Advertisement

Miracle: ಗುಳಿ ಗುಳಿ ಶಂಕರ ಎಂಬ ಮಾಂತ್ರಿಕ ಕೊಳ… ಇಲ್ಲಿದೆ ಹಲವು ಚಮತ್ಕಾರಿ ವಿಚಾರಗಳು

06:37 PM Jan 06, 2025 | ಸುಧೀರ್ |

ಮಲೆನಾಡನ್ನು ವಿಸ್ಮಯಗಳ ತವರೂರು ಎಂದು ಕರೆಯುತ್ತಾರೆ ಎತ್ತ ನೋಡಿದರೂ ಹಚ್ಚ ಹಸುರಿನಿಂದ ಕಂಗೊಳಿಸುತ್ತಿರುವ ಬೆಟ್ಟಗಳ ಸಾಲು ಸಾಲು, ಇನ್ನೊಂದೆಡೆ ದಟ್ಟ ಕಾನನ ಬೀಡು. ಮಳೆ ಬಂತೆಂದರೆ ಮಲೆನಾಡಿನ ಸೌಂದರ್ಯ ಇಮ್ಮಡಿಗೊಂಡು ಪ್ರವಾಸಿಗರನ್ನು ತನ್ನತ್ತ ಬರಸೆಳೆಯುತ್ತವೆ.

Advertisement

ಪ್ರಕೃತಿಯ ಮಡಿಲಲ್ಲಿ ಅದೆಷ್ಟೋ ವಿಸ್ಮಯಗಳು ಕಾಣಸಿಗುತ್ತದೆ ಇಲ್ಲಿ ನಂಬುವವರಿಗೆ ದೇವರು ಕಾಣುತ್ತಾನೆ ಅದೇ ನಂಬದವರಿಗೆ ವಿಜ್ಞಾನ ಕಾಣುತ್ತದೆ ಎಂಬುದಕ್ಕೆ ನಾವಿಂದು ಹೇಳ ಹೊರಟಿರುವ ಸ್ಥಳವೇ ಪ್ರತ್ಯಕ್ಷ ಸಾಕ್ಷಿ.

ಹೌದು ನಾವಿಂದು ಹೇಳ ಹೊರಟಿರುವುದು ಪ್ರಕೃತಿಯ ಮಡಿಲಲ್ಲಿರುವ ಒಂದು ಪವಿತ್ರ ಕ್ಷೇತ್ರದ ಬಗ್ಗೆ ಅದುವೇ ಗುಳಿ ಗುಳಿ ಶಂಕರ ಎಂಬ ಮಾಂತ್ರಿಕ ಕೊಳದ ಬಗ್ಗೆ. ಈ ಕೊಳದಲ್ಲಿ ಶಿವನಿಗೆ ಇಷ್ಟವಾದ ಬಿಲ್ವಪತ್ರೆ ಬಿಟ್ಟು ಬೇರೆ ಯಾವುದೇ ಎಲೆಯನ್ನು ತಂದು ಹಾಕಿದರೂ ಅದು ಈ ಕೆರೆಯಲ್ಲಿ ಮುಳುಗುವುದಿಲ್ಲ ಅದೇ ಶಿವನಿಗೆ ಪ್ರಿಯವಾದ ಬಿಲ್ವಪತ್ರೆಯನ್ನು ಮನಸ್ಸಿನಲ್ಲಿ ನೆನೆದು ಕೊಳದಲ್ಲಿ ಬಿಟ್ಟರೆ ಅದು ಪವಿತ್ರ ಕೊಳದಲ್ಲಿ ಮುಳುಗಿ ಕೆಲ ಹೊತ್ತಿನ ಬಳಿಕ ಮೇಲೆ ಬರುತ್ತದೆ.

