Advertisement
ಒಂದು ವಾರದಿಂದ, ಅನ್ನ, ನೀರು ಬಿಟ್ಟು ಕೋಣೆಯಲ್ಲಿ ಮುಸುಕೆಳೆದು ಮಲಗಿಬಿಟ್ಟಿದ್ದೇನೆ. ಕೆನ್ನೆ ಮೇಲಿಳಿವ ಕಣ್ಣೀರು ಧಾರಾಕಾರ. ಅರ್ಧರಾತ್ರಿಯಲ್ಲಿ ದುಃಸ್ವಪ್ನ ಬಿದ್ದು ಬೆಚ್ಚಿ ಚೀರುತ್ತೇನೆ. ತಂದೆ-ತಾಯಿ, ಮಗನಿಗೆ ಏನಾಯಿತೋ? ಎಂಬ ಆತಂಕದಿಂದ ದುಡುದುಡು ಓಡಿಬರುತ್ತಾರೆ. ಕಾರಣ ಹೇಳದೆ ಸುಮ್ಮನೆ ಕಣ್ಣೀರಾಗುತ್ತೇನೆ. ಅದೇಕೆ ಹೀಗೆ ಮಾಡಿದೆ ಹುಡುಗೀ…?
ಅದೊಂದು ದಿನ, ಅಪ್ಪ ಬಳಿ ಕರೆದು, ಹೆಗಲ ಮೇಲೆ ಕೈಹಾಕಿ ಮಾತು ಶುರು ಮಾಡಿದರು, “ನೋಡು ಮಗನೇ, ಒಂದು ವಾರವಾಯಿತು ನೀನು ಅನ್ನ ನೀರು ಬಿಟ್ಟು. ನಿನ್ನ ಗೆಳೆಯರ ಹತ್ತಿರ ವಿಚಾರಿಸಿದೆ, ನಿನ್ನ ಗಾಢ ಮೌನದ ಕಾರಣ ತಿಳಿಯಿತು. ನೋಡಪ್ಪ, ಪ್ರೀತಿಸಬೇಕು ನಿಜ. ನಾನು ಬೇಡ ಅನ್ನಲ್ಲ. ಆದರೆ ಬದುಕೇ ಮುಳುಗಿ ಹೋಗುವಂತೆ ಪ್ರೀತಿಸಬಾರದು. ಅವಳನ್ನು ನೀನು ಇಷ್ಟಪಟ್ಟಿದ್ದೆ. ಆದರೆ ನೀನವಳಿಗೆ ಇಷ್ಟವಾಗಲಿಲ್ಲ. ಅದಕ್ಕೆ ಪ್ರಪಂಚಾನೇ ಮುಳುಗೊØàಯ್ತಾ? ಇಲ್ಲ ಮಗಾ. ನಮ್ಮನ್ನ ನೋಡು, ಇಪ್ಪತ್ತು ವರ್ಷ ನಿನ್ನನ್ನು ಸಾಕಿ ಸಲುಹಿ, ದೊಡ್ಡವನನ್ನಾಗಿ ಮಾಡಿ, ನಿನ್ನ ಸುಖಕ್ಕೆ ನಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿದ್ದೇವೆ. ನಮ್ಮದು ಪ್ರೀತಿ ಅಲ್ವೇನೋ ಮಗಾ..? ನಿನ್ನ ತಾಯಿಯನ್ನು ನೋಡು, ಮಗ ಊಟ ಬಿಟ್ಟು ಮೌನವಾಗಿರುವುದಕ್ಕೆ ಚಡಪಡಿಸ್ತಾ ಇದೆ ಹೆತ್ತಕರುಳು. ಅವಳನ್ನು ಮರೆತುಬಿಡು. ಅಂಥ ಹತ್ತು ಹುಡುಗಿಯರನ್ನು ನಿನ್ನೆದುರು ಸಾಲಾಗಿ ನಿಲ್ಲಿಸ್ತೇನೆ…’. ಅಪ್ಪ ಹೀಗೆಲ್ಲಾ ಹೇಳುತ್ತಿರಬೇಕಾದರೆ ಹೃದಯ ಹಿಂಡಿದಂತಾಗುತ್ತಿತ್ತು. ಅವರು ಹೇಳಿದ್ದರಲ್ಲಿ ತಪ್ಪೇನೂ ಇರಲಿಲ್ಲ. ಹೆತ್ತ ಕರುಳಿನ ಕರೆಯನ್ನು ನಾನೇ ಇಷ್ಟು ದಿನ ಆಲಿಸಲಿಲ್ಲವೇನೋ ಅನ್ನಿಸ್ತು. ಮರುಕ್ಷಣ ಹೊಸ ಮನುಷ್ಯನಾಗಿದ್ದೆ. ತಂದೆ- ತಾಯಿಯ ಕಾಲು ಹಿಡಿದು ಇನ್ನೆಂದೂ ನಿಮ್ಮ ಮನಸ್ಸು ನೋಯಿಸಲ್ಲ ಅಂತ ಅತ್ತುಬಿಟ್ಟೆ.
Related Articles
– ನಾಗೇಶ್ ಜೆ. ನಾಯಕ, ಬೆಳಗಾವಿ
Advertisement