Advertisement

ಇಲ್ಲಗಳ ನಡುವೆ ಅಲೆಮಾರಿ ಬದುಕು!

05:16 PM May 07, 2018 | |

ಹೊಸಪೇಟೆ: ವಾಸಿಸಲು ಮನೆ ಇಲ್ಲ, ವಿದ್ಯುತ್‌ ಇಲ್ಲ, ಕುಡಿಯಲು ನೀರಿಲ್ಲ, ಓಡಾಡಲು ರಸ್ತೆ ಇಲ್ಲ, ಸರ್ಕಾರದ ಸೌಲಭ್ಯಗಳು ಇಲ್ಲವೇ ಇಲ್ಲ… ಹೀಗೆ ಇಲ್ಲಗಳ ನಡುವೆಯೇ ಅಲೆಮಾರಿ ಕುಟುಂಬಗಳು ಬದುಕು ಸಾಗಿಸುತ್ತಿವೆ. ನಗರದ ಹೊರ ವಲಯದ ಜಂಬುನಾಥಹಳ್ಳಿಯ ಆಶ್ರಯ ಕಾಲೋನಿಯಲ್ಲಿ ನೂರಾರು ಅಲೆಮಾರಿ ಕುಟುಂಬಗಳು ಸೇರಿದಂತೆ ಇತರೆ ಕುಟುಂಬಗಳು ವಾಸಿಸುತ್ತಿವೆ. ಊರೂರು ಅಲೆಯುವ ಈ ಕುಟುಂಬಗಳು ಆಶ್ರಯ ಕಾಲೋನಿಗೆ ಬಂದು ಸುಮಾರು 15 ವರ್ಷಗಳಾದವು.

Advertisement

ಸುಡುಗಾಡಸಿದ್ಧರು, ಬುಡ್ಗಜಂಗಮ್ಮ, ಸಿಂದೋಳು, ಹಕ್ಕಿಪಿಕ್ಕಿ, ಸಿಳ್ಳೆಕ್ಯಾತ ಸೇರಿದಂತೆ ಕೊರಚರು ಸಮಾಜದ 180 ಕುಟುಂಬಗಳು, ಹಾಗೂ ನಗರದಲ್ಲಿ ರಸ್ತೆ ಅಗಲಿಕರಣದ ವೇಳೆ ನಿರಾಶ್ರಿತರಾದ ದಲಿತರು, ಅಲ್ಪಸಂಖ್ಯಾತ ಸಮುದಾಯದ ಸುಮಾರು 130 ಕುಟುಂಬಗಳು ಈಗ ಎದುರಿಸುತ್ತಿರುವ ಸಮಸ್ಯೆಗಳು ಅವರಿಗಲ್ಲದೇ ಮತ್ಯಾರಿಗೂ ಅರ್ಥವಾಗುತ್ತಿಲ್ಲ. ದೇವರೇ ಭೂಮಿಗಿಳಿದು ಬಂದು ಸರಿ ಮಾಡಿದರೂ ಸರಿಯಾಗದಷ್ಟು ಘೋರ ಸಮಸ್ಯೆಗಳನ್ನು ಈ ಅಲೆಮಾರಿಗಳು ಎದುರಿಸುತ್ತಿದ್ದಾರೆ. ಯಾವೂರಿಂದ
ಬಂದಿದ್ದಾರೋ ಇವರಿಗೂ ಗೊತ್ತಿಲ್ಲ. ಹೊಟ್ಟೆ ಪಾಡಿಗಾಗಿ ಅಲೆಯುತ್ತಾ, ಅಲೆಯುತ್ತಾ ನಗರ ಆಶ್ರಯ ಕಾಲೋನಿಗೆ ಬಂದು ನೆಲೆ ನಿಂತಿದ್ದೇವೆ. ಇಲ್ಲಿ ಹರಕು-ಮುರುಕು ಟೆಂಟ್‌ ಹಾಕಿಕೊಂಡು ಭಯದ ವಾತಾವರಣದಲ್ಲಿ ವಾಸಿಸುತ್ತಿದ್ದೇವೆ ಎನ್ನುತ್ತಾರೆ ಸಮುದಾಯದ ಹಿರಿಯರು.

ವಾಸಕ್ಕೂ ಸೂರಿಲ್ಲ: ಕೆಲವು ಕುಟುಂಬಗಳಿಗೆ ಅವರ ಹೆಸರಿನ ಪಟ್ಟಾ ಇದೆ. ಇನ್ನೂ ಕೆಲವು ಕುಟುಂಬಗಳಿಗೆ ವಾಸಿಸುವ ನೆಲದ ಪಟ್ಟಾ ಇಲ್ಲಾ. ಕೆಲವರಿಗೆ ನಗರಸಭೆಯಿಂದ ವಿವಿಧ ವಸತಿ ಯೋಜನೆಯಡಿ ಮನೆಗಳು ದೊರೆತಿವೆ. ಆದರೆ ಇನ್ನೂ ಹಲವು ಕುಟುಂಬಗಳಿಗೆ ಸೂರಿನಭಾಗ್ಯ ಇಲ್ಲದಂತಾಗಿದೆ.

