Advertisement

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

04:22 PM Dec 22, 2024 | Team Udayavani |

ಮಹಾನಗರ: ‘ಯೇಸು ಜನಿಸಿದ ಆ ಕ್ಷಣದಿಂದ ಬಾನಂಗಳದಲ್ಲಿ ವಿಶೇಷ ನಕ್ಷತ್ರವೊಂದು ಕಾಣಿಸಿತು.. ಜ್ಞಾನಿಗಳಿಗೆ ಕಂದನ ಬಳಿ ಬರಲು ದಾರಿದೀಪವಾಯಿತು’…: ಇದು ಬೈಬಲ್‌ನಲ್ಲಿ ಉಲ್ಲೇಖವಾಗಿರುವ ನಕ್ಷತ್ರಗಳ ಕಥೆ. ಇದೇ ಕಾರಣಕ್ಕಾಗಿ ಕ್ರಿಸ್ಮಸ್‌ ಸಂದರ್ಭದಲ್ಲಿ ಕ್ರೈಸ್ತರ ಮನೆಯಂಗಳವನ್ನು ವಿವಿಧ ಬಣ್ಣಗಳ ನಕ್ಷತ್ರಗಳಿಂದ ಅಲಂಕರಿಸಿರುತ್ತಾರೆ.

Advertisement

ಎಲ್ಲರಿಗೂ ಗೋದಲಿ ರಚಿಸುವುದು ಕಷ್ಟ. ಆದರೆ, ನಕ್ಷತ್ರವಿಲ್ಲದ ಕ್ರೈಸ್ತರ ಮನೆ ಇರಲಾರದು. ಕೆಲವರು ತಾವೇ ನಕ್ಷತ್ರ ರಚಿಸುತ್ತಾರೆ, ಇನ್ನು ಕೆಲವರು ಮಾರುಕಟ್ಟೆಯಿಂದ ತಂದು ಮನೆಯ ಸುತ್ತ ಬೆಳಗಿಸುತ್ತಾರೆ. ಈಗ ಮಾರುಕಟ್ಟೆಯಲ್ಲಿ ಗೋದಲಿಯನ್ನು ಬಿಂಬಿಸುವ ನಕ್ಷತ್ರಗಳು ಕೂಡ ಲಭ್ಯವಿದೆ. ಐದು ರೂಪಾಯಿಯಿಂದ ಆರಂಭಗೊಂಡು ನೂರಾರು ರೂಪಾಯಿ ಬೆಲೆ ಬಾಳುವ ತಾರೆಗಳಿವೆ.

ನಕ್ಷತ್ರ ತಯಾರಿ ಸ್ಪರ್ಧೆ!
ಕ್ರಿಸ್ಮಸ್‌ಗೆ ಮುನ್ನ ಪ್ರತೀ ಚರ್ಚ್‌ ವ್ಯಾಪ್ತಿಯಲ್ಲಿ ನಕ್ಷತ್ರ ತಯಾರಿ ಸ್ಪರ್ಧೆಗಳು ನಡೆಯುತ್ತವೆ. ಮನೆಯಲ್ಲೇ ಮಕ್ಕಳು ಮತ್ತು ಹಿರಿಯರು ಸೇರಿ ನಕ್ಷತ್ರ ತಯಾರಿಸುತ್ತಾರೆ ಮತ್ತು ಸ್ಪರ್ಧೆಯಲ್ಲಿ ಭಾಗಿಯಾಗುತ್ತಾರೆ. ಚರ್ಚ್‌ ಹೊರತಾಗಿ ಸಂಘ ಸಂಸ್ಥೆಗಳು ಕೂಡಾ ಸ್ಪರ್ಧೆಗಳನ್ನು ಆಯೋಜಿಸುತ್ತವೆ.

