Advertisement

ರಸ್ತೆ, ತೋಡೂ ಇಲ್ಲ; ನೆರೆ, ಸಾಂಕ್ರಾಮಿಕ ರೋಗದ ಭೀತಿ

02:15 AM Jun 18, 2018 | Karthik A |

ಕುಂದಾಪುರ: ಪುರಸಭೆ ವ್ಯಾಪ್ತಿಯ 4ನೇ ವಾರ್ಡ್‌ ಆಗಿರುವ ಖಾರ್ವಿಕೇರಿಯಲ್ಲಿ ಕೆಲವು ಕಡೆ ಚರಂಡಿ ಸ್ವಚ್ಛತೆ ಮಾಡಿದ್ದರೆ, ಮತ್ತೆ ಕೆಲವು ಕಡೆ ಹಾಗೆಯೇ ಇದೆ. ಇನ್ನು ಕೆಲವು ಕಡೆ ಸರಿಯಾದ ರಸ್ತೆ ಇಲ್ಲ, ನೀರು ಹರಿದು ಹೋಗಲು ತೋಡೂ ಇಲ್ಲ ಎನ್ನುವ ಪರಿಸ್ಥಿತಿ ಇಲ್ಲಿನದು. ಖಾರ್ವಿಕೇರಿ ವಾರ್ಡ್‌ನ ಶ್ರೀ ವೆಂಕಟರಮಣ ದೇವಸ್ಥಾನದ ಬಳಿಯಿಂದ ಮಳೆ ನೀರು ಹರಿದು ಹೋಗಲು ಸರಿಯಾದ ತೋಡಿನ ವ್ಯವಸ್ಥೆಯಿಲ್ಲ. ನಡೆದಾಡಲು ಇರುವ ದಾರಿಯೇ ತೋಡಾಗಿದೆ. ಕೊಳಚೆ ನೀರು ಕೂಡ ಇದೇ ದಾರಿಯಲ್ಲಿ ಹರಿದು ಹೋಗುತ್ತಿದೆ. ಈ ಭಾಗದಲ್ಲಿ ಸುಮಾರು 20 ರಿಂದ 25 ಮನೆಗಳಿದ್ದು, ಇಲ್ಲಿ ನೀರು ಹರಿದು ಹೋಗಲು ವ್ಯವಸ್ಥೆ ಇಲ್ಲದ್ದರಿಂದ ಸಮಸ್ಯೆ ಹೊಂದಿದ್ದಾರೆ. ಮಳೆ ಬಂದಾಗ ನೆರೆಭೀತಿ ಆವರಿಸುತ್ತದೆ.

Advertisement

ಸಾಂಕ್ರಾಮಿಕ ರೋಗದ ಭೀತಿ
ಕೊಳಚೆ ನೀರು ಹರಿದು ಹೋಗಲು ಒಳಚರಂಡಿ ವ್ಯವಸ್ಥೆಯಿಲ್ಲ. ಇದು ಅಲ್ಲಲ್ಲಿ ನಿಲ್ಲುತ್ತಿದ್ದು, ಸೊಳ್ಳೆ ಉತ್ಪತ್ತಿ ಕೇಂದ್ರವಾಗಿ ಮಾರ್ಪಟ್ಟು ಸಾಂಕ್ರಾಮಿಕ ರೋಗ ಭೀತಿ ಆವರಿಸಿದೆ. ಈ ಕುರಿತು 2-3 ವರ್ಷಗಳ ಹಿಂದೆಯೇ ಪುರಸಭೆಯಾಡಳಿತಕ್ಕೆ ಇಲ್ಲಿನ ಸ್ಥಳೀಯರೆಲ್ಲ ಭೇಟಿ ನೀಡಿ ಆಗುತ್ತಿರುವ ಸಮಸ್ಯೆ ಕುರಿತು ಮನವರಿಕೆ ಮಾಡಿ, ತೋಡಿನ ಬೇಡಿಕೆಯಿಟ್ಟರೂ ಕೂಡ ಈವರೆಗೆ ಪುರಸಭೆ ಮಾತ್ರ ಸಕಾರಾತ್ಮಕವಾಗಿ ಸ್ಪಂದಿಸುವ ಗೋಜಿಗೆ ಹೋಗದಿರುವುದು ವಿಪರ್ಯಾಸವೇ ಸರಿ.

