Advertisement

Belthangady: 14 ವರ್ಷ ಜೀವನ್ಮರಣ ಸ್ಥಿತಿಯಲ್ಲಿದ್ದ ಶಿಕ್ಷಕಿ ಸಾವು

12:35 AM Dec 21, 2024 | Team Udayavani |

ಬೆಳ್ತಂಗಡಿ: ಸಂತೆಕಟ್ಟೆ ಅಯ್ಯಪ್ಪ ಮಂದಿರದ ಬಳಿ 2010ರ ಜುಲೈ 30ರಂದು ಸಂಭವಿಸಿದ ಭೀಕರ ಅಪಘಾತದಲ್ಲಿ ತೀವ್ರ ಗಾಯಗೊಂಡು 14 ವರ್ಷ ಜೀವನ್ಮರಣ ಸ್ಥಿತಿಯಲ್ಲಿದ್ದ ಕಳಿಯ ಗ್ರಾಮದ ಉಬರಡ್ಕ ನಿವಾಸಿ ದಿ. ಕುಂರ್ಬಿಲ ಹಾಗೂ ಲಕ್ಷ್ಮೀ ದಂಪತಿ ಪುತ್ರಿ ಭಾರತಿ (41) ಮಂಗಳವಾರ ರಾತ್ರಿ ಸ್ವಗೃಹದಲ್ಲಿ ನಿಧನ ಹೊಂದಿದರು.

Advertisement

ಮೇಲಂತಬೆಟ್ಟು ಪದವಿಪೂರ್ವ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿದ್ದ ಅವರು ಅಪಘಾತದ ಬಳಿಕ ಸೊಂಟದ ಸ್ವಾಧೀನ ಕಳೆದುಕೊಂಡು ಮಲಗಿದ್ದಲ್ಲೇ 14 ವರ್ಷ ನರಕಯಾತನೆ ಅನುಭವಿಸಿದ್ದರು. ಕಳೆದ ಕೆಲವು ದಿನಗಳಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು.

ಘಟನೆಯ ಹಿನ್ನೆಲೆ:
2010ರ ಜುಲೈ 30ರಂದು ಭಾರೀ ಮಳೆ ಸುರಿಯುತ್ತಿದ್ದ ವೇಳೆ ಮೇಲಂತಬೆಟ್ಟು ಪದವಿಪೂರ್ವ ಕಾಲೇಜಿನ ಅತಿಥಿ ಉಪನ್ಯಾಸಕಿಯರಾದ ಭಾರತಿ ಹಾಗೂ ಜಯಮಾಲಾ ಕಾಲೇಜು ಬಿಟ್ಟು ಆಟೋದಲ್ಲಿ ಬರುತ್ತಿದ್ದ ಸಂದರ್ಭ ಮೂಡಿಗೆರೆ ಕಡೆಯಿಂದ ಬರುತ್ತಿದ್ದ ಪಿಕಪ್‌ ಸಂತೆಕಟ್ಟೆ ಅಯ್ಯಪ್ಪ ಮಂದಿರದ ಬಳಿ ಢಿಕ್ಕಿಯಾಗಿತ್ತು. ಈ ವೇಳೆ ಶಿಕ್ಷಕಿ ಜಯಮಾಲಾ ಸ್ಥಳದಲ್ಲೇ ಮೃತಪಟ್ಟಿದ್ದು ಭಾರತಿ ಗಂಭೀರವಾಗಿ ಗಾಯಗೊಂಡಿದ್ದರು.

ಜಯಮಾಲಾ ಅವರು ಕೆ.ಎ.ಎಸ್‌. ಪರೀಕ್ಷೆ ಬರೆದಿದ್ದು ಮರಣೋತ್ತರವಾಗಿ ಬಂದ ಫಲಿತಾಂಶದಲ್ಲಿ ಉತ್ತೀರ್ಣರಾಗಿದ್ದರು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕೆಲವು ಸಮಯ ಆಸ್ಪತ್ರೆಯಲ್ಲೆ ಚಿಕಿತ್ಸೆ ಪಡೆದು ಬಳಿಕ ಮನೆಗೆ ಬಂದಿದ್ದ ಶಿಕ್ಷಕಿ ಭಾರತಿ ಅವರು ಸೊಂಟದ ಸ್ವಾಧೀನ ಕಳೆದುಕೊಂಡ ಪರಿಣಾಮ ಮಲಗಿದ್ದಲ್ಲೆ ಇದ್ದರು. 14 ವರ್ಷ ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಂದ ಎಲ್ಲ ನೋವು, ಸವಾಲುಗಳನ್ನು ಎದುರಿಸಿದ್ದರು. ಕಾಲೇಜು ವಿದ್ಯಾರ್ಥಿಗಳ ಜತೆ ಸಂಪರ್ಕದಲ್ಲಿದ್ದು ಅವರಿಗೆ ಅಕೌಂಟೆನ್ಸಿ, ಬ್ಯುಸಿನೆಸ್‌ ಸ್ಟಡಿ ಹೀಗೇ ಏನೇ ವಿಷಯಗಳಿದ್ದರೂ ಮೊಬೈಲ್‌ ಮೂಲಕವೇ ಪಾಠ ಹೇಳಿಕೊಡುತ್ತಿದ್ದರು.

ಮೃತರು ತಾಯಿ ಹಾಗೂ ಇಬ್ಬರು ಸಹೋದರ, ನಾಲ್ವರು ಸಹೋದರಿಯರನ್ನು ಅಗಲಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next