ಮಾಂತ್ರಿಕ ಕೊಳಕ್ಕಿರುವ ವಿಭಿನ್ನ ಹೆಸರುಗಳು:
ಅಂದಹಾಗೆ ಇಲ್ಲಿರುವ ಪುಣ್ಯ ಕೊಳವನ್ನು ಭಿನ್ನ ಭಿನ್ನ ಹೆಸರಿಂದ ಕರೆಯಲ್ಪಡುತ್ತದೆ ಗುಳಿ ಗುಳಿ ಕೊಳ, ಚಪ್ಪಾಳೆ ಕೊಳ, ಗೌರಿ ತೀರ್ಥ, ಜಟಾತೀರ್ಥ ಎಂಬೆಲ್ಲಾ ಹೆಸರಿಂದ ಕರೆಯಲ್ಪಡುತ್ತದೆ.

Advertisement

ಸ್ಥಳದ ಇತಿಹಾಸ:
ಇದು ಶಿವ ಮತ್ತು ಪಾರ್ವತಿ ವಿಶ್ರಾಂತಿಗೆ ಬರುವಂತಹ ಸ್ಥಳವಾಗಿತ್ತು ಎಂದು ಹೇಳಲಾಗಿದೆ . ಹೀಗೆ ಇಬ್ಬರು ಈ ಪ್ರದೇಶದಲ್ಲಿ ವಿಶ್ರಾಂತಿ ಪಡೆಯುವಾಗ ತುಂಬಾ ಆಯಾಸವಾಗಿದ್ದ ಶಿವ ಪಾರ್ವತಿಗೆ ತನ್ನ ಜಟಾ(ಜಡೆ) ಮೂಲಕ ಗಂಗೆಯಾಗಿ ಬರುವಂತೆ ಹೇಳಿದನಂತೆ. ಆಗ ಪಾರ್ವತಿ ಗಂಗೆಯಾಗಿ ಶಿವನ ಜಡೆ ಮೂಲಕ ಹರಿದು ಶಿವನ ದಾಹ ತೀರಿಸಿದಳಂತೆ. ಶಿವನ ದಾಹ ತೀರಿದ ಬಳಿಕ ಗಂಗೆಗೆ ನೀನು ಇಲ್ಲಿರುವ ಸಕಲ ಜೀವ ರಾಶಿಗೆ ನೀರು ನೀಡಲು ಇಲ್ಲೇ ಉಳಿಯಬೇಕು ಎಂದನಂತೆ. ಆಗ ಗಂಗೆ ನೀನು ಇಲ್ಲಿ ಉಳಿಯುವುದಾದರೆ ನಾನು ಇಲ್ಲಿರುತ್ತೇನೆ ಎಂದಳಂತೆ. ಆಗ ಖುಷಿ ಖುಷಿಯಿಂದ ಶಿವ ದೇವನೂ ಇಲ್ಲಿಯೇ ಉಳಿಯಲು ನಿರ್ಧರಿಸಿದನಂತೆ. ಇದಾದ ಬಳಿಕ ಶಿವ ದೇವನೊಂದಿಗೆ ಗಂಗೆ ಕೂಡ ಇಲ್ಲಿ ಉಳಿಯುತ್ತಾಳೆ. ಹೀಗಾಗಿ ಈ ಪುಣ್ಯ ಕ್ಷೇತ್ರವನ್ನು ಜಟಾತೀರ್ಥ ಎಂದು ಕರೆಯಲ್ಪಟ್ಟಿತ್ತಂತೆ.

