Advertisement

Mangaluru; ಹರೇಕಳದಿಂದಲೂ ನಗರಕ್ಕೆ ನೀರು

02:38 PM Dec 31, 2024 | Team Udayavani |

ಮಹಾನಗರ: ಮಂಗಳೂರು ನಗರದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು, ಅಡ್ಯಾರ್‌ – ಹರೇಕಳ ಅಣೆಕಟ್ಟಿನಿಂದ ಮಂಗಳೂರು ನಗರಕ್ಕೆ ಹೆಚ್ಚುವರಿ ಕುಡಿಯುವ ನೀರು ಪಡೆಯುವ ಜಲಸಿರಿ ಯೋಜನೆಯ ಬಹುಮಹತ್ವದ ಕಾಮಗಾರಿಗಳಲ್ಲಿ ಒಂದಾಗಿರುವ ನೀರು ಶುದ್ಧೀಕರಣ ಘಟಕ (ಡಬ್ಲೂ$Âಟಿಪಿ) ನಿರ್ಮಾಣ ಕಾಮಗಾರಿ ಅಡ್ಯಾರ್‌ನಲ್ಲಿ ಅಣೆಕಟ್ಟಿಗೆ ಹೊಂದಿಕೊಂಡಂತೆ ಭರದಿಂದ ಸಾಗಿದೆ.

Advertisement

ನಗರಕ್ಕೆ ಪ್ರಸ್ತುತ ತುಂಬೆ ಅಣೆಕಟ್ಟಿನಿಂದ ನಿತ್ಯ 160 ಎಂಎಲ್‌ಡಿ ನೀರು ಸರಬರಾಜು ಆಗುತ್ತಿದ್ದರೂ, ಅಲ್ಲಲ್ಲಿ ನೀರಿನ ಲೀಕೇಜ್‌, ಸ್ಥಳೀಯ ಗ್ರಾ.ಪಂ.ಗಳಿಗೆ ಪೂರೈಕೆ, ಕೊಳವೆಯಿಂದಲೇ ಅಕ್ರಮ ಸಂಪರ್ಕ ಮೊದಲಾದ ಕಾರಣಗಳಿಂದಾಗಿ 140 ಎಂಎಲ್‌ಡಿ ನೀರು ಮಾತ್ರ ನಗರಕ್ಕೆ ತಲುಪುತ್ತಿದೆ. ಜಲಸಿರಿ ಯೋಜನೆಯಡಿ 24 ಗಂಟೆ ನೀರು ಪೂರೈಕೆಗೂ ಇದರಿಂದ ಅಡ್ಡಿಯಾಗಲಿದೆ. ಆದ್ದರಿಂದ ಹೆಚ್ಚುವರಿ ನೀರಿಗಾಗಿ ಅಡ್ಯಾರ್‌ – ಹರೇಕಳ ಅಣೆಕಟ್ಟಿನ ಮೊರೆ ಹೋಗಲು ನಿರ್ಧರಿಸಲಾಗಿದೆ.

10 ಎಕರೆ ಜಾಗದಲ್ಲಿ ಘಟಕ
ಅಡ್ಯಾರ್‌ನಲ್ಲಿ ನೇತ್ರಾವತಿ ನದಿ ತಟದಲ್ಲಿ 10 ಎಕರೆ ಪ್ರದೇಶ ಶುದ್ದೀಕರಣ ಘಟಕ ನಿರ್ಮಾಣವಾಗಲಿದ್ದು, ನಗರದಲ್ಲಿ ಜಲಸಿರಿ ಕಾಮಗಾರಿ ನಿರ್ವಹಿಸುತ್ತಿರುವ ಸುಯೇಝ್ ಪ್ರಾಜೆಕ್ಟ್$Õ ಸಂಸ್ಥೆಯೇ ಘಟಕದ ಕಾಮಗಾರಿಯನ್ನೂ ನಡೆಸುತ್ತಿದೆ. ಸುಮಾರು 128 ಕೋ.ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ಪೈಲ್‌ ಫೌಂಡೇಶನ್‌ ಕಾಮಗಾರಿ
ಘಟಕ ನಿರ್ಮಾಣದ ಪೂರ್ವಭಾವಿಯಾಗಿ ಪೈಲ್‌ ಫೌಂಡೇಶನ್‌ ಕೆಲಸಗಳು ಭರದಿಂದ ಸಾಗಿದೆ. ನದಿ ತೀರವಾಗಿರುವುದರಿಂದ ಅಡಿಪಾಯ ಗಟ್ಟಿಯಾಗಿರಬೇಕಾದ ಅಗತ್ಯವಿದ್ದು, ಇದಕ್ಕಾಗಿ 640 ಪೈಲ್‌ ಫೌಂಡೇಶನ್‌ ನಿರ್ಮಿಸಲಾಗುತ್ತಿದೆ. ಮುಂದಿನ ಮಳೆಗಾಲದ ಒಳಗಾಗಿ ಪೈಲ್‌ ಫೌಂಡೇಶನ್‌ ಕಾಮಗಾರಿ ಮುಗಿಸುವ ಉದ್ದೇಶ ಹೊಂದಲಾಗಿದೆ. ಮಳೆಗಾಲದ ನಾಲ್ಕು ತಿಂಗಳು ನದಿಯಲ್ಲಿ ನೀರಿನ ಮಟ್ಟ ಹೆಚ್ಚಿರುವುದರಿಂದ ಕಾಮಗಾರಿಗೆ ಅಡ್ಡಿಯಾಗುತ್ತದೆ. ಜೆಸಿಬಿ, ಟಿಪ್ಪರ್‌ಗಳ ಮೊದಲಾದ ಕಾಮಗಾರಿಗೆ ಸಂಬಂಧಿಸಿದ ವಾಹನಗಳ ಸಂಚಾರಕ್ಕೂ ಅಡ್ಡಿಯಾಗುತ್ತದೆ. ಆದ್ದರಿಂದ ಮಣ್ಣು ತುಂಬಿಸಿ ಸ್ಥಳವನ್ನು ಎತ್ತರ ಮಾಡುವ ಕೆಲಸವೂ ಸಾಗಿದೆ.