ಪ್ಲಾಸ್ಟಿಕ್‌ ಬದಲು ಕಾಗದದ ನಕ್ಷತ್ರ
ಹಿಂದೆ ಪ್ಲಾಸ್ಟಿಕ್‌ ನಕ್ಷತ್ರಗಳು ಹೆಚ್ಚಾಗಿದ್ದವು. ಆದರೆ ಈಗ ಪ್ಲಾಸ್ಟಿಕ್‌ ರಹಿತ, ಕಾಗದದ ನಕ್ಷತ್ರಗಳ ಕಡೆಗೆ ಒಲವು ಹೆಚ್ಚಿದೆ. ಗ್ರಾಹಕರ ಆಯ್ಕೆಯೂ ಕೂಡ ಅದೇ ಆಗಿದೆ ಎನ್ನುವುದು ವ್ಯಾಪಾರಿಯೊಬ್ಬರ ಮಾತು. ಹೆಚ್ಚು ಬಾಳಿಕೆ ಇಲ್ಲವಾಗಿದ್ದರೂ ಪ್ಲಾಸ್ಟಿಕ್‌ ಬಳಕೆಯಿಂದ ದೂರ ಸರಿಯುವ ಯೋಚನೆ ಎಲ್ಲರಲ್ಲೂ ಜಾಗೃತಗೊಂಡಿದೆ ಎನ್ನುವುದು ಗ್ರಾಹಕ ಡೆನಿಸ್‌ ಅವರ ಮಾತು.

ನಕ್ಷತ್ರಗಳ ಸಂದೇಶವೇನು?
ಚರ್ಚ್‌ ಮತ್ತು ಕ್ರೈಸ್ತರ ಮನೆಗಳನ್ನು ನಕ್ಷತ್ರ, ವಿದ್ಯುತ್‌ ದೀಪಗಳಿಂದ ಅಲಂಕರಿಸುತ್ತಾರೆ. ನಕ್ಷತ್ರಗಳೊಳಗೆ ಬಲ್ಬ್ ಗಳನ್ನು ಜೋಡಿಸಿ ಮತ್ತಷ್ಟು ಆಕರ್ಷಣೀಯವಾಗಿಸುತ್ತಾರೆ. ಪ್ರತಿಯೊಬ್ಬ ಕ್ರೈಸ್ತನೂ ನೊಂದವರ ಬಾಳಿಗೆ ಬೆಳಕಾಗಬೇಕೆನ್ನುವ ಸಂದೇಶ ಈ ನಕ್ಷತ್ರಗಳು ನೀಡುತ್ತವೆ.

Advertisement

ಬೈಬಲ್‌ನಲ್ಲಿರುವ ಉಲ್ಲೇಖ
ಕ್ರಿಸ್ತ ಜನಿಸಿದ ಕ್ಷಣವೇ ಆಕಾಶದಲ್ಲಿ ವಿಶೇಷ ನಕ್ಷತ್ರವೊಂದು ಕಾಣಿಸಿಕೊಳ್ಳುತ್ತದೆ. ಈ ನಕ್ಷತ್ರದ ಬಗ್ಗೆ ಅರಿತುಕೊಂಡ ಪೂರ್ವ ಜ್ಞಾನಿಗಳು ಸಂಶೋಧನೆ ನಡೆಸಿ ಕ್ರಿಸ್ತ ಜನನವಾಗಿದೆ ಎಂದು ದೃಢಪಡಿಸಿಕೊಳ್ಳುತ್ತಾರೆ. ಅದೇ ನಕ್ಷತ್ರದ ಆಧಾರದಲ್ಲಿ ಜ್ಞಾನಿಗಳು ಕ್ರಿಸ್ತರನ್ನು ಅರಸಿಕೊಂಡು ಬರುತ್ತಾರೆ. ನಭದಲ್ಲಿ ಕಂಡ ವಿಶೇಷತಾರೆ ಅವರ ಪಯಣಕ್ಕೆ ಬೆಳಕಾಗುತ್ತದೆ. ಅಂತಿಮವಾಗಿ ಕ್ರಿಸ್ತ ಜನಿಸಿದ ಆ ಜಾಗದ ಮೇಲೆ ತಾರೆ ತಟಸ್ಥವಾಗುತ್ತದೆ. ಹೀಗೆ ಕ್ರಿಸ್ತರಿಗೆ ನಮಿಸಲು ಬಂದ ಜ್ಞಾನಿಗಳಿಗೆ ದಾರಿ ತೋರಿದ ಆ ನಕ್ಷತ್ರವನ್ನು ಸಾಂಕೇತಿಕವಾಗಿ ಇಂದು ಕಾಣಬಹುದು.

-ಸಂತೋಷ್‌ ಮೊಂತೇರೊ

Advertisement

Udayavani is now on Telegram. Click here to join our channel and stay updated with the latest news.

Next