ಬಿಲ್ವಪತ್ರೆ ಬಿಟ್ಟು ಬೇರೆ ಯಾವ ಎಲೆಯೂ ಕೊಳದ ನೀರಿನಲ್ಲಿ ಮುಳುಗುವುದಿಲ್ಲ:
ಇಲ್ಲಿನ ಕೊಳದ ವಿಶೇಷತೆ ಏನೆಂದರೆ ಇಲ್ಲಿನ ಜಟಾತೀರ್ಥ ದಲ್ಲಿ ಶಿವನಿಗೆ ಪ್ರಿಯವಾದ ಬಿಲ್ವಪತ್ರೆ ಬಿಟ್ಟು ಬೇರೆ ಯಾವ ಎಲೆಯನ್ನೂ ಹಾಕಿದರೂ ಅದು ಮುಳುಗುವುದಿಲ್ಲ ಆದರೆ ಶಿವನಿಗೆ ಪ್ರಿಯವಾದ ಬಿಲ್ವಪತ್ರೆಯನ್ನು ಮನಸ್ಸಿನಲ್ಲಿ ನೆನೆದು ಕೊಳದಲ್ಲಿ ಬಿಟ್ಟರೆ ಅದು ಈಡೇರುತ್ತದೆ ಎಂದಾದರೆ ಎಲೆ ಕೊಳದಲ್ಲಿ ಮುಳುಗಿ ಸ್ವಲ್ಪ ಸಮಯದ ಬಳಿಕ ಮೇಲೆ ಬರುತ್ತದೆ ಒಂದು ವೇಳೆ ಬೇಡಿದ ಬೇಡಿಕೆ ಈಡೇರುವುದುದಿಲ್ಲ ಎಂದಾದರೆ ತಳಕ್ಕೆ ಹೋಗಿರುವ ಎಲೆ ಮತ್ತೆ ಮೇಲೆ ಬರುವುದಿಲ್ಲ ಎಂದರ್ಥ.

ಹೀಗೆ ಕೊಳದ ತಳಕ್ಕೆ ಹೋಗಿ ಮೇಲೆ ಬಂದ ಎಲೆಯನ್ನು ಕೊಳದ ಪಕ್ಕದಲ್ಲಿರುವ ಶಿವಲಿಂಗದ ಮೇಲೆ ಇಟ್ಟು ಪೂಜೆ ಮಾಡಲಾಗುತ್ತದೆ ಜೊತೆಗೆ ಶಿವಲಿಂಗಕ್ಕೆ ಕೊಳದ ತೀರ್ಥದಿಂದ ಅಭಿಷೇಕ ಮಾಡಲಾಗುತ್ತದೆ.

ಬಿಲ್ವಪತ್ರೆ ಪಡೆಯುವುದೆಲ್ಲಿ:
ಹರಕೆ ಹೊತ್ತು ಬರುವ ಭಕ್ತರು ಇಲ್ಲಿನ ಗುಳಿ ಗುಳಿ ಶಂಕರ ದೇವಸ್ಥಾನದಲ್ಲಿ 20 ರೂಪಾಯಿ ನೀಡಿ ಬಿಲ್ವಪತ್ರೆಯ ರಶೀದಿ ಪಡೆದುಕೊಂಡು ಬಳಿಕ ಜಟಾತೀರ್ಥ(ಗುಳಿ ಗುಳಿ ಶಂಕರ) ಕ್ಕೆ ಬಂದು ಇಲ್ಲಿರುವ ಕೊಳದಲ್ಲಿ ಬಿಲ್ವಪತ್ರೆಯನ್ನು ಮನಸ್ಸಿನಲ್ಲಿ ನೆನೆದು ಬಿಡಬೇಕು.

ಎಲ್ಲಿದೆ ಈ ಪುಣ್ಯ ಕ್ಷೇತ್ರ:
ಗುಳಿ ಗುಳಿ ಶಂಕರ ಎಂಬ ಮಾಂತ್ರಿಕ ಕೊಳ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬೆಳ್ಳೂರು ಗ್ರಾಮ ಪಂಚಾಯತಿ ಗುಬ್ಬಿಗ ಗ್ರಾಮದಲ್ಲಿ ಇದೆ. ಇದು ಶಿವಮೊಗ್ಗದಿಂದ ಸುಮಾರು 34 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿನ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡುವವರು ಬಸ್ಸಿನ ಮೂಲಕವೂ ಬರಬಹುದು ಅಥವಾ ಸ್ವಂತ ವಾಹನದ ಮೂಲಕವೂ ಈ ಸ್ಥಳಕ್ಕೆ ಭೇಟಿ ನೀಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next