Advertisement

ಅಡ್ಯಾರ್‌ – ಹರೇಕಳ ಅಣೆಕಟ್ಟು
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ನೇತ್ರಾವತಿ ನದಿಗೆ ಅಡ್ಡಲಾಗಿ ಅಡ್ಯಾರ್‌ – ಹರೇಕಳ ನಡುವೆ ಸೇತುವೆ ಸಹಿತ ಉಪ್ಪು ನೀರು ತಡೆ ಅಣೆಕಟ್ಟು ನಿರ್ಮಿಸಿದೆ. ತುಂಬೆ ಅಣೆಕಟ್ಟಿನಿಂದ ಹರೇಕಳ ಡ್ಯಾಂ ವರೆಗೆ 3.50 ಕಿ.ಮೀ. ಅಂತರವಿದ್ದು, ನಾಲ್ಕು ಮೀಟರ್‌ ಎತ್ತರ ಈ ಡ್ಯಾಂನಲ್ಲಿ 51 ಕ್ರಸ್ಟ್‌ ಗೇಟ್‌ಗಳಿವೆ. ಅಣೆಕಟ್ಟಿನಲ್ಲಿ 0.6 ಟಿಎಂಸಿ ನೀರು ಸಂಗ್ರಹ ಸಾಧ್ಯವಿದೆ. ಪ್ರಸ್ತುತ ಕೆಲವು ಗೇಟ್‌ಗಳನ್ನು ತೆರೆದು ನೀರು ಹೊರಗೆ ಹರಿಯಬಿಡಲಾಗುತ್ತಿದೆ.

ಸಮಾನಾಂತರ ಪೈಪ್‌ಲೈನ್‌
ಘಟಕದಿಂದ ಶುದ್ದೀಕರಿಸಿದ ನೀರನ್ನು ಮಂಗಳೂರು ನಗರಕ್ಕೆ ಪೂರೈಕೆ ಮಾಡುವ ನಿಟ್ಟಿನಲ್ಲಿ ಘಟಕದ ಸ್ಥಳದಿಂದ ಹೆದ್ದಾರಿ ವರೆಗೆ 500 ಮೀ. ದೂರ ಪೈಪ್‌ ಅಳವಡಿಕೆಗೆ ಈಗಾಗಲೇ ಸ್ಥಳ ಗುರುತು ಮಾಡಲಾಗಿದೆ. ಅಲ್ಲಿಂದ ಮುಂದಕ್ಕೆ ತುಂಬೆಯಿಂದ ನಗರಕ್ಕೆ ನೀರು ಪೂರೈಕೆ ಮಾಡುವ ಪೈಪ್‌ಲೈನ್‌ಗೆ ಸಮಾನಾಂತರವಾಗಿ ಈ ಪೈಪ್‌ಲೈನ್‌ ಹಾದು ಹೋಗಲಿದೆ. ಅಡ್ಯಾರ್‌ನಿಂದ ಪಡೀಲ್‌ ಪಂಪ್‌ಹೌಸ್‌ ವರೆಗೆ, ಅಲ್ಲಿಂದ ಪಣಂಬೂರು ವರೆಗೆ ಕೊಳವೆ ಅಳವಡಿಸುವ ಅಗತ್ಯವಿದೆ. 1200 ಮಿ.ಮೀ. ವ್ಯಾಸದ ಪೈಪ್‌ ಮೂಲಕ ನೀರು ಸರಬರಾಜು ನಡೆಯಲಿದೆ.

ಶುದ್ದೀಕರಣ ಘಟಕ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಇದು ಜಲಸಿರಿ ಯೋಜನೆ ಯಲ್ಲಿ ಹೆಚ್ಚುವರಿಯಾಗಿ ಸೇರ್ಪಡೆಯಾಗಿರುವ ಕಾಮಗಾರಿ. ಯೋಜನಾ ಅವಧಿ 18 ತಿಂಗಳು. ಈಗಾ ಗಲೇ ಮಳೆಗಾಲದಲ್ಲಿ ನದಿ ನೀರಿನ ಪ್ರಮಾಣ ಹೆಚ್ಚಿದ್ದ ರಿಂದ ಸಮಸ್ಯೆಯಾಗಿದೆ. ಮುಂದಿನ ಮಳೆಗಾಲದ ಒಳಗಾಗಿ ಪಿಲ್ಲರ್‌ಗಳನ್ನು ಮುಗಿಸಿ, ಮುಂದಿನ ಹಂತದ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.
– ಸುರೇಶ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌

-ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next