೆಯ ನಿಜ ಸ್ಥಿತಿ ಅಧಿಕಾರಿಗಳಿಗೂ ಗೊತ್ತಾಗುತ್ತದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು. ಗ್ರಾಮಸ್ಥರು ಅನೇಕ ಬಾರಿ ಅಧಿಕಾರಿಗಳಿಗೆ ದೂರು ನೀಡಿದರೂ ಸ್ಪಂದಿಸದವರು ಇಂದು ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದಾರೆ. ನಮ್ಮಗೂ ಜೀವವಿದೆ ಎಂದು ತಿಳಿದು ಮಾನವೀಯತೆ ಆಧಾರದಲ್ಲಿ ಕೆಲಸ ಮಾಡಿ ಎಂದು ಮನವಿ ಮಾಡಿದರು. ತಾಲೂಕು ಆರೋಗ್ಯಾಧಿ ಕಾರಿ ಡಾ| ಅಶೋಕ ಮೈಲಾರೆ, ಪ್ರತ್ರಿಕೆಯಲ್ಲಿ ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಕಣ್ಗಾವಲು ಘಟಕದ ಅ ಧಿಕಾರಿಗಳ ಸೂಚನೆ ಮೇರೆಗೆ ಗ್ರಾಮಕ್ಕೆ ಭೇಟಿ ನೀಡಿದ್ದು, ಗ್ರಾಮದ ವಿವಿಧೆಡೆಯ ನೀರಿನ ಮಾದರಿ ಪಡೆದು ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ನೀರಿನ ಮಾದರಿಯನ್ನು ಸುರಕ್ಷಿತವಾಗಿ ಸೀಲ್‌ ಮಾಡಿ ಕಳುಹಿಸಲಾಗುವುದು ಎಂದರು. ವರದಿಯಲ್ಲಿ ಪಾರದರ್ಶಕತೆ ಇರಬೇಕು. ನಿಮ್ಮ ವರದಿ ಬಂದ ನಂತರ ಗ್ರಾಮಸ್ಥರು ಒಟ್ಟಾಗಿ ಗ್ರಾಮದ ನೀರಿನ ಮಾದರಿಯನ್ನು ದೊಡ್ಡ ಪ್ರಯೋಗಾಲಯಕ್ಕೆ ಕಳುಹಿಸುವುದಾಗಿ ಕೆಲವರು ತಿಳಿಸಿದರು. ಡಾ| ವಿಜಕುಮಾರ ಸೂರ್ಯವಂಶಿ, ಇದೀಗ ನೀರು ತಪಾಸಣೆಗೆ ಕೂಡ ಆಧುನಿಕ ಯಂತ್ರಗಳನ್ನು ಬಳಸಲಾಗುತ್ತಿದ್ದು, ವರದಿಯಲ್ಲಿ ಯಾವುದೇ ತೊಂದರೆ
ಆಗುವುದಿಲ್ಲ ಎಂದರು. ಸಾರ್ವಜನಿಕರ ಸಮ್ಮುಖದಲ್ಲಿ ಅಧಿಕಾರಿಗಳು ವಿವಿಧ ಬಾವಿ ಹಾಗೂ ಹಳ್ಳದ 12 ಕಡೆಯ ನೀರಿನ ಮಾದರಿ ಸಂಗ್ರಹಿಸಿದರು. ಮಾಣಿಕನಗರ ಗ್ರಾಪಂ ಅಧ್ಯಕ್ಷ ಬಸವರಾಜ ಮಾಲಿ ಪಾಟೀಲ, ಪಿಡಿಒ ಭಾಗ್ಯಜೋತಿ, ಗ್ರಾಪಂ ಸದಸ್ಯರಾದ ಜಿತೇಂದ್ರ ತುಂಬಾ, ವಿನೋಂದಕುಮಾರ, ಮಾಣಿಕವಾಡೇಕರ್‌, ಮಹಾದೇವ ಮೊಳಕೇರಾ, ತಾಪಂ ಮಾಜಿ ಸದಸ್ಯ ಗಜೇಂದ್ರ ಕನಕಟ್ಟಕರ್‌, ಓಂಕಾರ ತುಂಬಾ, ಈಶ್ವರ ಕಲಬುರ್ಗಿ, ರಾಜಕುಮಾರ ಇಟಗಿ ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next