ಚಿಕ್ಕೋಡಿ: ಕೃಷ್ಣಾ ನದಿಯಿಂದ ಚಿಕ್ಕೋಡಿ ಹಾಗೂ ಬಾಣಂತಿಕೋಡಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪೂರ್ಣಗೊಂಡಿದ್ದು, ಬೇಸಿಗೆಯಲ್ಲಿ ನೀರಿನ ಸಮಸ್ಯೆ ದೂರಾಗಲಿದೆ ಎಂದು ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಹೇಳಿದರು.
ಅಂಕಲಿ ಬಳಿ ಕೃಷ್ಣಾ ನದಿ ಹತ್ತಿರ ಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಒಟ್ಟು 10 ಕೋಟಿ ರೂ. ಅಂದಾಜು ವೆಚ್ಚದ ಯೋಜನೆಗೆ 2019 ರಲ್ಲಿ ಚಾಲನೆ ನೀಡಲಾಗಿತ್ತು. ಈಗ ಕಾಮಗಾರಿ ಪೂರ್ಣಗೊಂಡಿದೆ ಎಂದರು.
ಚಿಕ್ಕೋಡಿ-ಸದಲಗಾ ಕ್ಷೇತ್ರದ 2 ಕೆರೆಗಳಿಗೆ ನೀರು ತುಂಬುವ ಯೋಜನೆ ಇದಾಗಿದ್ದು, ಒಟ್ಟು 19 ಕಿ.ಮೀ ಪೈಪ್‌ಲೈನ್ ಮೂಲಕ ಕೆರೆಗಳಿಗೆ ನೀರು ತುಂಬಿಸಲಾಗಿದೆ. ಈ ಕೆರೆಗಳು ತುಂಬುವುದರಿಂದ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಜನಸಾಮಾನ್ಯರು, ರೈತರು ಹಾಗೂ ಜಾನುವಾರುಗಳಿಗೆ ಅನುಕೂಲವಾಗಲಿದೆ. ತಾಲೂಕಿನ ಬಹುತೇಕ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮುಕ್ತಿ ದೊರೆತಿದ್ದು, ಹಲವಾರು ವರ್ಷಗಳಿಂದ ಬರಿದಾಗಿದ್ದ ಕೆರೆಗಳು ಭರ್ತಿಯಾಗಿ ಜೀವಕಳೆ ಪಡೆದಿವೆ ಹಾಗೂ ಯೋಜನೆ ಕಾಮಗಾರಿ ಪೂರ್ಣಗೊಳ್ಳುವವೆರೆಗೂ ಸಹಕರಿಸಿದ ರೈತರಿಗೆ ಧನ್ಯವಾದ ತಿಳಿಸಿದರು.
ಚಿಕ್ಕೋಡಿ-ಬಾಣಂತಿಕೋಡಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಲ್ಲಿ 250 ಎಂಎಂ ವ್ಯಾಸದ ಎಂ.ಎಸ್ ಪೈಪ್‌ಗ್ಳನ್ನು 16.25 ಕಿ.ಮೀ ಉದ್ದದಷ್ಟು, 250 ಎಂಎಂ ವ್ಯಾಸದ ಎಚ್‌ಡಿಪಿಇ ಪೈಪ್‌ಗ್ಳನ್ನು 2.95 ಕಿ.ಮೀ ಉದ್ದದಷ್ಟು ಹಾಗೂ 140 ಎಂಎಂ ವ್ಯಾಸದ ಎಚ್‌ಡಿಪಿಇ ಪೈಪ್‌ಗ್ಳನ್ನು 60 ಮೀಟರ್ ಉದ್ದದಷ್ಟು ಬಳಸಲಾಗಿದೆ. ಪೈಪ್‌ಲೈನ್ ಮೂಲಕ ನೀರು ಹರಿದು ಬರುತ್ತಿರುವುದರಿಂದ ಈ ಕೆರೆ ಬೃಹತ್ ಪ್ರಮಾಣದ ನೀರು ತನ್ನ ಒಡಲಿಗೆ ತುಂಬಿಕೊಳ್ಳುತ್ತಿದೆ. ಚಿಕ್ಕೋಡಿಯ ಹಾಲಟ್ಟಿ ಕೆರೆ 10.00 ಎಂಸಿಎಫ್‌ಟಿ ನೀರಿನ ಸಾಮರ್ಥ್ಯ ಹಾಗೂ ಬಾಣಂತಿಕೋಡಿಯ ಕೆರೆ 2.50 ಎಂಸಿಎಫ್‌ಟಿ ನೀರಿನ ಸಾಮರ್ಥ್ಯ ಹೊಂದಿದೆ. ಕೆರೆ ತುಂಬುವ ಯೋಜನೆ ಪೂರ್ಣಗೊಂಡಿರುವುದರಿಂದ ಕ್ಷೇತ್ರದ ರೈತರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ ಹಾಗೂ ಕೆರೆ ತುಂಬುತ್ತಿರುವ ಹಿನ್ನೆಲೆಯಲ್ಲಿ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು ಭಾಗಿನ ಅರ್ಪಿಸಬೇಕು ಎಂದರು.
ಈ ವೇಳೆ ಸುರೇಶ ಕೋರೆ, ರಂಜಿತ ಶಿರಶೆಟ್, ವರ್ಧಮಾನ ಸದಲಗೆ, ರಾಮಾ ಮಾನೆ, ಗುಲಾಬಹುಸೇನ್ ಬಾಗವಾನ, ಸಾಬಿರ್ ಜಮಾದಾರ, ಮುದ್ದು ಜಮಾದಾರ, ಇರ್ಫಾನ್ ಬೇಪಾರಿ, ಅನಿಲ ಮಾನೆ, ವೀರೇಂದ್ರ ಪಾಟೀಲ ಸೇರಿದಂತೆ ಅಂಕಲಿ, ಕಾಡಾಪೂರ, ಕೇರೂರ ಗ್ರಾಮದ ರೈತರು, ಮುಖಂಡರು ಇದ್ದರು.