ನೆಲಮಂಗಲ: ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ ಸಂಭವಿಸಿದೆ, ಚಾಲಕನ ನಿಯಂತ್ರಣ ತಪ್ಪಿದ ಕಂಟೈನರ್ ಒಂದು ಕಾರಿನ ಮೇಲೆ ಉರುಳಿ ಬಿದ್ದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಕಾರಿನಲ್ಲಿದ್ದ ಒಟ್ಟು ಆರು ಮಂದಿ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನೆಲಮಂಗಲದ ತಾಳೇಕೆರೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಶನಿವಾರ(ಡಿ.21) ಸಂಭವಿಸಿದೆ.
ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ನಡೆದಿದ್ದು, ಎರಡು ಕಾರು, ಎರಡು ಲಾರಿ, ಸ್ಕೂಲ್ ಬಸ್ ನಡುವೆ ಸರಣಿ ಅಪಘಾತ ನಡೆದಿದೆ.
ಘಟನೆಯಿಂದ ಕಾರು ಸಂಪೂರ್ಣ ಅಪ್ಪಚ್ಚಿಯಾಗಿದ್ದು ಕಾರಿನೊಳಗಿದ್ದ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಕಿಲೋಮಿಟರ್ ಉದ್ದದವರೆಗೂ ಟ್ರಾಫಿಕ್ ಜಾಮ್ ಉಂಟಾಗಿದೆ.
ಘಟನಾ ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಧಾವಿಸಿದ್ದು ಸ್ಥಳೀಯರ ನೆರವಿನಿಂದ ಕಾರಿನೊಳಗಿದ್ದ ಮೃತದೇಹಗಳನ್ನು ಹೊರತೆಗೆಯುವ ಕಾರ್ಯ ನಡೆಯುತ್ತಿದೆ.
ಮೃತರ ವಿವರ ಇನ್ನಷ್ಟೇ ಲಭ್ಯವಾಗಬೇಕಿದ್ದು ವೋಲ್ವೋ ಕಂಪೆನಿಗೆ ಸೇರಿದ್ದ ಐಷಾರಾಮಿ ಕಾರು ಇದಾಗಿದ್ದು ಹೆದ್ದಾರಿಯಲ್ಲಿ ಸಂಚರಿಸವ ವೇಳೆ ಏಕಾಏಕಿ ಕಾರಿನ ಮೇಲೆ ಬಿದ್ದಿದೆ.
ಇದನ್ನೂ ಓದಿ: iPhone: ಕೈತಪ್ಪಿ ಕಾಣಿಕೆ ಹುಂಡಿಗೆ ಬಿದ್ದ ಐಫೋನ್… ಇದು ದೇವರ ಸೊತ್ತು ಎಂದ ಸಿಬ್ಬಂದಿ