75 ಮನೆಗಳಿಗೆ ಮೂರೇ ಶೌಚಾಲಯ
ಖಾರ್ವಿಕೇರಿ ವಾರ್ಡಿನ ಬಹುತೇಕ ಎಲ್ಲ ಮನೆಗಳಲ್ಲಿಯೂ ವೈಯಕ್ತಿಕ ಶೌಚಾಲಯ ಇಲ್ಲ. ಇಲ್ಲಿರುವ ಸುಮಾರು 75 ಮನೆಗಳಿಗೆ ಕೇವಲ ಮೂರೇ ಸಾರ್ವಜನಿಕ ಶೌಚಾಲಯವಿದೆ. 

ಸ್ವಚ್ಛತೆ ಪೂರ್ಣ
ವಾರ್ಡ್‌ ವ್ಯಾಪ್ತಿಯ ಚರಂಡಿ ಸ್ವಚ್ಛತಾ ಕಾರ್ಯ ಪೂರ್ಣಗೊಂಡಿದೆ. ಪ್ರತಿ ವಾರ್ಡ್‌ಗಳಲ್ಲಿಯೂ ಸ್ವಚ್ಛತಾ ಕಾರ್ಯ ಮಾಡುತ್ತಿದ್ದೇವೆ. ವೆಂಕಟರಮಣ ದೇವಸ್ಥಾನದ ಹಿತ್ತಲಲ್ಲಿ ಒಳಚರಂಡಿ ಮಾಡಬೇಕು ಎಂದು ನಾವು ಕೂಡ ಪ್ರಯತ್ನ ಪಡುತ್ತಿದ್ದು, ಆದರೆ ಅದಕ್ಕೆ ಜನ, ಹಾಗೂ ದೇವಸ್ಥಾನದವರು ಅವಕಾಶ ಮಾಡಿಕೊಡಬೇಕಿದೆ.  
– ವಸಂತಿ ಮೋಹನ ಸಾರಂಗ, ಪುರಸಭಾಧ್ಯಕ್ಷೆ

ಇದೇ ಕೆಲಸ
ಮಳೆ ನೀರು ಹರಿದು ಹೋಗಲು ಸರಿಯಾದ ತೋಡಿನ ವ್ಯವಸ್ಥೆಯಿಲ್ಲದ ಕಾರಣ ನಮ್ಮ – ನಮ್ಮ ಮನೆಗಳಿಗೆ ನೀರು ಹರಿದು ಬರುತ್ತಿರುವುದರಿಂದ ಅದನ್ನು ಸರಿಪಡಿಸುವುದೇ ಈಗ ನಮ್ಮ ಕೆಲಸ. 
-ಮುಕುಂದ ಖಾರ್ವಿ, ಸ್ಥಳೀಯರು

Advertisement

ತೋಡಿದ್ದೇ ಸಮಸ್ಯೆ
ಕೆಲವು ಕಡೆಗಳಲ್ಲಿ ಚರಂಡಿಯ ಸ್ವಚ್ಛತೆ ಆಗಿದೆ. ಆದರೆ ನಮಗೆ ಬೇರೆಯೆಲ್ಲದ್ದಕ್ಕಿಂತ ತೋಡಿನದ್ದೇ ಸಮಸ್ಯೆ ದೊಡ್ಡದು. 
– ಸುರೇಶ್‌ ಖಾರ್ವಿ, ಸ್ಥಳೀಯರು

ರಸ್ತೆ ಇಲ್ಲ 
ನಮ್ಮ ಈ ವಾರ್ಡಿನ ಒಳಭಾಗದಲ್ಲಿ ತೋಡು ಮಾತ್ರವಲ್ಲ. ರೋಡಿನ ವ್ಯವಸ್ಥೆಯೂ ಇಲ್ಲ. 2 ವರ್ಷ ದಿಂದ ನಾವು ದೂರಿತ್ತರೂ ಕೇಳುವವರೇ ಇಲ್ಲ. 
– ವಿಜಯ್‌, ಸ್ಥಳೀಯರು

ಹಲವು ಸಲ ದೂರು
ಇಲ್ಲಿ ಸರಿಯಾದ ತೋಡು ಹಾಗೂ ರೋಡು ಇಲ್ಲದ ಕಾರಣ ವಾಹನದಲ್ಲಿ ಬರುವುದು ಬಿಡಿ, ಕನಿಷ್ಠ ನಡೆದುಕೊಂಡು ಬರಲು ಕಷ್ಟವಾಗುತ್ತಿದೆ.
– ಲಕ್ಷ್ಮಣ್‌ ಖಾರ್ವಿ, ಸ್ಥಳೀಯರು 

Advertisement

Udayavani is now on Telegram. Click here to join our channel and stay updated with the latest news.

Next