ಶಿಕ್ಷಣದಿಂದ ದೂರ: ಊರೂರು ಅಲೆಯುತ್ತ ಬಂದಿರುವ ಇವರ ಪೂರ್ವಜರಾಗಲಿ ಈಗಿರುವ ಸಮುದಾಯದ ಜನರಾಗಲಿ ಯಾರೂ ಶಾಲೆಗೆ ಹೋಗಿಲ್ಲ ! ಎಲ್ಲರೂ ಅವಿದ್ಯಾವಂತರೇ. ಕೆಲವೇ ಆಶ್ರಯ ಕಾಲೋನಿಯಲ್ಲಿ ತಾತ್ಕಾಲಿವಾಗಿ ನಿರ್ಮಿಸಿರುವ ಸರ್ಕಾರಿ ಟೆಂಟ್‌ ಶಾಲೆಗೆ ಹೋಗುತ್ತಿದ್ದಾರೆ. ಇನ್ನೂ ಕೆಲವು ಮಕ್ಕಳು ಶಾಲೆಯಿಂದ ದೂರವೇ ಉಳಿದಿದ್ದಾರೆ.
 
310 ಕುಟುಂಬಗಳು: ಸುಡುಗಾಡಸಿದ್ಧರು, ಬುಡ್ಗಜಂಗಮ್ಮ, ಸಿಂದೋಳು, ಸಿಳ್ಳೆಕ್ಯಾತ ಸೇರಿದಂತೆ ಕೊರಚರು ಸಮಾಜದ 180 ಕುಟುಂಬಗಳು ಸೇರಿದಂತೆ ದಲಿತರು, ಅಲ್ಪಸಂಖ್ಯಾತ ಸಮುದಾಯದ ಸುಮಾರು 130 ಕುಟುಂಬಗಳು ಕುಟುಂಬಗಳು ಟೆಂಟ್‌ಗಳಲ್ಲಿ ವಾಸವಾಗಿವೆ.
 
ಪಟ್ಟಾ ವಿತರಣೆ: ನಗರದ ಅನಂತಶಯನಗುಡಿ ಹತ್ತಿರ ಇದ್ದ ಈ ಕುಟುಂಬಗಳಿಗೆ 8 ವರ್ಷಗಳ ಹಿಂದೆ 96 ಕುಟುಂಬಗಳಿಗೆ ಪಟ್ಟಾ ದೊರೆತಿದೆ. ಇನ್ನು ಸುಮಾರು 214 ಕುಟುಂಬಗಳಿಗೆ ಪಟ್ಟಾ ದೊರೆತಿಲ್ಲ. ಪಟ್ಟಾ ದೊರೆತಿರುವ 96 ಕುಟುಂಬಗಳಿಗೆ ಸ್ವಂತ ಮನೆ ಕಟ್ಟಿಕೊಳ್ಳುವ ಭಾಗ್ಯವೇ ಇದುವರೆಗೂ ದೊರೆತಿಲ್ಲ. 

ಕೆಲವರಿಗೆ ಮನೆ ಬಂದರೂ ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತಿವೆ ಆಶ್ರಯ ಮನೆಗಳು. ನಿಮಗೆ ಮನೆ ಬಂದಿವೆ ಎಂದು ಯಾರೋ ಹೇಳಿದ್ದರಿಂದ ಮನೆ ಕಟ್ಟಲು ಬೇಕಾಗುವ ಹೆಂಚು, ಇಟ್ಟಿಗೆಗಳನ್ನು ತಂದಿಟ್ಟುಕೊಂಡಿದ್ದರು. ಐದು ವರ್ಷಗಳಾದರೂ ನಿವೇಶನ ಮಂಜೂರಾಗದೇ ಮನೆ ಕಟ್ಟುವ ಸಾಮಗ್ರಿಗಳು ಹಾಳಾಗಿ ಹೋದವು ಎನ್ನುತ್ತಾರೆ ಕುಟುಂಬದ ಹಿರಿಯರು. ಇದೀಗ ವಾಸಿಸುವ ಜಾಗದಲ್ಲಿ ಹಾವು, ಚೇಳು ಓಡಾಡುತ್ತವೆ. ರಸ್ತೆ, ಚರಂಡಿಗಳಿಲ್ಲ. ಯಾರೂ ಇವರಿಗೆ ಸೌಲಭ್ಯ ಒದಗಿಸಲು ಮುಂದಾಗಿಲ್ಲ.

Advertisement

ಧೂಳಿನ ಭಾಗ್ಯ: ಆಶ್ರಯ ಕಾಲೋನಿಯು ಹೊಸಪೇಟೆ ಹಾಗೂ ಬಳ್ಳಾರಿಗೆ ಸಂರ್ಪಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವ ಮೈನಿಂಗ್‌ ಲಾರಿಗಳು ಹಾಗೂ ಭಾರಿ ವಾಹನದಿಂದ ಕಾಲೋನಿಯಲ್ಲಿ ಸುಮಾರು 150ಕ್ಕೂ ಹೆಚ್ಚು ಜನರಿಗೆ ಆಸ್ತಮ ಕಾಯಿಲೆಯಿಂದ ಬಳಲಿದರೆ, ಕೆಲವರು ಮೃತಪಟ್ಟಿದ್ದಾರೆ. ನಗರ ಸಭೆಗೆ ಹಾಗೂ ಜನ ಪ್ರತಿನಿಧಿಗಳಿಗೆ ಹೇಳಿದರೆ ಯಾವುದೇ ಪ್ರಯೋಜನವಾಗಿಲ್ಲ. ಕೇವಲ ಚುನಾವಣೆಯಲ್ಲಿ ಭರವಸೆ ನೀಡಿ, ನಂತರ ನಮ್ಮ ಪಾಡು ಕೇಳುವರು ಇರಲ್ಲ ಎಂದು ಜನಪ್ರತಿನಿಧಿಗಳಿಗೆ ಹಾಗೂ
ಅಧಿಕಾರಿಗಳಿಗೆ ಕಾಲೋನಿಯ ಜನ ಹಿಡಿಶಾಪ ಹಾಕುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next